ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳ ಪರಿಶೀಲನೆಗೆ ಹೈಕೋರ್ಟ್ ಆದೇಶ

Last Updated 3 ಜನವರಿ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾನಗರಲ್ಲಿರುವ ‘ಟಿಪ್ಲರ್ ಆನ್ ದಿ ರೂಫ್’ ಬಾರ್ ಅಂಡ್‌ ರೆಸ್ಟೋರಂಟ್‌ನಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆಯೇ ಇಲ್ಲವೇ ಎಂಬುದನ್ನು ಬಿಬಿಎಂಪಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಪರಿಶೀಲಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

‘ಶಬ್ದಮಾಲಿನ್ಯ ಆರೋಪದಡಿ ಬಿಬಿಎಂಪಿ ನಮ್ಮ ಬಾರ್ ಅಂಡ್‌ ರೆಸ್ಟೋರೆಂಟ್‌ ಅನ್ನು ಮುಚ್ಚಿದೆ’ ಎಂದು ಆರೋಪಿಸಿ ‘ಪಿಂಕ್ ಪ್ಯಾಂಥರ್ ಹಾಸ್ಪಿಟಾಲಿಟಿ ಕಂಪನಿ’ಗೆ ಸೇರಿದ ‘ಟಿಪ್ಲರ್ ಆನ್ ದಿ ರೂಫ್’ ಬಾರ್ ಅಂಡ್‌ ರೆಸ್ಟೋರಂಟ್‌ನ ಅಮಿತ್ ಅಗರವಾಲ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿ, ‘ಬಾರ್ ಅಂಡ್‌ ರೆಸ್ಟೋರಂಟ್ ಮೂರನೇ ಮಹಡಿಯಲ್ಲಿದೆ. ಅರ್ಜಿದಾರರು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಆದರೂ ಬಿಬಿಎಂಪಿ ಅದನ್ನು ಮುಚ್ಚಿದೆ’ ಎಂದು ಆಕ್ಷೇಪಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಮುಚ್ಚಿರುವ ಬೀಗ ತೆರೆದು ದೈನಂದಿನ ವ್ಯಾಪಾರಕ್ಕೆ ಅನುವು ಮಾಡಿಕೊಡಿ’ ಎಂದೂ ಬಿಬಿಎಂಪಿ ಪರ ವಕೀಲ ಎಸ್‌.ಎಚ್.ಪ್ರಶಾಂತ್‌ ಅವರಿಗೆ ನಿರ್ದೇಶಿಸಿದೆ.

ಮೂರು ವಾರಗಳಲ್ಲಿ ಸ್ಥಳ ಪರಿಶೀಲನೆಯ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ನಿ‌ರ್ದೇಶಿಸಿ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿದೆ.

‘ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ’
ಬೆಂಗಳೂರು:
‘ಪ್ಲಾಸ್ಟಿಕ್ ನಿಷೇಧ ಆದೇಶ ಅನುಷ್ಠಾನಕ್ಕೆ ಯಾರದೇ ಮುಲಾಜು ನೋಡದೇ ಕ್ರಮ ಕೈಗೊಳ್ಳಿ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ತಾಕೀತು ಮಾಡಿದೆ.

‘ಪ್ಲಾಸ್ಟಿಕ್ ಬಳಸುವ ಹಾಗೂ ಮಾರಾಟಗಾರರಿಗೆ ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ. ಅಂತಹವರಿಗೆ ದಂಡ ವಿಧಿಸಿ ಶಿಕ್ಷೆ ನೀಡಿದರೆ ಮಾತ್ರ ಪ್ಲಾಸ್ಟಿಕ್ ನಿಷೇಧ ಆದೇಶ ಯಶಸ್ವಿಯಾಗಿ ಜಾರಿಗೊಳಿಸಬಹುದು’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಶ್ಲಾಘನೆ ‘ಪ್ಲಾಸ್ಟಿಕ್ ನಿಷೇಧಿಸಿರುವ ರಾಜ್ಯ ಸರ್ಕಾರದ ನಿರ್ಧಾರ ನಿಜಕ್ಕೂ ಶ್ಲಾಘನೀಯ’ ಎಂು ನ್ಯಾಯಮೂರ್ತಿ ವಿನೀತ್ ಕೊಠಾರಿ ಹೇಳಿದರು.

ಶ್ಲಾಘನೆಗೆ ಪೂರಕವಾಗಿ ಉದಾಹರಣೆಯೊಂದನ್ನು ವಿವರಿಸಿದ ಅವರು, ‘1990ರ ದಶಕದಲ್ಲಿ ಸಿಂಗಪುರ್‌ನಲ್ಲಿ ಬಾಲಕನೊಬ್ಬ ಮೆಟ್ರೊ ರೈಲಿನ ಬಾಗಿಲಿನಲ್ಲಿ ಚ್ಯೂಯಿಂಗ್ ಗಮ್ ಅಂಟಿಸಿದ್ದ ಕಾರಣ ರೈಲು ಸಂಚಾರ 2 ನಿಮಿಷ ತಡವಾಗಿತ್ತು. ಅಂದೇ ಅಲ್ಲಿನ ಸರ್ಕಾರ ದೇಶದಾದ್ಯಂತ ಚ್ಯೂಯಿಂಗ್ ಗಮ್ ಮಾರಾಟ ನಿಷೇಧಿಸಿತ್ತು. ಅದೇ ರೀತಿ ನಮ್ಮಲ್ಲೂ ಸರ್ಕಾರ ಪರಿಣಾಮಕಾರಿ ಆದೇಶಗಳನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ’ ಎಂದರು.

ಪ್ಲಾಸ್ಟಿಕ್ ಮಾರಾಟ ವಹಿವಾಟಿಗೆ ಸಂಬಂಧಿಸಿದಂತೆ ಬಿಬಿಎಂಪಿ ನೀಡಿದ್ದ ನೋಟಿಸ್ ಅನ್ನು ಪ್ರಶ್ನಿಸಿ ‘360 ಡಿಗ್ರಿ ಪ್ರಿಂಟ್ಸ್ ಲಿಮಿಟೆಡ್’ ಕಂಪನಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಜಂಟಿ ಆಯುಕ್ತ (ಕಂದಾಯ) ವೆಂಕಟಾಚಲಪತಿ ಖುದ್ದು ಹಾಜರಿದ್ದರು.

ಪರಿಸರ ಸಂರಕ್ಷಣೆ ಉದ್ದೇಶದಿಂದ ಎಲ್ಲ ಬಗೆಯ ಪ್ಲಾಸ್ಟಿಕ್ ಉತ್ಪಾದನೆ, ಪೂರೈಕೆ ಹಾಗೂ ಮಾರಾಟವನ್ನು ನಿಷೇಧಿಸಿ 2016ರ ಮಾರ್ಚ್ 11ರಂದು ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT