ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಥ ಪಂಥದ ಸಮಗ್ರ ಅಧ್ಯಯನ ನಡೆಯಲಿ

Last Updated 6 ಜನವರಿ 2018, 19:31 IST
ಅಕ್ಷರ ಗಾತ್ರ

ಬೆಂಗಳೂರು: ನಾಥ ಪಂಥದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕಾದ ಅಗತ್ಯ ಇದೆ. ಇದಕ್ಕಾಗಿ ಆದಿಚುಂಚನಗಿರಿ ಮಠದಿಂದ ಅಥವಾ ವಿಶ್ವವಿದ್ಯಾಲಯದ ವತಿಯಿಂದ ನಾಥ ಸಂಪ್ರದಾಯ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪದ್ಮಾಶೇಖರ್‌ ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಮಠದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಶಿವನ ಅಂಶವಾಗಿ ಹುಟ್ಟುವ ಭೈರವನೇ ನಾಥ ಸಂಪ್ರದಾಯದವರಿಗೆ ಆರಾಧಕ. ಇದನ್ನು ಶೈವ ಸಂಪ್ರದಾಯದ ಒಂದು ಕವಲು ಎಂದು ಭಾವಿಸುತ್ತೇವೆ. ನಾ ಎಂದರೆ ಅನಾದಿ ಭೂತ, ಥ ಎಂದರೆ ಮೂರು ಲೋಕದ ಸ್ಥಿತಿಗೆ ಕಾರಣರಾದ ಶಿವ ಎಂದರ್ಥ. ಅದರ ಪ್ರಕಾರ ಶಿವ ಈ ಸಂಪ್ರದಾಯದ ಮೂಲ ಪುರುಷ ಎನ್ನಬಹುದು ಎಂದು ಹೇಳಿದರು.

ಚಾರಿತ್ರಿಕವಾಗಿ ಈ ಸಂಪ್ರದಾಯದ ಮೂಲಪುರುಷ ಗೋರಖನಾಥ. ಅವರ ಕಾಲಘಟ್ಟದಲ್ಲಿಯೇ ಈ ಸಂಪ್ರದಾಯವು ಸಮಗ್ರ ಸ್ವರೂಪದಲ್ಲಿ ಕಾಣಿಸಿಕೊಂಡದ್ದು‌. ಅವರಿಗೆ ಸಂಬಂಧ ಪಟ್ಟ ದೇವಾಲಯಗಳು ಹಾಗೂ ಗುಹಾಂತರ ದೇವಾಲಯಗಳು ಹೆಚ್ಚಾಗಿ ಉತ್ತರ ಭಾರತದಲ್ಲಿವೆ ಎಂದು ವಿವರಿಸಿದರು.

ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿಯೇ ಶಿವನ ಆರಾಧನೆ ನಡೆಯುತ್ತಿದ್ದ ಬಗ್ಗೆ ಪುರಾವೆಗಳು ಲಭ್ಯ. ಗಂಗರ ಕಾಲದ ದೇವಾಲಯಗಳ ಗರ್ಭಗುಡಿಯಲ್ಲಿ ಭೈರವ ಪ್ರತಿಷ್ಠಾಪನೆಗೊಂಡಿದ್ದ. ಶಿವನ ಆರಾಧನೆ ಎಷ್ಟು ಪ್ರಾಚೀನವೋ ಭೈರವನ ಆರಾಧನೆಯೂ ಅಷ್ಟೇ ಪ್ರಾಚೀನ. ನಾಥ ಪಂಥಕ್ಕೂ ಅಷ್ಟೇ ಪ್ರಾಚೀನತೆ ಇದೆ ಎಂದರು.

ಅಧ್ಯಯನಕ್ಕೆ ನೆರವು: ‘ನಾಥ ಸಂಪ್ರದಾಯದ ಇತಿಹಾಸದ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕಿದೆ. ಇದಕ್ಕೆ ಮಠದಿಂದ ಪ್ರೋತ್ಸಾಹ ನೀಡುತ್ತೇವೆ’ ಎಂದು ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

‘ಗೋರಖನಾಥ ಅವರ ಹೆಸರನ್ನು ಬೇರೆಯವರ ಜತೆ ಹೋಲಿಕೆ ಮಾಡುವುದರಿಂದ ಈ ಸಂಪ್ರದಾಯ ಉಗಮದ ಕಾಲಘಟ್ಟವನ್ನು ನಿರ್ಧರಿಸಲು ಆಗುವುದಿಲ್ಲ. ಒಂದು ವೇಳೆ ಆ ರೀತಿ ಮಾಡಿದ್ದೆ ಆದಲ್ಲಿ ನಾವು ಸತ್ಯಶೋಧನೆಯಲ್ಲಿ ದಾರಿ ತಪ್ಪಿದಂತಾಗುತ್ತದೆ. ನಮ್ಮ ಸಂಪ್ರದಾಯದ ಬಗ್ಗೆ ಪ್ರಚಾರ ಮಾಡುತ್ತಾ, ನಮ್ಮ ಬಗ್ಗೆ ವೈಭವಿಕರಿಸಿಕೊಳ್ಳದೆ ಸತ್ಯ ಶೋಧನೆ ಮಾಡಿ ಜಗತ್ತಿಗೆ ತಿಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT