ಶನಿವಾರ, ಜೂಲೈ 4, 2020
21 °C

ಧರ್ಮಗಳ ಮಧ್ಯೆ ಬೆಂಕಿಹಚ್ಚುವುದೇ ಬಿಜೆಪಿ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧರ್ಮಗಳ ಮಧ್ಯೆ ಬೆಂಕಿಹಚ್ಚುವುದೇ ಬಿಜೆಪಿ ಕೆಲಸ

ಶಿವಮೊಗ್ಗ/ಸಾಗರ: ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಮೂಲಕ ಸಮಾಜದ ಸಾಮರಸ್ಯ ಹಾಳು ಮಾಡಿ, ರಾಜಕೀಯ ಲಾಭ ಮಾಡಿಕೊಳ್ಳುವುದು ಬಿಜೆಪಿ ರಹಸ್ಯ ಕಾರ್ಯಸೂಚಿ. ಬೆಂಕಿ ಹಚ್ಚುವುದೇ ಅವರ ಸಿದ್ಧಾಂತ. ಆ ಪಕ್ಷಕ್ಕೆ ಮಾನವೀಯತೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಸಾಗರದ ಇಂದಿರಾ ಗಾಂಧಿ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಹಕ್ಕುಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಪ್ರತಿಯೊಬ್ಬರ ಜೀವವೂ ಅಮೂಲ್ಯ. ಯಾವುದೇ ಜಾತಿ, ಧರ್ಮದವರು ಅಸಹಜವಾಗಿ ಮೃತರಾದರೆ ದುಃಖವಾಗುತ್ತದೆ. ಆದರೆ, ಬಿಜೆಪಿ ಮುಖಂಡರು ಸಾವಿನ ಮನೆಯಲ್ಲೂ ರಾಜಕಾರಣ ಮಾಡುತ್ತಾರೆ. ಮರಣೋತ್ತರ ಪರೀಕ್ಷಾ ವರದಿ ಬರುವ ಮುನ್ನವೇ ಇಂಥವರೇ ಕೊಲೆ ಮಾಡಿದ್ದಾರೆ ಎಂದು ವ್ಯವಸ್ಥಿತವಾಗಿ ಗೂಬೆ ಕೂರಿಸುತ್ತಾರೆ. ಹೆಣದ ಮೇಲೆ ರಾಜಕೀಯ ಮಾಡುತ್ತಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದ ಕಾರಣ ಎರಡು ವರ್ಷ ಭೀಕರ ಬರಗಾಲ ಉದ್ದರೂ ಬಡವರು, ಕೂಲಿ ಕಾರ್ಮಿಕರು ಗುಳೆ ಹೋಗುವುದು ತಪ್ಪಿದೆ. ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಬಡವರ ಪರ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಿಲ್ಲ. ಹಿಂದುತ್ವ ಬಿಟ್ಟರೆ ಅವರಿಗೆ ಬೇರೆ ಬಂಡವಾಳವೇ ಇಲ್ಲ ಎಂದು ಕುಟುಕಿದರು.

‘ರಾಜ್ಯದ ಸಹಕಾರ ಸಂಘಗಳಲ್ಲಿ ₹ 10,730 ಕೋಟಿ ರೈತರ ಸಾಲವಿದೆ. ನಮ್ಮ ಸರ್ಕಾರ 50 ಸಾವಿರದವರೆಗಿನ ರೈತರ ಸಾಲ ಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಸಾಲ ₹ 42 ಸಾವಿರ ಕೋಟಿ ಇದೆ. ಇದನ್ನು ಮನ್ನಾ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ರಾಜ್ಯದಿಂದ ಸರ್ವಪಕ್ಷ ನಿಯೋಗ ತೆರಳಿತ್ತು. ಆದರೆ, ರಾಜ್ಯದ ಬಿಜೆಪಿ ಮುಖಂಡರು ಮೋದಿ ಎದುರು ತುಟಿ ಬಿಚ್ಚಲಿಲ್ಲ. ಹಾಗಾಗಿ, ರೈತರ ಸಾಲ ಮನ್ನಾ ಆಗಿಲ್ಲ’ ಎಂದು ಆರೋಪಿಸಿದರು.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ‘ಉಳುವವನೇ ಹೊಲದೊಡೆಯ’ ಎಂಬ ಐತಿಹಾಸಿಕ ಕಾನೂನು ಜಾರಿಗೆ ತಂದಿದ್ದರು. ನಮ್ಮ ಸರ್ಕಾರ ‘ವಾಸಿಸುವವನೆ ಮನೆಯೊಡೆಯ’ ಎಂಬ ಕ್ರಾಂತಿಕಾರಕ ಕಾಯ್ದೆ ಜಾರಿಗೊಳಿಸಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಇಂತಹ ಒಂದು ಜನಪರ ಕಾಯ್ದೆ ರೂಪಿಸಿದ ಉದಾಹರಣೆ ಇದೆಯಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹ 21 ಸಾವಿರ ಕೋಟಿ ಮಾತ್ರ ಖರ್ಚು ಮಾಡಿತ್ತು. ಕಾಂಗ್ರೆಸ್‌ ಸರ್ಕಾರ ₹ 86 ಸಾವಿರ ಕೋಟಿ ಖರ್ಚು ಮಾಡಿದೆ. ಅಧಿಕಾರದಲ್ಲಿದ್ದಾಗ ದಲಿತರ ಏಳಿಗೆಗೆ ಕೆಲಸ ಮಾಡದ ಬಿಜೆಪಿ ಮುಖಂಡರು ಈಗ ಬರಲಿರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ದಲಿತರ ಕೇರಿಗಳಿಗೆ ಭೇಟಿ ನೀಡುವ ನಾಟಕವಾಡುತ್ತಿದ್ದಾರೆ. ಹೋಟೆಲ್‌ಗಳಿಂದ ಇಡ್ಲಿ, ದೋಸೆ ತಂದು ತಿನ್ನುತ್ತಿದ್ದಾರೆ ಎಂದು ಛೇಡಿಸಿದರು.

2014ನೇ ಸಾಲಿನಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 110 ಡಾಲರ್‌ ಇತ್ತು. ಈಗ ಅದರ ಬೆಲೆ 43 ಡಾಲರ್‌ಗೆ ಇಳಿದಿದೆ. ₹ 25ಕ್ಕೆ ಒಂದು ಲೀ. ಪೆಟ್ರೋಲ್‌ ನೀಡಬಹುದಿತ್ತು. ತೈಲ ಬೆಲೆ ಇಳಿಕೆಯಿಂದ ₹ 3.50 ಲಕ್ಷ ಕೋಟಿ ಆದಾಯ ಕೇಂದ್ರ ಸರ್ಕಾರಕ್ಕೆ ಸಂದಾಯವಾಗಿದೆ. ಆದರೆ, ಅದರ ಪ್ರಯೋಜನ ಜನರಿಗೆ ದೊರಕಿಲ್ಲ ಎಂದು ಟೀಕಿಸಿದರು.

ಮೋದಿ ಜಾದು ನಡೆಯುವುದಿಲ್ಲ: ರಾಜ್ಯದ ಯಾವುದೇ ಭಾಗದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಚುನಾವಣೆ ಹೊತ್ತಿಗೆ ನರೇಂದ್ರ ಮೋದಿ ಬಂದು ಜಾದೂ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ರಾಜ್ಯದ ಬಿಜೆಪಿ ಮುಖಂಡರು ಇದ್ದಾರೆ. ಆದರೆ, ಕರ್ನಾಟಕ ಬಸವಣ್ಣ, ಕನಕದಾಸ, ಸೂಫಿ ಸಂತ, ಕುವೆಂಪು ಹುಟ್ಟಿದ ನಾಡು. ಇಲ್ಲಿ ಮೋದಿಯ ಜಾದೂ ನಡೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ‘ಕಂದಾಯ ಹಾಗೂ ಅರಣ್ಯ ಭೂಮಿಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಕಾನೂನಿನಲ್ಲಿ ಅವಕಾಶವಿದ್ದರೂ, ಅಧಿಕಾರಿಗಳಿಗೆ ಈ ಬಗ್ಗೆ ಇನ್ನೂ ಬೆಳಕು ಹರಿದಿಲ್ಲ. ಹಕ್ಕುಪತ್ರ ನೀಡಲು ಸಾಧ್ಯವೇ ಇಲ್ಲ ಎಂಬ ಮಾತು ಸುಳ್ಳು ಮಾಡಲು ಈ ದಿನ ಅರಣ್ಯ ಭೂಮಿಯ ಹಕ್ಕುಪತ್ರ ವಿತರಿಸಲಾಗುತ್ತಿದೆ’ ಎಂದರು.

‘ಸರ್ಕಾರದ ಅನುಮತಿ ಇಲ್ಲದೆ ಸರ್ಕಾರದ ಭೂಮಿ ಸಾಗುವಳಿ ಮಾಡಿದರೆ, ಮನೆ ಕಟ್ಟಿದರೆ ಒಂದು ವರ್ಷ ಜೈಲು ಶಿಕ್ಷೆ, ₹ 3 ಸಾವಿರ ದಂಡ ವಿಧಿಸುವ ಕಾಯ್ದೆ ಹಿಂದಿನ ಬಿಜೆಪಿ ಸರ್ಕಾರ ರೂಪಿಸಿದೆ. ಈ ಕಾಯ್ದೆಯ ಕತ್ತಿ ಬಗರ್‌ಹುಕುಂ ರೈತರ ತಲೆಯ ಮೇಲೆ ತೂಗುತ್ತಲೇ ಇದೆ. ಅದನ್ನು ತಪ್ಪಿಸಲು ಸಾಗುವಳಿ ಪತ್ರ ನೀಡಲು ನಮ್ಮ ಸರ್ಕಾರ ಹರಸಾಹಸ ಮಾಡುತ್ತಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಆರ್‌. ಪ್ರಸನ್ನಕುಮಾರ್‌, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಎಚ್‌.ಕೆ. ಪರಶುರಾಮ್‌, ನಗರಸಭೆ ಅಧ್ಯಕ್ಷೆ ಬೀಬಿ ಫಸಿಯಾ, ಉಪಾಧ್ಯಕ್ಷೆ ಸರಸ್ವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್‌ ಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಲಗೋಡು ರತ್ನಾಕರ, ಅನಿತಾಕುಮಾರಿ, ಕಾಗೋಡು ಅಣ್ಣಪ್ಪ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್‌. ಜಯಂತ್‌, ನಗರ ಆಶ್ರಯ ಸಮಿತಿ ಅಧ್ಯಕ್ಷ ಮಕ್ಬುಲ್‌ ಅಹಮದ್, ಎಪಿಎಂಸಿ ಅಧ್ಯಕ್ಷ ಕೆ. ಹೊಳಿಯಪ್ಪ, ಎಲ್‌.ಟಿ. ತಿಮ್ಮಪ್ಪ ಉಪಸ್ಥಿತರಿದ್ದರು.

ಕಾಗೋಡು ನಿಂತರೆ ಅವರಿಗೇ ಟಿಕೆಟ್‌

ಕಾಗೋಡು ತಿಮ್ಮಪ್ಪ ಅವರು ಮುಂದಿನ ಚುನಾವಣೆಯಲ್ಲಿ ನಿಲ್ಲುತ್ತೇನೆ ಎಂದರೆ ಅವರಿಗೇ ಪಕ್ಷ ಟಿಕೆಟ್‌ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಮುಖ್ಯಮಂತ್ರಿ ಭಾಷಣ ಮುಕ್ತಾಯ ಮಾಡುವಾಗ ಕಾಗೋಡು ತಿಮ್ಮಪ್ಪ ಅವರಿಗೆ ಮತ್ತೆ ಟಿಕೆಟ್‌ ನೀಡಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಒತ್ತಾಯಿಸಿದರು. ಆ ಮಾತಿಗೆ ಸಿಎಂ ಪ್ರತಿಕ್ರಿಯಿಸಿದರು.

ಮೋದಿ ಮೂಗು ಹಿಡಿಯಲಿ

‘ರೈತರ ಸಾಲ ಮನ್ನಾ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇನೆ ಎಂದು ಯಡಿಯೂರಪ್ಪ ಅಬ್ಬರಿಸಿದ್ದರು. ಸಹಕಾರ ಸಂಘಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಿ ತೋರಿಸಿದ್ದೇನೆ. ಈಗ ಯಡಿಯೂರಪ್ಪ ಪ್ರಧಾನಿ ಮೋದಿ ಮೂಗು ಹಿಡಿದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸಲಿ. ಅದು ಬಿಟ್ಟು ನನ್ನ ಮುಂದೆ ಉತ್ತರನ ಪೌರುಷ ತೋರುವುದು ಬೇಡ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಸೈಕಲ್‌, ಸೀರೆ ಬಿಟ್ಟರೆ ಜೈಲು!

ಸೈಕಲ್‌, ಸೀರೆ ವಿತರಿಸಿದ್ದು ಬಿಟ್ಟರೆ ಜೈಲಿಗೆ ಹೋಗಿದ್ದೇ ರಾಜ್ಯದ ಬಿಜೆಪಿ ಮುಖಂಡರ ಸಾಧನೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಕೂಡ ಜೈಲಿಗೆ ಹೋಗಿ ಬಂದವರೆ. ಅವರು ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಪಕ್ಕದಲ್ಲಿ ಕೂರಿಸಿಕೊಂಡು ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಸರ್ಕಾರ ಎಂದು ಹೇಳುವುದು ಎಂತಹ ವಿಪರ್ಯಾಸ ಎಂದರು.

ಸಾತ್ವಿಕ ಸಿಟ್ಟು

ಹೋರಾಟದ ಹಿನ್ನೆಲೆಯಿಂದ ಬಂದ ರಾಜಕಾರಣಿಗಳಿಗೆ ಸಹಜವಾಗಿ ಸ್ವಲ್ಪ ಸಿಟ್ಟು ಜಾಸ್ತಿ ಇರುತ್ತದೆ. ಕಾಗೋಡು ತಿಮ್ಮಪ್ಪ ಅವರಿಗೂ ಬಡವರ ಕೆಲಸ ಆಗದೆ ಇದ್ದರೆ ವಿಪರೀತ ಸಿಟ್ಟು ಬರುತ್ತದೆ. ಅದನ್ನು ಅವರು ಬಚ್ಚಿಟ್ಟುಕೊಳ್ಳದೆ ಯಾರ ಮೇಲೆ ಪ್ರದರ್ಶನ ಮಾಡಬೇಕೋ ಅವರ ಮೇಲೆ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.