ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗಕಾಮ ಅಪರಾಧ: ‘ಸುಪ್ರೀಂ’ ಮರುಪರಿಶೀಲನೆ

Last Updated 8 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಯಸ್ಕರಿಬ್ಬರ ನಡುವೆ ಸಮ್ಮತಿಯ ಸಲಿಂಗ ಲೈಂಗಿಕ ಸಂಬಂಧವನ್ನು ಅಪರಾಧ ಎಂದು ಪರಿಗಣಿಸುವ 2013ರ ತನ್ನ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ಕಾಲದ ಜತೆಗೆ ಕಾನೂನು ಮತ್ತು ಸಾಮಾಜಿಕ ನೈತಿಕತೆ ಬದಲಾಗಬೇಕು. ತಮ್ಮ ಆಯ್ಕೆಯನ್ನು ಅನುಸರಿಸಲು ಬಯಸುವ ಜನರನ್ನು ನಿರಂತರವಾಗಿ ಭಯದಲ್ಲಿ ಇರಿಸುವುದು ಸರಿಯಲ್ಲ ಎಂದೂ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿದೆ.

ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ನ ಸಾಂವಿಧಾನಿಕ ಮೌಲಿಕತೆಯನ್ನು ಪ್ರಶ್ನಿಸಿ ನವತೇಜ್‌ ಸಿಂಗ್ ಜೋಹರ್‌ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ಈ ವಿಚಾರವನ್ನು ಸಂವಿಧಾನ ಪೀಠದ ಪರಿಶೀಲನೆಗೆ ಒಪ್ಪಿಸಲು ನಿರ್ಧರಿಸಿದೆ.

ನಿವೃತ್ತ ನ್ಯಾಯಮೂರ್ತಿ ಕೆ. ಪುಟ್ಟಸ್ವಾಮಿ ಸಲ್ಲಿಸಿದ ಖಾಸಗಿತನದ ಹಕ್ಕು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಪ್ರಕರಣಗಳಲ್ಲಿ ನೀಡಿರುವ ತೀರ್ಪಿನ ಆಧಾರದಲ್ಲಿ ಸಂವಿಧಾನದ ವಿಸ್ತೃತ ತತ್ವಗಳನ್ನು ಇಟ್ಟುಕೊಂಡು ಸಲಿಂಗ ಲೈಂಗಿಕತೆಯನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಈ ಎಲ್ಲ ಪ್ರಕರಣಗಳಲ್ಲಿಯೂ ವೈಯಕ್ತಿಕ ಲೈಂಗಿಕ ಒಲವುಗಳಿಗೆ ಮಹತ್ವ ನೀಡಲಾಗಿದೆ. ಸುಪ್ರೀಂ ಕೋರ್ಟ್‌ನ ಈ ನಿರ್ಧಾರ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ದೊಡ್ಡ ಗೆಲುವಾಗಿದೆ.

‘ಸೆಕ್ಷನ್‌ 377ರಲ್ಲಿ ‘ನಿಸರ್ಗ ವಿರುದ್ಧವಾದ ಲೈಂಗಿಕ ಸಂಪರ್ಕ’ ಎಂಬ ವಾಕ್ಯ ಬಳಸಲಾಗಿದೆ. ನಿಸರ್ಗಸಹಜವಾದ ಪ್ರವೃತ್ತಿ ಮತ್ತು ವ್ಯಕ್ತಿಯ ಆಯ್ಕೆಗಳು ಪರಸ್ಪರ ಗಡಿ ಮೀರಿ ಹೋಗಬಾರದು. ಆದರೆ, ಸಂವಿಧಾನದ 21ನೇ ವಿಧಿಯು ವ್ಯಕ್ತಿಗೆ ನೀಡಿರುವ ಹಕ್ಕುಗಳನ್ನು ಕಾನೂನಿನ ಮೂಲಕ ತಿರುಚುವುದಕ್ಕೂ ಅವಕಾಶ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನೈತಿಕತೆಯ ಬಗ್ಗೆ ಜನರಲ್ಲಿ ಇರುವ ಗ್ರಹಿಕೆಯು ಸಂವಿಧಾನದಲ್ಲಿ ಸೇರಿರಲೇಬೇಕು ಎಂದಿಲ್ಲ ಎಂದೂ ನ್ಯಾಯಾಲಯ ಅಭಿಪ‍್ರಾಯಪಟ್ಟಿದೆ.
*
377ನೇ ಸೆಕ್ಷನ್‌ ಏನು?
ಯಾವುದೇ ರೀತಿಯ ಅಸಹಜ ಲೈಂಗಿಕತೆಯನ್ನು ಈ ಸೆಕ್ಷನ್‌ ಅಪರಾಧ ಎಂದು ಪರಿಗಣಿಸುತ್ತದೆ. ಇದಕ್ಕೆ ಗರಿಷ್ಠ ಜೀವಾವಧಿವರೆಗೆ ಶಿಕ್ಷೆ ವಿಧಿಸಲು ಅವಕಾಶ ಇದೆ.

*
ಸಂವಿಧಾನದ ನೈತಿಕತೆಗೆ ವಿರುದ್ಧವಾಗಿಲ್ಲ ಎಂದಾದರೆ ವೈಯಕ್ತಿಕ ಸ್ವಾಯತ್ತೆ ಮತ್ತು ವೈಯಕ್ತಿಕ ಪ್ರವೃತ್ತಿಗಳನ್ನು ದಮನ ಮಾಡುವುದಕ್ಕೆ ಅವಕಾಶ ಇಲ್ಲ
– ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT