ಮಂಗಳವಾರ, ಮೇ 26, 2020
27 °C

ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯ ಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯ ಸಂಸ್ಕಾರ

ಶಿಗ್ಗಾವಿ: ಸೈನಿಕ ಚಂದ್ರು ಡವಗಿ ಅವರ ಅಂತ್ಯ ಸಂಸ್ಕಾರ ಸೋಮವಾರ ಬೆಳಿಗ್ಗೆ ಶಿಗ್ಗಾವಿ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ ಮೃತರಾಗಿದ್ದರು. ಅವರ ಪಾರ್ಥಿವ ಶರೀರವವನ್ನು ಪಟ್ಟಣದ ಗಂಗೀಬಾವಿ ಕ್ರಾಸ್‌ಗೆ ತರುತ್ತಿದಂತೆ ಸಾವಿರಾರು ಜನ ಅಭಿಮಾನಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಧ್ವಜ, ಕನ್ನಡದ ಧ್ವಜಗಳನ್ನು ಹಿಡಿದುಕೊಂಡು ತಂಡೋಪ, ತಂಡಗಳಾಗಿ ಸಾಗರದಂತೆ ಹರಿದು ಬಂದರು.

ನಂತರ ಗಂಗೀಬಾವಿ ಕ್ರಾಸ್‌ನಿಂದ ಪ್ರಾರಂಭವಾದ ವೀರ ಯೋಧನ ಪಾರ್ಥಿವ ಶರೀರದ ಅದ್ಧೂರಿ ಮೆರವಣಿಗೆ ಪಟ್ಟಣದ ಅಂಚೆ ಕಚೇರಿ, ಪಿಎಲ್‌ಡಿ ಬ್ಯಾಂಕ್‌ ವೃತ್ತ, ಹಳೇ ಬಸ್‌ ನಿಲ್ದಾಣ, ಪುರಸಭೆ ವೃತ್ತ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ತಾಲ್ಲೂಕು ಆಡಳಿತ ಕಚೇರಿ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ನಂತರ ಮೆರವಣಿಗೆ ಮುಗಳಿ ಗ್ರಾಮಕ್ಕೆ ಸಂಚರಿಸಿತು. ಶಾಸಕ ಬಸವರಾಜ ಬೊಮ್ಮಾಯಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಜಯ ಘೋಷಣೆ ಹಾಕುತ್ತ ಪಾದಯಾತ್ರೆ ನಡೆಸಿದರು. ಸರ್ಕಾರಿ ಐಟಿಐ ಕಾಲೇಜ, ಗಂಜೀಗಟ್ಟಿ ಕಿತ್ತೂರ ಚನ್ನಮ್ಮ ವಸತಿ ಶಾಲೆಯ ಮುಂದೆ ನಿಲ್ಲಿಸಿ ವಿದ್ಯಾರ್ಥಿಗಳು ವಿಶೇಷ ಅಂತಿಮ ನಮನ ಸಲ್ಲಿಸಿದರು. ಮೆರವಣಿಯಲ್ಲಿ ಭಾಗವಹಿಸಿದವರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತು.

ಮೆರವಣಿಗೆ ಮುಗಳಿ ಗ್ರಾಮಕ್ಕೆ ತಲುಪುತ್ತಿದ್ದಂತೆ ತಾಯಿ ಬಸವಣ್ಣೆವ್ವ, ತಂದೆ ಬಸಪ್ಪ, ಪತ್ನಿ ಶಿಲ್ಪಾ, ಅಕ್ಕ ಪುಟ್ಟವ್ವ, ಮಕ್ಕಳಾದ ಸ್ವಾತಿ, ಸ್ಫೂರ್ತಿ ಹಾಗೂ ಸಂಬಂಧಿಕರು ಶವದ ಪೆಟ್ಟಿಗೆ ಅಪ್ಪಿಕೊಂಡು ಅಳುತ್ತಿರುವುದು ಮುಗಿಲು ಮುಟ್ಟುವಂತಿತು. ನಂತರ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಗ್ರಾಮಸ್ಥರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ವಿದ್ಯಾರ್ಥಿಗಳು, ಗ್ರಾಮಸ್ಥರು ಸರತಿಯಲ್ಲಿ ಬಂದು ಯೋಧನ ಅಂತಿಮ ದರ್ಶನ ಪಡೆದರು.

ಪೊಲೀಸ್‌ ಇಲಾಖೆ ಸಿಬ್ಬಂದಿ ಗೌರವ ವಂದೆನೆ ಸಲ್ಲಿಸಿದರು. ಶಿಬಾರಗಟ್ಟಿ ಸಮೀಪದ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಗಂಜೀಗಟ್ಟಿ ಶಿವಲಿಂಗೇಶ್ವರ ಸ್ವಾಮೀಜಿ, ಬಂಕಾಪುರದ ಕೆಂಡದಮಠದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಯೋಧನ ಅಂತ್ಯ ಸಂಸ್ಕಾರ ನಡೆಯಿತು.

ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಎಂ.ವಿ, ಎಸ್‌ಪಿ ಕೆ.ಪರಶುರಾಂ, ಸವಣೂರ ಉಪವಿಭಾಗಾಧಿಕಾರಿ ಮೊಹಮ್ಮದ್‌ ರೋಷನ್‌, ಡಿವೈಎಸ್‌ಪಿ ಲಕ್ಷ್ಮಣ ಶಿರಕೋಳ, ತಹಶೀಲ್ದಾರ್‌ ಶಿವಾನಂದ ರಾಣೆ, ತಾಲ್ಲೂಕು ಪಂಚಾಯ್ತಿ ಇಒ ಹನಮಂತರಾಜು ಗುತ್ತೆಪ್ಪ, ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸೈಯದ್‌ ಅಜ್ಜಂಪೀರ್‌ ಖಾದ್ರಿ, ಕಾಂಗ್ರೆಸ್‌ ಮುಖಂಡ ಮಂಜುನಾಥ ಕುನ್ನೂರ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಎಪಿಎಂಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಕಾಂತ ಪೂಜಾರ, ಮುಗಳಿ ಗ್ರಾಮ ಪಂಚಾಯ್ತಿ ಸದಸ್ಯರು, ಮಲ್ಲಿಕಾರ್ಜುನ ಕಲಾ ತಂಡದ ಸದಸ್ಯರು ಇದ್ದರು.

ಕನ್ನಡಪರ ಸಂಘಟನೆಗಳಿಂದ ಶ್ರದ್ಧಾಂಜಲಿ

ಪಟ್ಟಣದ ಹೊಸ ಬಸ್‌ ನಿಲ್ದಾಣದ ಮುಂದೆ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ವೀರ ಯೋಧ ಚಂದ್ರುಡವಗಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ನಂತರ ಮೌನ ಆಚರಿಸಲಾಯಿತು. ಮುಖಂಡರಾದ ಬಿ.ಬಿ.ಶೆಟ್ಟಿಸಾಗರ ಮಾತನಾಡಿ, ‘ತಾಲ್ಲೂಕು ಕಚೇರಿ ಆವರಣದಲ್ಲಿ ಚಂದ್ರು ಡವಗಿ ಪುತ್ಥಳಿ ನಿರ್ಮಾಣ ಮಾಡಬೇಕೆಂದು’ ಎಂದು ಆಗ್ರಹಿಸಿದರು.

ವಕೀಲ ಬಸವರಾಜ ಜೇಕಿನಕಟ್ಟಿ, ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ದುರ್ಗಪ್ಪ ವಡ್ಡರ, ಕಾರ್ಯದರ್ಶಿ ಹನಮಂತ ಬಂಡಿವಡ್ಡರ, ದಲಿತ ಮುಖಂಡ ಅಶೋಕ ಕಾಳೆ, ಕರವೇ ತಾಲ್ಲೂಕು ಅಧ್ಯಕ್ಷ ಸಂತೋಷಗೌಡ ಪಾಟೀಲ, ಶ್ರೀಕಾಂತ ಸುಲೋಚನಮಠ, ಪ್ರವೀಣ ಇಂಗಳಗಿ, ಗೋಪಿ ಹಾವೇರಿ, ಶಿವರಾಜ ಪಾಣಿಗಟ್ಟಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.