ಭಾನುವಾರ, ಜೂನ್ 7, 2020
29 °C

ಕೆಸಿಡಿಸಿ ಘಟಕಕ್ಕೆ ಪ್ರತಿಭಟನೆಯ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಸಿಡಿಸಿ ಘಟಕಕ್ಕೆ ಪ್ರತಿಭಟನೆಯ ಬಿಸಿ

ಬೆಂಗಳೂರು: ನಗರದ ಕೂಡ್ಲು ಗೇಟ್‌ ಬಳಿಯ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಘಟಕವನ್ನು ಮುಚ್ಚುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಇದೇ 11ರಂದು ರ‍‍್ಯಾಲಿ ಹಮ್ಮಿಕೊಂಡಿದ್ದಾರೆ.

ಘಟಕದಲ್ಲಿನ ಕಸದ ವಾಸನೆಯಿಂದ ಸುತ್ತಲಿನ ನಿವಾಸಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಗಾಳಿ ಬೀಸಿದ ಕಡೆ ಕೆಟ್ಟ ವಾಸನೆ ಕಂಡುಬರುತ್ತಿದೆ. ಘಟಕವು ಜನರ ನೆಮ್ಮದಿಯನ್ನು ಕಸಿದುಕೊಂಡಿದೆ ಎಂಬುದು ಸ್ಥಳೀಯರ ಆರೋಪ.

‘ಕೂಡ್ಲು ಗೇಟ್‌, ಹರಳೂರು, ಹರಳುಕುಂಟೆ, ಸೋಮಸುಂದರಪಾಳ್ಯ ಮತ್ತು ಪರಂಗಿಪಾಳ್ಯ (ಕೆಎಚ್‌ಎಚ್‌ಎಸ್‌ಪಿ) ಪ್ರದೇಶ ನಿವಾಸಿಗಳ ಸಂಘ’ದ ನೇತೃತ್ವದಲ್ಲಿ ಎಚ್‌ಎಸ್‌ಆರ್‌ ಬಡಾವಣೆಯ 2ನೇ ಹಂತದ 27ನೇ ಮುಖ್ಯರಸ್ತೆಯ ಕೆಇಬಿ ಜಂಕ್ಷನ್‌ ಬಳಿ ಬೆಳಿಗ್ಗೆ 9ರಿಂದ 11ರವರೆಗೆ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ಜಂಕ್ಷನ್‌ನಲ್ಲಿ ಮಾನವ ಸರಪಳಿ ರಚಿಸಲಿದ್ದಾರೆ.

‘ಕೆಸಿಡಿಸಿ ಈ ಘಟಕವನ್ನು 1975ರಿಂದ ನಡೆಸುತ್ತಿದೆ. ಆಗ ಈ ಸ್ಥಳ ನಗರದ ಹೊರಭಾಗದಲ್ಲಿ ಇತ್ತು. ಕಸವನ್ನು ತೆರೆದ ಸ್ಥಳದಲ್ಲೇ ರಾಶಿ ಹಾಕಲಾಗುತ್ತಿತ್ತು. ನಗರ ಬೆಳೆದಂತೆ ಘಟಕದ ಸುತ್ತಲೂ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಹಾಗೂ ಮನೆಗಳು ನಿರ್ಮಾಣಗೊಂಡವು. ಸ್ಥಳೀಯರ ವಿರೋಧದಿಂದ 2008ರಲ್ಲಿ ಅದನ್ನು ಮುಚ್ಚಲಾಗಿತ್ತು. ಆದರೆ, ಮಂಡೂರಿನಲ್ಲಿ ಕಸ ಸುರಿಯುವುದನ್ನು ನಿಲ್ಲಿಸಿದ ಬಳಿಕ, 2013ರಿಂದ ಈ ಘಟಕವನ್ನು ಪುನಃ ಆರಂಭಿಸಲಾಗಿತ್ತು’ ಎಂದು ಸಂಘದ ಖಜಾಂಚಿ ಲಲಿತಾಂಬಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟಕ ಮುಚ್ಚುವಂತೆ ಒತ್ತಾಯಿಸಿ 2015ರಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದೇವೆ. ಕೆಟ್ಟ ವಾಸನೆ ಬಾರದಂತೆ ಘಟಕವನ್ನು ಮೇಲ್ದರ್ಜೆಗೆ ಏರಿಸುತ್ತೇವೆ ಹಾಗೂ ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡಿ ಗೊಬ್ಬರ ತಯಾರಿಸುತ್ತೇವೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದರು. ತೆರೆದ ಸ್ಥಿತಿಯಲ್ಲಿದ್ದ ಘಟಕದಲ್ಲಿ ಶೆಡ್‌ಗಳನ್ನು ನಿರ್ಮಿಸಿದ್ದರು. ಆದರೆ, ದುರ್ವಾಸನೆ ತಡೆಗಟ್ಟಲು ಸಾಧ್ಯವಾಗಿಲ್ಲ’ ಎಂದು ದೂರಿದರು.

ಈ ಘಟಕದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜೈವಿಕ ಶುದ್ಧೀಕರಣ ಉಪಕರಣಗಳನ್ನು ಅಳವಡಿಸಲಾಗಿದೆ. ಇವು ಕಸದಿಂದ ಬರುವ ಕೆಟ್ಟ ಗಾಳಿಯನ್ನು ಹೀರಿಕೊಂಡು ಸಂಸ್ಕರಿಸಿ ಶುದ್ಧ ಗಾಳಿಯನ್ನು ಬಿಡುಗಡೆ ಮಾಡಬೇಕು. ಆದರೆ, ಇವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿವರಿಸಿದರು.

ಘಟಕದ ಮೇಲುಸ್ತುವಾರಿ ನೋಡಿಕೊಳ್ಳಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿಲ್ಲ. ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಿಗೇ ಈ ಜವಾಬ್ದಾರಿ ವಹಿಸಲಾಗಿದೆ. ಅವರು ಕಾರ್ಯದೊತ್ತಡದಿಂದ ಈ ಘಟಕದ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದರು.

ಕೆರೆಯಂಗಳದಲ್ಲಿ ಆರ್‌ಡಿಎಫ್‌ ಗುಡ್ಡ:

ಆರ್‌ಡಿಎಫ್‌ (ರೆಫ್ಯೂಸ್ಡ್‌ ಡಿರೈವ್ಡ್‌ ಫ್ಯೂಯಲ್) ಅನ್ನು ಸೋಮಸುಂದರಪಾಳ್ಯ ಕೆರೆಯ ಅಂಗಳದಲ್ಲಿ ಸುರಿದು, ಅದರ ಮೇಲೆ ಮಣ್ಣು ಹಾಕಿ ಮುಚ್ಚಲಾಗಿದೆ. ಇದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ (ಎನ್‌ಜಿಟಿ) ಆದೇಶದ ಉಲ್ಲಂಘನೆ. ಪ್ರತಿದಿನ 100 ಟನ್‌ ಆರ್‌ಡಿಎಫ್‌ ಅನ್ನು ಆಂಧ್ರಪ್ರದೇಶದ ಸಿಮೆಂಟ್‌ ಕಾರ್ಖಾನೆಗಳಿಗೆ ರವಾನೆ ಮಾಡುವುದಾಗಿ ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ತಿಳಿಸಿದ್ದರು. ಆದರೆ, ಪ್ರತಿದಿನ 20 ಟನ್‌ ಆರ್‌ಡಿಎಫ್‌ ಅನ್ನೂ ಸಾಗಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಘಟಕವನ್ನು ಮೇಲ್ದರ್ಜೆಗೆ ಏರಿಸುವುದು ದೀರ್ಘಾವಧಿಯ ಪರಿಹಾರವಾಗದು. ದಶಕಗಳ ಕಾಲ ಈ ಪ್ರದೇಶ ಕಲುಷಿತಗೊಂಡಿದೆ. ಇದನ್ನು ಕನಿಷ್ಠ 5–6 ವರ್ಷಗಳವರೆಗೆ ಮುಚ್ಚಬೇಕು. ಈ ಪ್ರದೇಶದಲ್ಲಿ ಸಮಸ್ಯೆ ಸಂಪೂರ್ಣ ನಿವಾರಣೆ ಆದ ಬಳಿಕ ಘಟಕವನ್ನು ಮತ್ತೆ ತೆರೆಯಬಹುದು ಎಂದು ಸಲಹೆ ನೀಡಿದರು.

‘ಸ್ಥಳೀಯರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ’

ಕೆಸಿಡಿಸಿ ಘಟಕದ ಕಸ ಸಂಸ್ಕರಣೆ ಮಾಡುವ ಪ್ರಮುಖ ಘಟಕದಲ್ಲಿ ಸ್ವಲ್ಪ ಪ್ರಮಾಣದ ದುರ್ವಾಸನೆ ಇರುವುದು ಸ್ಥಳ ಪರಿಶೀಲನೆಯ ವೇಳೆ ಕಂಡುಬಂತು.

ಬಡಾವಣೆಗಳಿಂದ ಸಂಗ್ರಹಿಸಿದ ತಾಜಾ ಕಸವನ್ನು ಒಂದು ಸಾಲಿನಲ್ಲಿ ಸುರಿಯಲಾಗುತ್ತದೆ. ಅದನ್ನು ಏಳು ದಿನಗಳವರೆಗೆ ಅಲ್ಲೇ ಬಿಡಲಾಗುತ್ತದೆ. ಇಂತಹ ಏಳು ಸಾಲುಗಳಿವೆ. ಎಂಟನೇ ದಿನಕ್ಕೆ ಒಂದು ಸಾಲಿನ ಕಸವನ್ನು ಮತ್ತೊಂದು ಸಾಲಿಗೆ ಬದಲಾಯಿಸಲಾಗುತ್ತದೆ. ಹೀಗೆ ಸುಮಾರು 40 ದಿನಗಳ ಬಳಿಕ ಕಸವನ್ನು ಯಂತ್ರಗಳಿಗೆ ಹಾಕಿ ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. 4 ಎಂ.ಎಂ. ಶ್ರೇಣಿಯ ಗೊಬ್ಬರವನ್ನು ತಯಾರಾಗಲಿದ್ದು, ಅದನ್ನು ರೈತರಿಗೆ ಮಾರಾಟ ಮಾಡಲಾಗುತ್ತದೆ.

ಕಸವನ್ನು ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಬದಲಾಯಿಸುವ ಸಂದರ್ಭದಲ್ಲಿ ಕೆಟ್ಟ ವಾಸನೆಯನ್ನು ನಿಯಂತ್ರಿಸುವ ಉದ್ದೇಶದಿಂದ ಡಿಯೋಡ್ರೈಸರ್‌ ಎಂಬ ದ್ರಾವಣ ಸಿಂಪಡಿಸಲಾಗುತ್ತದೆ.

ಗಾಳಿ ಯಾವ ದಿಕ್ಕಿನಲ್ಲಿ ಬೀಸುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ದಿಕ್ಸೂಚಿ ಉಪಕರಣಗಳನ್ನು ಅಳವಡಿಸಲಾಗಿದೆ. ಗಾಳಿ ಬೀಸುವ ದಿಕ್ಕಿನ ಕಡೆಗೆ ಇರುವ ಕಸಕ್ಕೆ ದ್ರಾವಣ ಸಿಂಪಡಿಸಲಾಗುತ್ತಿದೆ. ಇದರಿಂದ ವಾಸನೆ ತಡೆಯಬಹುದು ಎಂದು ಘಟಕದ ಸಿಬ್ಬಂದಿ ಮಾಹಿತಿ ನೀಡಿದರು.

ಕಸದಿಂದ ಉತ್ಪತ್ತಿಯಾಗುವ ರಸವನ್ನು (ಲಿಚೆಟ್‌) ಸಂಗ್ರಹಿಸಲು 19 ಅಡಿ ಆಳದ ಬಾವಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಸುಮಾರು 50 ಸಾವಿರ ಲೀಟರ್‌ ತ್ಯಾಜ್ಯರಸ ಸಂಗ್ರಹಿಸಬಹುದು. ಪ್ರತಿದಿನ ಎರಡು ಲೋಡ್‌ ತ್ಯಾಜ್ಯರಸವನ್ನು ಕೊಳಚೆ ನೀರು ಶುದ್ಧೀಕರಣ ಘಟಕಗಳಿಗೆ ರವಾನಿಸಲಾಗುತ್ತಿದೆ. ಲಿಚೆಟ್‌ ಸಂಗ್ರಹಿಸುವ ಕಡೆ ಹೆಚ್ಚೇನೂ ದುರ್ವಾಸನೆ ಇರಲಿಲ್ಲ.

ಈ ಹಿಂದೆ ಸುಮಾರು 3,000 ಟನ್‌ ಕಸದ ರಾಶಿ ಇತ್ತು. ಅದನ್ನು ಸಂಸ್ಕರಣೆ ಮಾಡಿ ಗೊಬ್ಬರವನ್ನಾಗಿ ಪರಿವರ್ತಿಸಲಾಗಿದೆ ಎಂದು ಘಟಕದ ಸಿಬ್ಬಂದಿ ತಿಳಿಸಿದರು.

ಚಿತಾಗಾರದ ವಾಸನೆ:

ಘಟಕದ ಪಕ್ಕದಲ್ಲೇ ಪಾಲಿಕೆಗೆ ಸೇರಿದ ಚಿತಾಗಾರ ಇದೆ. ಇಲ್ಲಿ ಶವಗಳನ್ನು ಸುಡಲಾಗುತ್ತದೆ. ಚಿತಾಗಾರದಿಂದ ಕೆಟ್ಟ ವಾಸನೆ ಬರುತ್ತದೆ. ನೆಮ್ಮದಿಯಾಗಿ ಊಟ ಮಾಡಲು ಸಾಧ್ಯವಾಗುವುದಿಲ್ಲ. ಶನಿವಾರ, ಭಾನುವಾರ ವಾಸನೆ ಪ್ರಮಾಣ ಜಾಸ್ತಿ. ಆದರೆ, ಕೆಡಿಸಿಸಿ ಘಟಕದಿಂದಲೇ ವಾಸನೆ ಬರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಭಾವಿಸಿದ್ದಾರೆ ಎಂದರು.

ಅಂಕಿ–ಅಂಶ

‌170 ಟನ್‌

ಘಟಕಕ್ಕೆ ಪ್ರತಿದಿನ ಬರುವ ಕಸ32

ಘಟಕದಲ್ಲಿ ಹಸಿಕಸ ಸುರಿದು ಗೊಬ್ಬರವನ್ನಾಗಿ ಪರಿವರ್ತಿಸಲು ಇರುವ ಸಾಲುಗಳು45

ಕಸ ಗೊಬ್ಬರವಾಗಿ ಪರಿವರ್ತನೆಯಾಗಲು ಬೇಕಾಗುವ ದಿನಗಳು30 ಟನ್‌

ಪ್ರತಿದಿನ ತಯಾರಾಗುವ ಸಾವಯವ ಗೊಬ್ಬರ2,200 ಲೀಟರ್‌

ಪ್ರತಿದಿನ ಎಸ್‌ಟಿಪಿಗಳಿಗೆ ರವಾನೆಯಾಗುವ ತ್ಯಾಜ್ಯರಸ (ಲಿಚೆಟ್‌)400 ಟನ್‌

ಒಂದು ತಿಂಗಳಲ್ಲಿ ಆಂಧ್ರಪ್ರದೇಶದ ಶಾಖೋತ್ಪನ್ನ ವಿದ್ಯುತ್‌ ಘಟಕಕ್ಕೆ ರವಾನೆಯಾದ ಆರ್‌ಡಿಎಫ್‌50

ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ

* ಕೆಸಿಡಿಸಿಯವರು ಕೆರೆಯ 4 ಎಕರೆ 1 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಬೇಕು.

– ಲಲಿತಾಂಬಾ, ಕೆಎಚ್‌ಎಚ್‌ಎಸ್‌ಪಿ ಖಜಾಂಚಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.