ಗುರುವಾರ , ಆಗಸ್ಟ್ 13, 2020
27 °C

ಜೀವ ಕಳೆದುಕೊಳ್ಳುತ್ತಿರುವ ಬಾನಾಡಿಗಳು

ಎಂ.ಮುನಿನಾರಾಯಣ Updated:

ಅಕ್ಷರ ಗಾತ್ರ : | |

ಜೀವ ಕಳೆದುಕೊಳ್ಳುತ್ತಿರುವ ಬಾನಾಡಿಗಳು

ವಿಜಯಪುರ: ಜನವರಿ 5 ಪಕ್ಷಿ ದಿನವೆಂದು ಕರೆಯುತ್ತಾರೆ. ಆದರೆ ನಮ್ಮ ಸುತ್ತಮುತ್ತಲಿನಲ್ಲಿ ನಮ್ಮ ಸ್ನೇಹಿತರಂತೆ ಕಾಣುವ, ರೈತರ ತೋಟಗಳಲ್ಲಿನ ಕೀಟಗಳನ್ನು ತಿಂದು ರೈತರಿಗೆ ಉಪಕಾರಿಯಾಗಿರುವ ಪಕ್ಷಿಗಳನ್ನು ಸಂರಕ್ಷಣೆ ಮಾಡುವ ಕಡೆಗೆ ಯಾರು ಗಮನಹರಿಸುತ್ತಿಲ್ಲ ಎಂದು ಪಕ್ಷಿಪ್ರೇಮಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ತೀವ್ರ ಮಳೆಯ ಅಭಾವದಿಂದ ಜಲಮೂಲಗಳು ಬತ್ತಿ ಹೋದ ಕಾರಣ, ಹಕ್ಕಿಗಳ ಸಂಕುಲಕ್ಕೆ ಕುತ್ತು ಒದಗಿಬಂದಿದೆ. ನೀರಿನ ಕೊರತೆ ಮತ್ತು ಉಷ್ಣಾಂಶ ಹೆಚ್ಚಳದಿಂದ ಬಾನಾಡಿಗಳು ಜೀವ ಕಳೆದುಕೊಳ್ಳುತ್ತಿವೆ ಎಂದರು. ಪಕ್ಷಿಪ್ರೇಮಿ ಡಾ.ಸಲಿಂ ಅಲಿ ಸೇರಿದಂತೆ ಕುವೆಂಪು, ದ.ರಾ.ಬೇಂದ್ರೆಯವರಂತಹ ಕವಿಗಳು ಪಕ್ಷಿಗಳ ಉಳಿವಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು ಎಂದು ನೆನಪಿಸಿಕೊಂಡರು.

ನಮ್ಮ ಕೆರೆಗಳಲ್ಲಿ ನೀರಿದ್ದಾಗ ಸುಮಾರು 20 ಪ್ರಭೇದದ ಪಕ್ಷಿಗಳು ಕಾಣಸಿಗುತ್ತಿದ್ದವು. ಸಂಪನ್ಮೂಲ ಕೊರತೆ ಇಲ್ಲ ,ಅದರ ಬಳಕೆಗೆ ಮಾರ್ಗದರ್ಶನದ ಕೊರತೆ ಇದೆ.ಸಂಪನ್ಮೂಲ ಕೊರತೆ ಇಲ್ಲ ,ಅದರ ಬಳಕೆಗೆ ಮಾರ್ಗದರ್ಶನದ ಕೊರತೆ ಇದೆ. ಕೆರೆಗಳಿಗೆ ಮಳೆಯ ನೀರು ಹರಿಯುವಂತಹ ರಾಜಕಾಲುವೆಗಳು ಒತ್ತುವರಿಯಾಗಿರುವ ಕಾರಣದಿಂದಾಗಿ ನೀರು ಬರುತ್ತಿಲ್ಲದ ಕಾರಣ ಈ ಭಾಗದಲ್ಲಿ ವಾಸವಾಗಿದ್ದ ನೂರಾರು ಪಕ್ಷಿಗಳು ವಲಸೆ ಹೋಗಿವೆ ಎಂದರು

ಗುಂಡಿಗಳಲ್ಲಿ ಇರುವ ನೀರಿನಲ್ಲಿ ಬೆರಳೆಣಿಕೆಯಷ್ಟು ಪಕ್ಷಿಗಳು ವಾಸವಾಗಿವೆ. 30 ವರ್ಷಗಳಲ್ಲಿ ಈ ಪ್ರದೇಶಗಳಿಗೆ ವಲಸೆ ಹಕ್ಕಿಗಳು ಬರುವ ಪ್ರಮಾಣ ಶೇ 20 ರಷ್ಟು ಹಾಗೂ ಸ್ಥಳೀಯ ಹಕ್ಕಿಗಳ ಪ್ರಮಾಣದಲ್ಲಿ ಶೇ 98 ರಷ್ಟು ಇಳಿಕೆ ಕಂಡುಬಂದಿದೆ ಎಂದು ತಿಳಿಸಿದರು.

ನಗರಿಕರಣ, ಉದ್ಯಾನಗಳ ಅಸಮರ್ಪಕ ನಿರ್ವಹಣೆ, ಹಸಿರು ಪರಿಸರ ಮತ್ತು ನೀರಿನ ಮೂಲಗಳ ನಶಿಸುವಿಕೆಯಿಂದಾಗಿ ಹಕ್ಕಿಗಳ ಸಂಕುಲ ಕಡಿಮೆ ಆಗುತ್ತಿದೆ ಎಂದರು. ಪಕ್ಷಿಪ್ರೇಮಿ ಅಶ್ವತ್ಥನಾರಾಯಣ ಮಾತನಾಡಿ, ದೇಶದಲ್ಲಿ ಕಾಣಸಿಗುವ 1,224 ಪಕ್ಷಿ ಪ್ರಭೇದಗಳ ಪೈಕಿ 155 ಪಕ್ಷಿಗಳು (ಶೇ 13) ಅಪಾಯದ ಅಂಚಿನಲ್ಲಿವೆ. ಇದರಲ್ಲಿ 110 ಪಕ್ಷಿಗಳು ಸ್ಥಳೀಯ ಹಕ್ಕಿಗಳು. ಕರ್ನಾಟಕದಲ್ಲಿ ಕಾಣಸಿಗುವ 20ಕ್ಕೂ ಅಧಿಕ ಪ್ರಭೇದದ ಹಕ್ಕಿಗಳು ಅಪಾಯದ ಅಂಚಿನಲ್ಲಿವೆ ಎಂದರು.

ಬಿ.ಎಲ್‌.ಐ ಹಾಗೂ ಪರಿಸರ ಸಂರಕ್ಷಣೆಯ ಅಂತರ ರಾಷ್ಟ್ರೀಯ ಸಂಘಟನೆ (ಐಯುಸಿಎನ್) ಸಂಸ್ಥೆಗಳು 2011ರಲ್ಲಿ ಸಮೀಕ್ಷೆ ನಡೆಸಿ ಒಂದು ವರದಿಯನ್ನು ಕೊಟ್ಟಿದ್ದವು. ಅವರು ಪಟ್ಟಿ ಮಾಡಿದ್ದ ಪ್ರಕಾರ, 155 ಪಕ್ಷಿಗಳ ಪೈಕಿ 15 ಪ್ರಭೇದಗಳು ತೀರಾ ಅಪಾಯದಂಚಿನಲ್ಲಿ, 15 ಅಪಾಯದಂಚಿನಲ್ಲಿ, 52 ಅಪಾಯದ ಭೀತಿಯಲ್ಲಿ, 66 ಪ್ರಭೇದಗಳು ಭಯದ ಅಂಚಿನಲ್ಲಿವೆ ಎಂದು ವರದಿ ಮಾಡಿದ್ದರು ಎಂದು ತಿಳಿಸಿದರು.

ಪಕ್ಷಿಗಳ ಸಂರಕ್ಷಣೆ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ವರ್ಷಗಳಲ್ಲಿ ಅಪಾಯದ ಅಂಚಿಗೆ ಸೇರುವ ಪಕ್ಷಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಇಂದಿನ ದಿನಮಾನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಪ್ರಕೃತಿಯಲ್ಲಿ ಏರುಪೇರಾಗುತ್ತಿದೆ. ನೂತನ ಆವಿಷ್ಕಾರಗಳಿಂದ ನಿಸರ್ಗದಲ್ಲಿರುವ ಪ್ರಾಣಿ, ಪಕ್ಷಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇತರೆ ಪಕ್ಷಿಗಳಿಗಿಂತ ಗುಬ್ಬಿ ನಮಗೆ ಹೆಚ್ಚು ಪರಿಚಿತ, ಹೆಚ್ಚು ಆತ್ಮೀಯ.

ಅಮ್ಮ ಅಕ್ಕಿ ಆರಿಸುವಾಗ ಚೀಂವ್, ಚೀಂವ್ ಎಂದು ಕಾಳುಗಳನ್ನು ಕಬಳಿಸುತ್ತಾ ಕೈಗೆ ಸಿಗದಂತೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಹತ್ತಿರ ಹೋದಲ್ಲಿ ಪುರ್ರನೆ ಹಾರುತ್ತಿದ್ದ ಗುಬ್ಬಿಗಳ ಮೇಲೆ ಮೊಬೈಲ್ ಬಳಕೆ ಪರಿಣಾಮ ಬೀರುತ್ತಿದ್ದು ಅವುಗಳ ಸಂತತಿ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಗುಬ್ಬಚ್ಚಿಗಳ ಸಂತತಿ ವೃದ್ಧಿಸಿ, ಅವುಗಳನ್ನು ಸಂರಕ್ಷಣೆ ಮಾಡುವ ಹೊಣೆ ಎಲ್ಲರ ಮೇಲಿದೆ ಎಂದರು.

* * 

ಪಕ್ಷಿಗಳು ಬೆಳೆಗಳನ್ನು ನಾಶ ಮಾಡುತ್ತವೆ ಎಂದು ಶಬ್ದ ಉಂಟು ಮಾಡುವ ಸಿಡಿಮದ್ದುಗಳನ್ನು ಸಿಡಿಸಿ, ತೋಟಗಳಿಗೆ ಬಲೆಗಳನ್ನು ಹಾಕಿ ಬೆದರಿಸುವುದರಿಂದ ಅವು ಕಣ್ಮರೆಯಾಗುತ್ತಿವೆ

ಇಮ್ರಾನ್ ಪಾಷ,

ಪಕ್ಷಿ ಪ್ರೇಮಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.