ಬುಧವಾರ, ಆಗಸ್ಟ್ 5, 2020
23 °C

ಬಣ್ಣದ ಡಬ್ಬಿ ಹೊತ್ತವ..!

ಅಣ್ಣಪ್ಪ ಅರಬಗಟ್ಟೆ Updated:

ಅಕ್ಷರ ಗಾತ್ರ : | |

ಬಣ್ಣದ ಡಬ್ಬಿ ಹೊತ್ತವ..!

ಗಾಢವಾಗಿ ಏಳುತಿರುವ

ಕಾರ್ಬನ್ನಿಗೆ ಸೋತ ಸೂರ್ಯ

ಗರ್ವಮುಖಿ ಕಟ್ಟಡಗಳ

ಬಾಯೊಳಗೆ ‘ಅಸ್ತಮಾ’ನವಾಗುತಿದ್ದ!?

ಆಕ್ಸೈಡುಗಳೂ ಆಕಳಿಸಿ

ನಿಶೆಗೆ ಜಾರುತಿದ್ದಂತೆ

ಬಣ್ಣದ ಡಬ್ಬಿ ಹೊತ್ತವ

ತನ್ನಾಟವ ಶುರು ಹಚ್ಚಿದ!

ದೊಡ್ಡಪೇಟೆಯೊಳಗೆ ಸತ್ತ

ಕರಿಹೆಬ್ಬಾವಂತೆ ಮಲಗಿತ್ತದು

ಚತುಷ್ಪಥ ಹೆದ್ದಾರಿ ‘ವಾಹಿನಿ’!?

ಅದರ ‘ವಿಭಜಕ’ಕಷ್ಟೇ ಬಣ್ಣ

ಬಳಿಯುವ ಕೆಲಸ ಇವನಿಗೆ!

‘ಮೊನ್ನೆ ತಾನೆ ಬಳಿದಿರುವಿಯಲ್ಲೋ

ಮಾರಾಯಾ! ಮತ್ತೇನಿವತ್ತು?’

‘ಮತ್ತೆ ಮತ್ತೆ ಬಳಿಯಬೇಕಂತೆ

ಬಣ್ಣವ, ಮೇಲಿಂದಿದೆ ತಾಕೀತು!’

‘ಬಣ್ಣವನ್ನಾದರೂ ಬದಲಿಸಬಾರದೆ

ಎಷ್ಟೊಂದಿವೆ! ಜಗದಲಿ!!’

‘ಕಾಮಾಲೆಗಣ್ಣು ಕತ್ತಲಭ್ರಮೆಗಿಂತ

ಬೇಕೆ ವಿಭಜಕಕ್ಕೆ? ನೀವೇ ಹೇಳಿ!’

‘ಏನೇ ಹೇಳಿ ಸ್ವಾಮಿ! ಹಿಂದೆಯೂ

ಇದ್ದವು ಕಡುಗಪ್ಪನೆಯ ದಾರಿ

ರಸ್ತೆಯ ಎರಡೂ ಬದಿಗೆ ಬೆಳಕನು ಸಾರಿ

ಮಧ್ಯ ಬೀದಿಯಲೂ ನಗೆ ಹೊಮ್ಮಿಸಿ

ಸೇರುತಿದ್ದೆವು ಮನೆಯ, ಕೈದೋರಿ!’

‘ಈಗೆಲ್ಲ ಅದಾಗದು ಬಿಡಿ

ಅಲ್ಲೇ ಬುಡದಲ್ಲಿದ್ದರೂ ಅವನಂಗಡಿ

ಇವನ ಮನೆ, ಅವರ ಕೋಣೆ

ಬರಲೇಬೇಕು ಸರ್ಕಲ್ಲಿಗೆ!

ವಿಭಜಕದ ಕೆನ್ನಾಲಿಗೆಗೆ!!

ಛೀ... ಥೂ..., ಬೇ... ಥೂ... ಬೈಗುಳ

ಅವಸರಕೆ ಬಿದ್ದ ಬೀದಿ ಜಗಳ!’

‘ಹತ್ತೋ ಹದಿನೈದೋ ಡಿಗ್ರಿ ತಿರುಗಿದ್ದರೆ

ಸಾಕಿತ್ತು, ಸಿಗುತಿತ್ತು ನಮ್ಮನೆ!

ಈಗದು ತೊಂಬತ್ತು ಡಿಗ್ರಿ! ಮೂಗಿನ ನೇರಕೆ!!

ಮುನ್ನೂರ ಅರವತ್ತು ಡಿಗ್ರಿ! ಯು ಟರ್ನ್ ದಾಳಕೆ!!

ಹೊಗೆಯುಗುಳಿ, ಚಕ್ರ ಕೆರೆದು ನಿಂತಿವೆ ಪ್ಯಾನಲ್ ಪಿತ್ತಕೆ!!!’

ವಿಭಜಕ ಹೆಡೆಯ ಮೇಲೊಂದು ದೀಪಗಂಬ

ಮತ್ತೆಮತ್ತೆ ನೋಡುತಿದ್ದರೂ ಮತ್ತದೇ ಬಿಂಬ!

‘ಹಳದಿಗತ್ತಲ ಕೆಂಡವ ಬಿಸುಟು ಶಾಂತಿಯ ಬಳಿಯಲೆ?’

ಮುಚ್ಚಳ ಮೀಟುತಿದ್ದಂತೆ ರಕ್ಕಸ ಬಾಯಿಂದುಗುಳಿದ

ಸೂರ್ಯ ನೆತ್ತಿ ಸುಡುತಿದ್ದ! ಮತ್ತೆ..!

ಡಬ್ಬಿ ಹೊತ್ತವ ಮರೆಯಾದ!?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.