ಸೋಮವಾರ, ಆಗಸ್ಟ್ 3, 2020
27 °C

ತಿಂಗಳಾಂತ್ಯದಲ್ಲಿ ಮೋದಿ– ರಾಹುಲ್‌ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಂಗಳಾಂತ್ಯದಲ್ಲಿ ಮೋದಿ– ರಾಹುಲ್‌ ಅಬ್ಬರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಂಗಳಾಂತ್ಯದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ವಿಧಾನಸಭಾ ಚುನಾವಣೆಯ ಕಾವು ನಿಧಾನಕ್ಕೆ ಏರುತ್ತಿದ್ದು, ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ರಾಷ್ಟ್ರೀಯ ಪಕ್ಷದ ಇಬ್ಬರು ನಾಯಕರು ರಾಜ್ಯದ ಕಡೆಗೆ ಮುಖ ಮಾಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ನವಕರ್ನಾಟಕ ‍‍ಪರಿವರ್ತನಾ ಯಾತ್ರೆ ಸಮಾರೋಪ ಹಾಗೂ ಕಾರ್ಯಕರ್ತರ ಬೃಹತ್‌ ಸಮಾವೇಶ ಇದೇ 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದರಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

ಇದೇ 21, 22 ಮತ್ತು 23ರಂದು ರಾಹುಲ್‌ ಗಾಂಧಿ ರಾಜ್ಯ ಪ್ರವಾಸ ನಿಗದಿಯಾಗಿತ್ತು. 23ರಂದು ಬೆಂಗಳೂರಿನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿದ್ದವು.

ಮೋದಿ ಬರುವ ಮೊದಲೇ ರಾಹುಲ್‌ ರಾಜ್ಯಕ್ಕೆ ಬಂದರೆ ಪಕ್ಷಕ್ಕೆ ಅನುಕೂಲ ಆಗುವುದಿಲ್ಲ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಕುರಿತು ರಾಹುಲ್‌ ಮಾಡಬಹುದಾದ ಎಲ್ಲ ಆರೋಪಗಳಿಗೆ ಮೋದಿ ಉತ್ತರ ನೀಡುತ್ತಾರೆ. ಪಕ್ಷದ ಅಧ್ಯಕ್ಷರ ಭಾಷಣಕ್ಕೆ ಹೆಚ್ಚಿನ ಕಿಮ್ಮತ್ತು ಸಿಗಲಾರದು ಎಂಬ ಲೆಕ್ಕಾಚಾರ ಹಾಕಿ ಕಾರ್ಯತಂತ್ರ ಬದಲಿಸಲಾಗಿದೆ.

ಈ ಕಾರಣದಿಂದಾಗಿ, ಮೋದಿ ಬಂದು ಹೋದ ಮಾರನೇ ದಿನ ಜ.29ರಂದು ಕಾಂಗ್ರೆಸ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಮೋದಿ ನಡೆಸಬಹುದಾದ ವಾಗ್ದಾಳಿ ಹಾಗೂ ಬಿಜೆಪಿ ಸಮರ್ಥನೆಗೆ ರಾಷ್ಟ್ರೀಯ ಅಧ್ಯಕ್ಷರಿಂದ ಉತ್ತರ ಕೊಡಿಸುವುದು ಪಕ್ಷದ ನಾಯಕರ ಅಪೇಕ್ಷೆ ಎಂದೂ ಮೂಲಗಳು ವಿವರಿಸಿವೆ.

ಜ.27ಕ್ಕೆ ರಾಜ್ಯಕ್ಕೆ ಬರಲಿರುವ ರಾಹುಲ್‌, ಹೊಸಪೇಟೆಯಲ್ಲಿ ನಡೆಯಲಿರುವ ಪರಿಶಿಷ್ಟ ಜಾತಿ, ಪಂಗಡದವರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. 28ರಂದು ಚಿಕ್ಕಬಳ್ಳಾಪುರ ಜಿಲ್ಲೆ ವಿದುರಾಶ್ವತ್ಥದಲ್ಲಿ ರೈತರ ಜತೆ ಹಾಗೂ ಮೈಸೂರಿನಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.