ಶನಿವಾರ, ಜೂಲೈ 4, 2020
21 °C

ಎಂಎಸ್ಐಎಲ್‌ ಮಳಿಗೆಗಳಲ್ಲಿ ₹12 ಕೋಟಿ ಮದ್ಯ ಮಾರಾಟ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಎಂಎಸ್ಐಎಲ್‌ ಮಳಿಗೆಗಳಲ್ಲಿ ₹ 12 ಕೋಟಿ ಮದ್ಯ ಮಾರಾಟ

ಬೆಂಗಳೂರು: ಹೊಸ ವರ್ಷ ಆಚರಣೆ ಸಂದರ್ಭ (ಡಿ.31 ರಂದು) ಒಂದೇ ದಿನ ರಾಜ್ಯ ಸರ್ಕಾರ ಸ್ವಾಮ್ಯದ ಎಂಎಸ್‌ಐಎಲ್‌ ಮದ್ಯ ಮಾರಾಟ ಮಳಿಗೆಗಳಲ್ಲಿ ಸುಮಾರು ₹12 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.

ಎಂಎಸ್‌ಐಎಲ್‌ ರಾಜ್ಯದಲ್ಲಿ 510 ಮದ್ಯ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಇಲ್ಲಿ ಎಲ್ಲ ರೀತಿಯ  ಬ್ರ್ಯಾಂಡ್‌ಗಳ ಮದ್ಯ ಲಭ್ಯವಿರುತ್ತದೆ. ಈ ವರ್ಷ ಎಂಎಸ್‌ಐಎಲ್‌ ಮಳಿಗೆಗಳಲ್ಲಿ ಹಿಂದಿನ ವರ್ಷಗಳಿಗಿಂತ ಹೆಚ್ಚು ಮದ್ಯ ಮಾರಾಟವಾಗಿದೆ ಎಂದು ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಎಂಎಸ್‌ಐಎಲ್‌ ಮಳಿಗೆಗಳಲ್ಲಿ ಪ್ರತಿ ದಿನ ₹4 ಕೋಟಿಯಷ್ಟು ಮದ್ಯ ವಹಿವಾಟು ನಡೆಯುತ್ತದೆ. ಆದರೆ, ಡಿ. 31 ರಂದು ಮೂರು ಪಟ್ಟು ಹೆಚ್ಚು ಮಾರಾಟವಾಗಿದೆ. ಎಂಆರ್‌ಪಿ ದರದಲ್ಲಿ ಉತ್ಕೃಷ್ಟ ದರ್ಜೆಯ ಮದ್ಯ ಮಾರಾಟ ಮಾಡುತ್ತಿ‌ರುವುದು ಇದಕ್ಕೆ ಕಾರಣ’ ಎಂದು ಅವರು ತಿಳಿಸಿದರು.

‘ಎಂಎಸ್‌ಐಎಲ್‌ ಈ ಕ್ಷೇತ್ರಕ್ಕೆ ಪ್ರವೇಶಿಸಿದ ಬಳಿಕ ಖಾಸಗಿ ಮಳಿಗೆಗಳಿಗೆ ಹೋಗುತ್ತಿದ್ದ ಗ್ರಾಹಕರು ನಮ್ಮ ಕಡೆಗೆ ಬರುತ್ತಿದ್ದಾರೆ. ಒರಿಜಿನಲ್‌ ಚಾಯ್ಸ್‌ ವಿಸ್ಕಿ 180 ಎಂ.ಎಲ್‌ ಬಾಟಲಿಗೆ ಖಾಸಗಿ ಮಳಿಗೆಗಳಲ್ಲಿ ₹70 ಇದ್ದರೆ, ನಮ್ಮಲ್ಲಿ ₹50 ಇದೆ. ₹20 ವ್ಯತ್ಯಾಸವಿದೆ’ ಎಂದು ಹೇಳಿದರು.

ತುಮಕೂರು ಜಿಲ್ಲೆಯ ಭೀಮಸಂದ್ರ ಎಂಬ ಗ್ರಾಮದಲ್ಲಿ ಖಾಸಗಿ ಮದ್ಯ ಮಳಿಗೆ ಸಮೀಪವೇ ಎಂಎಸ್‌ಐಎಲ್‌ ಮಳಿಗೆ ಇದೆ. ಇಲ್ಲಿ ಡಿ.31 ರಂದು ₹ 12 ಲಕ್ಷ ಮೌಲ್ಯದ ಮದ್ಯ ಮಾರಾಟವಾಗಿದೆ. ಖಾಸಗಿಯವರು ಏನೆಲ್ಲಾ ಟ್ರಿಕ್ಸ್‌ ಮಾಡಿದರೂ ಜನ ನಮ್ಮ ಮಳಿಗೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ಅವರು ವಿವರಿಸಿದರು.

ರಾಯಚೂರು ನಗರದ ರೈಲ್ವೇ ನಿಲ್ದಾಣದ ರಸ್ತೆಯಲ್ಲಿರುವ ಮಳಿಗೆಯಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಈ ಮಳಿಗೆಯಲ್ಲಿ ಮಧ್ಯಾಹ್ನದ ಬಳಿಕ ಮಾರಾಟವಾದ ಮದ್ಯದ ಮೌಲ್ಯ ₹ 12 ಲಕ್ಷ ಎಂದು ಅವರು ತಿಳಿಸಿದರು.

ಒಟ್ಟಾರೆ  ರಾಜ್ಯದಲ್ಲಿ 2017 ರ ಡಿಸೆಂಬರ್‌ನಲ್ಲಿ 50 ಲಕ್ಷ ಕೇಸ್‌ಗಳಷ್ಟು ಮಾರಾಟವಾಗಿದೆ. ಕಳೆದ ವರ್ಷದ (2016) ಡಿಸೆಂಬರ್‌ನಲ್ಲಿ 49 ಲಕ್ಷ ಕೇಸ್‌ಗಳಷ್ಟು ಮಾರಾಟವಾಗಿತ್ತು. ಈ ವರ್ಷ ಅದು 50 ಲಕ್ಷಕ್ಕೆ ಏರಿಕೆಯಾಗಿದೆ. 2016ರ ಡಿಸೆಂಬರ್‌ನಲ್ಲಿ 19 ಲಕ್ಷ ಕೇಸ್‌ ಬಿಯರ್‌ ಮಾರಾಟವಾಗಿದ್ದರೆ, 2017 ಡಿಸೆಂಬರ್‌ನಲ್ಲಿ 23 ಲಕ್ಷ ಕೇಸ್‌ಗಳಷ್ಟು ಬಿಯರ್‌ ಮಾರಾಟವಾಗಿದೆ.

2016 ರ ಡಿಸೆಂಬರ್‌ ತಿಂಗಳಲ್ಲಿ ₹1,300 ಕೋಟಿ ಆದಾಯ ಬಂದಿತ್ತು. 2017 ರ ಡಿಸೆಂಬರ್‌ನಲ್ಲಿ ₹1,400 ಕೋಟಿ ಆದಾಯ ಬಂದಿದೆ. ಮದ್ಯ ಮಾರಾಟದಲ್ಲಿ ₹100 ಕೋಟಿ ಮಾತ್ರ ಹೆಚ್ಚಳವಾಗಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಮೂಲಕ ಮದ್ಯ ಖರೀದಿಸುವವರು ಹೆಚ್ಚಾಗಿದ್ದಾರೆ. ಇದರಿಂದ ಮಳಿಗೆಗಳಲ್ಲಿ ಮದ್ಯ ಮಾರಾಟ ಕಡಿಮೆ ಆದಂತೆ ಕಾಣುತ್ತದೆ. ಆನ್‌ಲೈನ್‌ ಮೂಲಕಎಷ್ಟು ಮದ್ಯ ಮಾರಾಟವಾಗಿದೆ ಎಂಬ ನಿಖರ ಮಾಹಿತಿ ತಕ್ಷಣಕ್ಕೆ ಸಿಗುವುದಿಲ್ಲ ಎಂದು ತಿಳಿಸಿದರು.

1000 ಮದ್ಯ ಮಳಿಗೆ ಗುರಿ

ರಾಜ್ಯದಲ್ಲಿ ಈಗ 510 ಮದ್ಯ ಮಾರಾಟ ಮಳಿಗೆ ಇದ್ದು, ಶೀಘ್ರವೇ 200 ರಿಂದ 300 ಮಳಿಗೆಗಳನ್ನು ಆರಂಭಿಸಲಾಗುವುದು. ಬೆಂಗಳೂರಿನಲ್ಲಿ 40 ಮಳಿಗೆಗಳಿವೆ. ಅವುಗಳ ಸಂಖ್ಯೆಯನ್ನು 1000 ಕ್ಕೆ ಏರಿಸುವ ಗುರಿ ಇದೆ ಎಂದು ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಪ್ಪ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.