ಗುರುವಾರ , ಜೂಲೈ 9, 2020
27 °C

ಪ್ರೇಮ ಮತ್ತು ವಿಧೇಯತೆ

ಫಕೀರ್ ಮುಹಮ್ಮದ್ ಕಟ್ಪಾಡಿ Updated:

ಅಕ್ಷರ ಗಾತ್ರ : | |

ಸೂಫಿ ಅಧ್ಯಾತ್ಮದಲ್ಲಿ ವಿಧೇಯತೆ ಎಂಬುದಕ್ಕೆ ಅವನ ಕರುಣೆಯಿರಲಿ, ಕಡುಕೋಪವೇ ಇರಲಿ ಪ್ರಿಯಕರನ ಇಚ್ಛೆಗೆ ಸಂಪೂರ್ಣ ಅಧೀನವಾಗಿರುವುದು ಅಥವಾ ಒಪ್ಪಿಗೆಯನ್ನು ನೀಡುವುದು ಎಂಬ ಅರ್ಥನೀಡುತ್ತದೆ. ಪ್ರೇಮವೆಂಬುದು ಕೋಪದಿಂದಾಗಿ ಕಮ್ಮಿಯಾಗದು, ಕರುಣೆಯಿಂದ ಹೆಚ್ಚಾಗುವುದೂ ಇಲ್ಲ. ಹೊಡೆದೋಡಿಸಿದರೂ ಕೂಡ ಹೋಗದೆ ಪ್ರೇಮಿಯು ಪ್ರಿಯತಮೆಯ ಮನೆಯ ಬಾಗಿಲಲ್ಲಿ ಬಿದ್ದಿರಬೇಕು, ಪ್ರೇಮಿ ತನ್ನ ಆತ್ಮವನ್ನು ಪ್ರಿಯತಮೆಯ ಮನೆಯ ಮೂಲೆಯಲ್ಲಿನ ಪೊರಕೆಯಾಗಿಸಿ ವಿನೀತನಾಗಿರಬೇಕು. ಈ ಮಟ್ಟದ ವಿಧೇಯತೆ ಕೂಡ ಕಮ್ಮಿಯೆನಿಸುವ ಸಾಧ್ಯತೆ ಇದೆ. ಹಜ್ರತ್ ಅಬೂ ಹಮೀದ್ ಅಲ್ ಗಝ್ಝಾಲಿ ತನ್ನ ಕೃತಿ ‘ಇಹ್ಯಾವುಲ್ ಉಲೂಮ್ ಅದ್ದೀನ್ನಲ್ಲಿ ಹೀಗೆ ಹೇಳುತ್ತಾರೆ:

ನಾನು ಅವನಲ್ಲಿ ಲೀನವಾಗಲು ಬಯಸಿದರೆ, ಅವನು ನನ್ನಿಂದ ಬಿಡುಗಡೆಯ ಬಯಸಿದ.

ನನ್ನ ಆಸೆಗಳ ದೂರ ಬಿಟ್ಟು ಸರಿದಾಗ ಅವನ ಬಯಕೆ ತೀರಿದಂತಾಯಿತು!

ಹೀಗಿರಬೇಕು, ಪ್ರೇಮಿಯೆಂದರೆ! ತನ್ನದೆಲ್ಲವನ್ನೂ ತೊರೆದು ತ್ಯಾಗಮಾಡಬೇಕು. ಪ್ರಿಯತಮೆ ಬಯಸಿದರೆ ಎಲ್ಲರೀತಿಯ ಸಾವು ನೋವುಗಳನ್ನು ಸ್ವಾಗತಿಸಬೇಕು! ಕವಿ ಮೌಲಾನ ಅಬ್ದುರ್ರಹ್‌ಮಾನ್ ಜಾಮಿ ‘ನಜಾಹತ್ನಲ್ಲಿ ಹೀಗೆ ಹೇಳುತ್ತಾರೆ:

ನೀ ಸಾಯು ಎಂದರೆ, ನಾನು ತಯಾರಾಗುವೆ ಸಾಯಲು,

ನಾನು ಹೇಳುತ್ತೇನೆ, ನನ್ನ ಸಾವ ಬಯಸುವ ನಿನಗೆ ಸ್ವಾಗತ.

ಇಲ್ಲಿ ಸಾವು ಎಂದರೆ ವೈಯಕ್ತಿಕ ಆಸೆಗಳ ಸಂಪೂರ್ಣನಾಶ; ಆದಿಯಲ್ಲಿ ಪ್ರಿಯತಮೆ ಮತ್ತು ತನ್ನ ನಡುವೆ ಪ್ರಿಯಕರನು ಮಾಡಿಟ್ಟ ಪ್ರತ್ಯೇಕತೆಯ ಪರದೆಯನ್ನು ಸರಿಸುವುದು!

ಪ್ರೇಮದಲ್ಲಿ ಸಾವನ್ನು ಹೊರತುಪಡಿಸಿದರೆ ಯಾವುದು ಕೂಡ ಉತ್ತಮವೆಂಬುದಿಲ್ಲ ಎಂದು ಹಜ್ರತ್ ಅಬೂ ಹಮೀದ್ ಅಲ್ ಗಝ್ಝಾಲಿಯವರು ಹೇಳುತ್ತಾರೆ. ಇಮಾಮ್ ಗಝ್ಝಾಲಿಯವರು ಪ್ರವಾದಿ ಇಬ್ರಾಹಿಂರವರಿಗೆ ಸಂಬಂಧಿಸಿದ ಘಟನೆಯೊಂದನ್ನು  ಉಲ್ಲೇಖಿಸುತ್ತಿದ್ದರು. ಬದುಕಿನ ಕೊನೆಯಲ್ಲಿ ಇಬ್ರಾಹಿಮರನ್ನು ಸಾವಿನ ದೇವದೂತ(ಮಲಾಯಿಖ್) ಅಝ್ರಾಯಿಲ್ ಕರೆಯುತ್ತಾನೆ. ಆದರೆ ಇಬ್ರಾಹಿಮರು ಅವನ ಕರೆಯನ್ನು ತಿರಸ್ಕರಿಸುತ್ತಾರೆ. ತನ್ನ ಮೇಲೆ ಅಷ್ಟೊಂದು ಪ್ರೀತಿಯಿಟ್ಟಿರುವ ದೇವರು ತನ್ನ ಸಾವನ್ನು ಬಯಸುತ್ತಾನೆಯೇ ಎನ್ನುವುದು ಅವರ ಪ್ರಶ್ನೆಯಾಗಿತ್ತು. ಆಗ ಅಶರೀರ ವಾಣಿಯೊಂದು ಕೇಳಿಬಂತು, ಪ್ರೇಮಿಯೊಬ್ಬ ತನ್ನ ಪ್ರಿಯತಮೆಯ ಕರೆಗೆ ಓಗೊಟ್ಟು ಹೋಗದಿರುವುದನ್ನು ಕಂಡಿರುವಿರೇನು? ಇದನ್ನು ಕೇಳಿದ ತಕ್ಷಣ ಪ್ರವಾದಿ ಇಬ್ರಾಹಿಮರು ಸಂತೋಷದಿಂದ ತನ್ನ ಜೀವಾತ್ಮವನ್ನು ದೇವದೂತ ಅಝ್ರಾಯಿಲ್‌ನ ವಶಕ್ಕೊಪ್ಪಿಸಿದರು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.