ಮಂಗಳವಾರ, ಆಗಸ್ಟ್ 11, 2020
24 °C

ಮಿಠಾಯಿ ಅಂಗಡಿಗಳ ಸಾಮಾಜಿಕ ಕಳಕಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಠಾಯಿ ಅಂಗಡಿಗಳ ಸಾಮಾಜಿಕ ಕಳಕಳಿ

ಕೊಪ್ಪಳ: ಗವಿಮಠ ಜಾತ್ರೆಯ ಮಿಠಾಯಿ ಅಂಗಡಿಗಳಲ್ಲಿ ದಪ್ಪ ಅಕ್ಷರಗಳ ಘೋಷವಾಕ್ಯದಿಂದ ಸಾಮಾಜಿಕ ಕಳಕಳಿ ಕಾಣಬಹುದು. ಗವಿಮಠದ ಆವರಣದಲ್ಲಿ ಸಾಲಾಗಿ ಹಾಕಲಾಗಿರುವ ಮಿಠಾಯಿ ಅಂಗಡಿಯವರ ರಾಜ್ಯಾಭಿಮಾನ, ಕೇಂದ್ರ ಸರ್ಕಾರದ ಸಾಮಾಜಿಕ ಕಳಕಳಿಯ ಯೋಜನೆಗಳು, ಮಾನವೀಯತೆ, ಪ್ರಸ್ತುತ ವಿದ್ಯಮಾನಗಳು, ನಾಡು, ನುಡಿ, ಜಲ, ಭಾಷೆಯ ಅಭಿಮಾನವನ್ನು ಘೋಷ ವಾಕ್ಯಗಳು ಸಾರುತ್ತವೆ.

'ಭೇಟಿ ಪಡಾವೋ ಭೇಟಿ ಬಚಾವೋ', 'ಕಟ್ಟಿಸಿ ಪಾಯಖಾನಿ ದೂರವಾಗಿಸಿ ದವಾಖಾನಿ' ಎಂಬ ಕೇಂದ್ರ ಸರ್ಕಾರದ ಯೋಜನೆಗಳು, ಅತ್ಯಾಚಾರ ಮತ್ತು ಹತ್ಯೆಗೆ ಒಳಗಾದ ವಿಜಯಪುರದ ಬಾಲಕಿಗೆ ನ್ಯಾಯ ಒದಗಿಸಬೇಕು ಎಂದು 'ಕೊಲೆ ಆರೋಪಿಗಳಿಗೆ ಶಿಕ್ಷೆಯಾಗಲಿ' 'ಮಹಾದಾಯಿ ಹೋರಾಟಕ್ಕೆ ನಮ್ಮ ಬೆಂಬಲ',  'ತುಂಗಭದ್ರೆಯ ಹೂಳು ತೆಗೆಯಿರಿ' ಹೀಗೆ ರಾಜ್ಯದ ರೈತರ ಸಮಸ್ಯೆಗಳ ಅವಲೋಕನ ಈ ಘೋಷವಾಕ್ಯಗಳ ಮೂಲಕ ನಡೆದಿದೆ.

ಕನ್ನಡ ಕೀರ್ತಿಯನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಹೀಗೆ 8 ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಭಾವಚಿತ್ರಗಳು ಮತ್ತು ಅವರ ಹೆಸರು ಹಾಗೂ ಕನ್ನಡದ ನುಡಿಗಳನ್ನು ಹಾಕುವ ಮೂಲಕ ಕನ್ನಡಾಭಿಮಾನ ಸಾರುವ ಫಲಕಗಳು, 'ತ್ರಿವಳಿ ತಲಾಖ್‍ಗೆ ತಲಾಖ್‍', 'ಸಶಕ್ತ ಮನ-ಸಂತೃಪ್ತ ಜೀವನ' ಮತ್ತು 'ಪಣತಿಯ ದೀಪವಾಗಲಿ ಬಂಗಾರದ ದೀಪವಾಗಲಿ ಬೆಳಕು ಒಂದೇ' ಎಂಬ ಸಂದೇಶ ಜನರ ಗಮನ ಸೆಳೆಯುತ್ತಿದೆ.

‘ಮಿಠಾಯಿ ತೆಗೆದುಕೊಳ್ಳಲು ಬರುವ ಪ್ರತಿಯೊಬ್ಬರೂ ಮಿಠಾಯಿಗಳನ್ನು ನೋಡುವ ಮುನ್ನ ಈ ಘೋಷ ವಾಕ್ಯಗಳ ಮೇಲೆ ಕಣ್ಣು ಹಾಯಿಸುತ್ತಾರೆ. ಇದರಿಂದ ಸ್ವಲ್ಪವಾದರೂ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿ’ ಎನ್ನುತ್ತಾರೆ ಮಿಠಾಯಿ ಅಂಗಡಿಯ ಹಸೇನ್‍.

‘ಯಾವುದೇ ಜಾತಿಯಾಗಲಿ ಎಲ್ಲರಿಗೂ ನ್ಯಾಯ ಸಿಗಬೇಕು. ಮಾನವೀಯತೆ ದೃಷ್ಟಿಯಿಂದ ಈ ಘೋಷವಾಕ್ಯ ಹಾಕಿದ್ದೇವೆ. ಪ್ರತಿವರ್ಷವೂ ಆಯಾ ಕಾಲದ ವಿದ್ಯಮಾನಗಳ ಘೋಷವಾಕ್ಯಗಳನ್ನು ಸ್ವಯಂ ಪ್ರೇರಿತರಾಗಿ ಹಾಕುತ್ತೇವೆ’ ಎಂದು ಮಿಠಾಯಿ ಅಂಗಡಿ ಮಾಲೀಕ ಮಹ್ಮದ್‍ ಹನೀಫ್‌ ಸಾಬ್‍ ಮಿಠಾಯಿ ಹೇಳಿದರು.

‘ಈ ವರ್ಷ ಜಾಗ ಬದಲಾಗಿದೆ. ಆದರೆ ವ್ಯಾಪಾರ ಬದಲಾಗಿಲ್ಲ. ವ್ಯಾಪಾರ ಚೆನ್ನಾಗಿದೆ. ಇಲ್ಲಿ 32 ಮಿಠಾಯಿ ಅಂಗಡಿಗಳಿವೆ. ಎಲ್ಲ ಅಂಗಡಿಗಳಲ್ಲಿ ಒಂದೇ ರೀತಿಯ ದರ ನಿಗದಿ ಮಾಡಲಾಗಿದೆ’ ಎಂದು ವ್ಯಾಪಾರಿ ವಜೀರ್‍ ಹಂಚಿನಾಳ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.