ಸೋಮವಾರ, ಜೂಲೈ 6, 2020
21 °C

ನೀವೂ ಅಣ್ಣಾ ಹಜಾರೆ ಆಗಿ ಪರಿವರ್ತನೆ ತನ್ನಿ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀವೂ ಅಣ್ಣಾ ಹಜಾರೆ ಆಗಿ ಪರಿವರ್ತನೆ ತನ್ನಿ..

ದೇಶದಲ್ಲಿ ಜಮೀನು ಮತ್ತು ನೀರಿನ ಬಳಕೆ ಕುರಿತು ಸರಿಯಾದ ಯೋಜನೆ ರೂಪಿಸಬೇಕು. ದೇಶದಲ್ಲಿ ಒಬ್ಬ ನಿವೃತ್ತ ಸೈನಿಕ (ಅಣ್ಣಾ ಹಜಾರೆ) ಇಷ್ಟು ಪರಿವರ್ತನೆ ತರಲು ಸಾಧ್ಯವಾಗಿದೆ. ದೇಶದಲ್ಲಿ ಪ್ರತಿ ವರ್ಷ 7 ಸಾವಿರ ಸೈನಿಕರು ನಿವೃತ್ತರಾಗುತ್ತಿದ್ದಾರೆ. ಪ್ರತಿಯೊಬ್ಬರೂ ಮನಸ್ಸು ಮಾಡಿದರೆ ಎಂಥ ಬದಲಾವಣೆ ತರಬಹುದು. ಆಲೋಚಿಸಿ ನೋಡಿ.

ರಾಳೇಗಣಸಿದ್ದಿಯಲ್ಲಿ ನಮ್ಮದೊಂದು ಶಾಲೆ ಇದೆ. ಅಲ್ಲಿಗೆ ಹಾದಿ ತಪ್ಪಿದವರನ್ನು, ಗೂಂಡಾಗಿರಿಗಿಳಿದ, ಮಾದಕ ದ್ರವ್ಯ ಸೇವಿಸುವ, ಉದ್ದಟತನ ಹೊಂದಿದ,  ಅನುತ್ತೀರ್ಣರಾದ ಮಕ್ಕಳನ್ನು ಸೇರಿಸುತ್ತೇವೆ. ಅಲ್ಲಿನ 10ನೇ ತರಗತಿ ಫಲಿತಾಂಶ ಶೇ 100 ಇದೆ. 12ನೇ ತರಗತಿ ಫಲಿತಾಂಶ ಶೇ 97 ಇದೆ. ಶಿಕ್ಷಣದ ಉದ್ದೇಶ ಮನುಷ್ಯತ್ವ ನಿರ್ಮಾಣ.

ವೈಯಕ್ತಿಕ ಬದುಕಿನಲ್ಲಿ ಎಷ್ಟೇ ಹಣಗಳಿಸಿ ಕೋಟ್ಯಧಿಪತಿಗಳಾಗಿ. ಆದರೆ, ನೆನಪಿರಲಿ ದೇಶದಲ್ಲಿ ಯಾವ ಕೋಟ್ಯಧಿಪತಿಯ ಜಯಂತಿ, ಜನ್ಮದಿನಾಚರಣೆ ಮಾಡುವುದಿಲ್ಲ.    ಜೋಪಡಿಗಳಿಂದ ಬಂದು ಜಗತ್ತಿಗೆ ಬೆಳಕಾದವರ ಜಯಂತಿ ಆಚರಿಸಲಾಗುತ್ತಿದೆ. ನಿಷ್ಕಾಮ ಕರ್ಮವೇ ಸೇವೆ.

ಯಾವುದೇ ಅಧಿಕಾರಿ ತನ್ನ ಕುಟುಂಬದವರ ಹೆಸರಿನಲ್ಲಿರುವ ಆಸ್ತಿ ಘೋಷಣೆ ಮಾಡಬೇಕು. ಈ ನಿಯಮ ಈ ಹಿಂದೆಯೂ ಇತ್ತು. ಈಗ ಮತ್ತೆ ಬಂದಿದೆ ನೋಡಿ.

ಭ್ರಷ್ಟಾಚಾರ ತಡೆಗಟ್ಟುವ ಕಾನೂನು ತರಲು ಮೂರು ವರ್ಷ ಬೇಕಾಯಿತು. ಈ ವ್ಯವಸ್ಥೆಯನ್ನು ಕುಂಠಿತಗೊಳಿಸಲು ಮೂರೇ ದಿನಗಳಲ್ಲಿ ಕಾನೂನು ತಂದರು. ಈ ದೇಶದ ರಾಜಕಾರಣಿಗಳಿಗೆ ಭ್ರಷ್ಟಾಚಾರ ತಡೆಯುವುದು ಬೇಕಾಗಿಲ್ಲ.

ಚುನಾವಣೆ ಮತ್ತು ರಾಜಕೀಯ

ಸಂವಿಧಾನದಲ್ಲಿ ಯಾವುದೇ ಪಕ್ಷದ ಹೆಸರು ಇಲ್ಲ. ಅದು ಪ್ರತಿಯೊಬ್ಬ ಭಾರತೀಯ ಪ್ರಜೆ ಕುರಿತು ವ್ಯಕ್ತಿಗತವಾಗಿ ಮಾತನಾಡುತ್ತದೆ. ಹಾಗಿದ್ದ ಮೇಲೆ ಚುನಾವಣಾ ಮತಪತ್ರದಲ್ಲಿ ಪಕ್ಷದ ಹೆಸರು, ಚಿಹ್ನೆ ಏಕೆ? ಸ್ಪರ್ಧಿಯ ಹೆಸರು ಮತ್ತು ಭಾವಚಿತ್ರ ಪ್ರಕಟಿಸಬೇಕು. ಮತದಾನದ ವೇಳೆ ಆ ಭಾವಚಿತ್ರ ನೋಡಿ ಇಂಥವರಿಗೆ ಮತ ಹಾಕಬೇಕೋ ಬೇಡವೋ ಎಂದು ಮತದಾರ ನಿರ್ಧರಿಸುತ್ತಾನೆ. 1952ರಲ್ಲಿ ಈ ವ್ಯವಸ್ಥೆ ಜಾರಿಯಲ್ಲಿತ್ತು. ಆ ಬಳಿಕ ಇಲ್ಲ. ಅದನ್ನು ಜಾರಿಗೆ ತರಲು ಚುನಾವಣಾ ಆಯೋಗ ಈಗ ಅಸಾಧ್ಯ ಎನ್ನುತ್ತಿದೆ.  

ಲೋಕಸಭೆಯಲ್ಲಿ ಜನರು ಇರಬೇಕು. ಆದರೆ, ಲೋಕಸಭೆ ಪಕ್ಷಗಳ ಹಿಡಿತದಲ್ಲಿದೆ. ಇದು ಬದಲಾಗಬೇಕು. ಸಮೂಹದಿಂದ ಒಬ್ಬ ಪ್ರತಿನಿಧಿ ಹೋಗುವಂತಾಗಬೇಕು. ಉದಾ

ಹರಣೆಗೆ ಕೃಷಿ ಕ್ಷೇತ್ರದಿಂದ ರೈತ ಪ್ರತಿನಿಧಿ... ಹೀಗೆ. ಪಕ್ಷಗಳ ಹಿಡಿತದಲ್ಲಿರುವುದರಿಂದ ವ್ಯವಸ್ಥೆ ಭ್ರಷ್ಟವಾಗಿದೆ. ಪಕ್ಷಗಳಿಗೆ ಹಣ ಬೇಕು. ಸಹಜವಾಗಿ ಭ್ರಷ್ಟಾಚಾರ ಇಣುಕುತ್ತದೆ. ಪಕ್ಷ ವ್ಯವಸ್ಥೆ ಇರುವವರೆಗೂ ಭ್ರಷ್ಟಾಚಾರ ಇರುತ್ತದೆ.

ಅರವಿಂದ ಕೇಜ್ರಿವಾಲ್‌ಗೆ ಪಕ್ಷ ಕಟ್ಟಬೇಡಿ ಎಂದು ಹೇಳಿದೆ. ಇದರಿಂದ ಮತ್ತೆ ಹಣ, ಭ್ರಷ್ಟಾಚಾರದ ವ್ಯವಸ್ಥೆಗೆ ಶರಣಾಗಬೇಕಾಗುತ್ತದೆ ಎಂದೆ. ಅವರು ಕೇಳಲಿಲ್ಲ. ಪಕ್ಷ ಕಟ್ಟಿದರು. ನಾನು ಅದರಿಂದ ಹೊರಬಂದೆ. ಈಗಿನ ದೆಹಲಿ ಸರ್ಕಾರದಲ್ಲಿ ಎಷ್ಟು ಮಂದಿ ಭ್ರಷ್ಟಾಚಾರದ ಆರೋಪದ ಮೇಲೆ ಸಿಕ್ಕಿಬಿದ್ದರು ಎಂಬುದು ನಿಮಗೇ ಗೊತ್ತಿದೆ. ಫೋರ್ಬ್ಸ್‌ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಭಾರತ ಏಷ್ಯಾ ಖಂಡದ ರಾಷ್ಟ್ರಗಳ ಪೈಕಿ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದೆ. ಹೇಳಿ ಎಲ್ಲಿ ಕಡಿಮೆಯಾಗಿದೆ ಭ್ರಷ್ಟಾಚಾರ?

*ಜಾತಿ ವ್ಯವಸ್ಥೆಯೂ ಇರಬಾರದು. ಏಕೆಂದರೆ ಇದೇ ಮುಂದೆ ಪಕ್ಷ ವ್ಯವಸ್ಥೆಗೆ ಮೂಲ.

*ನಾನು ಕ್ಯಾಮೆರಾಗಳ ಹಿಂದೆ ಹೋಗಲಿಲ್ಲ. ಇಂದು ಕ್ಯಾಮೆರಾಮನ್‌ಗಳು ನನ್ನ ಹಿಂದೆ ಬಿದ್ದಿದ್ದಾರೆ.

‘ಪ್ರಧಾನಿಯನ್ನೂ ಪ್ರಶ್ನಿಸುವ ಲೋಕಪಾಲ’

ಭ್ರಷ್ಟಾಚಾರ ತಡೆ ಕಾಯ್ದೆ ಸರ್ಕಾರದ ಹಿಡಿತದಲ್ಲಿದೆ. ಹಲವು ಇತಿಮಿತಿಗಳೂ ಅದಕ್ಕಿದೆ. ಲೋಕಪಾಲ ಕಾಯ್ದೆಗೆ ಪ್ರಧಾನಿಯನ್ನು ಪ್ರಶ್ನಿಸುವ ಅಧಿಕಾರವೂ ಇದೆ. ಒಂದು ವೇಳೆ ಲೋಕಪಾಲ ಅಧಿಕಾರಿಯೇ ತಪ್ಪು ಮಾಡಿದರೆ ಜನಾಭಿಪ್ರಾಯದ ಮೇಲೆ ಅವನನ್ನು ತೆಗೆದುಹಾಕುವ ಅವಕಾಶವೂ ಈ ಕಾನೂನಿನಲ್ಲಿ ಇದೆ. ಒಟ್ಟಾರೆ ರಾಜಕೀಯ ವ್ಯವಸ್ಥೆಯನ್ನೇ ಪ್ರಶ್ನಿಸುವ ಕಾಯ್ದೆ ಇದಾಗಿರುವುದರಿಂದ ರಾಜಕಾರಣಿಗಳಿಗೆ ಇದು ಜಾರಿಯಾಗುವುದು ಬೇಕಾಗಿಲ್ಲ.

‘ರಾಜಕಾರಣಿಗಳು ಪಾಕಿಸ್ತಾನದವರಲ್ಲ’

ರಾಜಕಾರಣಿಗಳೇನೂ ಪಾಕಿಸ್ತಾನದವರಲ್ಲ. ಬಂದವರೆಲ್ಲಾ ಇಲ್ಲಿಯವರೆ. ₹ 500ರ ನೋಟು ಕೊಟ್ಟರೆ, ಮದ್ಯದ ಬಾಟಲಿ ತೋರಿಸಿದರೆ, ಡಾಬಾದಲ್ಲಿ ಪಾರ್ಟಿ ಕೊಡಿಸಿದರೆ ನೀವು ಓಟು ಹಾಕುತ್ತೀರಿ. ಅವರ ಕೀಲಿ ಕೈ ನಿಮ್ಮ ಬಳಿಯೇ ಇದೆ. ಅದನ್ನು ಸರಿಯಾಗಿ ಬಳಸಬೇಕು ಅಷ್ಟೆ. ಹಣ, ಹೆಂಡಕ್ಕೆ ಶರಣಾಗಬಾರದು. ಮತದಾರರೇ ಎಚ್ಚರ ವಹಿಸುವುದರಿಂದ ಬದಲಾವಣೆ ಸಾಧ್ಯ.

* * 

ನಮ್ಮ ರಾಜಕಾರಣಿಗಳಿಗೆ ಸ್ಮಶಾನಕ್ಕೆ ಹೋಗುವಾಗಲೂ ಕುರ್ಚಿಯ ಮೇಲೆ ಕುಳಿತೇ ಇರಬೇಕು ಎಂಬ ಆಸೆ. 

ಅಣ್ಣಾ ಹಜಾರೆ, ಸಾಮಾಜಿಕ ಹೋರಾಟಗಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.