ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಹಿಂದ’ ವರ್ಗಕ್ಕೆ ಕೊಡುಗೆ ಶೂನ್ಯ

Last Updated 6 ಜನವರಿ 2018, 9:59 IST
ಅಕ್ಷರ ಗಾತ್ರ

ಮಡಿಕೇರಿ: ‘ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಕೊಡುಗೆ ಶೂನ್ಯ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ದೂರಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹಿಂದುಳಿದ ವರ್ಗದ ಪರವಾಗಿ ಯಾವುದೇ ಶಾಸನವನ್ನೂ ಸಿದ್ದರಾಮಯ್ಯ ಜಾರಿಗೆ ತಂದಿಲ್ಲ. ಸಚಿವರಾಗಿದ್ದ ಸಂದರ್ಭದಲ್ಲೂ ಹಿಂದುಳಿದ ವರ್ಗಕ್ಕೆ ಮಾರಕವಾಗಿ ನಡೆದುಕೊಂಡಿದ್ದರು’ ಎಂದು ಆಪಾದಿಸಿದರು.

‘ಈ ಸರ್ಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಒಟ್ಟು 32 ಹಿಂದೂ ಮುಖಂಡರನ್ನು ಕೊಲೆ ಮಾಡಲಾಗಿದೆ. ಹಗಲು ವೇಳೆಯೇ ಮುಖಂಡರನ್ನು ಕೊಚ್ಚಿ ಕೊಲೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಅತ್ಯಾಚಾರ, ಮಹಿಳೆಯರ ಕಾಣೆ ಪ್ರಕರಣಗಳೂ ನಡೆಯುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಿಂದಿನ ಯಾವ ಸರ್ಕಾರದಲ್ಲೂ ಇಂತಹ ಘಟನೆಗಳು ನಡೆದಿರಲಿಲ್ಲ. ರಾಜ್ಯ ಸರ್ಕಾರವೇ ಪಿಎಫ್‌ಐ ಹಾಗೂ ಎಸ್‌ಡಿಪಿಐಗೆ ಬೆಂಬಲ ನೀಡುತ್ತಿದೆ. ಭಯೋತ್ಪಾದಕರ ರಾಜ್ಯ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಕೊಲೆಗಡುಕರಿಗೆ ಭಯವೇ ಇಲ್ಲವಾಗಿದೆ’ ಎಂದು ದೂರಿದರು.

ರಾಜ್ಯದಲ್ಲಿ ‘ಸ್ಮಾರ್ಟ್‌ಸಿಟಿ’ಗೆ ಕೇಂದ್ರವು ಒಟ್ಟು ₹ 1,920 ಕೋಟಿ ಅನುದಾನ ನೀಡಿದ್ದರೂ, ₹ 175 ಕೋಟಿ ಮಾತ್ರ ಖರ್ಚು ಮಾಡಲಾಗಿದೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ. 3 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ, ರೈತ ಕುಟುಂಬಗಳ ನೆರವಿಗೆ ಸರ್ಕಾರ ಬಂದಿಲ್ಲ ಎಂದು ಆಪಾದಿಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡಲಾಗುತ್ತಿತ್ತು. ಅದನ್ನು ಸ್ಥಗಿತಗೊಳಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವೂ ಕಡಿಮೆ. ಮಹರ್ಷಿ ವಾಲ್ಮೀಕಿ ಹಾಗೂ ಅಂಬೇಡ್ಕರ್‌ ಅಭಿವೃದ್ಧಿ ನಿಗಮಕ್ಕೆ ಮೀಸಲಿಟ್ಟ ಅನುದಾನವನ್ನೂ ಬಳಕೆ ಮಾಡಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಮೀಸಲಿಟ್ಟ ₹ 124 ಕೋಟಿಯಲ್ಲಿ ₹ 44 ಕೋಟಿ ಅನುದಾನ ಉಳಿದಿದೆ ಎಂದು ಹೇಳಿದರು.

ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರವು ಅಕ್ಕಿ ಪೂರೈಕೆ ಮಾಡುತ್ತಿದ್ದರೂ ರಾಜ್ಯ ಸರ್ಕಾರ ನಮ್ಮ ಯೋಜನೆಯೆಂದು ಬಿಂಬಿಸಿಕೊಳ್ಳುತ್ತಿದೆ. ಅಕ್ಕಿಯನ್ನು ಹೊರರಾಜ್ಯಕ್ಕೆ ಮಾರಾಟ ಮಾಡಿ ದುಡ್ಡು ಮಾಡಲಾಗುತ್ತಿದೆ. ಇದೇ ಸರ್ಕಾರ ಮುಂದೆಯೂ ಬಂದರೆ ಗೂಂಡಾ ರಾಜ್ಯವಾಗಲಿದೆ ಎಂದು ಎಚ್ಚರಿಸಿದರು.

‘ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಈ ಬಾರಿ ಹೆಚ್ಚಿನ ಟಿಕೆಟ್‌ ನೀಡಬೇಕೆಂದು ಹೈಕಮಾಂಡ್‌ ಬಳಿ ಮನವಿ ಮಾಡುತ್ತಿದ್ದೇನೆ. ಆದರೆ, ನನಗೆ ಚುನಾವಣೆಗೆ ಸ್ಪರ್ಧಿಸುವ ಶಕ್ತಿಯಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ನಡೆಸಿರುವ ಕೆಲವು ದಾಖಲೆಗಳನ್ನು ಈ ಹಿಂದೆ ಬಹಿರಂಗ ಪಡಿಸಿದ್ದು, ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಇದರಿಂದ ಹೊರಬರಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

ಹೆಗಡೆ ವಿರುದ್ಧ ಕಿಡಿ: ‘ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿದ ಕಾರಣಕ್ಕೆ ಸಮಾನತೆಯಿದೆ. ಇಲ್ಲದಿದ್ದರೆ ನಾವೆಲ್ಲಾ ತುಳಿತಕ್ಕೆ ಒಳಗಾಗುತ್ತಿದ್ದೆವು. ಅನಂತಕುಮಾರ್‌ ಹೆಗಡೆ ಅವರ ಹೇಳಿಕೆಯನ್ನು ಯಾರೂ ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಇಂತಹ ಹೇಳಿಕೆ ಒಪ್ಪುವುದಿಲ್ಲ’ ಎಂದು ಪುಟ್ಟಸ್ವಾಮಿ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ. ಭಾರತೀಶ್‌, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸತೀಶ್‌ ಹಾಜರಿದ್ದರು.

* * 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ಬಲಪಡಿಸುವ ಬದಲಿಗೆ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕೊಲೆ ಮಾಡುವವರಿಗೆ ಪ್ರಚೋದನೆ ಸಿಗುತ್ತಿದೆ ಬಿ.ಜೆ. ಪುಟ್ಟಸ್ವಾಮಿ
ಸದಸ್ಯ, ವಿಧಾನ ಪರಿಷತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT