ಮೂರು ತಾಲ್ಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರ

7

ಮೂರು ತಾಲ್ಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರ

Published:
Updated:
ಮೂರು ತಾಲ್ಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಹೆಚ್ಚು ರಾಗಿ ಬೆಳೆಯುವ ಪ್ರದೇಶಗಳಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲು ಸರ್ಕಾರ ಆದೇಶಿಸಿದ್ದು, ಶೀಘ್ರ ಕೇಂದ್ರ ತೆರೆಯುವ ಪ್ರಕ್ರಿಯೆ ಆರಂಭವಾಗಲಿದೆ.

‘ರಾಗಿ ಹೆಚ್ಚಾಗಿ ಬೆಳೆಯುವ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲು ತೀರ್ಮಾನಿಸಲಾಗಿದೆ. ಈ ಸಂಬಂಧ ಸರ್ಕಾರದಿಂದ ಆದೇಶ ಬಂದಿದೆ. ಟಾಸ್ಕ್ ಫೋರ್ಸ್‌ ಸಮಿತಿ ರಚನೆಯಾಗಿ ಸಭೆ ಕೂಡ ನಡೆದಿದೆ. ನಾಲ್ಕೈದು ದಿನಗಳಲ್ಲಿ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಧುಸೂದನ್ 'ಪ್ರಜಾವಾಣಿ'ಗೆ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 5,0451 ಹೆಕ್ಟೇರ್ ನಲ್ಲಿ ರಾಗಿ ಬಿತ್ತನೆಯಾಗಿದೆ. ಹೊಳಲ್ಕೆರೆ ಮತ್ತು ಹೊಸದುರ್ಗದಲ್ಲಿ ಹೆಚ್ಚು ಬಿತ್ತನೆಯಾಗಿದೆ. ನಂತರದ ಸ್ಥಾನದಲ್ಲಿ ಚಿತ್ರದುರ್ಗ ಮತ್ತು ಹಿರಿಯೂರು ಇದೆ. ಒಂದು ಲಕ್ಷ ಕ್ವಿಂಟಲ್ ನಷ್ಟು ರಾಗಿ ಉತ್ಪಾದನೆಯಾಗಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದು, ಕೆಲವು ಕಡೆ ತಡವಾಗಿ ಮಳೆ ಸುರಿದಿದ್ದರಿಂದ ಫಸಲು ಉತ್ತಮವಾಗಿ ಬರಲು ಕಾರಣವಾಗಿದೆ.

ಆದರೆ, ಫಸಲು ಉತ್ತಮವಾಗಿದ್ದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯದ ಹಿನ್ನೆಲೆಯಲ್ಲಿ ಖರೀದಿ ಕೇಂದ್ರ ತೆರೆದು, ಬೆಂಬಲ ಬೆಲೆ ನೀಡಿ ಖರೀದಿಸಬೇಕು ಎಂದು ರೈತರು ಒತ್ತಾಯಿಸಿದ್ದರು. ರೈತರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಬೆಂಬಲ ಬೆಲೆ ನೀಡಿ ರಾಗಿ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ.

'ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆಯಲು ಸರ್ಕಾರದಿಂದ ಆದೇಶ ಬಂದಿದೆ. ಸಿಬ್ಬಂದಿಯನ್ನು ತರಬೇತಿಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಇನ್ನೊಂದೆರಡು ದಿನಗಳಲ್ಲಿ ಬೆಂಬಲ ಬೆಲೆ ನಿಗದಿ, ಖರೀದಿ ವಿಧಾನ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದೆ' ಎಂದು ಮಧುಸೂದನ್ ವಿವರಿಸಿದರು. ಮಾರುಕಟ್ಟೆಯಲ್ಲಿ ಕ್ವಿಂಟಲ್ ರಾಗಿ ಖರೀದಿಗೆ ₹ 1400 ಬೆಲೆ ಇದೆ. ಸರ್ಕಾರ ಅದಕ್ಕಿಂತ ಹೆಚ್ಚು ಬೆಲೆ ನಿಗದಿ ಪಡಿಸಿ ಖರೀದಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

‘ಕ್ವಿಂಟಲ್ ರಾಗಿಗೆ ₹2,500 ಬೇಕೇ ಬೇಕು’

ಒಂದು ಎಕರೆಗೆ 8 ರಿಂದ 10 ಕ್ವಿಂಟಲ್ ಇಳುವರಿ ಇದೆ. ಎಕರೆ ರಾಗಿ ಬೆಳೆಯಲು ₹ 10 ಸಾವಿರ ರಿಂದ ₹ 12 ಸಾವಿರ ಖರ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್ ರಾಗಿಗೆ ₹ 2,100 ರೂಪಾಯಿ ಬೆಲೆ ಇದೆ. ಕನಿಷ್ಠ ₹ 2,500 ಬೆಲೆಯಾದರೂ ನಿಗದಿಯಾಗಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನುಲೇನೂರು ಶಂಕರಪ್ಪ ಒತ್ತಾಯಿಸುತ್ತಾರೆ.

* * 

ಜಿಲ್ಲೆಯಲ್ಲಿ 99 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದೆ. ಸರ್ಕಾರ ತುರ್ತಾಗಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು.

ಓಬಯ್ಯ, ಮೆಕ್ಕೆಜೋಳ ಬೆಳೆಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry