ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಕೋಣದ ಕೊಂಬು, ಒಂಟೆ ಹಲ್ಲು ಸಾಗಣೆ ಪತ್ತೆ

Last Updated 5 ಜನವರಿ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ಕಾಡುಕೋಣದ ಕೊಂಬು ಹಾಗೂ ಒಂಟೆ ಹಲ್ಲುಗಳ ಅಕ್ರಮ ಸಾಗಣೆಯನ್ನು ಪತ್ತೆ ಹಚ್ಚಿರುವ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು, ಮೂವರು ಪ್ರಯಾಣಿಕರನ್ನು ವಶಕ್ಕೆ ಪಡೆದಿದ್ದಾರೆ.

ಕ್ವಾಲಾಲಂಪುರದಿಂದ ನಗರದ ನಿಲ್ದಾಣಕ್ಕೆ ಬಂದಿಳಿದಿದ್ದ ಮಂಜುನಾಥ್‌ ಎಂಬಾತನನ್ನು ಕಸ್ಟಮ್ಸ್ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದರು. ಅವರ ಬ್ಯಾಗ್‌ನಲ್ಲಿ ಕಾಡುಕೋಣದ 24 ಕೆ.ಜಿ ತೂಕದ ಎರಡು ಕೊಂಬುಗಳು ಪತ್ತೆಯಾದವು.

ಇನ್ನೊಂದು ಪ್ರಕರಣದಲ್ಲಿ, ನಗರದಿಂದ ಬ್ಯಾಂಕಾಕ್‌ಗೆ ಹೊರಟಿದ್ದ ಮೈಸೂರಿನ ಮೋಹನ್‌ ಹಾಗೂ ಪಿ. ದೇವತಿ ಎಂಬುವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರ ಬ್ಯಾಗ್‌ನಲ್ಲಿ ಒಂಟೆಯ 71.26 ಕೆ.ಜಿ ತೂಕದ 50ಕ್ಕೂ ಹೆಚ್ಚು ಹಲ್ಲುಗಳಿರುವುದು ಗೊತ್ತಾಯಿತು.

‘ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿದ್ದವೆ. ಕೊಂಬು ಹಾಗೂ ಹಲ್ಲುಗಳನ್ನು ಜಪ್ತಿ ಮಾಡಿದ್ದೇವೆ. ಅವುಗಳನ್ನು ಅವರು ಎಲ್ಲಿಂದ ತಂದರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಕಸ್ಟಮ್ಸ್‌ ಹೆಚ್ಚುವರಿ ಆಯುಕ್ತ  ಹರ್ಷವರ್ಧನ್ ಉಮ್ರೆ ತಿಳಿಸಿದರು.

ಸಿಹಿ ತಿನಿಸು ಡಬ್ಬಿಯಲ್ಲಿ ಮಾದಕ ವಸ್ತು: ಸಿಹಿ ತಿನಿಸುಗಳ ಡಬ್ಬಿಗಳಿದ್ದ ಬಾಕ್ಸ್‌ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ₹1 ಕೋಟಿ ಮೌಲ್ಯದ ಮಾದಕ ವಸ್ತು
ವನ್ನು ಏರ್ ಇಂಟೆಲಿಜೆನ್ಸ್‌ ಹಾಗೂ ಏರ್‌ಪೋರ್ಟ್‌ ಕೊರಿಯರ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಚೆನ್ನೈನ ಫೆಡೆಕ್ಸ್‌ ಕೊರಿಯರ್ ಕಂಪನಿಯು ಒಂದು ಬಾಕ್ಸ್‌ನಲ್ಲಿ 17 ಡಬ್ಬಿಗಳನ್ನು ಇಟ್ಟು ವಿಮಾನದ ಮೂಲಕಕ್ವಾಲಾಲಂಪುರಕ್ಕೆ ಕಳುಹಿಸುತ್ತಿತ್ತು. ಚೆನ್ನೈನಿಂದ ಬಂದ ಆ ಬಾಕ್ಸ್‌ನ್ನು ಸ್ಕ್ಯಾನಿಂಗ್‌ ಯಂತ್ರದಲ್ಲಿ ಪರಿಶೀಲಿಸಿ ಬೇರೊಂದು ವಿಮಾನಕ್ಕೆ ತುಂಬಿಸಲಾಗುತ್ತಿತ್ತು. ಅದೇ ವೇಳೆ ಬಾಕ್ಸ್‌ನಲ್ಲಿ ಮಾದಕ ವಸ್ತು ಕೆಟಾಮಿನ್‌ ಇರುವುದು ಗೊತ್ತಾಯಿತು.

‘ಬಾಕ್ಸ್‌ ಮೇಲೆ ಶ್ರೀ ಮಿಥೈ ಎಂಬ ಲೇಬಲ್‌ ಇತ್ತು. 17 ಡಬ್ಬಿಗಳ ಪೈಕಿ 6ರಲ್ಲಿ ಸಿಹಿ ತಿನಿಸು ಹಾಗೂ ಉಳಿದ ಡಬ್ಬಿಗಳಲ್ಲಿ ಮಾದಕ ವಸ್ತು ಇತ್ತು. ಬೆಳ್ಳಿ ಬಣ್ಣದ ಡಬ್ಬಿಗಳ ಮೇಲ್ಭಾಗದಲ್ಲಿ ಮೆಣಸಿನಕಾಯಿ ಪುಡಿ ಸಿಂಪಡಣೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಫೆಡೆಕ್ಸ್‌ ಕೊರಿಯರ್ ಕಂಪನಿ ವ್ಯವಸ್ಥಾಪಕನಿಗೆ ಸಮನ್ಸ್‌ ಜಾರಿ ಮಾಡಿದ್ದೇವೆ’ ಎಂದು ಹರ್ಷವರ್ಧನ್ ಉಮ್ರೆ ಅವರು ಹೇಳಿದರು.

ಚಿನ್ನದ ಕಸೂತಿ ಸೀರೆ ಜಪ್ತಿ:ಚಿನ್ನದಿಂದ ಕಸೂತಿ ಮಾಡಿದ್ದ ಬುರ್ಖಾ ಹಾಗೂ ಸೀರೆಯನ್ನು ಜಪ್ತಿ ಮಾಡಿರುವ ಕಸ್ಟಮ್ಸ್‌ ಅಧಿಕಾರಿಗಳು, ಭಟ್ಕಳದ ಶಾಮಿಲ್ ಅಹ್ಮದ್‌ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

‘ದುಬೈನಿಂದ 6ಇ 096 ವಿಮಾನದಲ್ಲಿ ನಗರ ನಿಲ್ದಾಣಕ್ಕೆ ಬಂದಿಳಿದಿದ್ದ ಅವರನ್ನು ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಸೂಟ್‌ಕೇಸ್‌ನಲ್ಲಿ ಬುರ್ಖಾ ಹಾಗೂ ಸೀರೆ ಪತ್ತೆಯಾಯಿತು. ಕೆಲ ಚಿನ್ನದ ಆಭರಣಗಳು ಇದ್ದವು. ಅವರಿಂದ ₹15.13 ಲಕ್ಷ ಮೌಲ್ಯದ 498 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದೇವೆ’ ಎಂದು ಹರ್ಷವರ್ಧನ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT