ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಯೋಜನೆ ಹೈಜಾಕ್ : ಆರೋಪ

Last Updated 7 ಜನವರಿ 2018, 9:07 IST
ಅಕ್ಷರ ಗಾತ್ರ

ಬಾಳೆಹೊನ್ನೂರು : ‘ಕಾಂಗ್ರೆಸ್ ಮುಖಂಡರು ಸರ್ಕಾರದ ಮೇಲೆ ಒತ್ತಡ ಹೇರಿ ಮಂಜೂರಾತಿ ಪಡೆದ ಅಭಿವೃದ್ಧಿ ಕಾಮಗಾರಿಗಳನ್ನು ಬಿಜೆಪಿ ಕಾರ್ಯಕರ್ತರು ಶಾಸಕರ ಪ್ರಯತ್ನದಿಂದ ಅನುಮೋದನೆ ಪಡೆದು ಅಭಿವೃದ್ಧಿ ಮಾಡಲಾಗಿದೆ ಎಂದು ಸುಳ್ಳು ಹೇಳುವ ಮೂಲಕ ಹೈಜಾಕ್ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್ ಆರೋಪಿಸಿದರು.

‘ಈ ಹಿಂದೆ ಖಾಂಡ್ಯ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದಾಗ ಹಲವು ಸಮಸ್ಯೆಗಳ ಬಗ್ಗೆ ಸ್ಥಳೀಯರು ಗಮನ ಸೆಳೆದಿದ್ದರು. ಸಚಿವರೊಂದಿಗೆ ಸಮನ್ವಯತೆ ಸಾಧಿಸಿ ₹8 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಮಂಜೂರಾತಿ ಪಡೆಯಲಾಗಿದೆ’ ಎಂದರು.

ಚಿಕ್ಕಮಗಳೂರು ತಾಲ್ಲೂಕಿನ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಸರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಸೇಹಳ್ಳಿಯಿಂದ ತುಂಬಹಳ್ಳಿಪುರದವರೆಗಿನ 2 ಕಿಮೀ ರಸ್ತೆಗೆ ಎರಡು ಬಾರಿ ಹಣ ಬಿಡುಗಡೆಯಾಗಿದ್ದರೂ ಅದನ್ನು ಶಾಸಕ ಸಿ.ಟಿ.ರವಿಯವರು ಸಖರಾಯಪಟ್ಟಣ ಭಾಗಕ್ಕೆ ವರ್ಗಾವಣೆ ಮಾಡಿದ್ದಾರೆ. ಈ ಬಾರಿ ಈ ರಸ್ತೆ ಅಭಿವೃದ್ಧಿಪಡಿಸುವಂತೆ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಪರಮೇಶ್ವರ ಅವರಲ್ಲಿ ಮನವಿ ಮಾಡಿದ್ದರಿಂದ ₹1.35ಕೋಟಿ ಮಂಜೂರು ಮಾಡಿದ್ದಾರೆ. ಕಣತಿ ರಸ್ತೆಯಿಂದ ಬೆಟ್ಟದಮರಡಿ ಊರೊಳಗಿನ 3ಕಿಮೀ ರಸ್ತೆಗೆ ₹1.50ಕೋಟಿ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಿಕ್ಕರಣೆಯಿಂದ ಊರೊಳಗಿನ 3ಕಿಮೀ ರಸ್ತೆ ಅಭಿವೃದ್ದಿಗೆ ₹1.60 ಕೋಟಿ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ’ ಎಂದರು.

ಸಂಗಮೇಶ್ವರ ಪೇಟೆಯ ಗಣಪತಿ ಕಟ್ಟೆ ಬಳಿ ಬಯಲು ರಂಗ ನಿರ್ಮಾಣ ಮಾಡಲು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ ₹15 ಲಕ್ಷ ಬಿಡುಗಡೆ ಮಾಡಿದ್ದಾರೆ. ಕಾಡಬೈಲು–ಹ್ಯಾರಂಬಿ ನಡುವೆ ಪಿಕಪ್ ನಿರ್ಮಾಣಕ್ಕೆ ₹60 ಲಕ್ಷ, ದೊಡ್ಡಮಾಗರಹಳ್ಳಿ –ಬೀರಂಜಿ ಹಳ್ಳದ ಪಕ್ಕದ ಗದ್ದೆಯಲ್ಲಿ ಚಾನೆಲ್ ನಿರ್ಮಾಣಕ್ಕೆ ಎರಡು ಕೋಟಿ ಬಿಡುಗಡೆಯಾಗಿದ್ದು, ಒಟ್ಟಾರೆ ಸುಮಾರು ₹10 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು’ ಎಂದರು.

‘ಕಾಂಗ್ರೆಸ್ ಮುಖಂಡರು ಸತತ ಪ್ರಯತ್ನಪಟ್ಟು ಸಚಿವರ ಮೇಲೆ ಒತ್ತಡ ಹೇರಿ ಮಂಜೂರಾತಿ ಪಡೆದ ಕಾಮಗಾರಿಗಳನ್ನು ಶಾಸಕರ ಬೆಂಬಲಿಗರು ತಮ್ಮ ಕಡೆಯಿಂದ ಮಂಜೂರಾಗಿದ್ದೆಂದು ಹೈಜಾಕ್ ಮಾಡುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸುತ್ತಿದ್ದು ಅದನ್ನು ನಿಲ್ಲಿಸುವಂತೆ’ ಮನವಿ ಮಾಡಿದರು. ಎಸ್.ಜೆ.ಜಯಶೀಲ, ಮಸೀಗದ್ದೆ ಸತೀಶ್, ದಾನಿಹಳ್ಳಿ ಮಂಜುನಾಥ್, ಪಿಎಸಿಎಸ್ ಅಧ್ಯಕ್ಷ ಕೆ.ಎಲ್.ಚಂದ್ರಶೇಖರ್ ,ಕೆ.ಎಂ.ಸುರೇಶ್, ಕೆ.ಎಸ್.ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT