ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲವಿಜ್ಞಾನಕ್ಕೆ ಪ್ರೋತ್ಸಾಹ ನೀಡಿ: ಭೌತ ವಿಜ್ಞಾನಿ ಸರ್ಜ್ ಹೊರಾಕೆ ಸಲಹೆ

Last Updated 6 ಜನವರಿ 2018, 13:26 IST
ಅಕ್ಷರ ಗಾತ್ರ

ಮಂಗಳೂರು: ‘ಮೂಲವಿಜ್ಞಾನವೇ ಎಲ್ಲ ಆವಿಷ್ಕಾರಗಳಿಗೆ ಬುನಾದಿಯಾಗಿದ್ದು, ಮೂಲವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಭೌತ ವಿಜ್ಞಾನಿ ಸರ್ಜ್ ಹೊರಾಕೆ ಹೇಳಿದರು.

ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ವಿಜ್ಞಾನ ಸಮ್ಮೇಳನದಲ್ಲಿ ಅವರು ಮಾತನಾಡಿದರು. ‘ಈಗ ಭಾರತವೂ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮೂಲವಿಜ್ಞಾನದತ್ತ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಅನೇಕ ಪ್ರತಿಭೆಗಳು ವಿಜ್ಞಾನದಿಂದ‌ ವಿಮುಖವಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ, ರಾಜಕಾರಣಿಗಳು ಗಮನ ನೀಡಬೇಕು’ ಎಂದು ಸಲಹೆ ನೀಡಿದರು.

‘ವಿಜ್ಞಾನವನ್ನು ಕೇವಲ ವೃತ್ತಿಯಾಗಿ ನೋಡಬಾರದು. ಅದೊಂದು ಆಸಕ್ತಿಯ ವಿಷಯ ಆಗಬೇಕು’ ಎಂದರು.

ನೊಬೆಲ್ ಪ್ರಶಸ್ತಿ ಪುರಸ್ಕೃತ ರಸಾಯನ ವಿಜ್ಞಾನಿ ಅಡಾ ಈ ಎನೋಥ್ ಮಾತನಾಡಿ, ‘ಭಾರತೀಯ ವಿಜ್ಞಾನಿಗಳಲ್ಲಿ ಅಪಾರ ಜ್ಞಾನವಿದೆ. ಇವರಲ್ಲಿ ಇರುವ ಸೌಜನ್ಯ, ಧೈರ್ಯ ಮೆಚ್ಚುವಂಥದ್ದು’ ಎಂದು ಹೇಳಿದರು.

‘ಜೀವಕೋಶಗಳ ಸಂಶೋಧನಾ ಕ್ಷೇತ್ರಕ್ಕೆ ಭಾರತೀಯ ವಿಜ್ಞಾನಿ ಜಿ.ಎನ್. ರಾಮಚಂದ್ರನ್ ಅವರ ಕೊಡುಗೆ ಅಪಾರವಾದುದು. ನನ್ನ ಪಿಎಚ್‌ಡಿ ಅಧ್ಯಯನಕ್ಕೆ ರಾಮಚಂದ್ರನ್ ಅವರ ಸಂಶೋಧನಾ ವರದಿ ಸಹಕಾರಿಯಾಯಿತು’ ಎಂದು ತಿಳಿಸಿದರು.

‘ಅಮೆರಿಕದಲ್ಲಿ‌ ನಡೆದ ವಿಜ್ಞಾನ ಕಾಂಗ್ರೆಸ್‌ನಲ್ಲಿ ನನ್ನ ವಾದಕ್ಕೆ ಮನ್ನಣೆ ನೀಡುವ ‌ಮೂಲಕ ರಾಮಚಂದ್ರನ್ ಅವರು ಹಿರಿಮೆಯನ್ನು ಮೆರೆದರು’ ಎಂದು ಸ್ಮರಿಸಿದರು.

‘ನಾನು ಭಾರತವನ್ನು ಪ್ರೀತಿಸುತ್ತೇನೆ. ಭಾರತೀಯ ದೇವಾಲಯಗಳು, ಬಾಲಿವುಡ್ ಸಿನಿಮಾಗಳು ನನಗೆ ಅಚ್ಚುಮೆಚ್ಚು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT