ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ: ಆರು ತಿಂಗಳು ಕಾಲಾವಕಾಶಕ್ಕೆ ಮನವಿ

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ನಿಗದಿಪಡಿಸಿರುವ ಕಾಲಾವಕಾಶವನ್ನು ಆರು ತಿಂಗಳು ವಿಸ್ತರಿಸುವಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಮನವಿ ಮಾಡಲು ತಜ್ಞರ ಸಮಿತಿ ನಿರ್ಧರಿಸಿದೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಅಧ್ಯಕ್ಷತೆಯಲ್ಲಿ ಏಳು ಸದಸ್ಯರ ತಜ್ಞರ ಸಮಿತಿಯನ್ನು ಇತ್ತೀಚೆಗೆ ರಚಿಸಿದ್ದ ಆಯೋಗ, ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಿತ್ತು.

ಸಮಿತಿಯ ಮೊದಲ ಸಭೆ ವಿಕಾಸಸೌಧದಲ್ಲಿ ಶನಿವಾರ ನಡೆಯಿತು. 45 ನಿಮಿಷ ನಡೆದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ನಾಗಮೋಹನದಾಸ್‌, ‘ಸಮಿತಿಗೆ ಬಹುದೊಡ್ಡ ಜವಾಬ್ದಾರಿ ಇದೆ. ಸ್ವತಂತ್ರ ಧರ್ಮದ ಬೇಡಿಕೆಯನ್ನು ವೈಜ್ಞಾನಿಕ, ಕಾನೂನಾತ್ಮಕವಾಗಿ ಅಧ್ಯಯನ ನಡೆಸಬೇಕಾಗಿದೆ. ಹೀಗಾಗಿ ಕಾಲಾವಕಾಶ ವಿಸ್ತರಿಸುವಂತೆ ಕೇಳಲು ತೀರ್ಮಾನಿಸಲಾಗಿದೆ. ಮಧ್ಯಂತರ ವರದಿ ನೀಡುವುದಿಲ್ಲ’ ಎಂದರು.

‘ಸಮಿತಿಯಲ್ಲಿ ಮಹಿಳಾ ಸದಸ್ಯರಿಲ್ಲ. ಮಹಿಳೆಯೊಬ್ಬರನ್ನು ಸದಸ್ಯರನ್ನಾಗಿ ನೇಮಿಸುವಂತೆ ಮನವಿ ಸಲ್ಲಿಸಲಾಗುವುದು. ಮುಂದಿನ ಸಭೆ ಇದೇ 25ರಂದು ನಡೆಯಲಿದೆ’ ಎಂದರು.

ಸ್ವತಂತ್ರ ಧರ್ಮದ ಬೇಡಿಕೆ ಸಂಬಂಧಿಸಿದಂತೆ 36 ಅಹವಾಲುಗಳು ಸರ್ಕಾರಕ್ಕೆ ಸಲ್ಲಿಕೆ ಆಗಿವೆ. ಮಠಾಧೀಶರು, ಮತ್ತು ಸಂಘ ಸಂಸ್ಥೆಗಳು ಮತ್ತು ವೈಯಕ್ತಿಕವಾಗಿ ಸಲ್ಲಿಕೆಯಾದ ಅಹವಾಲುಗಳು ಇದರಲ್ಲಿವೆ. ಇದೇ 25ರೊಳಗೆ ಸಾರ್ವಜನಿಕರೂ ದಾಖಲೆಗಳ ಸಮೇತ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಅವರು ತಿಳಿಸಿದರು.

‘ಅಹವಾಲುಗಳಿಗೆ ಸಂಬಂಧಿಸಿದಂತೆ ಮೌಖಿಕವಾಗಿ ಹೇಳಿಕೆಗೆ ಅವಕಾಶ ನೀಡಲಾಗುವುದು. ಸಮಿತಿಯ ಮುಂದಿನ ಸಭೆಯಲ್ಲಿ ಈ ಬಗ್ಗೆ ದಿನ ನಿಗದಿಪಡಿಸಲಾಗುವುದು. ಎಲ್ಲ ಅಹವಾಲುಗಳಿಗೆ ಸಮಾನ ಆದ್ಯತೆ ನೀಡುತ್ತೇವೆ. ಯಾವುದನ್ನೂ ಕಡೆಗಣಿಸುವುದಿಲ್ಲ’ ಎಂದೂ ವಿವರಿಸಿದರು.

‘ಸಮಿತಿಯಲ್ಲಿರುವವರು ಪೂರ್ವಗ್ರಹ ಪೀಡಿತ ಭಾವನೆ ಹೊಂದಿರುವವರು’ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ನಾಗಮೋಹನದಾಸ್‌, ‘ಪ್ರಕರಣ ನ್ಯಾಯಾಲಯದಲ್ಲಿದೆ. ಕೋರ್ಟ್ ವಿಚಾರಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಕೆಲವರು ಸ್ವತಂತ್ರ ಧರ್ಮದ ಬೇಡಿಕೆ ಮುಂದಿಟ್ಟಿದ್ದಾರೆ. ಇನ್ನೂ ಕೆಲವರು ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೋರಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ಸಮಿತಿ ವರದಿ ನೀಡಲಿದೆ’ ಎಂದರು.

ಅಹವಾಲುಗಳ ಪರಿಶೀಲನೆ ಹೊಣೆ

ವೀರಶೈವ ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಕುರಿತಂತೆ ಸಲ್ಲಿಕೆಯಾದ 36 ಅಹವಾಲುಗಳ ಪೈಕಿ 10 ವೀರಶೈವ ಪರ ಸಲ್ಲಿಕೆಯಾಗಿವೆ. ಶನಿವಾರ ನಡೆದ ಸಭೆಯಲ್ಲಿ ಒಟ್ಟು 18 ಮನವಿಗಳನ್ನು ಪರಿಶೀಲಿಸಲಾಯಿತು.

ಆದರೆ, ವೀರಶೈವ ಬಣದ ಪರವಾಗಿ ಸಲ್ಲಿಕೆಯಾಗಿರುವ ಮನವಿಗಳಲ್ಲಿ ತಮ್ಮ ವಾದವನ್ನು ಪುಷ್ಠೀಕರಿಸಲು ಪೂರಕವಾದ ದಾಖಲೆಗಳು ಇಲ್ಲ. ವೀರಶೈವ, ಲಿಂಗಾಯತ ಎರಡೂ ಒಂದೇ ಎಂದು ಸಲ್ಲಿಕೆಯಾಗಿರುವ ಅಹವಾಲುಗಳ ಸಮರ್ಥನೆಗೆ ಸಾಕ್ಷ್ಯಾಧಾರಗಳಿಲ್ಲ. ಆದರೆ, ಲಿಂಗಾಯತ ಧರ್ಮ ವೇದಿಕೆ ಸಲ್ಲಿಸಿದ ಮನವಿ ಜೊತೆ ಹಲವು ದಾಖಲೆಗಳನ್ನು ಸಲ್ಲಿಸಲಾಗಿದೆ.

ತಜ್ಞರ ಸಮಿತಿಯ ಸದಸ್ಯರಿಗೆ ಅಹವಾಲುಗಳನ್ನು ಪರಿಶೀಲಿಸಿ ಮುಂದಿನ ಸಭೆಯಲ್ಲಿ ವಿವರಿಸುವಂತೆ ಸೂಚಿಸಲಾಗಿದೆ. ಪುರುಷೋತ್ತಮ ಬಿಳಿಮಲೆ ಅವರು ಇತಿಹಾಸ ಮತ್ತು ಚಳವಳಿ, ದ್ವಾರಕನಾಥ ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನ, ರಾಮಕೃಷ್ಣ ಮರಾಠೆಗೆ ವೈದಿಕ ಸಂಸ್ಕೃತಿ, ಎಸ್.ಜಿ. ಸಿದ್ಧರಾಮಯ್ಯ ಮತ್ತು ಸರಜು ಕಾಟ್ಕರ್‌ ವೈದಿಕ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ, ಮುಂದಿನ ಸಭೆಯಲ್ಲಿ ಮಾಹಿತಿ ವಿನಿಮಯ ಮಾಡುವಂತೆ ಸೂಚಿಸಲಾಗಿದೆ.

ಪ್ರೊ. ಮುಜಾಪ್ಫರ್‌ ಅಸ್ಸಾದಿ ಗೈರು

ಪ್ರೊ. ಮುಜಾಪ್ಫರ್‌ ಅಸ್ಸಾದಿ ಹೊರತುಪಡಿಸಿ ಉಳಿದ ಆರೂ ಸದಸ್ಯರು ಇದ್ದರು. ಸಿ.ಎಸ್‌. ದ್ವಾರಕನಾಥ್, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ರಾಮಕೃಷ್ಣ ಮರಾಠೆ, ಪುರುಷೋತ್ತಮ ಬಿಳಿಮಲೆ, ಸರಜೂ ಕಾಟ್ಕರ್‌ ಸಭೆಯಲ್ಲಿದ್ದರು. ಬಾಂಗ್ಲಾದೇಶದ ಢಾಕಾದಲ್ಲಿ ಅತಿಥಿ ಉಪನ್ಯಾಸ ನೀಡುವ ಪೂರ್ವಯೋಜಿತ ಕಾರ್ಯಕ್ರಮ ಇದ್ದುದರಿಂದ ಅಸ್ಸಾದಿ ಸಭೆಗೆ ಗೈರಾದರು.

ಸಭೆ ನಡೆಸದಂತೆ ಮನವಿ

‘ಹೈಕೋರ್ಟ್ ವಿಭಾಗೀಯ ಪೀಠ ಸಮಿತಿ‌ಯ ಐವರು ಸದಸ್ಯರಿಗೆ ತುರ್ತು ನೋಟಿಸ್ ನೀಡಿದೆ. ಈ ಸದಸ್ಯರು ಪೂರ್ವಗ್ರಹ ಪೀಡಿತರಾಗಿದ್ದಾರೆ. ಹೀಗಾಗಿ ಸಭೆ ನಡೆಸಬಾರದು’ ಎಂದು ಅಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿಗೆ ಶಶಿಧರ್ ಶಾನುಭೋಗ್ ಮನವಿ ಸಲ್ಲಿಸಿದರು. ವಕೀಲ ಜಿ. ಆರ್. ಗುರುಮಠ್ ಇದ್ದರು.

 ಮುಖ್ಯಾಂಶಗಳು

* ಇದೇ 25ರಂದು ಮುಂದಿನ ಸಭೆ

* ಮಧ್ಯಂತರ ವರದಿ ಇಲ್ಲ

* ಮಹಿಳೆ ನೇಮಕಕ್ಕೆ ಮನವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT