ಗುರುವಾರ , ಆಗಸ್ಟ್ 13, 2020
27 °C

ಮುಖ್ಯಮಂತ್ರಿ ಸ್ಥಾನದಲ್ಲಿ ಏಕಿರಬೇಕು?: ರಮೇಶ ಜಿಗಜಿಣಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಸ್ಥಾನದಲ್ಲಿ ಏಕಿರಬೇಕು?: ರಮೇಶ ಜಿಗಜಿಣಗಿ

ಹೊಸಪೇಟೆ: ರಾಜ್ಯದಲ್ಲಿನ ಅಪರಾಧ ಚಟುವಟಿಕೆಗಳನ್ನು ತಡೆಯಲು ಆಗದಿದ್ದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಏಕಿರಬೇಕು ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಪ್ರಶ್ನಿಸಿದರು.

ಏನೇನೋ ಕಥೆಗಳನ್ನು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ಮುಖ್ಯಮಂತ್ರಿ ಈ ಬಗ್ಗೆ ನಿಗಾ ವಹಿಸಬೇಕು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಮಂಗಳೂರಿನಲ್ಲಿ ಇನ್ನೆಷ್ಟು ಕೊಲೆಗಳಾಗಬೇಕು? ಅವುಗಳನ್ನು ತಡೆಯಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಈ ಆಡಳಿತ ವೈಖರಿಯಿಂದ ಜನ ಬೇಸತ್ತಿದ್ದಾರೆ’ ಎಂದರು.

ಶಾಸಕ ಆನಂದ್‌ಸಿಂಗ್‌ ಬಿಜೆಪಿ ಪರಿವರ್ತನಾ ಯಾತ್ರೆಯ ಕಾರ್ಯಕ್ರಮಕ್ಕೆ ಗೈರಾಗಿದ್ದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷದ ಆಧಾರ ಮುಖ್ಯ. ಅದರ ಹೆಸರಿನಲ್ಲಿಯೇ ನಾವೆಲ್ಲ ಗೆದ್ದು ಬರುತ್ತೇವೆ. ತಾವೇ ದೊಡ್ಡವರು ಎಂದು ಯಾರೂ ತಿಳಿಯಬಾರದು. ಹಾಗೊಂದು ವೇಳೆ ಆದರೆ ಎಲ್ಲೆಡೆ ಪಕ್ಷೇತರ ಅಭ್ಯರ್ಥಿಗಳೇ ಗೆಲ್ಲಬಹುದಿತ್ತು. 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ನಮ್ಮ ಅಸ್ತಿತ್ವವೇ ಪಕ್ಷ, ಕಾರ್ಯಕರ್ತರೇ ಜೀವಾಳ’ ಎಂದರು.

ನಾಗೇಂದ್ರ ಬಿಜೆಪಿ ಬಿಡುವುದು ಖಚಿತ:

‘ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಬಿಜೆಪಿ ತೊರೆಯುವುದು ಖಚಿತ. ಮುನಿಸಿಕೊಂಡಿರುವ ಹೊಸಪೇಟೆ ಶಾಸಕ ಆನಂದ್‌ಸಿಂಗ್‌ ಅವರೊಂದಿಗೆ ಮಾತುಕತೆ ನಡೆದಿದೆ. ಅವರು ಪಕ್ಷ ತೊರೆಯುವುದಿಲ್ಲ’ ಎಂದು ಹಗರಿಬೊಮ್ಮನಹಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

***

‘ಶಾಂತಿ ಸ್ಥಾಪನೆಗೆ ಪೇಜಾವರ ಶ್ರೀ, ವೀರೇಂದ್ರ ಹೆಗ್ಗಡೆ ಮುಂದಾಗಲಿ’

ಹುಕ್ಕೇರಿ (ಬೆಳಗಾವಿ ಜಿಲ್ಲೆ): ಉಡುಪಿಯ ಪೇಜಾವರ ಶ್ರೀಗಳು ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು, ಶಾಂತಿ ಕಾಪಾಡುವಂತೆ ರಾಜ್ಯದ ಕರಾವಳಿ ಭಾಗದ ಜನರಿಗೆ ಮನವಿ ಮಾಡಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ಭಾನುವಾರ ಇಲ್ಲಿ ಒತ್ತಾಯಿಸಿದರು.

‘ಜನರು ಅವರ ಮನವಿಗೆ ಸ್ಪಂದಿಸುತ್ತಾರೆ. ಆ ಭಾಗದ ಮುಸ್ಲಿಂ ಮುಖಂಡರನ್ನು ತಮ್ಮೊಂದಿಗೆ ಸೇರಿಸಿಕೊಂಡು ಸಾಮರಸ್ಯದಿಂದ ಬದುಕುವಂತೆ ಹಿಂದೂ, ಮುಸ್ಲಿಂ ಎರಡೂ ಧರ್ಮಗಳ ಜನರಿಗೆ ತಿಳಿ ಹೇಳಬೇಕು. ಇದರಿಂದ ಆ ಭಾಗದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯದ ಕರಾವಳಿ ಪ್ರದೇಶದಲ್ಲಿ ನಡೆದಿರುವ ಹತ್ಯೆ ಪ್ರಕರಣಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ ಅವರು, ‘ದೇಶದ್ರೋಹ ಕೆಲಸದಲ್ಲಿ ತೊಡಗಿರುವ ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವ ಪಿಎಫ್‌ಐ, ಎಸ್‌ಡಿಪಿಐ, ಒವೈಸಿ ಸಂಘಟನೆಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು’ ಒತ್ತಾಯಿಸಿದರು.

***

ಅಧಿಕಾರಕ್ಕೆ ಬಂದರೆ ಮರು ತನಿಖೆ: ಸಂಸದ ಜೋಶಿ

ಹುಬ್ಬಳ್ಳಿ: ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಮೇಲಿದ್ದ 1,600 ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ಹಿಂತೆಗೆದುಕೊಂಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಎಲ್ಲ ಪ್ರಕರಣಗಳ ಮರು ತನಿಖೆ ಮಾಡಲಾಗುವುದು. ಅಲ್ಲದೆ, ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಎನ್‌ಐಎಗೆ ವಹಿಸಲಾಗುವುದು’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 12ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಇವರೆಲ್ಲ, ಬಿಜೆಪಿ ಮತ್ತು ಸಂಘ ಪರಿವಾರದ ಜೊತೆ ನೇರವಾಗಿ ಗುರುತಿಸಿಕೊಂಡಿದ್ದರು. ರುದ್ರೇಶ್‌ ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ಪಾತ್ರ ಇದೆ ಎಂದು ಹೇಳಲಾಗಿದೆಯಾದರೂ, ಆ ಸಂಘಟನೆ ನಿಷೇಧಿಸುವ ಬದಲು, ವಿಶ್ವ ಹಿಂದೂ ಪರಿಷತ್‌ ನಿಷೇಧಿಸಲು ಅವರು ಮುಂದಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯಾವುದೇ ಕೊಲೆಯನ್ನು ನಾವು ಖಂಡಿಸುತ್ತೇವೆ. ಆದರೆ, ಮುಸ್ಲಿಮರ ಮೇಲೆ ವಿಶೇಷವಾದ ಪ್ರೀತಿ ಹೊಂದಿರುವ ಸಿದ್ದರಾಮಯ್ಯ ಮತಗಳಿಗಾಗಿ ಆ ಸಮುದಾಯವನ್ನು ಓಲೈಸುತ್ತಿದ್ದಾರೆ. ಅದರ ಜೊತೆ, ಈಗೀಗ ನಾನು ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ’ ಎಂದು ಜೋಶಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.