ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀರಾಬಾಯಿಗೆ ಚಿನ್ನದ ಸಂಭ್ರಮ

ವೇಟ್‌ಲಿಫ್ಟಿಂಗ್‌: ಪುರುಷರ ವಿಭಾಗದಲ್ಲಿ ಕೊರಡಾ ರಮಣಗೆ 2 ಚಿನ್ನ
Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ಸಾಯಿಕೋಮ್ ಮೀರಾ ಬಾಯಿ ಚಾನು ಭಾನುವಾರ ಮೂಡುಬಿದಿರೆಯಲ್ಲಿ  ಆರಂಭವಾದ 70ನೇ ರಾಷ್ಟ್ರಮಟ್ಟದ ಪುರುಷ ಹಾಗೂ 33ನೇ ಮಹಿಳಾ ಸೀನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಟ್ರಿಪಲ್ ಸಾಧನೆ ಮಾಡಿದರು. ಅವರು ಇತ್ತೀಚೆಗೆ ಅಮೆರಿಕದಲ್ಲಿ ನಡೆದಿದ್ದ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್‌ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವೇಟ್‌ಲಿಫ್ಟಿಂಗ್‌ ಸಂಸ್ಥೆ ಮತ್ತು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ  ನಡೆಯುತ್ತಿರುವ ಸ್ಪರ್ಧೆಯ 48 ಕೆ.ಜಿ ಮಹಿಳಾ ವಿಭಾಗದಲ್ಲಿ ರೈಲ್ವೆ ತಂಡದ ಮೀರಾಬಾಯಿ ಒಟ್ಟು 178 ಕೆ.ಜಿ ಭಾರ ಎತ್ತಿದರು. ಅವರು ಸ್ನ್ಯಾಚ್‌ ವಿಭಾಗದಲ್ಲಿ 78 ಕೆ.ಜಿ, ಹಾಗೂ ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ 100 ಕೆ.ಜಿ ಭಾರ ಎತ್ತಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ಇದೇ ವಿಭಾಗದಲ್ಲಿ ಒಡಿಶಾದ ಸುಶೀಲಾ ಮಾಜಿ 162 ಕೆ.ಜಿ ಭಾರ ಎತ್ತಿ ಬೆಳ್ಳಿ, ಹರಿಯಾಣದ ಪೂನಂ ದಲಾಲ್‌ 159 ಕೆ.ಜಿ. ಭಾರ ಎತ್ತಿ ಕಂಚಿನ ಪದಕ ಪಡೆದರು.

ಪುರುಷರ ವಿಭಾಗದ 56 ಕೆ.ಜಿ ವಿಭಾಗದಲ್ಲಿ ತೀವ್ರ ಪೈಪೋಟಿಯಲ್ಲಿ ರೈಲ್ವೆ  ತಂಡದ ಕೊರಡಾ ರಮಣ 240 ಕೆ.ಜಿ ಭಾರ ಎತ್ತಿದರು. ಸ್ನ್ಯಾಚ್ ವಿಭಾಗದಲ್ಲಿ 108 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ 132 ಕೆ.ಜಿ ಭಾರ ಎತ್ತಿ   ಚಿನ್ನದ ಪದಕ ಗಳಿಸಿದರು. ಸೇನಾ ಸ್ಪೋರ್ಟ್ಸ್‌ ಕ್ಲಬ್‌ ಬೋರ್ಡ್‌ನ ಎಂ. ಮನೋಜಕುಮಾರ್‌ 237 ಕೆ.ಜಿ ಭಾರ ಎತ್ತಿ ಬೆಳ್ಳಿ, ಎಸ್‌. ರಾಮಕುಮಾರ್‌ 236 ಕೆ.ಜಿ ಭಾರ ಎತ್ತಿ ಕಂಚಿನ ಪದಕ ಪಡೆದರು.

2016ರಲ್ಲಿ ಸಾಧನೆ ಮಾಡಿದ್ದ ಮಣಿಪುರದ ರಿಷಿಕಾಂತ್‌ ಸಿಂಗ್‌ ಪದಕ ನಿರೀಕ್ಷೆ ಕೈಕೊಟ್ಟಿತು. ಸ್ನ್ಯಾಚ್‌ ಹಾಗೂ ಕ್ಲೀನ್‌ ಮತ್ತು ಜರ್ಕ್‌ನಲ್ಲಿ ವೈಫಲ್ಯ ಕಂಡ ಅವರು ನಿರಾಶೆ ಅನುಭವಿಸಿದರು.

‘ಇಂದಿನ ಸಾಧನೆಯಿಂದ ಆತ್ಮವಿಶ್ವಾಸ ಹೆಚ್ಚಿದೆ. ಮೂರು ಚಿನ್ನದ ಪದಕ ಗಳಿಸಿರುವುದು ಖುಷಿ ತಂದಿದೆ’ ಎಂದು ಮಣಿಪುರದ ಸಾಯಿಕೋಮ್ ಮೀರಾಬಾಯಿ ಚಾನು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT