ಬುಧವಾರ, ಜೂಲೈ 8, 2020
22 °C

ಹಳೆಯದೇ ಹೊಸತು, ಕಡಿಮೆಯೇ ಅಧಿಕ...

ಪದ್ಮಶ್ರೀ ಮೂರ್ತಿ Updated:

ಅಕ್ಷರ ಗಾತ್ರ : | |

ಹಳೆಯದೇ ಹೊಸತು, ಕಡಿಮೆಯೇ ಅಧಿಕ...

ಯಾವುದೇ ವಸ್ತುವಿನ ಜೊತೆಗೆ ಸದಾಕಾಲ ಇರುವಂತಾದರೆ ಅದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಇದು ಮನೆಯ ವಿಷಯಕ್ಕೂ ಅನ್ವಯಿಸುವುದೇ?

ನನ್ನ ಮನೆ ನಮ್ಮ ಮನೆಯಾಗುವುದೆಂದರೆ, ನಾನಲ್ಲದ ನನಗೆ ಯಾವುದೋ ಒಂದು ರೀತಿಯಿಂದ ಸಂಬಂಧಿಸಿರುವ ವ್ಯಕ್ತಿಗಳು ವಾಸಿಸುವ ಒಂದು ತಾಣ. ಮಕ್ಕಳು ರಕ್ತಹಂಚಿಕೊಂಡು ಹುಟ್ಟಿ ರಕ್ತಸಂಬಂಧಿಗಳಾದರೆ, ಗಂಡ ಮಾವ ಮೈದುನ ಋಣಾನುಸಂಬಂಧಿಗಳು. ಯಾವುದೇ ಸಂಬಂಧವು ಅಂಕುರಿಸಿ, ಟಿಸಿಲೊಡೆದು, ರೆಂಬೆಕೊಂಬೆಗಳಾಗಿ ಹೂ ಕಾಯಿ ಹಣ್ಣಾಗಬೇಕಾದರೆ ಅದು ಒಂದು ದಿನದಲ್ಲಿ, ವಾರದಲ್ಲಿ, ತಿಂಗಳು, ವರ್ಷದಲ್ಲಿ ಆಗುವ ಕೆಲಸವಲ್ಲ. ಬಿಸಿಲು, ಮಳೆ, ಚಳಿಗೆ - ಬೀಜವೊಂದು ಸೆಡ್ಡು ಹೊಡೆದು ನಿಂತು ಕಾಲಾನುಕ್ರಮದಲ್ಲಿ ಪಲ್ಲವಿಸಿ ನೆರಳು ನೀಡುವಂತೆ ಸಂಬಂಧಗಳೂ ಕೂಡ. ರಕ್ತಸಂಬಂಧವೇ ಇರಲಿ, ಋಣಾನುಸಂಬಂಧವೇ ಇರಲಿ ಬೆಸೆಯುವುದೋ-ದೂರಸರಿಯುವುದೋ, ಬೆಳೆಯುವುದೋ-ಸುರುಟಿ ಹೋಗುವುದೋ, ಹೊಂದುವುದೋ-ಕಳಚುವುದೋ  – ಎಲ್ಲವೂ ಮನೆಯಲ್ಲಿಯೇ.

ಪ್ರತಿ ಮನೆಯೂ ಅನನ್ಯ. ವಸ್ತುಗಳ ಜೋಡಣೆ, ಕೋಣೆಗಳ ಆಕಾರ, ವಿಸ್ತಾರವಷ್ಟೇ ಅಲ್ಲದೆ, ಮನೆಯ ಸದಸ್ಯರು ಅವರ ಅಭಿರುಚಿ, ದೃಷ್ಟಿಕೋನ, ವ್ಯವಹಾರ, ಭಾವನೆಗಳು – ಎಲ್ಲಕ್ಕೂ ಮನೆಯೇ ಕೇಂದ್ರ. ಮನೆಯು ಸಮಾಜದ ಒಂದು ಮೂಲ ಘಟಕವಾದರೂ ಅದು ತನ್ನಷ್ಟಕ್ಕೆ ಒಂದು ವಿಶ್ವ. ಏರುವ ಬೆಲೆಯ ಚುರುಕು. ಋತುಮಾನದ ಹಣ್ಣು–ತರಕಾರಿಗಳು, ಮಾರುಕಟ್ಟೆಗೆ ಬರುವ ನವೀನ ಪರಿಕರಗಳು, ಯಾವುದೋ ಮೂಲೆಯಲ್ಲಿ ನಡೆದ ಪ್ರಕೃತಿಯ ವಿಕೋಪ - ಇವುಗಳ ಪ್ರಭಾವ ಪರೋಕ್ಷವಾಗಿ ಮನೆಯ ಜಗತ್ತಿನಲ್ಲೂ ಕಾಣಿಸುತ್ತದೆ. ಪ್ರಪಂಚದ ಆಗುಹೋಗುಗಳಿಗೆ ತನ್ನನ್ನು ತೆರೆದುಕೊಳ್ಳುತ್ತಲೇ ವೈಯಕ್ತಿಕತೆಯನ್ನು ಉಳಿಸಿಕೊಳ್ಳುತ್ತಾ, ತೆರೆದುಕೊಳ್ಳುತ್ತಲೇ ಅಂಟಿಕೊಳ್ಳುವ ವಿಶಿಷ್ಟ ವ್ಯವಸ್ಥೆಯೇ ಮನೆ.

ಮನೆಯಿಂದ ಆಚೆಗೆ ನಡೆಯುವ ವ್ಯವಹಾರಕ್ಕೆ ಅದರದ್ದೇ ಶಿಷ್ಟಾಚಾರ, ಚೌಕಟ್ಟು ಇದ್ದರೆ, ಮನೆಯವರೊಂದಿಗೆ ಸಲಿಗೆಯಿದ್ದರೂ ಮನೆಯ ಹಿರಿಯರು ಹಾಕಿಕೊಟ್ಟ ನಿರ್ದಿಷ್ಟವಾದ ರೂಢಿಗಳು, ನಿಯಮಗಳು ಇದ್ದೇ ಇರುತ್ತವೆ.

ದಿನಚರಿಯಲ್ಲಿ ಭೇಟಿ ಮಾಡುವ ವ್ಯಕ್ತಿಗಳು, ನಡೆಯುವ ಘಟನೆಗಳು, ಉದ್ಯೋಗದ ಕ್ರಮ, ಶಾಲಾಕಾಲೇಜುಗಳ ವಾತಾವರಣ - ಮನೆಯ ಸದಸ್ಯರ ಮೇಲೆ ಪ್ರಭಾವದ ಛಾಪು ಮೂಡಿಸುತ್ತದೆ. ಬೇಕಿದ್ದೋ ಬೇಡವಾಗಿಯೋ ಸುತ್ತ ನಡೆಯುವ ವಿದ್ಯಮಾನಗಳಿಗೆ ಸ್ಪಂದಿಸುವ, ಹೀರುವ ಕ್ರಿಯೆಗೆ ವ್ಯಕ್ತಿ ಒಳಗಾಗುತ್ತಾನೆ.

ಇದು ದಿನಗಳು, ತಿಂಗಳುಗಳು – ನಿರಂತರವಾಗಿ ನಡೆದು ಮನಸ್ಸಿನ ಬುದ್ಧಿಯ ಪೆಠಾರಿಗೆ ಸೇರ್ಪಡೆಯಾಗುತ್ತದೆ. ಇದೊಂದು ಮಾಯಾ ಪೆಠಾರಿ, ಸೇರಿಸಿದಷ್ಟೂ ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಅವುಗಳಲ್ಲಿ ಅನೇಕ ಖಾನೆಗಳು ಇರುತ್ತವೆ. ಕೆಲವೊಮ್ಮೆ ಆ ಖಾನೆಗಳನ್ನು ಬೇರೆಬೇರೆಯಾಗಿ ವಿಂಗಡಿಸಲಾಗದೆ ಒಂದಕ್ಕೊಂದು ಸೇರಿಬಿಟ್ಟರೆ ಮನಸ್ಸಿಗೆ ಗೊಂದಲ, ಕಸಿವಿಸಿ. ಆಗಾಗ ಪೆಠಾರಿಯನ್ನು ನಿರುಕಿಸಿ, ಕ್ರಮವಾಗಿ ವಿಂಗಡಿಸಿ ಬೇಡದವುಗಳನ್ನು ಹೊರಹಾಕುವ ಕೆಲಸವಾಗಬೇಕು (Decluttering). ಈ ಪ್ರಕ್ರಿಯೆಯಲ್ಲಿ ನಮಗೆ ಅತ್ಯಗತ್ಯ ಹಾಗೂ ಅಮೂಲ್ಯ ಎನಿಸುವ ಅನೇಕ ವಸ್ತುಗಳೂ, ವಿಷಯಗಳೂ, ಭಾವಗಳು ಕರಗಿ ಹೋಗುವ ಸಾಧ್ಯತೆಯಿದೆ. ಹೊರಹಾಕುವ ಈ ಕಾರ್ಯವಾಗಿ ನಿಯಮಿತವಾಗಿ ನಡೆಸುವ ಶಿಸ್ತನ್ನು ರೂಢಿಸಿಕೊಂಡರೆ ಅಮೂಲ್ಯವಾದದ್ದನ್ನು ಹೊರಹಾಕದ ಎಚ್ಚರಿಕೆ ನಮ್ಮಲ್ಲಿಯೇ ಮೂಡುತ್ತದೆ. ಏನದು ಅಮೂಲ್ಯವಾದದ್ದು ! ಅದನ್ನು ನಾವೇ ನಿರ್ಧರಿಸಬೇಕು. ಮಕ್ಕಳೊಡನೆ, ಹಿರಿಯರೊಡನೆ, ಸ್ನೇಹಿತರೊಡನೆ ಆತ್ಮೀಯವಾಗಿ ಕಳೆಯುವ ಸಮಯ, ಸ್ಥಳದ ಹೊಂದಾಣಿಕೆ. ಇಷ್ಟವಾದ ತಿನಿಸು ತಯಾರಿಸುವ ಸಂಭ್ರಮ. ತಿನಿಸುವ, ಬಡಿಸುವ ಸಂತಸ. ಚಿಕ್ಕ ಚಿಕ್ಕದೆನಿಸುವ ವಸ್ತು ವಿಷಯಗಳೇ ಅನವಶ್ಯಕವಾದದ್ದನ್ನು ಹೊರಹಾಕಿದ ಮೇಲೆ ವಿಶೇಷ ಮತ್ತು ಆಪ್ತವೆನಿಸುವುದನ್ನು ಅನುಭವಿಸಿಯೇ ತೀರಬೇಕು.

ಪ್ರಾರ್ಥನೆ ಪ್ರತಿಮನೆಯ(ಸಾಮಾನ್ಯವಾಗಿ!) ಒಂದು ಅವಿಭಾಜ್ಯ ಅಂಗ. ಅಲ್ಲಿ ನಡೆಯುವುದೇನು? ಒಂದು ವಿಷಯದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸುವುದು. ಮನೆಯ ಎಲ್ಲ ಸದಸ್ಯರೂ ಸೇರಿ ಮಾಡುವ ಪ್ರಾರ್ಥನೆ ಒಂದು ಕ್ರಮದ್ದಾದರೆ, ಏಕಾಂತದಲ್ಲಿ ಮಾಡುವುದು ಇನ್ನೊಂದು ಕ್ರಮ. ಒಂದು ಶ್ಲೋಕವನ್ನು ಪುನರುಚ್ಚರಿಸುವುದಾಗಬಹುದು, ಒಂದು ಪದವನ್ನು ಪುನಃ ಪುನಃ ಹೇಳುವುದಾಗಬಹುದು, ಗೀತೆಯೊಂದನ್ನು ಹಾಡುವುದಾಗಬಹುದು. ಹಿಂದಿನ ದಿನ ಭೇಟಿಯಾಗಿದ್ದ ಸ್ನೇಹಿತರೊಂದಿಗಿನ ಸಲ್ಲಾಪ, ಕಛೇರಿಯಲ್ಲಿ ನಡೆದ ಮಾತಿನ ಚಕಮಕಿ, ಹೊಸದಾಗಿ ಕೊಂಡ ವಾಹನದ ಹೆಮ್ಮೆ, ಊಟದ ಡಬ್ಬಿಯ ಉಪ್ಪಿಲ್ಲದ ಹುಳಿಯನ್ನು ತಿಂದ ಕೋಪ, ಇಷ್ಟದ್ದು ಅಲ್ಲದ್ದು ಎಲ್ಲವನ್ನೂ ಕ್ರಮವಾಗಿ ಅಲ್ಲಲ್ಲೇ ಬಿಟ್ಟು ಒಂದು ಕಡೆ ಕೂಡುವುದು. ಎಲ್ಲ ಕೆಲಸಗಳೂ, ಆಲೋಚನೆಗಳೂ, ದ್ವಂದ್ವಗಳನ್ನು ಅಲ್ಲಲ್ಲೇ ಬಿಟ್ಟು ಪ್ರಾರ್ಥಿಸುವುದು. ಮನಸ್ಸು ಶಾಂತ! ಮನೆಯೂ ಹಾಗೆಯೇ ಇಷ್ಟವೆಂದು ಎಷ್ಟೋ ವಸ್ತುಗಳನ್ನು ಕೊಂಡು ತಂದೋ, ಕೇಳಿ ಪಡೆದೋ, ಉಡುಗೊರೆಯೆಂದೋ ಸಂಗ್ರಹಿಸುತ್ತಾ ಬಂದರೆ ನಿರ್ವಹಣೆ ದುಸ್ಸಾಧ್ಯ. ವಸ್ತುಗಳು ಕಡಿಮೆಯಿದ್ದಷ್ಟೂ ನಿರ್ವಹಣೆ ಸುಲಭ (minimalism).

ದಿನವೂ ಅದೇ ಮುಖಗಳು. ಮಗ-ಮಗಳು, ಗಂಡ, ಅತ್ತೆ-ಮಾವ. ನಾನು ಏನೆಂದು ಅವರಿಗೆ ಗೊತ್ತು, ಅವರು ಏನೆಂದು ನನಗೆ ಗೊತ್ತು. ಹೊಸತೆನಿಸಿದ್ದನ್ನು ಹೇಳಬೇಕೆಂದರೆ ಅವರು ಹೀಗೆ ಉತ್ತರಿಸುತ್ತಾರೆ ಎಂದು ಆಗಲೇ ಯೋಚಿಸಿಕೊಂಡು ಅವರು ಪ್ರತಿಕ್ರಿಯಿಸುವ ರೀತಿಗೆ ತಕ್ಕಂತೆ ಹೇಳಬೇಕಾದುದನ್ನು ತಿರುಚಿ ಹೇಳುವುದು. ಹೊರಗಿನವರೊಂದಿಗೆ ಹೆಚ್ಚು ಆತ್ಮೀಯವಾಗಿದ್ದು ನಮಗನಿಸಿದ್ದನ್ನು ನೇರವಾಗಿ ಹೇಳುವ ಸ್ವಾತಂತ್ರ್ಯ, ಸಲಿಗೆ, ಅನುಭವಿಸುವ ನಾವು ಜೊತೆಯಲ್ಲೇ ಇರುವವರೊಂದಿಗೆ ಮುಕ್ತವಾಗಿ ಇರುವುದಾಗುವುದಿಲ್ಲವೇಕೆ? ನಮ್ಮನ್ನು ತೆರೆದುಕೊಳ್ಳಲು ಹಿಂಜರಿಕೆ ಸಂಕೋಚಪಡುವುದೇಕೆ? ಸ್ನೇಹ, ಆತ್ಮೀಯತೆಯ ಕೊರತೆಯೇ? ಬದಲಾಗುತ್ತಿರುವ ಅವರನ್ನು ನಾವೂ ತೆರೆದ ಮನದಿಂದ ಒಪ್ಪುಕೊಳ್ಳುತ್ತಿದ್ದೇವಾ? ಸ್ನೇಹ, ಸಂಬಂಧ ಎನ್ನುವುದು ಬರಿಯ ಪದಗಳಷ್ಟೇ ಏನು? ಹೊಸತನ ಅದರಲ್ಲಿ ಸಾಧ್ಯವಿಲ್ಲವೆ? ಅನ್ನಕ್ಕೆ ಹಳೆ ಅಕ್ಕಿ ಸೊಗಸು; ಹಳೆ ಅಕ್ಕಿಯ ಅನ್ನ ಒದಗುವುದೂ ಹೌದು. ಮಾತ್ರವಲ್ಲ, ಕುಟ್ಟೆ ಹುಳು ಬರುವುದೂ ಹಳೆ ಅಕ್ಕಿಯಲ್ಲೇ! ಸಂಗ್ರಹದ ಅಕ್ಕಿಯಲ್ಲಿ ಆಗಾಗ ಕೈಯಾಡಿಸಬೇಕು, ಅನ್ನ ಮಾಡುವ ಮೊದಲು ಕೇರಬೇಕು. ನೀರನ್ನು ಹದವಾಗಿ ಬೆರೆಸಬೇಕು. ಅನ್ನದ ಘಮಲು ನಾಲಿಗೆಯಲ್ಲಿ ನೀರೂರಿಸಬೇಕು. ಅಂಟಿಯೂ ಅಂಟದ ಅನ್ನದ ಅಗುಳು ಹೊಟ್ಟೆ ತುಂಬಿಸುವುದಂತೂ ಹೌದು. ಜೊತೆಗೆ ಉತ್ಸಾಹ–ಶಕ್ತಿಗಳ ಬೋನಸ್ಸೂ ಕೂಡ!

ಪ್ರತಿದಿನ ಹೋಮ್‍ವರ್ಕ್ ಮಾಡಬೇಕು. ನಾಳಿನ ತಯಾರಿ ನಡೆಯಬೇಕು. ಸಣ್ಣ ದೊಡ್ಡ ವಿವರಗಳನ್ನು ಗಮನಿಸಬೇಕು, ಸಮಯ ಕೊಡಬೇಕು, ಯೋಜಿಸಬೇಕು. ಆಗಷ್ಟೇ ಮನೆಯ ನಿರ್ವಹಣೆ ಅಂಕೆಗೆ ಸಿಗುವುದು. ಎಲ್ಲವೂ ನನ್ನಿಂದಲೇ ಆಗಬೇಕು, ನಾನು ಏನೇ ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತೇನೆ ಎನ್ನುವ ಭಾವ ಸಹಜ. ನಿಜವೂ ಇರಬಹುದು. ಆದರೂ ಮನೆಯ ಸದಸ್ಯರಿಗೂ ತಮ್ಮ ಕೊಸರು ನೀಡಲು ಅವಕಾಶವಿರಬೇಕು.

ಮನೆಯ ಪ್ರತಿ ವಸ್ತುವಿಗೂ ಒಂದೊಂದು ಕಥೆಯುಂಟು. ದೇವರ ಮುಂದಿನ ನಂದಾದೀಪ ಮದುವೆಯಲ್ಲಿ ಅಜ್ಜಿ ಕೊಟ್ಟದ್ದು. ತುಳಸಿಗೆ ನೀರು ಹಾಕುವ ಥಾಲಿ ಇನ್ನೊಂದಜ್ಜಿಯ ಉಡುಗೊರೆ. ಗೂಡಿನಲ್ಲಿ ಮುತುವರ್ಜಿಯಿಂದ ಇಟ್ಟಿರುವ ಧಾರೆಯ ಸೀರೆ, ಇಡೀ ದಿನ ವಧು ಅದೇ ಸೀರೆಯಲ್ಲಿರುತ್ತಾಳೆ; ರೇಷ್ಮೆ ಸೀರೆಯನ್ನೇ ತನ್ನಿ (ಕೆಲವು ಕಡೆ ಧಾರೆಯ ಸೀರೆಯನ್ನು ಪುರೋಹಿತರಿಗೆ ಕೊಡುವ ಪದ್ಧತಿಯಿದೆ; ಹೀಗಾಗಿ ಹೇಗಿದ್ದರೂ ಅದು ಮನೆಗೆ ಸೇರುವುದಿಲ್ಲ ಎಂದು ಸುಮಾರಾದ ಸೀರೆಯನ್ನು ತರುತ್ತಿದ್ದರಂತೆ!) ಎಂದ ಸೋದರತ್ತೆಯನ್ನು ನೆನಪಿಸುತ್ತದೆ. ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ, ಆದರೂ ಒಪ್ಪವಾಗಿ ಮಡಿಸಿಟ್ಟ ಅವರ ಎಳವೆಯ ಜಬಲ, ದುಪ್ಪಟಗಳು ಪ್ರತಿ ಬಾರಿ ಅಸ್ತವ್ಯಸ್ತಗೊಂಡ ಸೀರೆಯ ಗೂಡನ್ನು ವ್ಯವಸ್ಥಿತವಾಗಿಡುವಾಗಲೂ ಕೆಳಭಾಗದಲ್ಲಿ ಕೈತಾಗುತ್ತವೆ.

ಅಶ್ವತ್ಥವಿಲ್ಲಿ ಬಾಡಿದೊಡೇನು ಚಿಗುರಲ್ಲಿ |

ನಶ್ವರತೆ ವಿಟಪ ಪರ್ಣಂಗಳಲಿ ಮಾತ್ರ ||

ಶಾಶ್ವತತೆ ರುಂಡಮೂಲದಲ್ಲಿ, ಪರಿಚರಿಸದನು |

ವಿಶವಪ್ರತಿಯಂತು - ಮಂಕುತಿಮ್ಮ ||

ಜಗತ್ತು ಒಂದು ಅಶ್ವತ್ಥಮರದಂತೆ. ಅದರ ಎಲೆಗಳು ಒಂದು ಕಡೆ ಬಾಡಿದರೂ, ಇನ್ನೊಂದು ಕಡೆ ಚಿಗುರುತ್ತಾ ಇರುತ್ತದೆ. ಅದರ ಕೊಂಬೆ ಮತ್ತು ಎಲೆಗಳು ಮಾತ್ರ ಬಾಡಿಹೋಗುತ್ತವೆ. ಅದು ರುಂಡ ಮತ್ತು ಬೇರಿನಲ್ಲಿ ಶಾಶ್ವತವಾಗಿರುತ್ತವೆ. ಇದೇ ವಿಶ್ವಪ್ರಗತಿ. ಹೊಸಹೊಸದಾಗಿ ಚಿಗುರುತ್ತಿರುತ್ತದೆ.

( ಪದ್ಯದ ವಿವರಣೆ: ಡಿ.ಆರ್. ವೆಂಕಟರಮಣನ್)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.