ಗುರುವಾರ , ಆಗಸ್ಟ್ 13, 2020
27 °C

ಬರದ ನಾಡಲ್ಲಿ ದ್ರಾಕ್ಷಿ ದರ್ಬಾರ್!

ಬಸವರಾಜ ಪಟ್ಟಣಶೆಟ್ಟಿ Updated:

ಅಕ್ಷರ ಗಾತ್ರ : | |

ಬರದ ನಾಡಲ್ಲಿ ದ್ರಾಕ್ಷಿ ದರ್ಬಾರ್!

ರೋಣ: ಬರದ ನಡುವೆ ಈ ಭಾಗದ ದ್ರಾಕ್ಷಿ ಬೆಳೆಗಾರರು ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇದ್ದಾರೆ. ಸಂಕಷ್ಟಗಳ ನಡುವೆಯೂ ದ್ರಾಕ್ಷಿ ಬೆಳೆ ಉಳಿಸಿಕೊಂಡ ಬೆಳೆಗಾರರ ಭರವಸೆ ಹೆಚ್ಚಿದೆ. ಇದಕ್ಕೆ ಸಾಕ್ಷಿ ಎಂಬಂತೆ ರೋಣ ಪಟ್ಟಣದ ರೈತ ವೆಂಕಣ್ಣ ಬಂಗಾರಿ ತಮ್ಮ 6 ಎಕರೆ ಭೂಮಿಯಲ್ಲಿ ಉತ್ತಮವಾಗಿ ದ್ರಾಕ್ಷಿ ಬೆಳೆದಿದ್ದಾರೆ.

ಪ್ರತಿವರ್ಷ ಹವಾಮಾನ ವೈಪರಿತ್ಯ, ಬೊಜ್ಜು ತುಪ್ಪಟ, ಬರಗಾಲ, ರೋಗಬಾಧೆ, ಅಸಮರ್ಪಕ ಬೆಲೆ ಹೀಗೆ ಒಂದಿಲ್ಲೊಂದು ಸಮಸ್ಯೆಯ ಸುಳಿಗೆ ಸಿಲುಕುತ್ತಿದ್ದ ದ್ರಾಕ್ಷಿ ಬೆಳೆಗಾರ ವೆಂಕಣ್ಣ ಬಂಗಾರಿ ಈ ಬಾರಿ ಬೊಜ್ಜು ತುಪ್ಪಟ ಸಮಸ್ಯೆಯನ್ನು ಹಿಮ್ಮೆಟ್ಟಿಸಿ ಉತ್ತಮ ಫಸಲು ಪಡೆದಿದ್ದಾರೆ.

ಅಪಾರ ಬಂಡವಾಳ: ಎಕರೆ ದ್ರಾಕ್ಷಿ ಬೆಳೆಯಲು ₹ 2.5 ಲಕ್ಷದಿಂದ ₹ 3 ಲಕ್ಷ ವೆಚ್ಚ ತಗಲುತ್ತದೆ. ದ್ರಾಕ್ಷಿ ನೆಟ್ಟ ದಿನದಿಂದ 18 ತಿಂಗಳುಗಳವರೆಗೆ ಸಮರ್ಪಕವಾಗಿ ನೀರು ಹಾಯಿಸಿ, ರಾಸಾಯನಿಕ ಸಿಂಪರಿಸಿ, ಗೊಬ್ಬರ ನೀಡಿ ಬೆಳೆಯನ್ನು ಮಗುವಿನಂತೆ ಪೋಷಿಸಬೇಕು. ಈ ಎಲ್ಲದರ ನಂತರ 18ನೇ ತಿಂಗಳಲ್ಲಿ ದ್ರಾಕ್ಷಿಯ ಮೊದಲ ಫಸಲು ದೊರೆಯುತ್ತದೆ. ಆರಂಭದಲ್ಲಿ ದ್ರಾಕ್ಷಿ ಬೆಳೆಯ ನಿರ್ವಹಣೆ ಆರ್ಥಿಕವಾಗಿ ಹೊರೆಯೆನಿಸಿದರೂ ಉತ್ತಮ ಬೆಲೆ ಸಿಕ್ಕರೆ ಮೊದಲ ಫಸಲಿನಲ್ಲಿಯೇ ಮಾಡಿದ ವೆಚ್ಚ ತೆಗೆದು ದುಪ್ಪಟ್ಟು ಲಾಭ ಗಳಿಸಬಹುದು ಎನ್ನುತ್ತಾರೆ ಬೆಳೆಗಾರ ವೆಂಕಣ್ಣ.

ಒಮ್ಮೆ ದ್ರಾಕ್ಷಿ ಬೆಳೆದರೆ ಕನಿಷ್ಠ 25 ವರ್ಷಗಳವರೆಗೆ ಮತ್ತೆ ದ್ರಾಕ್ಷಿ ನಾಟಿ ಮಾಡಬೇಕಿಲ್ಲ. ಹೀಗಾಗಿ, ಆರಂಭದಲ್ಲಿ ಬಂಡವಾಳ ಹೂಡಿದರೆ ಸಾಕು. ನಿರಂತರ ಆದಾಯ ಕಟ್ಟಿಟ್ಟ ಬುತ್ತಿ. ಪ್ರಸಕ್ತ ವರ್ಷ ಸ್ವಲ್ಪ ಪ್ರಮಾಣದಲ್ಲಿ ಉತ್ತಮ ಮಳೆ ಸುರಿದ ಕಾರಣ ದ್ರಾಕ್ಷಿ ಬೆಳೆ ಉತ್ತಮವಾಗಿ ಬಂದಿದೆ. ಎಕರೆಗೆ 12ರಿಂದ 15 ಟನ್ ಇಳುವರಿಯ ನಿರಿಕ್ಷೆ ಇದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 25ರಿಂದ ₹ 35ರವರೆಗೆ ಬೆಲೆ ದೊರೆಯುತ್ತದೆ. ಫಸಲು ಬರುವ ವೇಳೆ ಬೆಸಿಗೆಯೂ ಬರುತ್ತದೆ. ಹೀಗಾಗಿ, ಬೇಡಿಕೆ ಹೆಚ್ಚಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ವೆಂಕಣ್ಣ.

‘ಭೀಕರ ಬರದ ನಡುವೆಯೂ ಉತ್ತಮವಾಗಿ ದ್ರಾಕ್ಷಿ ಬೆಳೆಯುವ ಮೂಲಕ ಬೆರೆ ರೈತರಿಗೆ ವೆಂಕಣ್ಣ ಬಂಗಾರಿ ಮಾದರಿ ಆಗಿದ್ದಾರೆ’ ಎನ್ನುತ್ತಾರೆ ರೋಣ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಎಂ.ತಾಂಬೋಟಿ.

* * 

ದ್ರಾಕ್ಷಿ ಬೆಳೆಗಾರರಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ಸಿಗಬೇಕು. ಇತರ ಬೆಳೆಗಳಂತೆ ದ್ರಾಕ್ಷಿ ಬೆಳೆಗೂ ಬೆಂಬಲ ಬೆಲೆ ನೀಡಬೇಕು

ವೆಂಕಣ್ಣ ಬಂಗಾರಿ

ದ್ರಾಕ್ಷಿ ಬೆಳೆಗಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.