ಸೋಮವಾರ, ಜೂಲೈ 6, 2020
21 °C

ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಒತ್ತಾಯ

ಕುಶಾಲನಗರ: ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟು ಸರದಿ ಸತ್ಯಾಗ್ರಹ ನಡೆಸುವ ಮೂಲಕ ಕಾವೇರಿ ತಾಲ್ಲೂಕು ಹೋರಾಟವನ್ನು ಮುಂದುವರಿಸಬೇಕು ಎಂದು ಶುಕ್ರವಾರ ನಡೆದ ಕಾವೇರಿ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಬಿಬಾಣೆ ಸ್ಥಾನೀಯ ಸಮಿತಿ ಅಧ್ಯಕ್ಷ ಶಶಿಕಾಂತ್ ರೈ ಮಾತನಾಡಿ, ಕಾವೇರಿ ತಾಲ್ಲೂಕಿಗೆ ಒತ್ತಾಯಿಸಿ ಅನೇಕ ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ತಾಲ್ಲೂಕು ಹೋರಾಟ ಅನಿರ್ವಾಯವಾಗಿದೆ. ಆದರೆ, ಆರೋಗ್ಯದ ದೃಷ್ಟಿಯಿಂದ ಉಪವಾಸ ಕೈಬಿಟ್ಟು, ಸರದಿ ಹೋರಾಟಕ್ಕೆ ಮುಂದಾಗುವುದು ಒಳಿತು’ ಎಂದು ಹೇಳಿದರು.

ಕಾಫಿ ಮಂಡಳಿ ಸದಸ್ಯ ಜಿ.ಎಲ್.ನಾಗರಾಜು, ಜಿಲ್ಲೆಗೆ ಜ. 9ರಂದು ಮುಖ್ಯಮಂತ್ರಿ ಆಗಮಿಸುವವರೆಗೂ ಸರದಿ ಸತ್ಯಾಗ್ರಹವನ್ನು ನಡೆಸಬೇಕು. ಆದರೆ, ಉಪವಾಸ ಸತ್ಯಾಗ್ರಹ ನಿಲ್ಲಿಸಬೇಕು ಎಂದು ಸಲಹೆ ನೀಡಿದರು. ನಿವೃತ್ತ ಮುಖ್ಯಶಿಕ್ಷಕ ಎಂ.ಎಚ್.ನಜೀರ್ ಅಹಮ್ಮದ್, ರೋಟರಿ ಸದಸ್ಯ ಎಸ್.ಕೆ.ಸತೀಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮೃತ್ ರಾಜ್, ನಂಜರಾಯಪಟ್ಟಣ ಅಸುಬೋಪಣ್ಣ, ಅಮರಣಾಂತ ಉಪವಾಸ ಕೈಬಿಡುವಂತೆ ಮನವಿ ಮಾಡಿದರು.

ನೆಲ್ಲಿಹುದಿಕೇರಿ ಭರತ್, ಕೆ.ಎಸ್.ಮಹೇಶ್, ಮನಮಹೇಶ್, ಕೆ.ಎಸ್.ನಾಗೇಶ್, ಎಸ್.ಎಸ್.ಚಂದ್ರಶೇಖರ್ ಮಾತನಾಡಿ, ಆರೋಗ್ಯ ದೃಷ್ಟಿಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲು ಶಶಿಧರ್ ಅವರ ವಿವೇಚನೆಗೆ ಬಿಡೋಣ ಎಂದು ಸಲಹೆ ನೀಡಿದರು.

ಸದಸ್ಯರ ಸಲಹೆಗಳನ್ನು ಆಲಿಸಿದ ವಿ.ಪಿ.ಶಶಿಧರ್, ‘121 ದಿನಗಳಿಂದಲೂ ಕಾವೇರಿ ತಾಲ್ಲೂಕಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದೇವೆ. ಆದರೆ, ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗೆ ಮನ್ನಣೆ ನೀಡದ ಕಾರಣ ಅನಿರ್ವಾಯವಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಯಿತು. ಆದರೆ, ಹೆಚ್ಚಿನ ಸದಸ್ಯರು ಉಪವಾಸ ಸತ್ಯಾಗ್ರಹ ಕೈಬಿಟ್ಟು, ಸರದಿ ಸತ್ಯಾಗ್ರಹ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜ. 6ರ (ಶನಿವಾರ) ಸಂಜೆ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ಹೇಳಿದರು.

ಜಿ.ಪಂ. ಸದಸ್ಯರಾದ ಕೆ.ಪಿ.ಚಂದ್ರಕಲಾ, ಸುನಿತಾ ಮಂಜುನಾಥ್, ತಾ.ಪಂ. ಸದಸ್ಯೆ ಸುಹದ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾತ್ಸಲ್ಯಾ, ಕೇಂದ್ರ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್, ಎಂ.ವಿ.ನಾರಾಯಣ್, ಎನ್.ಕೆ.ಮೋಹನ್ ಕುಮಾರ್, ಎಂ.ಕೆ.ಗಣೇಶ್, ತೊರೆನೂರು ಟಿ.ಕೆ.ಪಾಂಡುಂರಂಗ, ಕೃಷ್ಣೇಗೌಡ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಾರಾನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎನ್.ಕುಮಾರಪ್ಪ ಇದ್ದರು.

5ನೇ ದಿನಕ್ಕೆ ಕಾಲಿಟ್ಟ ಉಪವಾಸ

ಕಾವೇರಿ ತಾಲ್ಲೂಕು ರಚನೆಗೆ ಒತ್ತಾಯಿಸಿ ಹೋರಾಟ ಕೇಂದ್ರೀಯ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಶುಕ್ರವಾರ 5ನೇ ದಿನಕ್ಕೆ ಕಾಲಿಟ್ಟಿದೆ.

ಇಲ್ಲಿನ ಕಾರು ನಿಲ್ದಾಣದಲ್ಲಿರುವ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಶುಕ್ರವಾರ ಮುಸ್ಲಿಂ ಒಕ್ಕೂಟದ ನೂರಾರು ಮುಖಂಡರು ಪಾಲ್ಗೊಂಡು ಬೆಂಬಲ ಸೂಚಿಸಿದರು.

ನಂತರ ಕಾರ್ಯಪ್ಪ ವೃತ್ತದಲ್ಲಿ ಮುಸ್ಲಿಂ ಒಕ್ಕೂಟದ ಸದಸ್ಯರು ಹಾಗೂ ಹೋರಾಟ ಸಮಿತಿ ಸದಸ್ಯರು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಅಬ್ದುಲ್ ಖಾದರ್, ಎಂ.ವಿ. ನಾರಾಯಣ್, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಕರೀಂ, ಅಲೀಂ, ಹಬೀರ್ ಅಹಮ್ಮದ್, ಸಲೀಂ ಮುಖಂಡರಾದ ತನ್ವೀರ್, ಅಹಿಂದ ಹಮೀದ್, ಸಫಿ, ಹನೀಫ್‌, ಜೈನಾಮೀದ್, ಅಬ್ದುಲ್ ಖಾದರ್, ದಸಂಸ ಸಂಚಾಲಕ ಕೆ.ಬಿ.ರಾಜು ಉಪಸ್ಥಿತರಿದ್ದರು.

ಸಿ.ಎಂ ನಿರ್ಧಾರ ಆಧರಿಸಿ ಹೋರಾಟಕ್ಕೆ ಬಿಜೆಪಿ ಚಿಂತನೆ

ಕುಶಾಲನಗರ: ‘ಕಾವೇರಿ ತಾಲ್ಲೂಕು ರಚನೆಗೆ ಒತ್ತಾಯಿಸಿ ಪಕ್ಷಾತೀತವಾಗಿ ನಡೆದ ಹೋರಾಟಕ್ಕೆ ಬಿಜೆಪಿ ಕೈಜೋಡಿಸಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್ ತಾಲ್ಲೂಕು ರಚನೆ ಬಗ್ಗೆ ತಾತ್ಸಾರ ಮನೋಭಾವ ತೋರುತ್ತಿದೆ. ಜ. 9ರಂದು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ಆಧರಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುತ್ತದೆ’ ಬಿಜೆಪಿ ಮಡಿಕೇರಿ ಕ್ಷೇತ್ರದ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಹೇಳಿದರು.

ಕಾವೇರಿ ತಾಲ್ಲೂಕು ಹೋರಾಟಕ್ಕೆ ರಾಜಕೀಯ ಪ್ರವೇಶವಾಗಿದ್ದು, ಪಕ್ಷದಡಿಯಲ್ಲಿ ನೇರ ಹೋರಾಟಕ್ಕೆ ಇಳಿದು ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋಷ್ಠಿಯಲ್ಲಿ ನಗರ ಬಿಜೆಪಿ ಉಪಾಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಕಾರ್ಯದರ್ಶಿ ಎಚ್.ಡಿ. ಶಿವಾಜಿ, ತಾಲ್ಲೂಕು ಯುವ ಮೋರ್ಚಾ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ನಗರ ಯುವ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್, ಪ.ಪಂ. ಅಧ್ಯಕ್ಷೆ ರೇಣುಕಾ, ಮುಖಂಡರಾದ ಎಂ.ವಿ. ನಾರಾಯಣ. ಎಚ್.ಎನ್. ರಾಮಚಂದ್ರ, ಜಿ.ಎಲ್. ನಾಗರಾಜ್, ಎಂ.ಎಂ. ಚರಣ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.