ಬುಧವಾರ, ಆಗಸ್ಟ್ 5, 2020
23 °C

ಸಾಂಸ್ಕೃತಿಕ ಕಲೆ ಹೆಚ್ಚಿದರೆ, ರಕ್ತದ ಕಲೆ ಕಡಿಮೆಯಾಗುತ್ತವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂಸ್ಕೃತಿಕ ಕಲೆ ಹೆಚ್ಚಿದರೆ, ರಕ್ತದ ಕಲೆ ಕಡಿಮೆಯಾಗುತ್ತವೆ

ಚಿತ್ರದುರ್ಗ: ದೇಶದಲ್ಲಿ ಸಾಂಸ್ಕೃತಿಕ ಕಲೆಗಳು ಹೆಚ್ಚಾದರೆ, ರಕ್ತದ ಕಲೆಗಳು ತನ್ನಿಂದ ತಾನೇ ಕಡಿಮೆಯಾಗುತ್ತವೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹೊಸದುರ್ಗ ತಾಲ್ಲೂಕು ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ಶಿವಕುಮಾರ ಕಲಾಸಂಘ ಮತ್ತು ತಂಜಾವೂರು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಶುಕ್ರವಾರದಿಂದ ಆರಂಭವಾದ ‘ಈಶಾನ್ಯ ರಾಜ್ಯಗಳ ಜಾನಪದ ಶಿಶಿರೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಹಳ್ಳಿಗಳು ಸಾಮರಸ್ಯದಿಂದ ಇರಲು ಕಲೆಯ ಬಗೆಗಿನ ಒಲವೇ ಕಾರಣ. ಹಳ್ಳಿಗಳಲ್ಲಿ ಜಾತಿ, ಭಾಷೆ, ಧರ್ಮದ ಎಲ್ಲೆ ಮೀರಿ ಒಗ್ಗಟ್ಟಿನಿಂದ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುತ್ತಿದ್ದರು. ಅದೇ ಕಾರಣಕ್ಕೆ ಅಲ್ಲಿ ಸಾಮರಸ್ಯ ನೆಲೆಸಿತ್ತು ಎಂದು ವಿಶ್ಲೇಷಿಸಿದರು.

ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮ ಎನ್ನುವ ಬಸವಣ್ಣನವರ ಮನೋಭಾವ ನಮಗೆ ಬರಬೇಕು. ಇಂಥ ಮನೋಭಾವ ಮೂಡಲು ಕಲೆಗಳು  ಸಹಕಾರಿ.. ಹಾಗಾಗಿ ಸಾಂಸ್ಕೃತಿಕ ಕಲೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದರು.

ಜನಪದ ಕಲೆ  ನೆಲಮೂಲ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ. ಸಾಂಸ್ಕೃತಿಕ ಶ್ರೀಮಂತಿಕೆಯ ಅರಿವಿನಿಂದ ಎಲ್ಲರೂ ರಾಷ್ಟ್ರೀಯ ಭಾವೈಕ್ಯ ಬೆಳೆಸಿಕೊಳ್ಳಲು ಸಾಧ್ಯ ಎಂದರು.

ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯ ತೊ ನಂಜುಂಡಸ್ವಾಮಿ,  1986ರಲ್ಲಿ ರಾಜೀವಗಾಂಧಿ ಹುಟ್ಟು ಹಾಕಿದ ಈ ಸಾಂಸ್ಕೃತಿಕ ಕೇಂದ್ರದಿಂದ ಜನಪದ ಕಲೆಗಳ ಕೊಡು ಕೊಳ್ಳುವಿಕೆಯ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಸಾಣೇಹಳ್ಳಿ ಭಾರತದ ಸಾಂಸ್ಕೃತಿಕ ಕೇಂದ್ರದ ತವರೂರು, ರಂಗ ಕಾಶಿ. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ನಾಟಕೋತ್ಸವವನ್ನು ಸಾಣೇಹಳ್ಳಿಯಲ್ಲಿ ನಡೆಸುವ ಪ್ರಯತ್ನ ಮಾಡಲಾಗುವುದು ಎಂದರು.

ಕಡೂರಿನ ರಾಜಕೀಯ ಮುಖಂಡ ಗಿರೀಶ್ ಉಪ್ಪಾರ್ ಮಾತನಾಡಿ,  ರಂಗಕ್ಷೇತ್ರದಲ್ಲಿ ಸಾಣೇಹಳ್ಳಿ ರಂಗಭೂಮಿ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ. ಇಲ್ಲಿಯ ಸಾಂಸ್ಕೃತಿಕತೆಯ ಬಗ್ಗೆ ದೂರದೂರದ ರಾಜ್ಯ ಮತ್ತು ದೇಶಗಳಲ್ಲಿ ಮಾತನಾಡುವಂತಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಚಿತ್ರದುರ್ಗ ಆಕಾಶವಾಣಿ ಕೇಂದ್ರ ಮುಖ್ಯಸ್ಥ ವೇದಮೂರ್ತಿ, ಹೊಸದುರ್ಗದ ತಹಶೀಲ್ದಾರ ಕವಿರಾಜ್ ಮಾತನಾಡಿದರು. ಅಧ್ಯಾಪಕ ಎಚ್.ಎಸ್.ದ್ಯಾಮೇಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಕಾವ್ಯ ಎಚ್ ಆರ್ ನಿರೂಪಿಸಿದರು. ಶಿವಸಂಚಾರದ ಕೆ ದಾಕ್ಷಾಯಣಿ, ಎಚ್ ಎಸ್ ನಾಗರಾಜ್, ಶರಣಪ್ಪ ಮತ್ತು ಶರಣ್ ತಂಡದವರು ವಚನಗೀತೆ, ಭಾವಗೀತೆ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಮನಸೂರೆಗೊಂಡ ‘ಈಶಾನ್ಯ’ ಜನಪದ ನೃತ್ಯ

ಅಸ್ಸಾಂ ಕಲಾವಿದರಿಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂಗೀತ ವಾದ್ಯಗಳನ್ನು ನೀಡುವ ಮೂಲಕ ಶುಕ್ರವಾರ ಶುಭಸಂಜೆಯಲ್ಲಿ ‘ಈಶಾನ್ಯ ರಾಜ್ಯಗಳ ಜಾನಪದ ಶಿಶಿರೋತ್ಸವ’ಕ್ಕೆ ಚಾಲನೆ ನೀಡಿದರು.

ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ತ್ರಿಪುರ, ಸಿಕ್ಕಿಂ ಮತ್ತು ಮೇಘಾಲಯ ರಾಜ್ಯಗಳ ಜಾನಪದ ತಂಡಗಳು ವಿಶಾಲ ವೇದಿಕೆಯ ತುಂಬಾ ಈಶಾನ್ಯ ರಾಜ್ಯದ ವೈವಿಧ್ಯಮಯ ಜಾನಪದ ನೃತ್ಯ ಪ್ರದರ್ಶಿಸಿದರು. ಈಶಾನ್ಯ ಭಾಗದ ಜಾನಪದ ಕಲಾಪ್ರಕಾರಗಳನ್ನು ಒಂದೊಂದಾಗಿ ಪ್ರಸ್ತುಪಡಿಸುತ್ತಿದಾಗ, ಪ್ರೇಕ್ಷಕರು ಗ್ಯಾಲರಿಯಿಂದ ಚಪ್ಪಾಳೆಗಳೊಂದಿಗೆ ಹರ್ಷೋದ್ಘಾರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.