ಭಾನುವಾರ, ಜೂನ್ 7, 2020
29 °C

ಮತದಾರರ ಒಲೈಕೆಗೆ ವಿವಿಧ ತಂತ್ರ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

ಮತದಾರರ ಒಲೈಕೆಗೆ ವಿವಿಧ ತಂತ್ರ

ಚಿಂತಾಮಣಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಕ್ಷೇತ್ರದಲ್ಲಿ ಮತದಾರರ ಓಲೈಕೆಗೆ ರಾಜಕಾರಣಿಗಳು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರ ಒಂದು ವಿಶಿಷ್ಟ ರೀತಿಯ ಕ್ಷೇತ್ರ. ಇಲ್ಲಿ ಪಕ್ಷಗಳಿಗಿಂತ ವ್ಯಕ್ತಿಗಳ ಕೇಂದ್ರೀಕೃತ ರಾಜಕೀಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಜನರು ಸ್ವಾಭಿಮಾನಿಗಳು, ಹಟಕ್ಕೆ ಬಿದ್ದವರು, ಯಾವುದೇ ಆಸೆ ಅಮಿಷಗಳಿಗೆ ಮಾರು ಹೋಗುವವರಲ್ಲ. ಕಳೆದ ಚುನಾವಣೆಯಿಂದ ಇದು ಸ್ವಲ್ಪಮಟ್ಟಿಗೆ ಬದಲಾವಣೆಯಾಗಿದೆ.

ಉಡುಗೊರೆ, ಕೊಡುಗೆಗಳನ್ನು ನೀಡಿ ಮತದಾರರನ್ನು ಒಲಿಸಿಕೊಳ್ಳುವ ಹೊಸ ವರಸೆಗಳು ಚುನಾವಣೆಗೆ ಮುನ್ನವೇ ಆರಂಭಗೊಂಡಿವೆ.  ಮುಗ್ದ ಮತದಾರರನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ದೇವರ ಹೆಸರಿನಿಂದ ಋಣಭಾರದಲ್ಲಿ ಕಟ್ಟಿ ಹಾಕುವ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿವೆ.

ರಾಜಕಾರಣಿಗಳು ತಾವು ಭ್ರಷ್ಟರಾಗಿದ್ದಲ್ಲದೆ ಮತದಾರರನ್ನು ಸಹ ಭ್ರಷ್ಟರಾಗಿಸುತ್ತಿದ್ದಾರೆ. ಸಾಮಾನ್ಯವಾಗಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಯಾರು ನೀರಿನಂತೆ ಸುರಿಯುವುದಿಲ್ಲ. ಅಡ್ಡದಾರಿಗಳಿಂದ ಸಂಪಾದಿಸಿದ ಹಣವನ್ನು ತಂದು ಸುರಿದು ಮತದಾರರನ್ನು ಭ್ರಷ್ರನ್ನಾಗಿಸುತ್ತಿದ್ದಾರೆ. ಹಣವನ್ನು ಚೆಲ್ಲಿ, ಉಡುಗೊರೆಗಳನ್ನು ಕೊಟ್ಟು ಹಾಗೂ ಆಸೆ, ಅಮಿಷಗಳನ್ನು ತೋರಿಸಿ ಚುನಾವಣೆ ಗೆಲ್ಲುವುದಾದರೆಜನಸಾಮಾನ್ಯರ ಪಾಡೇನು? ಜನಸಾಮಾನ್ಯರು ಚುನಾವಣೆಯಲ್ಲಿ ಸ್ಪರ್ಧಿಸುವುದಾದರೂ ಹೇಗೆ? ಪ್ರಜಾಪ್ರಭುತ್ವವನ್ನೇ ಅಪಹಾಸ್ಯಕ್ಕೀಡು ಮಾಡುವ ಪ್ರಯತ್ನವನ್ನು ಬಾವಿ ಅಭ್ಯರ್ಥಿಗಳು ನಡೆಸುತ್ತಿದ್ದಾರೆ ಎಂದು ಪ್ರಜ್ಞಾವಂತರು ವಿಷಾದ ವ್ಯಕ್ತಪಡಿಸುತ್ತಾರೆ.

