ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂಸಾಚಾರ ತಡೆಯಲು ಮಹಾರಾಷ್ಟ್ರ ಸರ್ಕಾರ ವಿಫಲ’

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಭೀಮಾ– ಕೋರೆಗಾಂವ್‌ ಹಿಂಸಾಚಾರ ನಿಯಂತ್ರಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಗುರುವಾರ ರಾಜ್ಯಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದವು. ಹಿಂಸಾಚಾರ ಭುಗಿಲೇಳಲು ಹಿಂದೂ ಸಂಘಟನೆಗಳೇ ಕಾರಣ ಎಂದು ಅವು ಆರೋಪಿಸಿದವು.

ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಯ ನೇತೃತ್ವದಲ್ಲಿ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹಲವು ವಿರೋಧ ಪಕ್ಷಗಳು ಆಗ್ರಹಿಸಿದವು.

ಈ ಬೇಡಿಕೆ ತಳ್ಳಿ ಹಾಕಿದ ಬಿಜೆಪಿ ಮತ್ತು ಶಿವ ಸೇನಾ ಸದಸ್ಯರು, ‘ಮಹಾರಾಷ್ಟ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಪೇಶ್ವೆಗಳ ವಿರುದ್ಧ ದಲಿತರು ಸಾಧಿಸಿದ ಜಯದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಗದ್ದಲ: ಮಹಾರಾಷ್ಟ್ರದಲ್ಲಿ ಬುಧವಾರ ಸಂಭವಿಸಿದ ಹಿಂಸಾಚಾರ ಗುರುವಾರ ಮೇಲ್ಮನೆಯಲ್ಲಿ ಹಲವು ಬಾರಿ ಗದ್ದಲ ಸೃಷ್ಟಿಸಿತು. ಅಂತಿಮವಾಗಿ ಶೂನ್ಯ ವೇಳೆಯಲ್ಲಿ ಈ ವಿಚಾರ ಚರ್ಚಿಸುವುದಕ್ಕೆ ಎಲ್ಲ ಪಕ್ಷಗಳು ಒಪ್ಪಿಕೊಂಡವು.

‘ದಲಿತರ ವಿರುದ್ಧ ಹಿಂಸಾಚಾರ ಹುಟ್ಟುಹಾಕಿದ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ನ ರಜನಿ ಪಾಟೀಲ್‌ ಒತ್ತಾಯಿಸಿದರು.

ಎನ್‌ಸಿಪಿಯ ಶರದ್‌ ಪವಾರ್ ಮಾತನಾಡಿ, ಹಿಂಸಾಚಾರದ ಹಿಂದೆ ಕೆಲವು ಕೋಮುವಾದಿ ಶಕ್ತಿಗಳ ಕೈವಾಡ ಇದೆ ಎಂದು ಹೇಳಿದರು.

’ಕಳೆದ 50 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ರಾಜ್ಯ ಸರ್ಕಾರ ಎಚ್ಚರಿಕೆಯಿಂದ ಇರಬೇಕಿತ್ತು’ ಎಂದು ಪವಾರ್‌ ಹೇಳಿದರು.

ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಡಿಎಂಕೆಯ ಕನಿಮೊಳಿ, ‘ದಲಿತರು, ಮಹಿಳೆಯರು ಮತ್ತು ಶೋಷಿತರು ಭಯದಲ್ಲಿ ಜೀವಿಸುವಂತೆ ಮಾಡಲಾಗುತ್ತಿದೆ. ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

ಹಿಂಸಾಚಾರ ಖಂಡಿಸಿದ ಸಿಪಿಐನ ಡಿ. ರಾಜಾ, ‘ದಲಿತರ ಅಸ್ಮಿತೆಯನ್ನು ಸರಿಯಾದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳಬೇಕು’ ಎಂದರು.

ವಿರೋಧ ಪಕ್ಷಗಳ ಸದಸ್ಯರ ಮಾತಿಗೆ ತಿರುಗೇಟು ನೀಡಿದ ಶಿವ ಸೇನಾದ ಸಂಜಯ್‌ ರಾವತ್‌, ‘ಭೀಮಾ–ಕೋರೆಂಗಾವ್‌ ಯುದ್ಧದ ಇತಿಹಾಸ ಗೊತ್ತಿಲ್ಲದವರು ಹೆಚ್ಚು ಮಾತನಾಡುತ್ತಿದ್ದಾರೆ. ಪೇಶ್ವೆಗಳು ಆರ್‌ಎಸ್‌ಎಸ್‌ ಅಥವಾ ಯಾವುದೇ ಹಿಂದೂ ಸಂಘಟನೆಗೆ ಸಂಬಂಧಿಸಿದವರಲ್ಲ. ಜನರನ್ನು ಒಡೆದು ಆಳುವುದಕ್ಕಾಗಿ ಕೆಲವು ಕಾಣದ ಕೈಗಳು ಈ ಕೆಲಸ ಮಾಡುತ್ತಿವೆ’ ಎಂದು ಹೇಳಿದರು.

ಗುಜರಾತ್‌ ಶಾಸಕ ಜಿಗ್ನೇಶ್‌ ಮೆವಾನಿ ಮತ್ತು ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಾಲಿದ್‌ ಅವರು ಭಾಷಣದ ಮೂಲಕ ಹಿಂಸಾಚಾರದ ಕಿಡಿ ಹೊತ್ತಿಸಿದ್ದರು ಎಂದು ಬಿಜೆಪಿ ಸದಸ್ಯ ಅಮರ್‌ ಸಾಬ್ಲೆ ಆರೋಪಿಸಿದರು.

‘ಇದನ್ನು ರಾಜಕೀಯ ವಿಚಾರವಾಗಿ ಯಾರೂ ಪರಿಗಣಿಸಬಾರದು. ಬಿಜೆಪಿ ಅಥವಾ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ದಲಿತರನ್ನು ಗುರಿಯಾಗಿಸಲಾಗುತ್ತದೆ’ ಎಂದು ಕೇಂದ್ರ ಸಚಿವ ರಾಮ್‌ದಾಸ್‌ ಆಠವಲೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT