ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಆದೇಶ ಪಾಲನೆ: ತತ್ಪರಿಣಾಮ ಕ್ರಮ ಪರಿಶೀಲನೆ

ರಾಜ್ಯದ ಮಾಹಿತಿಗೆ ಕೇಂದ್ರ ಗೃಹ ಸಚಿವಾಲಯ ಆಕ್ಷೇಪ
Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಡ್ತಿ ಮೀಸಲು ಮಸೂದೆಗೆ ರಾಷ್ಟ್ರಪತಿಯಿಂದ ಅನುಮೋದನೆ ಪಡೆಯುವ ಪ್ರಕ್ರಿಯೆ ತ್ವರಿತಗೊಳಿಸಿರುವ ಬೆನ್ನಲ್ಲೆ, ‘ಬಡ್ತಿ ಮೀಸಲಾತಿ ಕಾಯ್ದೆ– 2002’ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಪಾಲನೆ ಪ್ರಕ್ರಿಯೆಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ವೇಗ ನೀಡಿದೆ.

‘ಮಸೂದೆ ಇನ್ನೂ ಕೇಂದ್ರ ಗೃಹ ಸಚಿವಾಲಯದಲ್ಲಿದ್ದು, ಅದು ಕೇಂದ್ರದ ವಿವಿಧ ಇಲಾಖೆಗಳಿಂದ ಅಭಿಪ್ರಾಯ ಸಂಗ್ರಹಿಸಿ ರಾಷ್ಟ್ರಪತಿಗೆ ಕಳುಹಿಸಲಿದೆ. ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಸಂಬಂಧ ಕೇಂದ್ರ ಗೃಹ ಸಚಿವಾಲಯದಲ್ಲಿ ಗುರುವಾರ ನಡೆದ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ’ ಎಂದು ಡಿಪಿಎಆರ್‌ ಕಾರ್ಯದರ್ಶಿ ಅನಿಲ್‌ ಕುಮಾರ್‌ ಝಾ ತಿಳಿಸಿದರು.

ಸಭೆಯಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ), ಕಾನೂನು ಮತ್ತು ನ್ಯಾಯಾಂಗ ಇಲಾಖೆ, ಸಾಮಾಜಿಕ ನ್ಯಾಯ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಅಧಿಕಾರಿಗಳು ಭಾಗವಹಿಸಿದ್ದರು. ಈಗಾಗಲೇ ಅಭಿಪ್ರಾಯ ನೀಡಿರುವುದಾಗಿ ಕೆಲವು ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು ಎಂದು ಅವರು ಹೇಳಿದರು.

‘ಸುಪ್ರೀಂ ಕೋರ್ಟ್‌ ಆದೇಶದಂತೆ ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿನ ವಿವಿಧ ವೃಂದಗಳಲ್ಲಿರುವ ಸಿಬ್ಬಂದಿಯ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಅಂತಿಮಗೊಳಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆದರೆ, ತತ್ಪರಿಣಾಮ ಕ್ರಮಗಳ ಕುರಿತು (ಮುಂಬಡ್ತಿ– ಹಿಂಬಡ್ತಿ) ಸರ್ಕಾರ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ. ಈ ಕುರಿತಂತೆ ಪರಿಶೀಲನೆ ನಡೆಯುತ್ತಿದೆ. ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಅವರು ವಿವರಿಸಿದರು.

‘ತೀರ್ಪು ಪಾಲನೆಗೆ ಸುಪ್ರೀಂ ಕೋರ್ಟ್‌ ಜ. 15ರ ಗಡುವು ನೀಡಿದೆ. ಆ ವೇಳೆಗೆ ಎಲ್ಲ ಇಲಾಖೆಗಳ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಅಂತಿಮಗೊಳ್ಳಲಿದೆ. ಜೊತೆಗೆ, ಆದೇಶ ಪಾಲನೆಯಿಂದ ಬಾಧಿತರಾಗುವ ಸಿಬ್ಬಂದಿಯ ಪಟ್ಟಿಯೂ ಲಭ್ಯವಾಗಲಿದೆ’ ಎಂದರು.

ತಪ್ಪು ಅಂಕಿ ಅಂಶ?: ಈ ಮಧ್ಯೆ, ಮಸೂದೆಯಲ್ಲಿ ರಾಜ್ಯ ಸರ್ಕಾರ ತಪ್ಪು ಅಂಕಿ ಅಂಶ ನೀಡಿದೆ ಎಂಬ ಸಂದೇಹ ವ್ಯಕ್ತಪಡಿಸಿರುವ ಕೇಂದ್ರ ಗೃಹ ಇಲಾಖೆ, ಸಮರ್ಪಕ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ ಎನ್ನಲಾಗಿದೆ.

ಸರ್ಕಾರಿ ನೌಕರರ ಪೈಕಿ ಪರಿಶಿಷ್ಟ ಜಾತಿಗೆ ಶೇ 15 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 3 ರಷ್ಟು ಸೇರಿ ಶೇ 18ರಷ್ಟು ಮೀಸಲಾತಿ ಇರಬೇಕು. ಆದರೆ,
ಕರ್ನಾಟಕದಲ್ಲಿ  ಒಟ್ಟು ಶೇ 13ರಷ್ಟು ಮಾತ್ರ ಇರುವುದರಿಂದ ಪ್ರಾತಿನಿಧ್ಯ ನೀಡಬೇಕಾಗಿದೆ ಎಂಬ ಪ್ರಸ್ತಾವ ಮಸೂದೆಯಲ್ಲಿದೆ.

ಆದರೆ, ಸರ್ಕಾರದ ಸಾಂಖ್ಯಿಕ ಇಲಾಖೆ ಪ್ರಕಟಿಸಿರುವ ದಾಖಲೆಗಳ ಪ್ರಕಾರ 2011ರಲ್ಲಿ ಶೇ 21, 2015ರಲ್ಲಿ ಶೇ 27ರಷ್ಟು ಮೀಸಲಾತಿ ನೀಡಲಾಗಿದೆ. ಇದೇ ಮಾಹಿತಿ ಕೇಂದ್ರದ ಬಳಿಯೂ ಇದೆ. 2016ರಲ್ಲಿ ಈ ಪ್ರಾತಿನಿಧ್ಯ ಪ್ರಮಾಣ ಕಡಿಮೆಯಾಗಿದ್ದು ಹೇಗೆ ಎಂಬ ಸಂದೇಹವನ್ನು ಕೇಂದ್ರ ಗೃಹ ಇಲಾಖೆ ವ್ಯಕ್ತಪಡಿಸಿದೆ.

ರಾಷ್ಟ್ರಪತಿಗೆ ಶೀಘ್ರ ಕಳುಹಿಸುವಂತೆ ಕೇಂದ್ರ ಗೃಹ ಸಚಿವಾಲಯದ ಮೇಲೆ ಒತ್ತಡ
ಮಸೂದೆಯನ್ನು ಒಪ್ಪಿಗೆಗಾಗಿ ರಾಷ್ಟ್ರಪತಿಗೆ ಶೀಘ್ರ ಕಳುಹಿಸುವಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕೇಂದ್ರ ಗೃಹ ಸಚಿವಾಲಯದ ಮೇಲೆ ಒತ್ತಡ ತಂದಿದ್ದಾರೆ.

ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಲ್ಲಿ 50 ಸಾವಿರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕಕರ ಭವಿಷ್ಯದ ಪ್ರಶ್ನೆ ಇದಾಗಿದ್ದು, ಮಸೂದೆಯನ್ನು ಆದಷ್ಟು ಬೇಗ ರಾಷ್ಟ್ರಪತಿಗೆ ಹಸ್ತಾಂತರಿಸುವಂತೆ ಕೋರಿದ್ದಾರೆ. ಕೇಂದ್ರ ಸಚಿವರಾದ ರಾಮ್ ವಿಲಾಸ್ ಪಾಸ್ವಾನ್ ಹಾಗೂ ರಮೇಶ ಜಿಗಜಿಣಗಿ ಮೂಲಕವೂ ರಾಜ್ಯದ ಕೆಲವು ಸಂಸದರು ಒತ್ತಡ ತರುತ್ತಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT