ಸೋಮವಾರ, ಜೂಲೈ 6, 2020
22 °C

ನೀರಾವರಿಗೆ ಹೆಚ್ಚಿನ ಆದ್ಯತೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಾವರಿಗೆ ಹೆಚ್ಚಿನ ಆದ್ಯತೆ: ಸಿದ್ದರಾಮಯ್ಯ

ಕಡೂರು: ಕರ್ನಾಟಕದ ಎಲ್ಲ ತಾಲ್ಲೂಕುಗಳು ಅಭಿವೃದ್ಧಿಯಾದರೆ ಸಮಗ್ರ ಕರ್ನಾಟಕ ಅಭಿವೃದ್ದಿಯ ಕನಸು ಸಾಕಾರವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕಡೂರಿನ ಎಪಿಎಂಸಿ ಪ್ರಾಂಗಣದಲ್ಲಿ ಶುಕ್ರವಾರ ₹ 343 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ನಮ್ಮ ಸರ್ಕಾರ ಯಾವುದೇ ತಾರತಮ್ಯ ಮಾಡದೆ, ಯಾವ ಪಕ್ಷದ ಶಾಸಕರಿದ್ದಾರೆ ಎಂದು ನೋಡದೆ ಎಲ್ಲ ತಾಲ್ಲೂಕುಗಳಿಗೂ ಅನುದಾನವನ್ನು ನೀಡಿದೆ. ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಡಾ.ಡಿ.ಎಂ. ನಂಜುಂಡಪ್ಪ ವರದಿಯಲ್ಲಿರುವ ಪ್ರದೇಶಗಳಲ್ಲಿ ಅಭಿವೃದ್ಧಿಗಾಗಿ ₹ 3 ಸಾವಿರ ಕೋಟಿ ನೀಡಿದ್ದೇವೆ. ಕಡೂರಿಗೆ ₹ 500 ಕೋಟಿಗೂ ಹೆಚ್ಚು ಅನುದಾನವನ್ನು ನೀಡಲಾಗಿದೆ’ ಎಂದರು.

‘ನೀರಾವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದೇವೆ. ಕರ್ನಾಟಕ ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿದೆ. ರಾಜ್ಯದಲ್ಲಿ ರೈತರಿಗೆ ಮುಖ್ಯವಾಗಿ ನೀರಾವರಿ ಸೌಲಭ್ಯ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲೆಲ್ಲಿ ನೀರಿನ ಲಭ್ಯತೆ ಇದೆಯೋ ಅದನ್ನು ಬಳಸಿಕೊಂಡು ರೈತರ ಜಮೀನಿಗೆ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ₹ 12,340 ಕೋಟಿ ತೊಡಗಿಸಿದ್ದೇವೆ. ಈ ಯೋಜನೆಯಲ್ಲಿ ಕಡೂರಿಗೆ 2.29 ಟಿಎಂಸಿ ನೀರು ಲಭ್ಯವಾಗುತ್ತದೆ. 55 ಸಾವಿರ ಎಕರೆಗೆ ಸೂಕ್ಷ್ಮ ನೀರಾವರಿ ಸೌಲಭ್ಯ ಸಿಗುತ್ತದೆ. 32 ಕೆರೆಗಳು ತುಂಬಲಿವೆ’ ಎಂದರು.

ಸಿದ್ದರಾಮಯ್ಯ ಸರ್ಕಾರದ ಖರ್ಚಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದಾರೆ ಎಂದು ಯಡಿಯೂರಪ್ಪ ಟೀಕಿಸುತ್ತಾರೆ. ಸರ್ಕಾರದ ಕಾರ್ಯಕ್ರಮಗಳನ್ನು ಆರಂಭಿಸಲು ಮನೆಯಿಂದ ಹಣ ತರಬೇಕೇ? ಮೋದಿ ಅವರ ಮನೆಯಿಂದ ಹಣ ತರುತ್ತಾರಾ ಎಂದು ಲೇವಡಿ ಮಾಡಿದರು.

ಕಡೂರು ಪುರಸಭೆ ವತಿಯಿಂದ ಮುಖ್ಯಮಂತ್ರಿಗಳಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿ, ಪೌರಸನ್ಮಾನ ಮಾಡಲಾಯಿತು. ಜಿಲ್ಲಾಧಿಕಾರಿ ಶ್ರೀರಂಗಯ್ಯ ಸ್ವಾಗತಿಸಿದರು. ಶಾಸಕ ವೈ,ಎಸ್.ವಿ. ದತ್ತ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್. ರೋಷನ್‌ ಬೇಗ್, ಉಪವಿಭಾಗಾಧಿಕಾರಿ ಬಿ. ಸರೋಜ. ಜಿಲ್ಲಾ ಪಂಚಾಯಿತಿ ಸಿಇಒ ಸತ್ಯಭಾಮ, ತಹಶೀಲ್ದಾರ್ ಎಂ.ಭಾಗ್ಯ, ಕಡೂರು, ಬೀರೂರು ಪುರಸಭಾ ಅಧ್ಯಕ್ಷರಾದ ಎಂ.ಮಾದಪ್ಪ, ಸವಿತಾ ರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಉಮೇಶ್, ಅರಣ್ಯ ವಸತಿ ನಿಗಮದ ಅಧ್ಯಕ್ಷ ಎ.ಎನ್. ಮಹೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿಎಲ್. ವಿಜಯ ಕುಮಾರ್, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಆರ್.ಮಹೇಶ್‍ ಒಡೆಯರ್, ಶರತ್‌ ಕೃಷ್ಣಮೂರ್ತಿ, ಲೋಲಾಕ್ಷಿಬಾಯಿ, ವನಮಾಲ ದೇವರಾಜ್, ಲಕ್ಕಮ್ಮ ಸಿದ್ದಪ್ಪ, ಕಾವೇರಿ ಲಕ್ಕಪ್ಪ, ಕಡೂರು ಮತ್ತು ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಚಂದ್ರಪ್ಪ, ಬೀರೂರು ವಿನಾಯಕ್, ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ಎಂ. ಧನಂಜಯ್, ಕಾಂಗ್ರೆಸ್ ಮುಖಂಡರಾದ ಕೆ.ಎಸ್. ಆನಂದ್, ಕೆ.ಎಂ. ಕೆಂಪರಾಜ್, ಪುರಸಭಾ ಸದಸ್ಯರಾದ ಕೆ.ಎಂ. ಮೋಹನ್‌ಕುಮಾರ್, ಎಂ. ಸೋಮಶೇಖರ್, ಬಷೀರ್‌ ಸಾಬ್ ಇದ್ದರು.

ನೀರಾವರಿಗಾಗಿ ₹ 45ಸಾವಿರ ಕೋಟಿ

‘ಪ್ರತಿವರ್ಷ ತಲಾ ₹ 10 ಸಾವಿರ ಕೋಟಿಗಳನ್ನು ನೀರಾವರಿಗೆ ನೀಡಿದ್ದೇವೆ. ಈ ಸರ್ಕಾರದ ಅವಧಿಯಲ್ಲಿ ₹ 45 ಸಾವಿರ ಕೋಟಿ ಹಣವನ್ನು ನೀರಾವರಿಗಾಗಿ ತೊಡಗಿಸಿರುವುದು ನಮ್ಮ ಹೆಮ್ಮೆ. ಕರ್ನಾಟಕವನ್ನು ಹಸಿವು ಮುಕ್ತ ಮತ್ತು ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಬೇಕೆನ್ನುವುದು ನಮ್ಮ ಗುರಿಯಾಗಿದೆ.

ಈ ನಿಟ್ಟಿನಲ್ಲಿ ₹ 4 ಕೋಟಿ ಜನರಿಗೆ ತಲಾ 7 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. 1.20 ಲಕ್ಷ ಬಿಪಿಎಲ್ ಕಾರ್ಡ್ ನೀಡಲಾಗಿದೆ. ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು. ಯಾರಿಗೂ ಸೂರಿಲ್ಲದೆ ಇರಬಾರದು ಎಂಬ ನಿಟ್ಟಿನಲ್ಲಿ ವಾಸಿಸುವವನೇ ಮನೆಯೊಡೆಯ ಎಂಬ ಕಾನೂನನ್ನು ಜಾರಿಗೆ ತಂದಿದ್ದೇವೆ. ಒಟ್ಟಾರೆಯಾಗಿ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ ಮೊಟ್ಟ ಮೊದಲ ಸರ್ಕಾರ ನಮ್ಮದಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.