ಗುರುವಾರ , ಜೂನ್ 4, 2020
27 °C
ಜನವರಿ 19ರಂದು ಸಂಭವಿಸಿದ್ದ ಸ್ಥಳದಲ್ಲೇ ಜ್ವಾಲೆ

ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ನಾಗರಿಕರ ಆತಂಕಕ್ಕೆ ಕಾರಣವಾಗಿದೆ.

ಕೆರೆ ಪ್ರದೇಶದ ಈಜಿಪುರದ ಶ್ರೀನಿವಾಗಿಲು ಭಾಗದಲ್ಲಿ ಜನವರಿ 19ರಂದು ಬೆಂಕಿ ಕಾಣಿಸಿಕೊಂಡಿತ್ತು. ಈ ಸ್ಥಳದಿಂದ 10–15 ಮೀಟರ್‌ ದೂರದಲ್ಲಿ ಗುರುವಾರ ಸಂಜೆ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ನಂದಿಸಲು 12 ಅಗ್ನಿಶಾಮಕ ವಾಹನಗಳು ಸಂಜೆ 5ರ ವೇಳೆಗೆ ಸ್ಥಳಕ್ಕೆ ಬಂದವು. ಆದರೆ, ಬೆಂಕಿ ಬಿದ್ದ ಸ್ಥಳಕ್ಕೆ ತ್ವರಿತಗತಿಯಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಈ ಪ್ರದೇಶವು ರಕ್ಷಣಾ ಇಲಾಖೆಗೆ ಸೇರಿದ್ದರಿಂದ ಅನುಮತಿ ಪಡೆಯುವುದು ಅಗತ್ಯವಿತ್ತು. ಸಂಜೆ 6ಕ್ಕೆ ಬೆಂಕಿಯನ್ನು ನಂದಿಸಲಾಯಿತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ನಗರಾಭಿವೃದ್ಧಿ ಇಲಾಖೆ ಈ ಜಲಮೂಲದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿವೆ. ಆದರೆ, ಕೆರೆಗೆ ಸುರಿದಿರುವ ಕಸ, ಕಟ್ಟಡದ ಅವಶೇಷಗಳು ಹಾಗೂ ಒಣ ಹುಲ್ಲನ್ನು ತೆರವುಗೊಳಿಸಲು ಅವುಗಳಿಗೆ ಸಾಧ್ಯವಾಗಿಲ್ಲ.

ಅಂದು 28 ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿತ್ತು. ಆರು ಮಂದಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳು, 10 ಜಿಲ್ಲಾ ಅಗ್ನಿಶಾಮಕ ಅಧಿಕಾರಿ, 76 ಸಿಬ್ಬಂದಿ ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯ 11 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

‘ಕೆಲವು ದಿನಗಳಿಂದ ಗಾಳಿಯ ತೀವ್ರತೆ ಕಡಿಮೆಯಾಗಿದೆ. ಹೀಗಾಗಿ ಬೇಗನೇ ಬೆಂಕಿ ನಂದಿಸಲು ಸಾಧ್ಯವಾಯಿತು. ಯಂತ್ರಗಳ ಕೊರತೆಯಿಂದಾಗಿ ಕಳೆ ಮತ್ತು ಹುಲ್ಲನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ. ಕಳೆ ಕೀಳುವ ಯಂತ್ರದ ಮೂಲಕ ಕೆಲಸ ಮಾಡಿಸಲು ಉದ್ದೇಶಿಸಲಾಗಿದೆ. ಆದರೆ, ಯಂತ್ರದ ಮಾಲೀಕರು ಕಾಲಾವಕಾಶ ಕೋರಿದ್ದಾರೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ಸಂಜೆ 3.30ರ ಸುಮಾರಿಗೆ ಬೆಂಕಿಯನ್ನು ನೋಡಿದೆ. 4 ಗಂಟೆ ಸುಮಾರಿಗೆ ಬೆಂಕಿ ನಿಯಂತ್ರಣಕ್ಕೆ ಬಂದಂತೆ ಕಂಡುಬಂತು. ಆದರೆ, 5 ಗಂಟೆ ಸುಮಾರಿಗೆ ಅದರ ತೀವ್ರತೆ ಹೆಚ್ಚಾಯಿತು. ಜ್ವಾಲೆಯ ಪ್ರಮಾಣ ಕಡಿಮೆಯಾದರೂ, ದಟ್ಟ ಹೊಗೆ ಆವರಿಸಿತ್ತು’ ಎಂದು ಇಬ್ಬಲೂರಿನ ನಿವಾಸಿ ಭಾರತಿಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳ್ಳಂದೂರು ಕೆರೆಯ ಜಲಮೂಲವನ್ನು ರಕ್ಷಿಸುವಲ್ಲಿ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಇಬ್ಬಲೂರಿನ ನಿವಾಸಿ ಸಂದೀಪ್‌ ಸುದರ್ಶನ್‌ ದೂರಿದರು.

‘ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಬೆಂಕಿ ಹಾಗೂ ಹೊಗೆ ಕಾಣಿಸಿಕೊಳ್ಳುವ ಪ್ರಕರಣಗಳು ನಡೆಯುತ್ತಿವೆ. ಈ ಬಗೆಗಿನ ವರದಿಯನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಅಶೋಕ ಪರಿಸರ ಸಂಶೋಧನಾ ಟ್ರಸ್ಟ್‌ (ಏಟ್ರಿ) ನೀಡಿರುವ ವರದಿಯಲ್ಲಿ ಮಾಲಿನ್ಯಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆ ತಿಳಿಸಲಾಗಿದೆ. ಕೊಳಚೆ ನೀರು ಜಲಮೂಲಕ್ಕೆ ಸೇರುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ’ ಎಂದು ಸೋನಾಲಿ ಸಿಂಗ್‌ ತಿಳಿಸಿದರು.

***

ಎನ್‌ಜಿಟಿಯಲ್ಲಿ ಇಂದು ವಿಚಾರಣೆ

ವರ್ತೂರು ಕೆರೆಯ ಅತಿಕ್ರಮಣ ಹಾಗೂ ಮಾಲಿನ್ಯಕ್ಕೆ ಸಂಬಂಧಿಸಿದ ವಿಚಾರಣೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಶುಕ್ರವಾರ (ಇದೇ 2) ನಡೆಸಲಿದೆ.  ಸ್ಥಳೀಯರು ಸ್ಥಾಪಿಸಿಕೊಂಡ ವರ್ತೂರು ಕೆರೆ ತಂಡ ಮತ್ತು ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆ‌ಯು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಗಳ ವಿರುದ್ಧ 2017ರ ಡಿಸೆಂಬರ್‌ನಲ್ಲಿ ದಾವೆ ಹೂಡಿದ್ದವು.

***

‘ಬಿಡಿಎ ಅಧಿಕಾರಿಗಳ ವಿರುದ್ಧ ಪ್ರಕರಣ’

‘ಸಮಸ್ಯೆ ಇತ್ಯರ್ಥಪಡಿಸಲು ಬಿಡಿಎಗೆ ಈಗಾಗಲೇ ಸಾಕಷ್ಟು ಬಾರಿ ನಿರ್ದೇಶನ ನೀಡಿದ್ದೇವೆ. ಕೆರೆ ಬಳಿ ಕಾವಲುಗಾರರನ್ನು ನಿಯೋಜಿಸುವಂತೆ ಸೂಚಿಸಿದ್ದೇವೆ. ಆದರೆ, ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ. ಕೆರೆಯ ಸಂರಕ್ಷಣೆಗೆ ಶೀಘ್ರವೇ ಕ್ರಮ ಕೈಗೊಳ್ಳದಿದ್ದರೆ ಬಿಡಿಎ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’ ಎಂದು ಕೆಎಲ್‌ಸಿಡಿಎ ಮುಖ್ಯ ಕಾರ್ಯನಿರ್ವಣಾಧಿಕಾರಿ ಸೀಮಾ ಗರ್ಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

***

ಹುಲ್ಲು ಕತ್ತರಿಸುವುದಕ್ಕೆ ನಿಷೇಧ

‘ಈ ಹಿಂದಿನ ಬೆಂಕಿ ಅವಘಡದ ಬಗ್ಗೆ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಒಣ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದೆಯೇ ಅಥವಾ ಯಾರಾದರೂ ಬೆಂಕಿ ಹಚ್ಚುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಬೇಕಿದೆ. ಇದು ಮತ್ತೊಮ್ಮೆ ಪುನರಾವರ್ತನೆಯಾದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಕೆರೆ ಬಳಿಯ ಹುಲ್ಲು ಕತ್ತರಿಸುವುದನ್ನು ನಿಷೇಧಿಸುತ್ತೇವೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ತಿಳಿಸಿದರು.

***

ಅಂಕಿ–ಅಂಶ

910 ಎಕರೆ

ಬೆಳ್ಳಂದೂರು ಕೆರೆಯ ವಿಸ್ತೀರ್ಣ

30 ಕೋಟಿ ಲೀಟರ್‌

ಕೆರೆಗೆ ಪ್ರತಿದಿನ ಸೇರುವ ಕೊಳಚೆ ನೀರಿನ ಪ್ರಮಾಣ

20 ಕೋಟಿ ಲೀಟರ್‌

ಪ್ರತಿದಿನ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡಲಾಗುತ್ತಿದೆ

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.