ಮಂಗಳವಾರ, ಡಿಸೆಂಬರ್ 10, 2019
20 °C

ಜೈನ ಧರ್ಮದ 24 ತೀರ್ಥಂಕರರು

ಬಿ.ಪಿ. ಜಯಕುಮಾರ್‌ Updated:

ಅಕ್ಷರ ಗಾತ್ರ : | |

ಜೈನ ಧರ್ಮದ 24 ತೀರ್ಥಂಕರರು

ಶ್ರವಣಬೆಳಗೊಳ: ಬಾಹುಬಲಿ ಸ್ವಾಮಿಯ ದಿವ್ಯ, ಭವ್ಯ ಮಂಗಲಮೂರ್ತಿ ಹಾಗೂ ಸಹಸ್ರಾರು ತಪೋನಿಧಿಗಳ ತಪೋಭೂಮಿಯಾಗಿ ಪವಿತ್ರವಾಗಿರುವುದಲ್ಲದೇ ಜೈನಕಾಶಿಯು ಐತಿಹಾಸಿಕ ಬಸದಿಗಳಿಂದಲೂ ಪಾವನವಾದ ಸ್ಥಳವಾಗಿದೆ.

ಭಂಡಾರ ಬಸದಿ ಬೆಳಗೊಳದ ದೊಡ್ಡ ಹಾಗೂ ನಗರದಲ್ಲಿ ಸ್ಥಾಪನೆಯಾದ ಮೊಟ್ಟ ಮೊದಲ ಬಸದಿಯಾಗಿದ್ದು, ಚತುರ್ವಿಂಶತಿ ತೀರ್ಥಂಕರ ಬಸದಿ ಎಂದೂ ಸಹ ಕರೆಯುತ್ತಾರೆ. ಇದನ್ನು ಹೊಯ್ಸಳರ ದೊರೆ ನರಸಿಂಹನ ಭಂಡಾರಿಯಾಗಿದ್ದ ಹುಳ್ಳಮಯ್ಯನು ಕ್ರಿ.ಶ.1159ರಲ್ಲಿ ನಿರ್ಮಿಸಿದ್ದಾನೆ. ಗೊಮ್ಮಟಪುರದ ಭೂಷಣ ಎಂದು ಶಾಸನದಲ್ಲಿ ವರ್ಣಿಸಿಕೊಂಡಿರುವ ಈ ಬಸದಿಗೆ ಭವ್ಯ ಚೂಡಾಮಣಿ ಎಂದು ದೊರೆ ನರಸಿಂಹ ಕರೆದಿದ್ದಾನೆ.

ಈ ಬಸದಿಯ ಗರ್ಭಗುಡಿಯಲ್ಲಿರುವ ಚತುರ್ವಿಂಶತಿ ತೀರ್ಥಂಕರರ ವಿಗ್ರಹಗಳು ಕಲೆ, ಧರ್ಮ, ಮೂರ್ತಿಗಳ ಲಕ್ಷಣದಲ್ಲಿ ಮಹತ್ವವಾದ ವಿಗ್ರಹಗಳಾಗಿವೆ. 48 ಅಡಿ ಹರಿಪೀಠದ ಮೇಲೆ ಸಾಲಾಗಿ ನಿಂತ 24 ತೀರ್ಥಂಕರರ ಮೂರ್ತಿ ಪ್ರತಿಷ್ಠಾಪಿಸಿದ ಮೊಟ್ಟ ಮೊದಲ ನಿದರ್ಶನವಾಗಿದ್ದು, ಇದರಿಂದಲೇ ಈ ಬಸದಿಗೆ ಚತುರ್ವಿಂಶತಿ ತೀರ್ಥಂಕರರ ಬಸದಿ ಎಂದು ಹೆಸರು ಬಂದಿದೆ.

ಒಂದೇ ರೀತಿಯಲ್ಲಿ ಕಾಣುವ ಈ ಮೂರ್ತಿಗಳು ನೋಡುಗರಿಗೆ 24 ತೀರ್ಥಂಕರರಲ್ಲಿ ಯಾವ ತೀರ್ಥಂಕರರು ಎಂದು ಗುರುತಿಸಲು ಕಷ್ಟವಾಗಬಹುದು. ಆದರೆ ಈ ವಿಗ್ರಹಗಳ ಕೆಳಭಾಗದಲ್ಲಿರುವ ಆಯಾಯ ತೀರ್ಥಂಕರರ ಲಾಂಛನ ದಿಂದ ಮೂರ್ತಿ ಗುರುತಿಸಲು ಸುಲಭವಾಗುತ್ತದೆ.

ಜೈನ ಧರ್ಮದಲ್ಲಿ 24 ತೀರ್ಥಂಕರ ರಿದ್ದು, ಅವರು ಕ್ರಮವಾಗಿ ವೃಷಭನಾಥ, ಅಜಿತನಾಥ, ಶಂಭವನಾಥ, ಅಭಿನಂದನ, ಸುಮತಿನಾಥ, ಪದ್ಮಪ್ರಭ, ಸುಪಾರ್ಶ್ವನಾಥ, ಚಂದ್ರಪ್ರಭ, ಪುಷ್ಪದಂತ, ಶೀತಲನಾಥ, ಶ್ರೇಯಾಂಸನಾಥ, ವಾಸುಪೂಜ್ಯ, ವಿಮಲನಾಥನಾಥ, ಅನಂತನಾಥ, ಧರ್ಮನಾಥ, ಶಾಂತಿನಾಥ, ಕುಂಥುನಾಥ, ಅರನಾಥ, ಮಲ್ಲಿನಾಥ, ಮುನಿಸುವ್ರತ, ನಮಿನಾಥ, ನೇಮಿನಾಥ, ಪಾರ್ಶ್ವನಾಥ, ವರ್ಧಮಾನ ತೀರ್ಥಂಕರರಿದ್ದಾರೆ. ಅವರಿಗಿರುವ ಲಾಂಛನ ಮೂಲಕ ಗುರುತಿಸಬಹುದಾಗಿದ್ದು, ಅವುಗಳು ಸಹ ಕ್ರಮವಾಗಿ ಎತ್ತು, ಆನೆ, ಕುದುರೆ, ಕಪಿ, ಚಕ್ರವಾಕ, ಕಮಲ, ಸ್ವಸ್ತಿಕ, ಚಂದ್ರ, ಮಕರ, ವೃಕ್ಷ, ಘೇಂಡಾಮೃಗ, ಕೋಣ, ಹಂದಿ, ಕರಡಿ, ವಜ್ರ, ಎರಳೆ, ಟಗರು, ಮೀನು, ಕುಂಭ, ಆಮೆ, ನೈದಿಲ, ಶಂಕು, ಸರ್ಪ, ಸಿಂಹ ಲಾಂಛನಗಳಿವೆ.

24 ತೀರ್ಥಂಕರರಿಗೆ ಪ್ರತ್ಯೇಕ ವಾಗಿ ಯಕ್ಷ– ಯಕ್ಷಿಯರಿದ್ದು, ಜೈನ ಧರ್ಮದಲ್ಲಿ ಶಾಸನ ದೇವತೆಗ ಳಾದ ಯಕ್ಷ, ಯಕ್ಷಿಯರನ್ನೂ ವಿಶೇಷವಾಗಿ ಪೂಜಿಸಲಾಗುತ್ತದೆ. ಭಂಡಾರ ಬಸದಿಯಲ್ಲಿರುವ ಪ್ರತಿ ತೀರ್ಥಂಕರರ ಮೂರ್ತಿಯ ಕೆಳ ಭಾಗದಲ್ಲಿ ಲಾಂಛನಗಳು, ಬಲ ಮತ್ತು ಎಡ ಭಾಗದಲ್ಲಿ ಯಕ್ಷ ಯಕ್ಷಿಯರನ್ನೂ ಕೆತ್ತಲಾಗಿದೆ. ಹಾಗೆಯೇ ಖಡ್ಗಾಸನದಲ್ಲಿರುವ ಪ್ರತಿ ಜಿನಮೂರ್ತಿಗಳು 3.8 ಅಡಿಗಳಿದ್ದು, ಪ್ರತ್ಯೇಕವಾಗಿ ಆಕರ್ಷಕವಾದ ಮುಕ್ಕೊಡೆಗಳನ್ನೂ ಕೆತ್ತಲಾಗಿದೆ.

24 ತೀರ್ಥಂಕರರನ್ನು ಹರಿಪೀಠದ ಮೇಲೆ ಸಾಲಾಗಿ ನಿಲ್ಲಿಸಿದ ಅಪರೂಪದ ಈ ಬಸದಿಯಲ್ಲಿ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುವ ದಶಲಕ್ಷಣ ಪರ್ವದ 10 ದಿನಗಳಲ್ಲೂ ಕಲ್ಪಧೃಮ ಆರಾಧನೆಯ ಪ್ರಯುಕ್ತ ಏಕ ಕಾಲಕ್ಕೆ ಪಂಚಾಮೃತ ಅಭಿಷೇಕ ನಡೆಯುತ್ತದೆ.

 

ಪ್ರತಿಕ್ರಿಯಿಸಿ (+)