ಬುಧವಾರ, ಆಗಸ್ಟ್ 12, 2020
27 °C
ಶಬ್ದ ಮಾಲಿನ್ಯ: ತಾಜಾ ಮಾಹಿತಿ ನೀಡಲು ನಗರದ ಹತ್ತು ಮೆಟ್ರೊ ನಿಲ್ದಾಣದಲ್ಲಿ ಡಿಜಿಟಲ್‌ ಪರದೆ ಅಳವಡಿಕೆ

ಸದ್ದಡಗಿಸಲು ಸದ್ದಿಲ್ಲದೆ ನಡೆದಿದೆ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸದ್ದಡಗಿಸಲು ಸದ್ದಿಲ್ಲದೆ ನಡೆದಿದೆ ಜಾಗೃತಿ

ಬೆಂಗಳೂರು: ಇಂದು ಬೆಳಿಗ್ಗೆ ಮಡಿವಾಳದಲ್ಲಿ ಎಷ್ಟು ಶಬ್ದ ಮಾಲಿನ್ಯ ಇತ್ತು, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಶಬ್ದ ಮಾಲಿನ್ಯ ಪ್ರಮಾಣ ಮಿತಿ ಮೀರಿತ್ತೇ? ಮಾರತಹಳ್ಳಿಯಲ್ಲಿ ಸದ್ದುಗದ್ದಲ ಕಡಿಮೆ ಆಗಿದೆಯೇ?

ಇಂತಹ ಕ್ಷಣ ಕ್ಷಣದ ತಾಜಾ ಮಾಹಿತಿ ನಿಮಗೆ ಬೇಕೇ? ಹಾಗಿದ್ದರೆ ಎಂ.ಜಿ.ರಸ್ತೆಯ ‘ನಮ್ಮ ಮೆಟ್ರೊ’ ನಿಲ್ದಾಣಕ್ಕೆ ಬನ್ನಿ. ಸಾರ್ವಜನಿಕರಲ್ಲಿ ಶಬ್ದ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಇಲ್ಲಿ ಡಿಜಿಟಲ್‌ ಪರದೆಯನ್ನು ಅಳವಡಿಸಿದೆ.

ಬೇರೆ ಬೇರೆ ಸಮಯದಲ್ಲಿ ಯಾವ ಪ್ರದೇಶದಲ್ಲಿ ಎಷ್ಟು ಶಬ್ದ ಮಾಲಿನ್ಯ ಇತ್ತು ಎಂಬ ಅಂಕಿ–ಅಂಶಗಳು ಈ ಪರದೆಯಲ್ಲಿ ಮೂಡುತ್ತವೆ. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಕೈಗಾರಿಕೆ, ವಾಣಿಜ್ಯ, ವಸತಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ (ಆಸ್ಪತ್ರೆ, ಶಾಲಾ ಕಾಲೇಜು) ಶಬ್ದದ ಪ್ರಮಾಣ (ಡೆಸಿಬಲ್‌ಗಳಲ್ಲಿ) ಎಷ್ಟು ಇರಬಹುದು.

ಈ ಪ್ರದೇಶಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಎಷ್ಟು ಪ್ರಮಾಣದ ಶಬ್ದ ಸಹನೀಯ ಎಂಬ ವಿವರಗಳನ್ನೂ ನೀಡಲಾಗುತ್ತಿದೆ. ಮೆಟ್ರೊ ಪ್ರಯಾಣಿಕರಲ್ಲಿ ಕೆಲವರು ತುಸು ಹೊತ್ತು ಈ ಪರದೆ ಎದುರು ನಿಂತು, ಮಾಹಿತಿಯತ್ತ ಕಣ್ಣಾಡಿಸಿ ಮುಂದಕ್ಕೆ ಹೋಗುತ್ತಿದ್ದಾರೆ.

‘ಶಬ್ದ ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿವಳಿಕೆ ಕೊರತೆ ಇದೆ. ಅವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಈ ಕುರಿತ ಮಾಹಿತಿಯನ್ನು ಒದಗಿಸುತ್ತಿದ್ದೇವೆ’ ಎಂದು ಮಂಡಳಿ ಅಧ್ಯಕ್ಷ ಲಕ್ಷ್ಮಣ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಡಳಿಯು ಆರ್‌.ವಿ.ಕಾಲೇಜು ಪ್ರಾಂಗಣ ಮತ್ತು ಚರ್ಚ್‌ಸ್ಟ್ರೀಟ್‌ನಲ್ಲಿರುವ ಪರಿಸರ ಭವನದ ಆವರಣದಲ್ಲೂ ಇಂತಹ ಡಿಜಿಟಲ್‌ ಪರದೆ ಅಳವಡಿಸಿದೆ.

‘ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಶಬ್ದ ಮಾಲಿನ್ಯ ಹೆಚ್ಚು ಇರುವ ಎಂಟು ನಗರಗಳನ್ನು ಗುರುತಿಸಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಕೂಡಾ ಇದೆ. ಈ ನಗರಗಳಲ್ಲಿ ಶಬ್ದ ಮಾಲಿನ್ಯ ನಿಯಂತ್ರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆಯೂ ಸಚಿವಾಲಯ ಸೂಚಿಸಿದೆ. ಹಾಗಾಗಿ ನಾವು ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ನಗರದ 10 ಕಡೆ ಶಬ್ದ ಮಾಲಿನ್ಯದ ಪ್ರಮಾಣವನ್ನು ಅಳತೆ ಮಾಡುತ್ತಿದ್ದೇವೆ. ಇಲ್ಲಿ ಅಳವಡಿಸಿರುವ ಮಾಪಕದಲ್ಲಿ ಪ್ರತಿ ಕ್ಷಣದ ಶಬ್ದದ ಪ್ರಮಾಣ ದಾಖಲಾಗುತ್ತದೆ. ಈ ಮಾಹಿತಿಯನ್ನು ನಾವು ಸಾರ್ವಜನಿಕರಿಗೆ ತಲುಪಿಸುತ್ತಿದ್ದೇವೆ. ವಾಸಸ್ಥಳ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಶಬ್ದದ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚು ಇರುವುದು ತಿಳಿದರೆ ಜನರೂ ಎಚ್ಚೆತ್ತುಕೊಳ್ಳುತ್ತಾರೆ. ಶಬ್ದ ಮಾಲಿನ್ಯ ಕಡಿಮೆ ಮಾಡಲು ಅವರು ಕೂಡಾ ಕಾಳಜಿ ವಹಿಸುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಾಯು ಮಾಲಿನ್ಯದ ಮಾಹಿತಿಗೆ ಡಿಜಿಟಲ್‌ ಪರದೆ

ನಗರದ ವಿವಿಧ ಪ್ರದೇಶಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಎಷ್ಟಿತ್ತು ಎಂಬ ತಾಜಾ ಮಾಹಿತಿಯನ್ನು ಜನರಿಗೆ ಒದಗಿಸುವ ಸಲುವಾಗಿ ವಿಧಾನಸೌಧದ ಬಳಿ ದೊಡ್ಡ ಗಾತ್ರದ (14x12 ಅಡಿ) ಡಿಜಿಟಲ್‌ ಪರದೆ ಅಳವಡಿಸಲಿದ್ದೇವೆ ಎಂದು ಲಕ್ಷ್ಮಣ ತಿಳಿಸಿದರು.

ಭವಿಷ್ಯದಲ್ಲಿ ನಗರ ಇತರ ಭಾಗಗಳಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಇಂತಹ ಮಾಹಿತಿ ನೀಡುವ ಉದ್ದೇಶ ಹೊಂದಿದ್ದೇವೆ. ಈ ಯೋಜನೆಗೆ  ₹ 1.2 ಕೋಟಿ ವೆಚ್ಚವಾಗಲಿದೆ. ತಂತ್ರಾಂಶ ಅಭಿವೃದ್ಧಿ ಮತ್ತು ನಿರ್ವಹಣೆ ಹಾಗೂ ಮೂಲಸೌಕರ್ಯ ಕಲ್ಪಿಸುವ ವೆಚ್ಚವೂ ಇದರಲ್ಲಿ ಸೇರಿದೆ ಎಂದರು.

‘ಶಬ್ದ ಮಾಲಿನ್ಯದಿಂದ ಶಾಶ್ವತ ಕಿವುಡುತನ’

ಶಬ್ದ ಮಾಲಿನ್ಯ ಮಿತಿ ಮೀರಿದರೆ ಜನರಲ್ಲಿ ಶಾಶ್ವತ ಕಿವುಡುತನ ಕಾಣಿಸಿಕೊಳ್ಳಬಹುದು. ಅಲ್ಪಾವಧಿಗೆ ಸ್ಮರಣಶಕ್ತಿ ಕಳೆದುಕೊಳ್ಳುವ ಕಾಯಿಲೆಯೂ ಕಾಣಿಸಿಕೊಳ್ಳಬಹುದು ಎಂದು ಲಕ್ಷ್ಮಣ್‌ ತಿಳಿಸಿದರು.

ನಗರದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಶಬ್ದ ಮಾಲಿನ್ಯ ಪ್ರಮಾಣ ನಿಗದಿತ ಮಿತಿಯ ಒಳಗೆಯೇ ಇದೆ. ಆದರೆ, ವಸತಿ ಪ್ರದೇಶಗಳಲ್ಲೇ ಇದರ ಪ್ರಮಾಣ ಹೆಚ್ಚುತ್ತಿದೆ. ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಜಾಸ್ತಿ ಆಗುತ್ತಿರುವುದು ಇದಕ್ಕೆ ಕಾರಣ. ವಾಹನಗಳ ಹಾರ್ನ್‌ ಬಳಕೆ ಕೂಡಾ ಶಬ್ದ ಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣ. ಜನ ವಾಹನಗಳಲ್ಲಿ ಹಾರ್ನ್‌ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

‘ದಿನವಿಡೀ ಸದ್ದುಗದ್ದಲದ ನಡುವೆಯೇ ಕಾಲ ಕಳೆಯುವ ವಾಹನ ಚಾಲಕರಲ್ಲಿ ಕಿವುಡುತನ ಕಾಣಿಸಿಕೊಳ್ಳುತ್ತಿದೆ. ಅವರು ಮನೆಯಲ್ಲಿ ಟಿ.ವಿ.ಯ ಧ್ವನಿಯನ್ನು ಹೆಚ್ಚಿಸುತ್ತಾರೆ. ಕುಟುಂಬದ ಸದಸ್ಯರಿಗೆ ಕಿರಿಕಿರಿ ಆಗುವಷ್ಟು ಧ್ವನಿ ಇಡುತ್ತಾರೆ. ಸರ್ಕಾರೇತರ ಸಂಸ್ಥೆಯೊಂದು ನಡೆಸಿರುವ ಅಧ್ಯಯನದಿಂದ ಈ ಅಂಶ ತಿಳಿದುಬಂದಿದೆ’ ಎಂದು ಅವರು ವಿವರಿಸಿದರು.ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.