ಶನಿವಾರ, ಜೂಲೈ 4, 2020
21 °C

ರಾಜ್ಯದಲ್ಲಿ ನಿತ್ಯ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ನಿತ್ಯ ಒಬ್ಬ ವಿದ್ಯಾರ್ಥಿ ಅತಿಯಾದ ಒತ್ತಡದಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಆಘಾತಕಾರಿ ಸಂಗತಿ ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ವರದಿಯಲ್ಲಿ ಬಯಲಾಗಿದೆ.

ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಕರ್ನಾಟಕ, ತೆಲಂಗಾಣ ಮತ್ತು ಕೇರಳ ಕ್ರಮವಾಗಿ ನಂತರದಸ್ಥಾನಗಳಲ್ಲಿವೆ.

ಸಚಿವಾಲಯದ ಅಂಕಿ–ಅಂಶದ ಪ್ರಕಾರ, 2016ರಲ್ಲಿ ರಾಜ್ಯದಲ್ಲಿ 540 ವಿದ್ಯಾರ್ಥಿಗಳು, ತಮಿಳುನಾಡಿನಲ್ಲಿ 981, ಆಂಧ್ರಪ್ರದೇಶದಲ್ಲಿ 295, ತೆಲಂಗಾಣದಲ್ಲಿ 349 ಮತ್ತು ಕೇರಳದಲ್ಲಿ 340 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

'ಸಾಮಾಜಿಕ ಪರಿಸ್ಥಿತಿ, ಮಾನಸಿಕ ಸ್ಥಿತಿಗತಿ, ಮಾದಕ ಮತ್ತು ಮದ್ಯ‍ವ್ಯಸನವು ವಿದ್ಯಾರ್ಥಿಗಳಲ್ಲಿ ಖಿನ್ನತೆ ಹೆಚ್ಚಾಗಲು ಕಾರಣವಾಗುತ್ತಿದೆ' ಎನ್ನುವುದು ತಜ್ಞರ ಅಭಿಪ್ರಾಯ.

‘ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳು ಮಕ್ಕಳಿಗೆ ‘ಅಗ್ನಿಪರೀಕ್ಷೆ’ ಕಾಲ. ಹೆಚ್ಚು ಅಂಕ ಗಳಿಸಬೇಕು ಎಂದು ಪೋಷಕರು ಮತ್ತು ಅಧ್ಯಾಪಕರು ಅವರ ಮೇಲೆ ಒತ್ತಡ ಹೇರುತ್ತಾರೆ. ವಿದ್ಯಾರ್ಥಿಗಳು ತಮ್ಮ ನೋವುಗಳನ್ನು ಯಾರೊಂದಿಗೂ ಹಂಚಿಕೊಳ್ಳಲಾಗದ ಸ್ಥಿತಿ ತಲುಪಿದ್ದಾರೆ. ಭಯ, ಆತಂಕ ಅವರನ್ನು ಆವರಿಸಿಕೊಳ್ಳುತ್ತಿದೆ. ಕೆಲವರು ಪರೀಕ್ಷೆ ಭಯದಲ್ಲೇ ಆತ್ಮಹತ್ಯೆ ಮಾಡಿಕೊಂಡರೆ, ಇನ್ನೂ ಕೆಲವರು ಫಲಿತಾಂಶ ಏನಾಗುತ್ತದೆಯೋ ಎನ್ನುವ ಅಳುಕಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ನಿದರ್ಶನಗಳಿವೆ’ ಎನ್ನುತ್ತಾರೆ ಮಕ್ಕಳ ಹಕ್ಕುಗಳ ಆಯೋಗದ ನಿರ್ದೇಶಕ ನಾಗಸಿಂಹ ಜಿ.ರಾವ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.