ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಸ್ತಕಾಭಿಷೇಕಕ್ಕೆ ಬೈಕ್‌ ಸವಾರಿ

ಜೈನ ಬಸದಿಗಳ ಸುತ್ತಾಟಕ್ಕೆ ₹ 150 ನಿಗದಿ
Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಜೈನಕಾಶಿಯಲ್ಲಿ ನಡೆಯುವ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕ ಮಹೋತ್ಸವ ಅಂಗವಾಗಿ ಈ ಬಾರಿ ಮೋಟರ್ ಬೈಕ್‌ಗಳು ಸದ್ದು ಮಾಡಲಿವೆ.

ಫೆಬ್ರುವರಿ ತಿಂಗಳು ಶ್ರೀ ಕ್ಷೇತ್ರದ ಸುತ್ತಮುತ್ತಲಿನ ಜೈನ ಬಸದಿಗಳು ಹಾಗೂ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಮೋಟರ್‌ ಬೈಕ್‌ಗಳಲ್ಲಿ ಸವಾರಿ ಹೋಗಬಹುದು. ಸಂಬಂಧಪಟ್ಟ ಕಂಪನಿಗಳ ಜತೆ ಜಿಲ್ಲಾಡಳಿತ ಮಾತುಕತೆ ನಡೆಸಿ, ಒಪ್ಪಂದ ಮಾಡಿಕೊಂಡಿದೆ.

ಎಲ್ಲ ವಯೋಮಾನದವರಿಗೂ ದ್ವಿಚಕ್ರವಾಹನ ಸವಾರಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಬಜಾಜ್‌ ಪಲ್ಸರ್‌, ಟಿವಿಎಸ್‌ ಎಕ್ಸೆಲ್‌ 100, ಸ್ಕೂಟಿ ಪೆಪ್‌ ಪ್ಲಸ್‌ ಸ್ಕೂಟರ್‌, ಹೀರೊ ಕಂಪೆನಿಯ ಸ್ಲ್ಪೆಂಡರ್‌, ಪ್ಯಾಷನ್‌ ಪ್ರೊ, ಬುಲೆಟ್‌, ಹೊಂಡಾ ಆ್ಯಕ್ಟಿವಾ, ಕೈನೆಟಿಕ್‌ ಹೊಂಡಾ, ಟಿವಿಎಸ್‌ ಎಕ್ಸೆಲ್‌ ಸೇರಿದಂತೆ ವಿವಿಧ ಕಂಪನಿಗಳ 500 ದ್ವಿಚಕ್ರ ವಾಹನ ಬಳಸಿಕೊಳ್ಳಲಾಗುತ್ತಿದೆ. ಆದರೆ, ಬೈಕ್‌ನಲ್ಲಿ ಪ್ರವಾಸಿ ಸ್ಥಳಗಳನ್ನು ಕಣ್ತುಂಬಿಕೊಳ್ಳಬೇಕಾದರೆ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಗಿ, ಆಧಾರ್‌ ಕಾರ್ಡ್‌ ಹೊಂದಿರಲೇಬೇಕು.

ಸವಾರಿಗೆ ಮುನ್ನ ಕಂಪನಿ ಸಿಬ್ಬಂದಿ ಬಳಿ ಹೆಸರು ನೋಂದಣಿ ಮಾಡಿಸಿದ ಬಳಿಕ ಮೊಬೈಲ್‌ಗೆ ಪಾಸ್‌ವರ್ಡ್‌ ಸಂದೇಶ ಬರುತ್ತದೆ. ಆ ಪಾಸ್‌ವರ್ಡ್‌ ಸಂಖ್ಯೆ ಬಳಸಿ, ಶುಲ್ಕ ಪಾವತಿಸಬೇಕು.

ದ್ವಿಚಕ್ರ ವಾಹನದ ಬಾಡಿಗೆ ದಿನಕ್ಕೆ ₹ 150 ನಿಗದಿಪಡಿಸಿದ್ದು, ತಮಗೆ ಇಷ್ಟವಾದ ಯಾವುದೇ ವಾಹನವನ್ನು ಎಷ್ಟು ದಿನವಾದರೂ ಬಾಡಿಗೆ ತೆಗೆದುಕೊಂಡು ಒಬ್ಬರು ಅಥವಾ ಇಬ್ಬರು ಪ್ರಯಾಣಿಸಬಹುದು. ಪೆಟ್ರೋಲ್‌ ವೆಚ್ಚವನ್ನು ಸವಾರರೇ ಭರಿಸಬೇಕು. ವಾಹನಕ್ಕೆ ಜಿಪಿಎಸ್‌ ಅಳವಡಿಸಲಾಗಿರುತ್ತದೆ.

ಶ್ರವಣಬೆಳಗೊಳ ಸುತ್ತಮುತ್ತ ಜೈನ ಬಸದಿ ಇರುವ ಜಿನ್ನನಾಥಪುರ, ಹಳೇಬೆಳಗೊಳ, ಬಸ್ತಿಹಳ್ಳಿ, ಬೆಕ್ಕ, ನುಗ್ಗೇಹಳ್ಳಿ, ಕಂಬದಹಳ್ಳಿ, ಶಾಂತಿಗ್ರಾಮ, ಮೇಲುಕೋಟೆ ಜತೆಗೆ ಪ್ರವಾಸಿ ಸ್ಥಳಗಳಾದ ಬೇಲೂರು, ಹಳೇಬೀಡು, ಸಕಲೇಶಪುರ, ಬಿಸಿಲೆ ಘಾಟ್‌ ಪಟ್ಟಿ ಮಾಡಲಾಗಿದೆ. ಈ ಸ್ಥಳಗಳ ಬಗ್ಗೆ ಮಾಹಿತಿಯನ್ನು ಕಿರುಹೊತ್ತಿಗೆಯಲ್ಲಿ ಮುದ್ರಿಸಿ ಪ್ರವಾಸಿಗರಿಗೆ ನೀಡಲಾಗುತ್ತದೆ.

‘ದ್ವಿಚಕ್ರ ವಾಹನದಲ್ಲಿ ಸುತ್ತುವುದೆಂದರೆ ಕೆಲವರಿಗೆ ತುಂಬಾ ಇಷ್ಟ. ಹೀಗಾಗಿ, ಜೈನಬಸದಿಗಳ ದರ್ಶನ ಹಾಗೂ ಪ್ರವಾಸಿ ಸ್ಥಳಗಳನ್ನು ಪರಿಚಯಿಸುವುದು ನಮ್ಮ ಉದ್ದೇಶ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದಂತೆ ಆಗುತ್ತದೆ. ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ವಯೋಮಾನದವರು ಫೆಬ್ರುವರಿ ತಿಂಗಳು ಪೂರ್ತಿ ಈ ಅವಕಾಶ ಬಳಸಿಕೊಳ್ಳಬಹುದು’ ಎಂದು ಮಹಾಮಸ್ತಕಾಭಿಷೇಕ ಮಹೋತ್ಸವ ವಿಶೇಷಾಧಿಕಾರಿ ಬಿ.ಎನ್‌.ವರಪ್ರಸಾದ್‌ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸವಾರರಿಗೆ ತೊಂದರೆ ಆಗದಂತೆ ಜಿಲ್ಲಾಡಳಿತ ಗುರುತಿಸಿರುವ ಜೈನ ಬಸದಿಗಳು ಹಾಗೂ ಪ್ರವಾಸಿ ಸ್ಥಳಗಳ ಕೈಪಿಡಿ ನೀಡಲಾಗುವುದು. ಯಾವ ಮಾರ್ಗದಲ್ಲಿ ಸಾಗಬೇಕು, ಎಷ್ಟು ಕಿ.ಮೀ. ಇರುತ್ತದೆ ಎಂಬ ವಿವರವನ್ನು ಇದು ಒಳಗೊಂಡಿರುತ್ತದೆ. ಮಾಹಿತಿಗೆ ಸಹಾಯವಾಣಿ ಸಹ ತೆರೆಯಲಾಗುವುದು’ ಎಂದರು.

***

ಬೈಕ್ ಸವಾರಿ ಮೂಲಕ ಶ್ರವಣಬೆಳಗೊಳ ಸುತ್ತಲಿನ ಪ್ರವಾಸಿ ಕೇಂದ್ರಗಳನ್ನು ನೋಡಬಹುದು. ಇದು ಬೈಕ್‌ ಸವಾರರಿಗೂ ಇಷ್ಟವಾಗುವ ಯೋಜನೆ
– ಬಿ.ಎನ್‌.ವರಪ್ರಸಾದ್‌ ರೆಡ್ಡಿ, ಮಸ್ತಕಾಭಿಷೇಕ ಮಹೋತ್ಸವ ವಿಶೇಷಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT