ಸೋಮವಾರ, ಆಗಸ್ಟ್ 3, 2020
25 °C
ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ..

ಟೋಕಿಯೊ ಸ್ಟೋರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ ಸ್ಟೋರಿ

ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ ಮತ್ತು ಬೆಂಗಳೂರು ಫಿಲ್ಮ್‌ ಸೊಸೈಟಿ ಹಮ್ಮಿಕೊಂಡಿರುವ ‘ದಿ ಮಿನಿಮಲಿಸ್ಟ್‌ ರಿಯಾಲಿಸಂ’ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಂಗಳವಾರ (ಜನವರಿ 9) ‘ಟೋಕಿಯೊ ಸ್ಟೋರಿ’ ಪ್ರದರ್ಶನಗೊಳ್ಳಲಿದೆ.

ಜಪಾನ್‌ನ ಯಸುಜಿರೊ ಒಸು ನಿರ್ದೇಶಿಸಿದ ಈ ಸಿನಿಮಾ, ಒಸು ಅವರ ದೂರದೃಷ್ಟಿ ಮತ್ತು ಚಿಂತನೆಯನ್ನು ಜಗತ್ತಿಗೆ ತೋರಿಸಿಕೊಟ್ಟಿತ್ತು. ಸಿನಿಮಾ, 1953ರಲ್ಲಿ ಬಿಡುಗಡೆಯಾದರೂ ಸುದ್ದಿ ಮಾಡುವಲ್ಲಿ ವಿಫಲವಾಗಿತ್ತು. ಜಪಾನಿಯರನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ ಇದು ತಮ್ಮ ದೇಶಕ್ಕೆ ಒಪ್ಪುವುದಿಲ್ಲ ಎಂಬ ಟೀಕೆ ಆಗ ವ್ಯಕ್ತವಾಗಿತ್ತು. ಆದರೆ, 1957ರಲ್ಲಿ ಲಂಡನ್‌ನಲ್ಲಿ ತೆರೆಕಂಡಾಗ ಸಿನಿಮಾದ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. 1972ರಲ್ಲಿ ನ್ಯೂಯಾರ್ಕ್‌ ಸಿಟಿಯಲ್ಲಿ ‘ಟೋಕಿಯೊ ಸ್ಟೋರಿ’ ತೆರೆಕಾಣುತ್ತಿದ್ದಂತೆ ದೊಡ್ಡ ಸುದ್ದಿಯಾಯಿತು, ದೊಡ್ಡ ಮಟ್ಟದ ಚರ್ಚೆಯೂ ನಡೆಯಿತು. ಅಮೆರಿಕದ ಸಿನಿಮಾ ವಿಮರ್ಶಕರು ‘ಟೋಕಿಯೊ ಸ್ಟೋರಿ’ಯನ್ನು ಕೊಂಡಾಡಿದರು. ಒಸು ಅವರ ಸಿನಿಮಾಗಳಲ್ಲೇ ‘ಮಾಸ್ಟರ್‌ಪೀಸ್‌’ ಎಂಬ ಹೆಗ್ಗಳಿಕೆಯೂ ಸಿಕ್ಕಿತು. ಮಾತ್ರವಲ್ಲ, 2012ರಲ್ಲಿ ‘ಸೈಟ್‌ ಅಂಡ್‌ ಸೌಂಡ್‌’ ನಿಯತಕಾಲಿಕ ನಡೆಸಿದ ಸಮೀಕ್ಷೆಯಲ್ಲಿ ‘ಜಗತ್ತಿನ ಅದ್ಭುತ ಸಿನಿಮಾಗಳಲ್ಲಿ ಒಂದು’ ಎಂದು, ಚಿತ್ರ ನಿರ್ದೇಶಕರು ಮತ ಚಲಾಯಿಸಿದರು!

ಹೀಗೆ, ತಮ್ಮ ದೂರದೃಷ್ಟಿ ಮತ್ತು ಚಿಂತನೆಯನ್ನು ಎರಕಹೊಯ್ದಂತೆ ಒಸು ಹೊರತಂಡ ‘ಟೋಕಿಯೊ ಸ್ಟೋರಿ’ ಜಗತ್ತಿನಾದ್ಯಂತ ಅಚ್ಚುಮೆಚ್ಚಿನ ಸಾಮಾಜಿಕ ಕಾಳಜಿಯ ಚಿತ್ರವಾಗಿ ಹೊರಹೊಮ್ಮಿತು. ಇಷ್ಟಕ್ಕೂ ಚಿತ್ರದ ಕತೆ ಏನು ಗೊತ್ತಾ? ಜಪಾನ್‌ನ ಇಬ್ಬರು ತಂದೆ ತಾಯಿ ತಮ್ಮ ಹೆಣ್ಣು ಮಕ್ಕಳನ್ನು ಕಾಣಲು ಟೋಕಿಯೊಗೆ ಪ್ರಯಾಣಿಸುವುದು, ಅಷ್ಟು ದೂರದಿಂದ ಬಂದ ತಂದೆ ತಾಯಿಯನ್ನು ಕಂಡು ಮಾತನಾಡುವಷ್ಟೂ ಪುರುಸೊತ್ತಿಲ್ಲದಂತೆ ದುಡಿಮೆಗೆ ಶರಣೆಂದ ಮಕ್ಕಳು, ಆ ಹಿರಿಜೀವಗಳ ಸಂಕಟ ಮತ್ತು ಟೋಕಿಯೊದಲ್ಲಿ ಅವರು ಎದುರಿಸುವ ಪರಿಸ್ಥಿತಿಗಳು, ಮಕ್ಕಳ ನಿರ್ಲಿಪ್ತತೆ... ಹೀಗೆ ಹಲವು ಸಾಮಾಜಿಕ ಆಯಾಮಗಳಲ್ಲಿ ಸಿನಿಮಾ ಸಾಗುತ್ತದೆ.

ಚಿತ್ರೋತ್ಸವ ನಡೆಯುವ ಸ್ಥಳ– ಗ್ಯಾಲರಿಯ ಸಭಾಂಗಣ, ಮಾಣಿಕ್ಯವೇಲು ಮ್ಯಾನ್ಷನ್‌, ಅರಮನೆ ರಸ್ತೆ. ಸಂಜೆ 5. ಪ್ರವೇಶ ಉಚಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.