ಜನರನ್ನು ಉಚಿತವಾಗಿ ಪ್ರವಾಸ, ತೀರ್ಥಯಾತ್ರೆಗಳಿಗೆ ಕರೆದೊಯ್ಯುವುದು, ಕ್ರಿಕೆಟ್‌ ಪಂದ್ಯಾವಳಿಗಳನ್ನು ಆಯೋಜಿಸುವುದು, ಹಬ್ಬ ಹರಿದಿನಗಳಿಗೆ ಅಗತ್ಯವಾದ ಸಾಮಗ್ರಿಗಳನ್ನು ನೀಡುವುದು, ದೇವಾಲಯಗಳಿಗೆ ಭೇಟಿ ನೀಡಿ, ಅಭಿವೃದ್ಧಿಯ ಹೆಸರಿನಲ್ಲಿ ಹಣ ನೀಡುವುದು, ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ಸಂಘಸಂಸ್ಥೆಗಳಿಗೆ ಸಹಾಯ ಮಾಡುವುದು.ವೈಯುಕ್ತಿಕವಾಗಿ ಮನೆಗಳಿಗೆ ಭೇಟಿ ಮಾಡಿ ಹಣ ನೀಡುವುದು ಹೀಗೆ ಉಡುಗೊರೆಗಳ ಕತೆಗಳು ಲೀಲಾಜಾಲವಾಗಿ ಜನರ ಬಾಯಿಗಳಲ್ಲಿ ನಲಿದಾಡುತ್ತಿವೆ.

ಚಿಂತಾಮಣಿ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಜಿದ್ದಾಜಿದ್ದಿನ ಹಾಗೂ ದ್ವೇಷದ ರಾಜಕೀಯ ನಡೆಯುತ್ತಿದ್ದರೂ ಹಣದ ರಾಜಕಾರಣ ನಡೆಸಿರಲಿಲ್ಲ. ‘ಹಣವನ್ನು ಚೆಲ್ಲಿ ಚುನಾವಣೆಯನ್ನು ಗೆಲ್ಲುವ ಪರಿಪಾಠ ಇರಲಿಲ್ಲ’ ಇಲ್ಲಿನ ರಾಜಕಾರಣಿಗಳು ರಾಜಕೀಯದಿಂದ ಹಣವನ್ನು ಪಡೆದವರೂ ಅಲ್ಲ. ಮತದಾರರು ಸಹ ಯಾವುದೆ ಆಸೆ ಅಮೊಷಗಳಿಗೆ ಬಲಿಯಾಗದೆ ತಮ್ಮ ತಮ್ಮ ನಾಯಕರಿಗೆ ನಿಷ್ಠೆಯಿಂದ ಬೆಂಬಲ ನೀಡುತ್ತಾ ಬಂದಿದ್ದರು. 2013 ಚುನಾವಣೆಯಲ್ಲಿ ಮತದಾರರ ಓಲೈಕೆಯ ರಾಜಕೀಯ ಆರಂಭವಾಗಿತ್ತು.

ಕೋಲಾರ, ಮಾಲೂರು ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಹಣವನ್ನು ಚೆಲ್ಲಿ ಚುನಾವಣೆಯನ್ನು ಗೆಲ್ಲುವ ಪರಿಪಾಟ ಈಗ ಚಿಂತಾಮಣಿಗೂ ವ್ಯಾಪಿಸಿದೆ. ಕೆಲವು ಸ್ವಯಂಘೋಷಿತ ಅಭ್ಯರ್ಥಿಗಳು ಮಹಿಳಾ ಮತದಾರರನ್ನು ಸೆಳೆಯಲು ಓಂ ಶಕ್ತಿ ಪ್ರವಾಸವನ್ನು ವ್ಯಾಪಕವಾಗಿ ನಡೆಸುತ್ತಿದ್ದಾರೆ. ಉಚಿತವಾಗಿ ಕ್ಷೇತ್ರದ ಮೂಲೆ ಮೂಲೆಯಿಂದಲೂ ಮಹಿಳೆಯರನ್ನು ಉಚಿತವಾಗಿ ಮೇಲ್‌ಮರವತ್ತೂರಿಗೆ ಕರೆದೊಯ್ಯುತ್ತಿದ್ದಾರೆ.

ಹಣ ಚೆಲ್ಲಿ ಅಥವಾ ವಿವಿಧ ಆಸೆ ಅಮಿಷಗಳನ್ನು ತೋರಿಸಿ ಮತ ಕೇಳುತ್ತಿರುವುದು ಪ್ರಜಾಪ್ರಭುತ್ವದ ಅಪಹಾಸ್ಯವಾಗಿದ್ದು ವಿಷವರ್ತುಲವಾಗಿದೆ. ಹಣ ಚೆಲ್ಲಿ ಮತ ಪಡೆದವರು ನಾಳೆ ದೋಚದೆ ಬಿಡುತ್ತಾರೆಯೇ? ಹಣ ಪಡೆದು ಮತ ನೀಡಿದವರಿಗೆ ಮುಂದೆ ತಮ್ಮ ಪ್ರತಿನಿಧಿಯನ್ನು ಹಿಡಿದು ನಿಲ್ಲಿಸಿ ಕೇಳುವ ನೈತಿಕತೆ ಇರುತ್ತದೆಯೇ? ಎಂದು ಪ್ರಜ್ಞಾವಂತ ಮತದಾರರು ಕೇಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯನೂ ಸಹ ಅಧಿಕಾರಕ್ಕೆ ಬರಬೇಕು ಎಂಬ ಸಂವಿಧಾನದ ಉದ್ದೇಶ ನಿರುಪಯುಕ್ತವಾಗುತ್ತಿದೆ ಎನ್ನುತ್ತಾರೆ ನಿಷ್ಠಾವಂತ ಮತದಾರರು.

ಕ್ಷೇತ್ರದಲ್ಲಿ ಹಿಂದಿನ ನ್ಯಾಯಯುತ ಮತದಾನದ ಪರಂಪರೆ ಉಳಿಯುತ್ತದೆಯೇ? ಅಥವಾ ಮತದಾರರು ಪ್ರಲೋಭನೆಗಳ ರಾಜಕೀಯಕ್ಕೆ ಬಲಿಯಾಗುತ್ತಾರೆಯೇ? ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕ್ಷೇತ್ರದಲ್ಲಿ ಸ್ವಯಂಘೋಷಿತ ಅಭ್ಯರ್ಥಿಗಳಿಗೆ ಕ್ಷೇತ್ರದ ಸಮಗ್ರ ಚಿತ್ರಣದ ಪರಿಚಯವಿಲ್ಲ. ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆಗಳು, ಜನರಿಗೆ ಉದ್ಯೋಗ, ನೀರಾವರಿ ಯೋಜನೆಗಳು, ರೈತರ ಸಮಸ್ಯೆಗಳು, ಶೈಕ್ಷಣಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿಲ್ಲ. ತನ್ನ ಸಾಧನೆ ಏನು? ಮುಂದಿನ ಯೋಜನೆಗಳೇನು? ಎಂದು ತಿಳಿಸುವುದಿಲ್ಲ. ಸಮಾಜಸೇವೆ, ದಾನಧರ್ಮಗಳ ಹೆಸರಿನಲ್ಲಿ ಹಣ ಚೆಲ್ಲಿ ಮತ ಕೇಳುತ್ತಿರುವುದರ ಬಗ್ಗೆ ಮತದಾರರು ಚಿಂತನೆ ನಡೆಸಬೇಕು. ಅವರು ನೀಡುವ 2–3 ಸಾವಿರ ಹಣ ಎಷ್ಟು ದಿನ ಇರುತ್ತದೆ ಎಂಬುದನ್ನು ಯೋಚಿಸಿ ಮತದಾನ ಮಾಡಬೇಕು ಎನ್ನುತ್ತಾರೆ ಹಿರಿಯ ನಾಗರಿಕ ಶ್ಯಾಂ ಪ್ರಕಾಶ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.