ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಷ್ಣಾಂಶ ಕುಸಿತ, ದ್ರಾಕ್ಷಿ ಬೆಳೆಗೆ ರೋಗ ಭೀತಿ

Last Updated 6 ಜನವರಿ 2018, 6:45 IST
ಅಕ್ಷರ ಗಾತ್ರ

ವಿಜಯಪುರ : ವಾತಾವರಣದಲ್ಲಿ ಉಷ್ಣಾಂಶ ತೀವ್ರವಾಗಿ ಕುಸಿಯುತ್ತಿದ್ದು, ಬೆಳಗಿನ ಜಾವ ದಟ್ಟವಾಗಿ ಮಂಜು ಬೀಳುತ್ತಿರುವುದರಿಂದ ದ್ರಾಕ್ಷಿ ಬೆಳೆಗಳ ಬಳ್ಳಿಗಳು ಕಟಾವಾದ ನಂತರ ಚಿಗುರೊಡೆಯುವುದು ವಿಳಂಬವಾಗುತ್ತಿದ್ದು, ಕಟಾವಾಗಿರುವ ದ್ರಾಕ್ಷಿ ಮುಂದಿನ ಬೆಳೆಗಳು ಇಳುವರಿ ಕಡಿಮೆಯಾಗುವ ಭೀತಿ ಎದುರಾಗಿದೆ.

2017ರ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾದ ಚಳಿ, ದಿನೇ ದಿನೇ ಉಷ್ಣಾಂಶ ತೀವ್ರವಾಗಿ ಇಳಿಮುಖವಾಗುತ್ತಿದೆ. ಇದರಿಂದ ಚಿಗುರೊಡೆಯುತ್ತಿರುವ ದ್ರಾಕ್ಷಿ ಎಲೆಗಳ ಮೇಲೆ ಮಂಜಿನ ಹನಿಗಳು ಬಿದ್ದು ಡೌನಿ ರೋಗ ಮತ್ತು ಅಂಥ್ರಾಕ್ಸ್ ರೋಗ ಬೀಳುವ ಆತಂಕ ರೈತರಲ್ಲಿದೆ.

ರೈತ ನಾರಾಯಣಸ್ವಾಮಿ ಮಾತನಾಡಿ, ದ್ರಾಕ್ಷಿ ಬಳ್ಳಿಗಳಿಗೆ ಧಾರ್ಮಿಕ್ಸ್ ಔಷಧಿಯ ಲೇಪನ ಮಾಡಿದರು. ಹಲವೆಡೆ ಚಿರುರೊಡೆಯುವುದು ತಡವಾಗುತ್ತಿದೆ ಎಂದರು. ಮುಂದಿನ ಕಟಾವಿಗೆ ವಿಳಂಬವಾಗುವುದರ ಜೊತೆಗೆ ಫಸಲಿನಲ್ಲಿ ಇಳುವರಿ ಕಡಿಮೆಯಾಗುವ ಆತಂಕ ಕಾಡುತ್ತಿದೆ ಎಂದರು.

ರೈತ ರಾಮಚಂದ್ರಪ್ಪ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ರೈತರು ಹೆಚ್ಚಾಗಿ ದ್ರಾಕ್ಷಿಯನ್ನು ಬೆಳೆಯುತ್ತಿದ್ದಾರೆ. ವಾತಾವರಣಗಳ ಏರುಪೇರಿನಿಂದಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿದರು ಎಂದು ತಿಳಿಸಿದರು.

ಹೂಡಿಕೆ ಮಾಡಿದ ಬಂಡವಾಳವು ಕೈಗೆ ಸಿಗುತ್ತಿಲ್ಲ. ದ್ರಾಕ್ಷಿಯಲ್ಲಿ ಬೆಳೆದ ಹಣವೆಲ್ಲಾ ಗೊಬ್ಬರಗಳು, ಔಷಧಿ ಅಂಗಡಿಗಳಿಗೆ ನೀಡಲು ಸರಿಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಬೆಳೆ ಉತ್ತಮವಾಗಿ ಬಂದಾಗ ಬೆಲೆಗಳು ಸಿಗುವುದಿಲ್ಲ, ಉತ್ತಮ ಬೆಲೆಗಳು ಇದ್ದಾಗ ಬೆಳೆಗಳು ಇಳುವರಿ ಬರುವುದಿಲ್ಲ, ವಾತಾವರಣದ ವೈಪರಿತ್ಯಕ್ಕೆ ಒಳಗಾಗಿ ಬೆಳೆಗಳು ನಷ್ಟವಾಗುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿ ಇದೆ ಎಂದರು.

ರೈತ ಪಿ.ರಂಗನಾಥಪುರ ನಟರಾಜು ಮಾತನಾಡಿ, ‘ನಮ್ಮಲ್ಲಿ ಬೆಳೆಯುವ ಬೆಳೆಗಳನ್ನು ಖರೀದಿ ಮಾಡಲು ಮಾರುಕಟ್ಟೆಯ ವ್ಯವಸ್ಥೆಯಿಲ್ಲದ ಕಾರಣ, ದ್ರಾಕ್ಷಿಯನ್ನು ಕಟಾವು ಮಾಡಲು ವ್ಯಾಪಾರಸ್ಥರ ಬಳಿ ಅಂಗಲಾಚಬೇಕಾಗಿದೆ’ ಎಂದರು. ‘ಬೇಡಿಕೆ ಇಲ್ಲದೆ ಹೋದರೆ ಅವರು ಕೊಟ್ಟಷ್ಟು ಹಣವನ್ನಷ್ಟೇ ನಾವು ತಗೋಬೇಕು. ಯಾವಾಗ ಕೊಡುತ್ತಾರೋ ಆಗ ತೆಗೆದುಕೊಳ್ಳುವ ಪರಿಸ್ಥಿತಿ ನಮ್ಮದು’ ಎಂದು ತಿಳಿಸಿದರು.

ವ್ಯಾಪಾರಸ್ಥರು ಕೊಡುವ ಹಣಕ್ಕೆ ಕಾದುಕುಳಿತುಕೊಂಡರೆ, ಮುಂದಿನ ಬೆಳೆಗೆ ಗೊಬ್ಬರಗಳನ್ನು ಹಾಕಲು ಸಾಧ್ಯವಾಗಲ್ಲ. ಈ ಬಾರಿ ಗೊಬ್ಬರಗಳನ್ನು ಹಾಕದೆ ಕಡ್ಡಿ ಕಟಾವು ಮಾಡುವ ಹಾಗಾಗಿದೆ ಎಂದು ಹೇಳಿದರು.

ಕೃಷಿಕ ಸಮಾಜ ತಾಲ್ಲೂಕು ಘಟಕದ ಉಪಾಧ್ಯಕ್ಷ ಮಂಡಿಬೆಲೆ ದೇವರಾಜಪ್ಪ ಮಾತನಾಡಿ, ಈ ಭಾಗದಲ್ಲಿ ಕೋಲ್ಡ್ ಸ್ಟೋರೇಜ್ ಮಳಿಗೆ ನಿರ್ಮಾಣ ಮಾಡಿಕೊಡಿ, ದ್ರಾಕ್ಷಿ ಖರೀದಿಗಾಗಿ ಸೂಕ್ತವಾದ ಮಾರುಕಟ್ಟೆಯನ್ನು ವ್ಯವಸ್ಥೆ ಮಾಡಿಕೊಡಿ ಎಂದು ಸರ್ಕಾರಕ್ಕೆ ಅನೇಕ ಬಾರಿಗೆ ಮನವಿ ಮಾಡಿದ್ದೇವೆ ಎಂದರು. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ತೋಟಗಾರಿಕಾ ಸಚಿವರು ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT