ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನಾಭಿಪ್ರಾಯ ಮರೆತು ಪಕ್ಷಕ್ಕೆ ಗೆಲುವು ತನ್ನಿ

Last Updated 5 ಫೆಬ್ರುವರಿ 2018, 10:24 IST
ಅಕ್ಷರ ಗಾತ್ರ

ಧಾರವಾಡ: ‘ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಂದ ಇಷ್ಟು ವರ್ಷಗಳ ಕಾಲ ಸೋಲನ್ನು ಅನುಭವಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ಯಾವುದೇ
ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ಪಕ್ಷಕ್ಕೆ ಗೆಲುವು ತಂದು ಕೊಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಹುಬ್ಬಳ್ಳಿ ಧಾರವಾಡ ಪಶ್ಚಿಮ ಮತಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಅವರು, ‘ಈ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸಲು 13 ಜನ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಇವರಲ್ಲಿ ಯಾರಿಗೇ ಟಿಕೆಟ್ ದೊರೆತರೂ ಅವರಿಗೆ ಬೆಂಬಲ ಸೂಚಿಸಿ ಕೆಲಸ ಮಾಡಬೇಕು’ ಎಂದು ಮನವಿ ಮಾಡಿಕೊಂಡರು.

‘ಕಳೆದ ಬಾರಿ ಎಸ್‌.ಆರ್‌.ಮೋರೆ ಹಾಗೂ ಇಸ್ಮಾಯಿಲ್ ತಮಟಗಾರ ನಡುವಿನ ಸ್ಪರ್ಧೆಯಿಂದ ಯಾವುದೇ ಪ್ರಯತ್ನವಿಲ್ಲದ ಬಿಜೆಪಿಯ ಅರವಿಂದ ಬೆಲ್ಲದ ಗೆಲುವು ಸಾಧಿಸಿದರು. ಆದರೆ ಇನ್ನು ಮುಂದೆ ಹೀಗಾಗದಂತೆ ತಡೆಯಲು ಪ್ರತಿಯೊಬ್ಬರೂ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದರು.

ಸಂಸದ ಪ್ರಹ್ಲಾದ ಜೋಶಿ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹಾಗೂ ಶಾಸಕ ಅರವಿಂದ ಬೆಲ್ಲದ ವಿರುದ್ಧ ವಾಗ್ದಾಳಿ ನಡೆಸಿ ವಿನಯ ಕುಲಕರ್ಣಿ, ‘ಈ ಮೂವರು ಮಹಾನ್‌ ಸುಳ್ಳಿನ ಸರದಾರರು. ಬೆಲ್ಲದ ಅವರಂತೂ ಜೂನಿಯರ್‌ ಪ್ರಹ್ಲಾದ ಜೋಶಿಯಂತೆ. ಅವರನ್ನು ಶೋರೂಂ ಪೀಸಿನಂತೆ ಈ ಕ್ಷೇತ್ರಕ್ಕೆ ತರಲಾಗಿದೆ. ಹುಬ್ಬಳ್ಳಿಯಲ್ಲೇ ಇರುವ ಇವರು ಒಂದು ದಿನವೂ ತಮ್ಮ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿಲ್ಲ. ರಾಜ್ಯ ಸರ್ಕಾರದ ಅನುದಾನದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಿ ಮೋದಿ ಭಾವಚಿತ್ರ ಹಾಕುತ್ತಾರೆ’ ಎಂದು ಟೀಕಿಸಿದರು.

ಇದಕ್ಕೂ ಮೊದಲು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ, ‘ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಬಿ.ಎಸ್‌.ಯಡಿಯೂರಪ್ಪ ಸುಳ್ಳಿನ ಸರದಾರರು. ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ಹಾಕುತ್ತೇವೆ ಎಂದರು. ಇವರನ್ನು ನಂಬಿ ಜನರೂ ಖಾತೆ ತೆಗೆದರು. ಆದರೆ ಈವರೆಗೂ ಆ ಹಣ ಬರಲೇ ಇಲ್ಲ. ಈಗ ರಾಜ್ಯದ ಅಭಿವೃದ್ಧಿಗೆ ಕೇಂದ್ರವೇ ಹಣ ನೀಡುತ್ತಿದೆ ಎನ್ನುತ್ತಿದ್ದಾರೆ. ಆದರೆ ರಾಜ್ಯದಿಂದ ಪ್ರತಿವರ್ಷ ಹೋಗುವ ₹ 2 ಸಾವಿರ ಕೋಟಿ ತೆರಿಗೆಯನ್ನು ಅನುದಾನದ ರೂಪದಲ್ಲಿ ಹಿಂತಿರುಗಿಸುತ್ತಿರುವುದು ಅವರಿಗೆ ತಿಳಿಯದಷ್ಟು ಮುಗ್ಧರೇ’ ಎಂದು ಲೇವಡಿ ಮಾಡಿದರು.

ಕಾರ್ಯಕ್ರಮದ ಉದ್ದಕ್ಕೂ ಟಿಕೆಟ್ ಆಕಾಂಕ್ಷಿಗಳಾದ ಎಸ್‌.ಆರ್.ಮೋರೆ, ದೀಪಕ ಚಿಂಚೋರೆ ಹಾಗೂ ಇಸ್ಮಾಯಿಲ್ ತಮಟಗಾರ ಅವರಿಗೆ ಪ್ರತ್ಯೇಕ ಜೈಕಾರಗಳು ಸಭೆಯಿಂದ ಆಗಾಗ ಮೊಳಗುತ್ತಲೇ ಇದ್ದವು.

ಮುಂಬೈ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಮಾಣಿಕಂ ಠಾಕೂರ್‌, ಕೆಪಿಸಿಸಿ ಕಾರ್ಯದರ್ಶಿ ಎಸ್‌.ಆರ್‌.ಪಾಟೀಲ, ಕೆಪಿಸಿಸಿ ಉಪಾಧ್ಯಕ್ಷ ಎ.ಎಂ. ಹಿಂಡಸಗೇರಿ, ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಘೋರ್ಪಡೆ, ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಎಸ್.ಆರ್. ಮೋರೆ, ಪಾಲಿಕೆ ಸದಸ್ಯ ದೀಪಕ ಚಿಂಚೋರೆ, ಎಫ್‌.ಎಚ್. ಜಕ್ಕಪ್ಪನವರ, ಇಸ್ಮಾಯಿಲ್ ತಮಟಗಾರ ಇದ್ದರು.

ಮಾನೆ– ವಿನಯ ಜಟಾಪಟಿ!

ವೇದಿಕೆ ಮೇಲೆ ಎಸ್‌.ಆರ್.ಪಾಟೀಲ ಮಾತನಾಡುವ ಸಂದರ್ಭದಲ್ಲಿ ಸಚಿವ ವಿನಯ ಕುಲಕರ್ಣಿ ಹಾಗೂ ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ನಡುವೆ ತೀವ್ರ ಜಟಾಪಟಿ ನಡೆಯಿತು.

ಮಧ್ಯದಲ್ಲಿದ್ದ ಲೋಹಿತ ನಾಯ್ಕರ್ ಇಬ್ಬರನ್ನೂ ಸುಮ್ಮನಿರಿಸಲು ತೀವ್ರ ಕಸರತ್ತು ನಡೆಸಿದರು. ಅದರೂ ವಿನಯ ಕುಲಕರ್ಣಿ ಕೈ ತೋರಿಸಿ ಏರುದನಿಯಲ್ಲಿ ಮಾತನಾಡಿದರು. ನಂತರ ಮಾಣಿಕಂ ಠಾಕೂರ್‌ ಕಡೆ ತಿರುಗಿ ಮಾನೆ ಕಡೆ ಕೈತೋರಿಸಿ ವಿವರಣೆ ಒಪ್ಪಿಸುತ್ತಿದ್ದ ದೃಶ್ಯ ತೀವ್ರ ಚರ್ಚೆಗೆ ಕಾರಣವಾಯಿತು.

ನಂತರ ಈ ಕುರಿತು ಸ್ಪಷ್ಟಪಡಿಸಿದ ಶ್ರೀನಿವಾಸ ಮಾನೆ, ‘ಪಕ್ಷದ ಸಂಘಟನೆ ಕುರಿತು ಗಂಭೀರ ಚರ್ಚೆ ನಡೆಯುತ್ತಿತ್ತು. ಒಂದೊಮ್ಮೆ ಅದು ಜಗಳವೇ ಆಗಿದ್ದರೆ ನಂತರ ತಮ್ಮ ಮಾತಿನ ಸಂದರ್ಭದಲ್ಲಿ ನಾವಿಬ್ಬರೂ 20 ವರ್ಷಗಳಿಂದ ಕೂಡ ಕೆಲಸ ಮಾಡಿದ್ದನ್ನು ಅವರು ಸ್ಮರಿಸುತ್ತಿರಲಿಲ್ಲ’ ಎಂದರು.

ಆದರೆ ಪಕ್ಷದ ಮೂಲಗಳ ಪ್ರಕಾರ ಕಾಂಗ್ರೆಸ್‌ ಪಕ್ಷದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹಾಗೂ ಯುವ ಕಾಂಗ್ರೆಸ್‌ ಗುಂಪುಗಳಲ್ಲಿ ತಮ್ಮ ಭಾವಚಿತ್ರವಿಲ್ಲದ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ಬೇಕಂತಲೇ ಕಡೆಗಣಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಚಿವ ವಿನಯ ಕುಲಕರ್ಣಿ ಅವರು ಮಾನೆ ಮೇಲೆ ಹರಿಹಾಯ್ದರು ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT