ಮಂಗಳವಾರ, ಆಗಸ್ಟ್ 11, 2020
24 °C

ಜೊತೆಗೂಡಿಯೇ ಸ್ವತಂತ್ರ ಧರ್ಮ: ಶಾಮನೂರಿಗೆ ತೀರ್ಮಾನದ ಪರಮಾಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೊತೆಗೂಡಿಯೇ ಸ್ವತಂತ್ರ ಧರ್ಮ: ಶಾಮನೂರಿಗೆ ತೀರ್ಮಾನದ ಪರಮಾಧಿಕಾರ

ಬೆಂಗಳೂರು: ವೀರಶೈವ ಮತ್ತು ಲಿಂಗಾಯತರು ಜೊತೆಗೂಡಿ ‘ಸ್ವತಂತ್ರ ಧರ್ಮ’ ಸ್ಥಾನಮಾನ ಪಡೆಯಬೇಕು ಎಂಬ ನಿಲುವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಪುನರುಚ್ಚರಿಸಿದೆ.

‘ಅಖಿಲ ಭಾರತ ವೀರಶೈವ ಮಹಾಸಭಾ’ ಹೆಸರು ಬದಲಿಸುವುದು ಸೇರಿದಂತೆ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಮಹಾಸಭಾದ ಸರ್ವ ಸದಸ್ಯರ ವಿಶೇಷ ಸಭೆ ನೀಡಿದೆ.

ನಗರದ ತರಳಬಾಳು ಕೇಂದ್ರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಂದ ಬಂದಿದ್ದ ಬಹುಪಾಲು ಸದಸ್ಯರು, ‘ವೀರಶೈವ– ಲಿಂಗಾಯತ ಒಂದೇ, ನಮ್ಮಲ್ಲಿ  ಒಡಕು ಮೂಡಿಸುವವರಿಗೆ ಪಾಠ ಕಲಿಸುತ್ತೇವೆ’ ಎಂಬ ಘೋಷಣೆ ಕೂಗಿದರು. ಆದರೆ, ಯಾವುದೇ ವಿವಾದಕ್ಕೆ ಮತ್ತು ವಾಗ್ವಾದಕ್ಕೆ ಎಡೆ ಮಾಡದಂತೆ ಮಹಾಸಭಾದ ಮಹಾ ಕಾರ್ಯದರ್ಶಿ ಹಾಗೂ ಸಚಿವ ಈಶ್ವರಖಂಡ್ರೆ ಸಭೆಯನ್ನು ನಿಭಾಯಿಸಿದರು.

ಸ್ವತಂತ್ರ ಧರ್ಮ ಕುರಿತು ಪರಿಶೀಲಿಸಲು ನ್ಯಾ. ನಾಗಮೋಹನದಾಸ್‌ ನೇತೃತ್ವದ ಸಮಿತಿ ನೇಮಕ ಮಾಡಿರುವ ಬಗ್ಗೆ ಮಹಾಸಭಾದ ಪದಾಧಿಕಾರಿಗಳಿಂದ ಯಾವುದೇ ಅಭಿಪ್ರಾಯ ಹೊರಬೀಳಿಲಿಲ್ಲ. ಆದರೆ, ‘ಈ ಹಿಂದೆ ನೀಡಿರುವ ಹೇಳಿಕೆಗೆ ನಾವು ಬದ್ಧರಿದ್ದೇವೆ’ ಎಂದು  ಶಾಮನೂರು ಶಿವಶಂಕರಪ್ಪ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಸಮಾಜದ ಒಡಕಿಗೆ ಕಾರಣವಾಗಿರುವ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು. ‘ವೀರಶೈವ– ಲಿಂಗಾಯತ ಸಮಾಜದಲ್ಲಿ ಒಡಕಿನ ಮಾತು ಬೇಡ. ಪರಸ್ಪರ ಟೀಕೆ– ಟಿಪ್ಪಣಿಗಳನ್ನು ಮಾಡದೇ ನಮ್ಮ ವಿಚಾರಗಳನ್ನು ಪ್ರತಿಪಾದಿಸಬೇಕು’ ಎಂದು ಈಶ್ವರ ಖಂಡ್ರೆ ಸಮಾಧಾನಪಡಿಸಿದರು.

ಸಭೆಯ ಕೊನೆಯಲ್ಲಿ ವೀರಶೈವ– ಲಿಂಗಾಯತ ವಿಷಯಕ್ಕೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸಲು ಎರಡೂ ಕಡೆಯ ತಲಾ ಇಬ್ಬರಿಗೆ ಅವಕಾಶ ನೀಡುವುದಾಗಿ ಈಶ್ವರ ಖಂಡ್ರೆ ಪ್ರಕಟಿಸಿದರು.  ಆಗ ಸಭೆಯಲ್ಲಿ ಗದ್ದಲ ಆರಂಭವಾಯಿತು. ತಕ್ಷಣ ಮಧ್ಯ ಪ್ರವೇಶಿಸಿದ ಅವರು ‘ಇದೊಂದು ಸಂಕೀರ್ಣ ಸನ್ನಿವೇಶ. ಇದಕ್ಕೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಅಧ್ಯಕ್ಷರಿಗೆ ನೀಡೋಣ’ ಎಂದರು. ಅದಕ್ಕೆ ಸಭೆ ಅನುಮೋದನೆ ನೀಡಿತು.

‘ಇವತ್ತು ನಾವು ಕವಲು ಹಾದಿಯಲ್ಲಿದ್ದೇವೆ. ವೀರಶೈವ– ಲಿಂಗಾಯತ ಬೇರೆ ಅಲ್ಲ. ಎರಡೂ ಒಂದೇ. ಹೇಗೆ ನಾವು ಭಾರತ– ಇಂಡಿಯಾ ಎಂದು ಕರೆಯುತ್ತೇವೆಯೋ ಅದೇ ರೀತಿ ವೀರಶೈವ– ಲಿಂಗಾಯತ ಎನ್ನಲಾಗುತ್ತದೆ. ನಮ್ಮದು ಭಿನ್ನ ಧರ್ಮವಲ್ಲ. ಒಂದೇ ಧರ್ಮ’ ಎಂದು ಖಂಡ್ರೆ ಹೇಳಿದರು.

ಮಂತ್ರಿಗಳ ಬಾಯಿ ಮುಚ್ಚಿಸಿ: ‘ಸಚಿವರಾದ ಎಂ.ಬಿ. ಪಾಟೀಲ ಮತ್ತು ವಿನಯ ಕುಲಕರ್ಣಿ ಕೆಲವು ಮಠಾಧೀಶರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರು ಸಮಾಜವನ್ನು ಒಡೆದು ಚೂರು ಮಾಡಲು ಹೊರಟಿದ್ದಾರೆ. ಮಾಧ್ಯಮಗಳಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಬಸವಣ್ಣರನ್ನು ಆಡುವ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ಇವರ ಬಾಯಿ ಮುಚ್ಚಿಸಬೇಕು. ಇಲ್ಲವಾದರೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಕೆಲವು ಸಭಿಕರು ಆಕ್ರೋಶ ವ್ಯಕ್ತಪಡಿಸಿದರು.

‘ಸಚಿವ ಎಂ.ಬಿ.ಪಾಟೀಲರು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ ಬಂದ ಬಳಿಕ ಶ್ರೀಗಳ ಬಗ್ಗೆ ಲಘುವಾದ ಹೇಳಿಕೆ ನೀಡಿದರು. ಇದು ನಮಗೆ ನೋವು ಉಂಟು ಮಾಡಿದೆ. ಇಂತಹ ಸಚಿವರಿಗೆ ಪಾಠ ಕಲಿಸಬೇಕಾಗುತ್ತದೆ. ನಿಮ್ಮ ಸರ್ಕಾರದಲ್ಲಿರುವ ಈ ಸಚಿವರಿಗೆ ಬುದ್ಧಿ ಮಾತು ಹೇಳಿ’ ಎಂದು ಸಭಿಕರೊಬ್ಬರು ಖಂಡ್ರೆಗೆ ತಾಕೀತು ಮಾಡಿದರು.

‘ನಾಗಮೋಹನದಾಸ್‌ ಸಮಿತಿ ರಚನೆಯ ಬಗ್ಗೆ ಖಂಡನಾ ನಿರ್ಣಯವನ್ನು ಮಂಡಿಸಬೇಕು’ ಎಂದು ಮತ್ತೊಬ್ಬ ಸಭಿಕರು ಹೇಳಿದಾಗ ಮಧ್ಯ ಪ್ರವೇಶಿಸಿದ ಈಶ್ವರ ಖಂಡ್ರೆ, ‘ಖಂಡನಾ ನಿರ್ಣಯ ಮಂಡಿಸುವ ಅಗತ್ಯವಿಲ್ಲ. ಸಮಿತಿ ರಚನೆಯ ಬಗ್ಗೆ ಮಹಾಸಭಾ ಈಗಾಗಲೇ ತನ್ನ ನಿರ್ಧಾರ ಪ್ರಕಟಿಸಿದೆ’ ಎಂದು ಸಮಾಧಾನಪಡಿಸಿದರು.

ಮಹಾಸಭಾ ಉಪಾಧ್ಯಕ್ಷ ಎನ್‌. ತಿಪ್ಪಣ್ಣ, ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್‌, ವೀರಣ್ಣ ಚರಂತಿಮಠ ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.