ಗುರುವಾರ , ಜೂಲೈ 2, 2020
22 °C
ನಿರ್ಧಾರ ಕೈಗೊಳ್ಳುವಾಗ ಸಂಘಟನೆಗಳು, ಮುಖಂಡರಿಂದ ದೂರ

ನೋವಿನಲ್ಲೂ ಪ್ರಬುದ್ಧತೆ ಮೆರೆದ ಬಶೀರ್‌ ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋವಿನಲ್ಲೂ ಪ್ರಬುದ್ಧತೆ ಮೆರೆದ ಬಶೀರ್‌ ಕುಟುಂಬ

ಮಂಗಳೂರು: ಮತೀಯ ದ್ವೇಷದ ದಾಳಿಗೆ ಬಲಿಯಾದ ಇಲ್ಲಿನ ಆಕಾಶಭವನದ ಅಹಮ್ಮದ್ ಬಶೀರ್‌ ಕುಟುಂಬ ಮನೆಯ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆಯೂ, ಮೃತರ ಅಂತಿಮ ಯಾತ್ರೆ, ಅಂತ್ಯಸಂಸ್ಕಾರ, ಸರ್ಕಾರದ ಮುಂದೆ ಬೇಡಿಕೆ ಇರಿಸುವ ವಿಚಾರದಲ್ಲಿ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರನ್ನು ದೂರ ಇಡುವ ಮೂಲಕ ಪ್ರಬುದ್ಧತೆ ಮೆರೆಯಿತು.

ತಂದೆ ಕೆ.ಅಹಮ್ಮದ್ ನಿಧನರಾದ ಬಳಿಕ 25 ವರ್ಷಗಳಿಂದ ಬಶೀರ್‌ ಕುಟುಂಬವನ್ನು ಮುನ್ನಡೆಸುತ್ತಿದ್ದರು. ಅವರ ಅಗಲಿಕೆಯಿಂದ ಇಡೀ ಕುಟುಂಬ ಈಗ ಕಂಗಾಲಾಗಿ ಹೋಗಿದೆ. ಆದರೆ, ಬಶೀರ್‌ ಅವರ ಸಾವಿನ ವಿಷಯವನ್ನು ಕಿಡಿಗೇಡಿಗಳು ರಾಜಕೀಯಕ್ಕೆ ಬಳಸಿಕೊಂಡು ನಗರದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂಬ ಮುನ್ನೆಚ್ಚರಿಕೆ ವಹಿಸಿದ ಕುಟುಂಬ ಎಲ್ಲ ನಿರ್ಧಾರಗಳನ್ನೂ ಸ್ವಂತವಾಗಿಯೇ ಪ್ರಕಟಿಸಿತು.

ಬೆಳಿಗ್ಗೆ ಬಶೀರ್‌ ನಿಧನದ ಮಾಹಿತಿ ಬಹಿರಂಗಪಡಿಸುವಾಗಲೇ ಕುಟುಂಬದ ಸದಸ್ಯರು, ‘ಪಾರ್ಥಿವ ಶರೀರವನ್ನು ಆಸ್ಪತ್ರೆಯಂದ ಮನೆಗೆ ಕೊಂಡೊಯ್ಯುವಾಗ ಮೆರವಣಿಗೆ ನಡೆಸುವುದಿಲ್ಲ’ ಎಂದು ಪ್ರಕಟಿಸಿದ್ದರು. ಈ ವಿಚಾರವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯವರ ಗಮನಕ್ಕೂ ತಂದರು.

ಸೌಹಾರ್ದ ಕಾಪಾಡಲು ಮನವಿ:

‘ಶಾಂತಿ, ಸೌಹಾರ್ದತೆಗೆ ನಮ್ಮ ಅಣ್ಣ ಸಾಕಾರ ಮೂರ್ತಿಯಾಗಿದ್ದರು. ಅವರ ಗೌರವಕ್ಕೆ ಯಾರೂ ಚ್ಯುತಿ ತರಬೇಡಿ. ಅಣ್ಣನ ಸಾವು ನಮಗೆಲ್ಲರಿಗೂ ಅತೀವ ನೋವು ತಂದಿದೆ. ಮೃತದೇಹ ಸ್ವರ್ಗವಾಸಿಯಾಗಲಿ. ಯಾರಿಗೂ ತೊಂದರೆ ಆಗದಂತೆ ನಾವು ನೋಡಿಕೊಳ್ಳಬೇಕು. ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯನ್ನು ಮೆರೆಯಬೇಕು’ ಎಂದು ಬಶೀರ್ ಸಹೋದರ ಹಕೀಂ (ಚಿಕ್ಕಪ್ಪನ ಮಗ) ಮನವಿ ಮಾಡಿದಾಗ ಅಲ್ಲಿದ್ದ ಬಹುತೇಕರ ಕಣ್ಣಾಲಿಗಳು ತೇವಗೊಂಡವು.

‘ಅಂತ್ಯಕ್ರಿಯೆ ನಂತರವೂ ಈ ಸಾವಿನ ಪ್ರತೀಕಾರಕ್ಕೆ ಯಾರೂ ಹೋಗಬಾರದು. ನಮಗೆ ನೋವಾಗಿದೆ, ಈ ನೋವು ಯಾರಿಗೂ ಬರಬಾರದು. ನಮ್ಮಿಂದಾಗಿ ಹಿಂದೂಗಳಿಗೆ, ಕ್ರಿಶ್ಚಿಯನ್ನರಿಗೆ ಅಥವಾ ಯಾರಿಗೂ ಅನ್ಯಾಯ ಆಗಬಾರದು. ಎಲ್ಲರೂ ಸಮಚಿತ್ತದಿಂದ ವರ್ತಿಸಬೇಕು’ ಎಂದು ನಿವೇದಿಸಿಕೊಂಡರು.

ಮೃತದೇಹದ ಮರಣೋತ್ತರ ಪರೀಕ್ಷೆ, ಮನೆಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ, ಶವಯಾತ್ರೆ, ಮಸೀದಿಯಲ್ಲಿ ಧಾರ್ಮಿಕ ವಿಧಿವಿಧಾನ ಮತ್ತು ಅಂತ್ಯಕ್ರಿಯೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವಲ್ಲಿ ಕುಟುಂಬದ ಹೊರಗಿನವರು ಹಸ್ತಕ್ಷೇಪ ನಡೆಸದಂತೆ ಎಚ್ಚರಿಕೆ ವಹಿಸಿದರು. ಅನೇಕ ಸಂಘಟನೆಗಳ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸ್ಥಳದಲ್ಲಿದ್ದರೂ ಅವರನ್ನು ಹೊರಗಿಟ್ಟೇ ಎಲ್ಲ ನಿರ್ಧಾರಗಳನ್ನು ಕೈಗೊಂಡ ಕುಟುಂಬದ ನಡೆಗೆ ಮೆಚ್ಚುಗೆ ವ್ಯಕ್ತವಾಯಿತು.

ಹಿರಿಯಣ್ಣನ ಸ್ಥಾನದಲ್ಲಿ ಮಾರ್ಗದರ್ಶನ:

ಆಕಾಶಭವನದ ನಿವಾಸಿ ದಿವಂಗತ ಕೆ. ಅಹಮ್ಮದ್‌ ಮತ್ತು ಹಾಜಿರಮ್ಮ ದಂಪತಿಗೆ 6 ಪುತ್ರರು, ಒಬ್ಬ ಪುತ್ರಿಯರಲ್ಲಿ ಬಶೀರ್‌ ಹಿರಿಯವರು. 25 ವರ್ಷದ ಹಿಂದೆ ಅಹಮ್ಮದ್‌ ನಿಧನರಾದ ಬಳಿಕ ಹಿರಿಯನ ಸ್ಥಾನದಲ್ಲಿ ನಿಂತು ಕುಟುಂಬದ ಜವಾಬ್ದಾರಿಯನ್ನು ಬಶೀರ್‌ ನಿರ್ವಹಿಸುತ್ತಿದ್ದರು.

‘ನಮ್ಮ ತಂದೆ ಸ್ಥಾನದಲ್ಲಿ ಕುಟುಂಬದ ಎಲ್ಲ ಜವಾಬ್ದಾರಿಯನ್ನು ಹಿರಿಯಣ್ಣ ಬಶೀರ್‌ ನಿಭಾಯಿಸುತ್ತಿದ್ದರು. ನಾವೆಲ್ಲ ಅವರ ಮಾರ್ಗದರ್ಶನದಲ್ಲಿಯೇ ಬೆಳೆದವರು. ನಾವು ಏನೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರೂ ಅದಕ್ಕೆ ಅಣ್ಣನೇ ಅಂತಿಮ. ಅವರ ನಿಧನದಿಂದ ಕುಟುಂಬ ಕಂಗಾಲಾಗಿದೆ. ಅಣ್ಣನ ಬೇಗ ಗುಣಮುಖವಾಗಲೆಂದು ಮೂರು ದಿನದಿಂದ ಕುಟುಂಬದ ಸದಸ್ಯರೆಲ್ಲರೂ ಉಪವಾಸವಿದ್ದು, ದೇವರಲ್ಲಿ ಪ್ರಾರ್ಥಿಸುತ್ತಿದ್ದೆವು. ಆದರೆ, ನಮ್ಮ ಪ್ರಾರ್ಥನೆ ಫಲಿಸಲಿಲ್ಲ’ ಎನ್ನುತ್ತಾ ಕಣ್ಣೀರಾದರು ಬಶೀರ್‌ ತಮ್ಮ ಅಬೂಬಕ್ಕರ್‌.

ಸಾಲ ಮಾಡಿ ಮನೆ ಕಟ್ಟಿದ್ದ ಬಶೀರ್‌:

ಸುಮಾರು 25 ವರ್ಷಗಳ ಕಾಲ ದುಬೈನಲ್ಲಿ ಉದ್ಯೋಗದಲ್ಲಿದ್ದ ಬಶೀರ್‌ ಆಕಾಶ ಭವನದಲ್ಲಿ ತಂದೆಯ ಜಮೀನಿನಲ್ಲಿ ಎರಡೂವರೆ ವರ್ಷದ ಹಿಂದೆ ಮನೆ ಕಟ್ಟಿದ್ದರು. ಇದಕ್ಕೆ ಬ್ಯಾಂಕ್‌ನಿಂದ ಸಾಲ ಕೂಡ ಪಡೆದಿದ್ದರು. ಮಕ್ಕಳ ಒತ್ತಾಯಕ್ಕೆ ಮಣಿದು ಒಂದೂವರೆ ವರ್ಷದ ಹಿಂದೆ ವಿದೇಶದಿಂದ ವಾಪಸಾಗು ಊರಿನಲ್ಲೇ ನಡೆಸಿದ್ದರು. ಮನೆ ನಿರ್ಮಾಣದ ಸಾಲ ಬಾಕಿ ಇದ್ದುದರಿಂದ ಕೊಟ್ಟಾರ ಚೌಕಿಯಲ್ಲಿ ಬಾವ ಅಬೂಬಕ್ಕರ್‌ ಸೇರಿ ಫಾಸ್ಟ್‌ಫುಡ್‌ ಮಳಿಗೆಯನ್ನು ನಡೆಸುತ್ತಿದ್ದರು.

ಪಾಲೇಮಾರ್‌ಗೆ ಘೇರಾವ್‌

ಬಿಜೆಪಿ ಮುಖಂಡ ಕೃಷ್ಣ ಜೆ. ಪಾಲೇಮಾರ್‌ ಅವರು ಬಶೀರ್‌ ಅಂತಿಮ ದರ್ಶನ ಪಡೆದು ವಾಪಸಾಗುತ್ತಿದ್ದಂತೆ ಅವರನ್ನು ಟಿವಿ ಮಾಧ್ಯಮದವರು ಮಾತನಾಡಿಸಲು ಯತ್ನಿಸಿದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಕೆಲವರು ಪಾಲೇಮಾರ್‌ ಅವರನ್ನು ಸುತ್ತುವರಿದು ಘೇರಾವ್‌ ಹಾಕಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಕೆಲ ಮುಖಂಡರು ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಆಕ್ರೋಶ ಹೆಚ್ಚಾಯಿತು. ತಕ್ಷಣ ಮಧ್ಯಪ್ರವೇಶ ಮಾಡಿದ ಪೊಲೀಸರು ಪಾಲೇಮಾರ್‌ ಅವರಿಗೆ ತೆರಳಲು ಅನುವು ಮಾಡಿಕೊಟ್ಟರು.

ದೃಶ್ಯ ಮಾಧ್ಯಮದ ವಿರುದ್ಧ ಆಕ್ರೋಶ

ಶವಾಗಾರದ ಹೊರಗೆ ಮಾಧ್ಯಮದವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ದೃಶ್ಯ ಮಾಧ್ಯಮದವರು ಮುಖಂಡರನ್ನು, ಸ್ಥಳದಲ್ಲಿದ್ದ ಜನರನ್ನು ಮಾತನಾಡಿಸಲು ಯತ್ನಿಸುತ್ತಿದ್ದರು. ಟಿವಿ ವಾಹಿನಿಯೊಂದರ ವರದಿಗಾರನ ಮೇಲೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ತಕ್ಷಣ ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.