ಸೋಮವಾರ, ಜೂಲೈ 6, 2020
27 °C

ಸೂಳೆಕೆರೆ ದಡದಲ್ಲಿ ಕೊಕ್ಕರೆ, ನೀರು ಕೋಳಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀನಗರ (ಮಂಡ್ಯ ಜಿಲ್ಲೆ): ಇಲ್ಲಿಗೆ ಸಮೀಪದ ಸೂಳೆಕೆರೆಯ ದಡದಲ್ಲಿ ಸತ್ತಿರುವ ಎರಡು ಕೊಕ್ಕರೆ ಹಾಗು ಎರಡು ನೀರು ಕೋಳಿ ಕಳೇಬರ ಪತ್ತೆಯಾಗಿವೆ. ಕೊಕ್ಕರೆ ಹಾಗೂ ನೀರು ಕೋಳಿಗಳ ಕಳೇಬರಗಳು ಕೊಳೆತ ಸ್ಥಿತಿಯಲ್ಲಿದ್ದು, ಸತ್ತು ಹಲವು ದಿನಗಳೆ ಕಳೆದಿದೆ ಎಂದು ಶಂಕಿಸಲಾಗಿದೆ.

ಕೊಕ್ಕರೆ ಬೆಳ್ಳೂರಿನಲ್ಲಿ ಈಚೆಗೆ 7ಕ್ಕೂ ಹೆಚ್ಚು ಕೊಕ್ಕರೆಗಳು ಮೃತಪಟ್ಟಿದ್ದು, ಅವುಗಳ ಸಾವಿಗೆ ಜಂತುಹುಳು ಕಾರಣ ಎಂದು ಪ್ರಯೋಗಾಲಯ ವರದಿ ತಿಳಿಸಿದೆ. ಅಲ್ಲಿಂದಲೇ ಸೂಳೆಕೆರೆಗೆ ಬಂದು ಕೊಕ್ಕರೆಗಳು ಸಾವನ್ನಪ್ಪಿರಬಹುದೆಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಲ್‌.ಹನುಮೇಗೌಡ ಹಾಗು ಪಶು ವೈದ್ಯ ಡಾ.ಮನೋಹರ್‌ ಅವರು ಭಾನುವಾರ ಸೂಳೆಕೆರೆಗೆ ಭೇಟಿ ನೀಡಿ ಸತ್ತಿರುವ ಕೊಕ್ಕರೆ ಹಾಗು ನೀರು ಕೋಳಿ ಕಳೇಬರಗಳನ್ನು ಪರಿಶೀಲನೆ ನಡೆಸಿದ ನಂತರ ಕಳೇಬರಗಳನ್ನು ಹೂತು ಹಾಕಿಸಿದರು.

‘ಕೊಕ್ಕರೆ ಹಾಗೂ ನೀರು ಕೋಳಿ ಸಾವಿನಿಂದ ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಕೊಕ್ಕರೆಬೆಳ್ಳೂರಿನಲ್ಲಿ ಕೊಕ್ಕರೆಗಳ ಸಾವಿಗೆ ಜಂತುಹುಳು ಕಾರಣ ಎಂದು ವರದಿ ಬಂದಿದೆ. ಕೊಕ್ಕರೆಗಳ ಹಿಕ್ಕೆ ಹಾಗೂ ಪಕ್ಷಿಗಳ ದೇಹದ ವಿವಿಧ ಭಾಗಗಳನ್ನು ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅಲ್ಲಿಯೂ ಹಕ್ಕಿಜ್ವರದ ಅನುಮಾನ ವ್ಯಕ್ತವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸೂಳೆಕೆರೆ ನೀರು ಕಲುಷಿತ

ಸೂಳೆಕೆರೆಗೆ ಹರಿದು ಬರುತ್ತಿರುವ ನೀರು ಕಲುಷಿತಗೊಂಡಿದ್ದು, ಕೊಕ್ಕರೆ ಹಾಗು ನೀರು ಕೋಳಿ ಸಾವಿಗೆ ಕಾರಣ ಇರಬಹುದು ಎಂದು ಸ್ಥಳಿಯರು ದೂರುತ್ತಾರೆ. ಮಂಡ್ಯ ನಗರದ ತ್ಯಾಜ್ಯವೆಲ್ಲವೂ ಸೂಳೆಕೆರೆಗೆ ಹರಿದು ಬರುತ್ತದೆ. ಮೈಷುಗರ್ ಕಾರ್ಖಾನೆಯ ತ್ಯಾಜ್ಯವೂ ಸೂಳೆಕೆರೆಗೆ ಸೇರುತ್ತದೆ. ಆದ್ದರಿಂದ ಸೂಳೆಕೆರೆಯ ನೀರು ದುರ್ವಾಸನೆ ಬೀರುತ್ತದೆ ಎಂದು ಅಂಬರಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಮನು ಹೇಳುತ್ತಾರೆ. ಸೂಳೆಕೆರೆಯ ಕಲುಷಿತ ನೀರನ್ನು ಸೇವಿಸುವುದರಿಂದ ಅಮೂಲ್ಯ ಪ್ರಾಣಿ ಪಕ್ಷಿಗಳ ಪ್ರಾಣ ಹರಣವಾಗುತ್ತಿದೆ ಎಂದು ಯುವ ಮುಖಂಡ ಮುಟ್ಟನಹಳ್ಳಿ ರಮೇಶ್‌ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.