ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೆಸ್ ಕ್ಲಬ್‍ನಲ್ಲಿ ಜಿಗ್ನೇಶ್ ಮೆವಾನಿ ಮತ್ತು ಮಾಧ್ಯಮದವರ ನಡುವೆ ಜಟಾಪಟಿ; ನಿಜವಾಗಿಯೂ ಅಲ್ಲಿ ನಡೆದಿದ್ದೇನು?

Last Updated 6 ಜನವರಿ 2018, 13:23 IST
ಅಕ್ಷರ ಗಾತ್ರ

ದೆಹಲಿ: ಭೀಮಾ–ಕೋರೆಗಾಂವ್‌ ಸಮರದ ಎರಡನೇ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಜನವರಿ 1 ರಂದು ಪುಣೆಯಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರಕ್ಕೆ ಕಾರಣವಾಗಿದ್ದು ಗುಜರಾತ್‌ ಶಾಸಕ ಜಿಗ್ನೇಶ್‌ ಮೆವಾನಿ ಮತ್ತು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಉಮರ್‌ ಖಾಲಿದ್‌ ಅವರು ಡಿಸೆಂಬರ್ 31ರಂದು ಪುಣೆಯ ಶನಿವಾರ್‌ವಾಡಾದಲ್ಲಿ ಮಾಡಿದ 'ಪ್ರಚೋದನಾಕಾರಿ' ಭಾಷಣ ಎಂಬ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಗುರುವಾರ ನಡೆದಿದ್ದ ‘ಅಖಿಲ ಭಾರತ ವಿದ್ಯಾರ್ಥಿ ಶೃಂಗ ಸಭೆ 2018’ಯಲ್ಲಿ ಭಾಗವಹಿಸಲು ಮೆವಾನಿ ಮತ್ತು ಖಾಲಿದ್ ಅವರಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು.

ಇದಾದ ನಂತರ ಶುಕ್ರವಾರ ದೆಹಲಿಯಲ್ಲಿ ಜಿಗ್ನೇಶ್ ಮೆವಾನಿ ಸುದ್ದಿಗೋಷ್ಠಿ ಕರೆದಿದ್ದು, ಇಲ್ಲಿ ಜಿಗ್ನೇಶ್ ಮತ್ತು ಮಾಧ್ಯಮದವರ ನಡುವೆ ಜಟಾಪಟಿ ನಡೆದಿರುವುದು ಸುದ್ದಿಯಾಗಿದೆ. ಜಿಗ್ನೇಶ್ ಮೆವಾನಿ ಮಾಧ್ಯಮದವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಸುದ್ದಿವಾಹಿನಿಯೊಂದು ಆರೋಪಿಸಿದೆ. ಅಂದಹಾಗೆ ದೆಹಲಿ ಪತ್ರಿಕಾಗೋಷ್ಠಿಯಲ್ಲಿ ನಡೆದದ್ದು ಏನು ಎಂಬುದರ ಬಗ್ಗೆ ನ್ಯೂಸ್ ಲಾಂಡ್ರಿ ವರದಿ ಮಾಡಿದೆ.

[related]

ಪತ್ರಿಕಾಗೋಷ್ಠಿಯಲ್ಲಿ ನಡೆದಿದ್ದು ಏನು?
ಶುಕ್ರವಾರ ಮಧ್ಯಾಹ್ನ ಸುದ್ದಿಗೋಷ್ಠಿ ಕರೆದ ಜಿಗ್ನೇಶ್ ಮೆವಾನಿ ಪುಣೆಯಲ್ಲಿ ಡಿಸೆಂಬರ್ 31ರಂದು ತಾವು ಮಾಡಿದ ಭಾಷಣ ಪ್ರಚೋದನಾಕಾರಿಯಾಗಿರಲಿಲ್ಲ. ತನ್ನ ಮತ್ತು ಖಾಲಿದ್ ಮೇಲೆ ಎಫ್‍ಐಆರ್ ದಾಖಲಿಸುವ ಮೂಲಕ ಬಿಜೆಪಿ ಮತ್ತು ಆರ್‍ಎಸ್‍ಎಸ್ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಸುದ್ದಿಗೋಷ್ಠಿ ಮುಗಿಸಿದ ನಂತರ ಅಲ್ಲಿರುವ ಪತ್ರಕರ್ತರೊಂದಿಗೆ ಸಂವಾದ ನಡೆಸಲು ಮೆವಾನಿ ಸಮ್ಮತಿಸಿದ್ದಾರೆ.
ಅಷ್ಟೊತ್ತಿಗೆ ಅಲ್ಲಿದ್ದ ಸುದ್ದಿ ಛಾಯಾಗ್ರಾಹಕರು ಮೆವಾನಿಯನ್ನು ಸುತ್ತುವರಿದಿದ್ದಾರೆ. ಮೆವಾನಿಯ ಚಿತ್ರ ಸೆರೆ ಹಿಡಿಯಲು ಕೆಲವು ಛಾಯಾಗ್ರಾಹಕರಂತೂ ಬೆಂಚಿನ ಮೇಲೆ ನಿಂತಿದ್ದರು.

ಎರಡು ವಾಹಿನಿಯ ಪತ್ರಕರ್ತರು ಅಲ್ಲಿ ಗಲಾಟೆ ಮಾಡಿದಾಗ ಮೆವಾನಿ ಸಂಗಡಿಗರು ಕೂಡಾ ಸುಮ್ಮನಿರಲಿಲ್ಲ. ಹೀಗಿರುವಾಗ ಕ್ಯಾಮೆರಾದವರ ನೂಕುನುಗ್ಗಾಟದಿಂದ ಮೆವಾನಿಯವರನ್ನು ಬಿಡಿಸಿ ಪ್ರೆಸ್ ಕ್ಲಬ್‍ನಲ್ಲಿರುವ ಕೊಠಡಿಗೆ ಕರೆದೊಯ್ಯಲಾಯಿತು. ಆದರೂ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ಸ್ವಲ್ಪ ಹೊತ್ತಿನ ನಂತರ ಮೆವಾನಿ ಕೊಠಡಿಯಿಂದ ಹೊರಗೆ ಬಂದಾಗ ಕ್ಯಾಮೆರಾಮೆನ್‍ಗಳು ಮತ್ತೆ ಸುತ್ತುವರಿದಿದ್ದಾರೆ. ಹೇಳಿಕೆ ಪಡೆದುಕೊಳ್ಳುವ ತವಕದಲ್ಲಿದ್ದ ಪತ್ರಕರ್ತರು ಮೈಕ್ರೋಫೋನ್‍ಗಳನ್ನು ಮೆವಾನಿ ಅವರ ಬಾಯಿಯೊಳಗೆ ತುರುಕುತ್ತಿದ್ದಾರೇನೋ ಎಂಬ ದೃಶ್ಯ ಅಲ್ಲಿ ಕಂಡು ಬಂದಿತ್ತು. ಇದೆಲ್ಲದರ ನಡುವೆ ಟೈಮ್ಸ್ ನೌ ವಾಹಿನಿಯ ಪತ್ರಕರ್ತರು, ಮಹಾರಾಷ್ಟ್ರದ ಭೀಮಾ-ಕೋರೆಗಾಂವ್‍ನಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣವಾಗಿದ್ದು ಮೆವಾನಿ ಭಾಷಣವೇ? ಎಂದು ಒಂದೇ ಪ್ರಶ್ನೆಯನ್ನು ಪುನರಾವರ್ತಿಸಿ ಕೇಳುತ್ತಿದ್ದರು.

ಆಮೇಲೆ ಮೆವಾನಿ ಮತ್ತೊಂದು ಕೊಠಡಿಗೆ ಹೋದರೆ ಅವರ ಜತೆಗೆ 10-15 ಕ್ಯಾಮೆರಾಮೆನ್‍ಗಳು ಆ ಕೊಠಡಿಗೆ ನುಗ್ಗಿದ್ದಾರೆ. ಪುಟ್ಟ ಕೊಠಡಿಯಲ್ಲಿ ಅಷ್ಟೊಂದು ಜನ ನುಗ್ಗಿದ್ದರಿಂದ ಅತ್ತಿತ್ತ ಚಲಿಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊಠಡಿಯ ಒಳಗಿದ್ದ ಪತ್ರಕರ್ತರು ಮೆವಾನಿ ಅವರಿಂದ ಹೇಳಿಕೆ ಪಡೆಯಲು ಹರಸಾಹಸ ಪಟ್ಟು ವಿಫಲವಾಗುತ್ತಿದ್ದರೆ ಹೊರಗೆ ನಿಂತಿದ್ದ ಪತ್ರಕರ್ತರು ಅದನ್ನು ನೋಡಿ ನಗೆಯಾಡುತ್ತಿದ್ದರು. ನಂತರದ ಮುಂದಿನ ಮೂವತ್ತು ನಿಮಿಷಗಳ ಕಾಲ ಪತ್ರಕರ್ತರು ಮತ್ತು ಮೆವಾನಿ ಸಂಗಡಿಗರ ನಡುವೆ ವಾಗ್ವಾದ ನಡೆದಿದೆ. ಆನಂತರ ಮೆವಾನಿಯವರ ಸಂದರ್ಶನ ಪಡೆಯುವುದಕ್ಕಾಗಿ ಪತ್ರಕರ್ತರು ಕೆಲವೊಂದು ಪ್ರಶ್ನೆಗಳನ್ನು ಸಿದ್ಧಪಡಿಸಿ ನೀಡಿದ್ದಾರೆ.

ಆದಾಗ್ಯೂ,  ಟೈಮ್ಸ್ ನೌ ವಾಹಿನಿಯ ಪತ್ರಕರ್ತರು ಜಿಗ್ನೇಶ್ ಅವರಲ್ಲಿ ಮಾತನಾಡದಂತೆ ಜಿಗ್ನೇಶ್ ಸಂಗಡಿಗರು ತಡೆದಾಗ ಅಲ್ಲಿ ಮತ್ತೆ ವಾಗ್ವಾದವುಂಟಾಗಿದೆ.

ಜೆಎನ್‍ಯುಎಸ್‍ಯು ಮಾಜಿ ಅಧ್ಯಕ್ಷ  ಹಾಗೂ ಈಗ ಮೆವಾನಿ ಅವರ ಆಪ್ತರೂ ಆಗಿರುವ ಮೋಹಿತ್ ಪಾಂಡೆ ಎರಡು ಬಾರಿ ಟೈಮ್ಸ್ ನೌ ಪತ್ರಕರ್ತರೊಂದಿಗೆ ಸಿಟ್ಟಾಗಿದ್ದಾರೆ. ಟೈಮ್ಸ್ ನೌ ಪತ್ರಕರ್ತರೊಂದಿಗೆ ವಾಗ್ವಾದ ನಡೆಸಿದ ಪಾಂಡೆ, ಬಿಜೆಪಿ ಅಜೆಂಡಾ ಹೊಂದಿರುವ ಮಾಧ್ಯಮದವರೊಂದಿಗೆ ನಾವು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗಳು ರೂಂ ಒಳಗೆ ನುಗ್ಗಿ ಅಹಿತಕರ ಘಟನೆಗಳು ನಡೆಯದಂತೆ ಜಾಗ್ರತೆ ವಹಿಸಿದ್ದಾರೆ.

ಇದೆಲ್ಲದರ ನಡುವೆ ಅರ್ನಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿ ನಮ್ಮ ಪತ್ರಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬೊಬ್ಬಿರಿದಿದೆ. ಅಲ್ಲಿಗೆ ಬಂದಿದ್ದ ಆರೇಳು ಮಂದಿ ಪತ್ರಕರ್ತರು ಮೆವಾನಿ ಅವರನ್ನು ಸಂದರ್ಶನ ನಡೆಸಿ ಹೊರಬಂದಾಗ ರಿಪಬ್ಲಿಕ್ ಟಿವಿಯ ವರದಿಗಾರ ಆದಿತ್ಯ ರಾಜ್ ಕೌಲ್ ಮೆವಾನಿಯವರ ಕೊಠಡಿ ಹೊರಗೆ ನಿಂತು ಕ್ಯಾಮೆರಾ ಮುಂದೆ ಮಾತನಾಡುತ್ತಿದ್ದರು. ನಿಜ ಸಂಗತಿ ಏನೆಂದರೆ ಕೌಲ್ ಅವರಿಗೆ ಮೆವಾನಿ ಸಂದರ್ಶನವನ್ನು ನಿರಾಕರಿಸಿರಲಿಲ್ಲ ಮತ್ತು ಕೌಲ್ ಅವರು ಮೆವಾನಿಯವರನ್ನು ಮಾತನಾಡಿಸುವ ಪ್ರಯತ್ನವನ್ನೂ ಮಾಡಿರಲಿಲ್ಲ.
ಏತನ್ಮಧ್ಯೆ, ಮೆವಾನಿ ಅವರು ಬಂಧನದಿಂದ ಪಾರಾಗಲು ಯತ್ನಿಸುತ್ತಿದ್ದಾರೆ ಎಂಬ ರೀತಿಯಲ್ಲಿಯೇ ಕೌಲ್ ಅವರು ಕ್ಯಾಮೆರಾ ಮುಂದೆ ನಿಂತು ಸುದ್ದಿ ನೀಡುತ್ತಿದ್ದರು.
ಮೆವಾನಿ ಅವರು ನ್ಯೂಸ್ ಲಾಂಡ್ರಿ ಜತೆ ಮಾತನಾಡಿದ ನಂತರ ಅಲ್ಪ ಹೊತ್ತು ವಿರಾಮ ತೆಗದುಕೊಳ್ಳಲು ಅವಕಾಶ ಕೊಡಿ ಎಂದು ವಿನಂತಿಸಿದ್ದಾರೆ. ಹಾಗೆ ಅವರು ಕೊಠಡಿಯಿಂದ ಹೊರಗೆ ಕಾಲಿಟ್ಟ ಕೂಡಲೇ ರಿಪಬ್ಲಿಕ್ ಟಿವಿಯ ವರದಿಗಾರರಾದ ಕೌಲ್ ಮತ್ತು ಇನ್ನೊಬ್ಬ ಪತ್ರಕರ್ತ ಮೈಕ್ ಹಿಡಿದುಕೊಂಡು ಮೆವಾನಿ ಮೇಲೆ ಏಕಾಏಕಿ ಎರಗಿದ್ದಾರೆ.
ಆ ಕ್ಷಣದಲ್ಲಿ ಮೆವಾನಿ ಸಂಗಡಿಗರು ಪತ್ರಕರ್ತರನ್ನು ತಡೆ ಹಿಡಿ ಹಿಡಿದಾಗ, ಮೆವಾನಿ ಅಲ್ಲಿಂದ ಪರಾರಿ ಆದರು ಎಂಬ ಅಭಿಪ್ರಾಯಕ್ಕೆ ಬಂದಿದ್ದರು ರಿಪಬ್ಲಿಕ್ ಟಿವಿ ಪತ್ರಕರ್ತರು! ಮೆವಾನಿ ಅಲ್ಲಿಂದ ಓಡಿ ಹೋದರೆ? ಅಥವಾ ವಿರಾಮ ತೆಗೆದುಕೊಂಡರೇ?ಎಂಬ ಗಲಿಬಿಲಿ ಅಲ್ಲಿ ಉಂಟಾಗಿತ್ತು. ಮೆವಾನಿಗೆ ರಕ್ಷಣೆ ನೀಡಲು ಬಂದಿದ್ದ ಪೊಲೀಸರಿಗೆ ಕೂಡಾ ಏನು ನಡೆಯುತ್ತಿದೆ ಎಂಬುದು ಗೊತ್ತಾಗದ ಪರಿಸ್ಥಿತಿಯಾಗಿತ್ತು.

ಮೆವಾನಿಯವರ ಸಂದರ್ಶನಕ್ಕಾಗಿ ಕೆಲವು ಪತ್ರಕರ್ತರು ಕಾದುಕುಳಿತಿದ್ದರೂ ಅವರಿಗೆ ಸಂದರ್ಶನಕ್ಕೆ ಅವಕಾಶ ದೊರೆಯಲಿಲ್ಲ. ಏತನ್ಮಧ್ಯೆ, ಆ ಕಾಲಾವಧಿಯಲ್ಲಿ ಜಿಗ್ನೇಶ್ ಅವರ ವಿರುದ್ಧ ದ್ವೇಷ ಸಾಧಿಸುವ ಅಭಿಯಾನವನ್ನು ರಿಪಬ್ಲಿಕ್ ಟಿವಿ ಆರಂಭಿಸಿತ್ತು. ತಮ್ಮ ವಾಹಿನಿಯಲ್ಲಿ  'Republic crew manhandled' (ರಿಪಬ್ಲಿಕ್ ಟಿವಿ ಪತ್ರಕರ್ತರ ಮೇಲೆ ಹಲ್ಲೆ) ನಡೆಸಲಾಗಿದೆ ಎಂದು ಸುದ್ದಿ ಪ್ರಸಾರ ಮಾಡಿದ ಈ ವಾಹಿನಿ ಮೆವಾನಿ, ಕೌಲ್ ಅವರ ಮೈಕ್‍ನ್ನು ದೂರ ಸರಿಸಿದ್ದನ್ನು ಪದೇ ಪದೇ ತೋರಿಸಿ ದೊಡ್ಡ ಸುದ್ದಿ ಮಾಡಿತು.

ಶುಕ್ರವಾರ ರಿಪಬ್ಲಿಕ್ ಟಿವಿಯಲ್ಲಿ ಇದೇ ದೃಶ್ಯಗಳು ಪ್ರಧಾನ ಸುದ್ದಿಯಾಗಿದ್ದವು. #TukdeTukdeConspiracy ಮತ್ತು #CongSponsorsJignesh ಎಂಬ ಹ್ಯಾಶ್‌‍ಟ್ಯಾಗ್ ಬಳಸಿ ರಿಪಬ್ಲಿಕ್ ಟಿವಿ  ಪದೇಪದೇ ಅದೇ ಸುದ್ದಿಯನ್ನು ಪ್ರಸಾರ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT