ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಇಡಿ ಸ್ಫೋಟಕ್ಕೆ ನಾಲ್ವರು ಪೊಲೀಸರು ಬಲಿ

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಶ್ರೀನಗರ: ಉತ್ತರ ಕಾಶ್ಮೀರದ ಸೊಪೊರ್‌ ಪಟ್ಟಣದ ಮಾರುಕಟ್ಟೆಯಲ್ಲಿ ಉಗ್ರರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಮಗ್ರಿ (ಐಇಡಿ) ಸ್ಫೋಟಗೊಂಡು ನಾಲ್ವರು ಪೊಲೀಸರು ಮೃತಪಟ್ಟಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ಸೊಪೊರ್‌ನ ಛೋಟಾ ಬಜಾರ್‌ ಮತ್ತು ಬಡಾ ಬಜಾರ್‌ ನಡುವಣ ರಸ್ತೆಯ ಮಳಿಗೆಯೊಂದರಲ್ಲಿ ಸುಧಾರಿತ ಸ್ಫೋಟಕವನ್ನು ಹುದುಗಿಸಿಡಲಾಗಿತ್ತು.

ಮೃತಪಟ್ಟ ಸಿಬ್ಬಂದಿ ಭಾರತೀಯ ಮೀಸಲು ಪೊಲೀಸ್‌ ಪಡೆಯ 3ನೇ ಬೆಟಾಲಿಯನ್‌ಗೆ ಸೇರಿದವರಾಗಿದ್ದಾರೆ. ಮೃತಪಟ್ಟವರಲ್ಲಿ ಒಬ್ಬರು ಎಎಸ್‌ಐ. ಉಳಿದವರು ಕಾನ್‌ಸ್ಟೆಬಲ್‌ಗಳು.

2015ರ ನಂತರ ಕಾಶ್ಮೀರದಲ್ಲಿ ಸಂಭವಿಸಿದ ಮೊದಲ ಐಇಡಿ ಸ್ಫೋಟ ಇದಾಗಿದೆ. ‘ಪ್ರತ್ಯೇಕತಾವಾದಿಗಳು ಶನಿವಾರ ಕರೆ ಮುಷ್ಕರಕ್ಕೆ ಕರೆ ನೀಡಿದ್ದರು. ಪೊಲೀಸ್‌ ಸಿಬ್ಬಂದಿ ಮಾರುಕಟ್ಟೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಬಾಂಬ್‌ ಸ್ಫೋಟಿಸಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾಳಿ ಹೊಣೆಯನ್ನು ಜೈಷ್‌ –ಇ–ಮೊಹಮ್ಮದ್‌ (ಜೆಇಎಂ) ಸಂಘಟನೆ ಹೊತ್ತುಕೊಂಡಿದೆ. ಆದರೆ, ಸಂಘಟನೆಯ ಹೇಳಿಕೆಯನ್ನು ಪರಿಶೀಲಿಸಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಸ್ಫೋಟಗೊಂಡ ಸಂದರ್ಭದಲ್ಲಿ ಮಳಿಗೆಗಳೆಲ್ಲ ಮುಚ್ಚಿದ್ದವು. ಮುಷ್ಕರ ಇದ್ದುದರಿಂದ ರಸ್ತೆಗಳಲ್ಲಿ ವಾಹನ ಸಂಚಾರವೂ ಇರಲಿಲ್ಲ’ ಎಂದು ಎಡಿಜಿಪಿ ಮುನೀರ್‌ ಖಾನ್‌ ಹೇಳಿದ್ದಾರೆ.

ದೊಡ್ಡ ಐಇಡಿ: ‘ಮಳಿಗೆಯ ಮುಂಭಾಗ ಮಣ್ಣಿನಡಿ ಸ್ಫೋಟಕವನ್ನು ಹುದುಗಿಸಿಡಲಾಗಿತ್ತು. ಇದು ದೊಡ್ಡ ಐಇಡಿಯಾಗಿದ್ದು ಸ್ಫೋಟದಿಂದಾಗಿ ಅಲ್ಲಿ ದೊಡ್ಡ ಕುಳಿ ಉಂಟಾಗಿದೆ. ಆರರಿಂದ ಏಳು ಮಳಿಗೆಗಳು ಧ್ವಂಸಗೊಂಡಿವೆ’ ಎಂದು ಅವರು ಹೇಳಿದ್ದಾರೆ.

2 ವರ್ಷದ ಬಳಿಕ ಸುಧಾರಿತ ಸ್ಫೋಟಕ: ‘ಮಳಿಗೆಯ ಮುಂಭಾಗ ಮಣ್ಣಿನಡಿ ಸ್ಫೋಟಕವನ್ನು ಹುದುಗಿಸಿಡಲಾಗಿತ್ತು. ಇದು ದೊಡ್ಡ ಐಇಡಿಯಾಗಿದ್ದು ಸ್ಫೋಟದಿಂದಾಗಿ ಅಲ್ಲಿ ದೊಡ್ಡ ಕುಳಿ ಬಿದ್ದಿದೆ. ಆರರಿಂದ ಏಳು ಮಳಿಗೆ ಧ್ವಂಸಗೊಂಡಿವೆ’ ಎಂದು ಅವರು ಹೇಳಿದ್ದಾರೆ.

‘2015ರ ನಂತರ ಉಗ್ರರು ಐಇಡಿ ಬಳಸಿ ದಾಳಿ ನಡೆಸಿರಲಿಲ್ಲ. ಹೀಗಾಗಿ, ಭದ್ರತಾ ಪಡೆಗಳು ಈಗ ಇಂತಹ ದಾಳಿ ತಡೆಯಲು ಬೇರೆಯದೇ ಆದ ಕಾರ್ಯತಂತ್ರ ರೂಪಿಸಬೇಕಾಗಿದೆ’ ಎಂದು ಅವರು ಹೇಳಿದ್ದಾರೆ.

ಖಂಡನೆ: ಪೊಲೀಸರ ಹತ್ಯೆಯನ್ನು ಖಂಡಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಹಿಂಸಾಚಾರದ ಸುಳಿಯನ್ನು ಭೇದಿಸಲು ಜನರು ಹೆಗಲಿಗೆ ಹೆಗಲುಕೊಟ್ಟು ಶ್ರಮಿಸುವಂತೆ ಜನರಿಗೆ ಅವರು ಮನವಿ ಮಾಡಿದ್ದಾರೆ.

ಕಾಶ್ಮೀರದಲ್ಲಿ ಸಹಜ ಸ್ಥಿತಿ ಇದೆ ಎಂಬ ಮೆಹಬೂಬಾ ಸರ್ಕಾರದ ಬಡಾಯಿ ಹೇಳಿಕೆಯನ್ನು ಈ ಪ್ರಕರಣ ಬಯಲು ಮಾಡಿದೆ ಎಂದು ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ ಜಿ.ಎ. ಮಿರ್‌ ವ್ಯಂಗ್ಯವಾಡಿದ್ದಾರೆ.

‘ಭದ್ರತಾ ಸಿಬ್ಬಂದಿ ರಕ್ಷಣೆಗೆ ಕೇಂದ್ರ ವಿಫಲ’

ನವದೆಹಲಿ: ಪೊಲೀಸ್‌ ಸಿಬ್ಬಂದಿ ಮೇಲೆ ನಡೆದ ದಾಳಿ ಸಂಬಂಧ ಕಾಂಗ್ರೆಸ್‌, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಭಾರತ ಮತ್ತು ಪಾಕಿಸ್ತಾನಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ರಹಸ್ಯವಾಗಿ ಮಾತುಕತೆ ನಡೆಸಿರುವುದನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಆನಂದ ಶರ್ಮಾ, ದೇಶದ ರಕ್ಷಣಾ ಸಿಬ್ಬಂದಿಯನ್ನು ರಕ್ಷಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

‘ಸೇನೆ, ಅರೆಸೇನೆ ಮತ್ತು ಪೊಲೀಸ್‌ ಸಿಬ್ಬಂದಿ ಮೇಲೆ ದಾಳಿ ನಡೆಯದಿರುವ ದಿನವೇ ಇಲ್ಲ. ಸರ್ಕಾರ ಜಂಬ ಕೊಚ್ಚಿಕೊಳ್ಳುವ ಹೇಳಿಕೆ ನೀಡುವುದರಲ್ಲೇ ನಿರತವಾಗಿದೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

‘ಈ ಸರ್ಕಾರದ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಾಗಿದೆ’ ಎಂದು ಹೇಳಿರುವ ಅವರು, ‘ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮತ್ತು ಪಾಕಿಸ್ತಾನದ ಭದ್ರತಾ ಸಲಹೆಗಾರ ನಾಸಿರ್‌ಖಾನ್ ಜಂಜುವಾ ನಡುವಣ ಮಾತುಕತೆಯಲ್ಲಿ ಏನು ಚರ್ಚಿಸಲಾಗಿದೆ ಎಂಬುದರ ಬಗ್ಗೆ ನಮ್ಮನ್ನು ಕತ್ತಲೆಯಲ್ಲಿಡಲಾಗಿದೆ. ಈ ಹಿಂದೆಯೂ ಇಂತಹ ಸಭೆಗಳು ನಡೆದಿದ್ದವು. ಅವುಗಳ ಫಲಿತಾಂಶ ಏನು’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT