ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ವಲಯ : ಮಂದಗತಿಯ ಪ್ರಗತಿ ಸಾಧ್ಯತೆ

Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪನಿಗಳ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಇರುವ ಸಾಧ್ಯತೆ ಇದೆ ಎನ್ನುವುದು ತಜ್ಞರ ವಿಶ್ಲೇಷಣೆಯಾಗಿದೆ.

ಈ ತ್ರೈಮಾಸಿಕದಲ್ಲಿ ಕಡಿಮೆ ಕೆಲಸದ ಅವಧಿ ಹಾಗೂ ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವೆಗಳ ವಲಯದಿಂದಾಗಿ ಪ್ರಗತಿ ಅಷ್ಟೇನು ಉತ್ತೇಜನಕಾರಿ ಆಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಲವು ದೇಶಗಳಲ್ಲಿ ವೀಸಾ ನೀತಿಯಲ್ಲಿ ಬದಲಾವಣೆ ಮತ್ತು ಅಮೆರಿಕದಲ್ಲಿ ತೆರಿಗೆ ಸುಧಾರಣಾ ನೀತಿ ಜಾರಿಗೊಳಿಸಿವೆ. ಈ ಅಂಶಗಳು ಐ.ಟಿ ವಲಯದ ಪ್ರಮುಖ ಕಂಪನಿಗಳಾದ ಟಾಟಾ ಕನ್ಸಲ್ಟನ್ಸಿ ಸರ್ವೀಸ್‌ (ಟಿಸಿಎಸ್‌) ಮತ್ತು ಇನ್ಫೊಸಿಸ್‌ ಮೇಲೆ ಯಾವ ರೀತಿಯ ಪರಿಣಾಮ ಬೀರಲಿವೆ ಎನ್ನುವುದು ಈ ತ್ರೈಮಾಸಿಕದಲ್ಲಿ ಸ್ಪಷ್ಟವಾಗಲಿದೆ. ಹೀಗಾಗಿ ಮೂರನೇ ತ್ರೈಮಾಸಿಕದ ಬಗ್ಗೆ ಹೂಡಿಕೆದಾರರು ಹೆಚ್ಚು ಗಮನ ನೀಡಿದ್ದಾರೆ.

ಇನ್ಫೊಸಿಸ್‌ ಫಲಿತಾಂಶ: ಇನ್ಫೊಸಿಸ್‌ ಬೆಳವಣಿಗೆಯು ಹೂಡಿಕೆದಾರರು ಮತ್ತು ಮಾರುಕಟ್ಟೆಯ ಗಮನ ಸೆಳೆದಿದೆ.

ನೂತನ ಸಿಇಒ ಸಲೀಲ್‌ ಪಾರೇಕ್‌ ಅವರು ಸಂಸ್ಥೆಯನ್ನು ಯಾವ ರೀತಿ ಮುನ್ನಡೆಸಿಕೊಂಡು ಹೋಗಲಿದ್ದಾರೆ ಎನ್ನುವುದರ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ.

ದೇಶದ ಐಟಿ ಉದ್ಯಮವು ಹೆಚ್ಚಾಗಿ ರಫ್ತು ವಹಿವಾಟಿನ ಮೇಲೆ ಅವಲಂಬಿತವಾಗಿದೆ. ಹೀಗಾಗಿ ವೀಸಾ ನೀತಿ ಬದಲಾವಣೆಯಿಂದ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಮೂರನೇ ತ್ರೈಮಾಸಿಕ ಫಲಿತಾಂಶದಲ್ಲಿ ವೀಸಾ ನೀತಿಯ ಪರಿಣಾಮವನ್ನು ಗಮನಿಸಬಹುದು ಎಂದು ಹೇಳಿದ್ದಾರೆ.

ಎನ್‌ಬಿಎಫ್‌ಸಿ: ಉತ್ತಮ ಸಾಧನೆ ನಿರೀಕ್ಷೆ

ತ್ರೈಮಾಸಿಕದಲ್ಲಿ ಬ್ಯಾಂಕಿಂಗ್‌ ವಲಯಕ್ಕಿಂತಲೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಆರ್ಥಿಕ ಸಾಧನೆ ಉತ್ತಮವಾಗಿರಲಿದೆ ಎನ್ನುವುದು ತಜ್ಞರ ನಿರೀಕ್ಷೆಯಾಗಿದೆ.‌

ವಸೂಲಿಯಾಗದ ಸಾಲ (ಎನ್‌ಪಿಎ) ಗರಿಷ್ಠ ಮಟ್ಟದಲ್ಲಿ ಇರುವುದು ಬ್ಯಾಂಕ್‌ಗಳ ಆರ್ಥಿಕ ಸಾಧನೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಆದರೆ ಎನ್‌ಬಿಎಫ್‌ಸಿ ಆರ್ಥಿಕ ಸ್ಥಿತಿ ಸುಧಾರಿಸುತ್ತಿರುವುದರಿಂದ ಫಲಿತಾಂಶವೂ  ಉತ್ತಮವಾಗಿರಲಿದೆ (ಶೇ 30–ಶೇ 40ರಷ್ಟು ಪ್ರಗತಿ) ಎಂದು ಕೋಟಕ್‌ ಇನ್‌ಸ್ಟಿಟ್ಯೂಷನಲ್‌ ಈಕ್ವಿಟೀಸ್‌ ವರದಿಯಲ್ಲಿ ತಿಳಿಸಿದೆ.

ಸಾಲದ ಮೇಲಿನ ವೆಚ್ಚ ಇಳಿಕೆ ಕಾಣುತ್ತಿದೆ. ರೇರಾದಿಂದಾಗಿ ಗೃಹ ಸಾಲ ನೀಡಿಕೆಯು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೆಚ್ಚಾಗುತ್ತಿದೆ.ಹಬ್ಬದ ಸಂದರ್ಭದಲ್ಲಿನ ಬೇಡಿಕೆಯೂ ಎನ್‌ಬಿಎಫ್‌ಸಿಗಳ ಪ್ರಗತಿಗೆ ನೆರವಾಗಲಿದೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT