ಗುರುವಾರ , ಜೂನ್ 4, 2020
27 °C

ಕಾಳ್ಗಿಚ್ಚು ತಡೆಗೆ ಬೆಂಕಿರೇಖೆ ನಿರ್ಮಾಣ

ಲಕ್ಷ್ಮಣ ಎಚ್ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಕಾಳ್ಗಿಚ್ಚು ತಡೆಗೆ ಬೆಂಕಿರೇಖೆ ನಿರ್ಮಾಣ

ಡಂಬಳ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರಾದ ಗದಗ ಜಿಲ್ಲೆಯ ಕಪ್ಪತಗುಡ್ಡಕ್ಕೆ ಮತ್ತೆ ಕಾಳ್ಗಿಚ್ಚಿನ ಭೀತಿ ಎದುರಾಗಿದೆ. ಮಳೆಯಾಗುತ್ತದೆ ಎಂಬ ಕಾರಣಕ್ಕೆ ಪ್ರತಿ ಬೇಸಿಗೆಯಲ್ಲಿ ಕಪ್ಪತಗುಡ್ಡಕ್ಕೆ ಬೆಂಕಿ ಹಚ್ಚುವ ಸಂಪ್ರದಾಯ ಈ ಬಾರಿ ಕೂಡ ಮುಂದುವರಿದಿದೆ. ಮಂಗಳವಾರ ರಾತ್ರಿ ಕಿಡಿಗೇಡಿಗಳು ಡೋಣಿ ಗ್ರಾಮ ವ್ಯಾಪ್ತಿಯ ಹಳೇಮಠ ಪ್ರದೇಶದಲ್ಲಿ ಹೆಚ್ಚಿದ ಬೆಂಕಿಗೆ ಅಂದಾಜು 2 ಎಕರೆ ಪ್ರದೇಶ ಸುಟ್ಟು ಕರಕಲಾಗಿದೆ.

‘80 ಸಾವಿರ ಎಕರೆ ವ್ಯಾಪ್ತಿಯಲ್ಲಿ ಬಹುವಿಶಾಲವಾಗಿ ಹಬ್ಬಿಕೊಂಡಿರುವ ಕಪ್ಪತಗುಡ್ಡವನ್ನು ಅರಣ್ಯ ಇಲಾಖೆಯ ಬೆರಳೆಣಿಕೆಯ ಸಿಬ್ಬಂದಿ ಕಾಯುವುದು, ಅಗ್ನಿ ಆಕಸ್ಮಿಕದಿಂದ ರಕ್ಷಿಸುವುದು ಎಂದೂ ಆಗದ ಕೆಲಸ. ಇದಕ್ಕೆ ಸ್ಥಳೀಯರ ಸಹಭಾಗಿತ್ವ ಬೇಕೇ, ಬೇಕು. ಈ ಕುರಿತು ಜನಜಾಗೃತಿ ಆಗಬೇಕು. ಈ ಅಪರೂಪದ ಜೀವವೈವಿಧ್ಯ ತಾಣವನ್ನು ರಕ್ಷಿಸಲು ಜನರು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೇಳಿದರು.

ಕಳೆದ ಬಾರಿ ಧಾರಾಕಾರ ಮಳೆಯಾದ ಬೆನ್ನಲ್ಲೇ ಬೆಟ್ಟದ ಶ್ರೇಣಿಯಲ್ಲಿ ಹಸಿರು ಹುಲ್ಲು ಚಿಗುರೊಡೆದಿತ್ತು.ಗುಡ್ಡದಲ್ಲಿ ಹೇರಳವಾಗಿರುವ ಈ ಭಾದೆ ಹುಲ್ಲು, ಈಗ ಬಿಸಿಲಿಗೆ ಒಣಗಿದ್ದು, ಬೆಂಕಿ ಕಿಡಿ ಬಿದ್ದರೆ, ಕ್ಷಣ ಮಾತ್ರದಲ್ಲಿ ಅದು ಇಡೀ ಗುಡ್ಡವನ್ನೇ ವ್ಯಾಪಿಸುವಷ್ಟು ಅಪಾಯಕಾರಿಯಾಗಿದೆ.

‘ಮಂಗಳವಾರ ರಾತ್ರಿ 7ಗಂಟೆಗೆ ಬೆಂಕಿ ತಗುಲಿರುವ ಮಾಹಿತಿ ಬಂತು. ತಕ್ಷಣ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ ನ್ಯಾಮತಿ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಅರ್ಧ ಗಂಟೆಯಲ್ಲಿ ಬೆಂಕಿ ನಂದಿಸಿ,ಹೆಚ್ಚಿನ ಪ್ರದೇಶಕ್ಕೆ ಬೆಂಕಿ ಹರಡುವುದನ್ನು ತಡೆದರು’ ಎಂದು ಬುಧವಾರ ಹಳೇಮಠ ಪ್ರದೇಶದಲ್ಲಿ ಜಿಪಿಎಸ್‌ ಮೂಲಕ ಸಮೀಕ್ಷೆ ನಡೆಸುತ್ತಿದ್ದ ಹೆಚ್ಚುವರಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜೆ ಬನ್ನಿಕೊಪ್ಪ ಮತ್ತು ಅರಣ್ಯ ರಕ್ಷಕ ಶಂಕರಗೌಡ ಪಾಟೀಲ ಪತ್ರಿಕೆಗೆ ಮಾಹಿತಿ ನೀಡಿದರು. ಸಮೀಕ್ಷೆ ಕಾರ್ಯ ಪೂರ್ಣಗೊಂಡ ಬಳಿಕ ಅಗ್ನಿ ಹಾನಿ ಪ್ರದೇಶದ ಸ್ಪಷ್ಟ ಚಿತ್ರಣ ಲಭಿಸಲಿದೆ’ ಎಂದು ಅವರು ಹೇಳಿದರು.

ಹೆಚ್ಚುವರಿ ಬೆಂಕಿ ರೇಖೆ ನಿರ್ಮಾಣ

ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಇತ್ತೀಚೆಗೆ ಕಪ್ಪತಗುಡ್ಡ ಪ್ರದೇಶದಲ್ಲಿ ಅಲ್ಲಲ್ಲಿ ಫೈರ್‌ಲೈನ್‌ (ಬೆಂಕಿ ರೇಖೆ) ನಿರ್ಮಾಣದಲ್ಲಿ ತೊಡಗಿದ್ದಾರೆ. ಕಾಳ್ಗಿಚ್ಚು ತಡೆಗೆ ಇದು ಸಾಂಪ್ರದಾಯಿಕ ವಿಧಾನ. ಅರಣ್ಯ ಪ್ರದೇಶವನ್ನು ಗಸ್ತು ಪ್ರದೇಶಗಳಾಗಿ ವಿಭಾಗಿಸಿ ಬೆಂಕಿರೇಖೆ ನಿರ್ಮಾಣ ಮಾಡಲಾಗುತ್ತಿದೆ.

‘ಪ್ರತಿ ಗಸ್ತು ಪ್ರದೇಶದಲ್ಲಿ 5ರಿಂದ 6 ಬೆಂಕಿರೇಖೆ ನಿರ್ಮಿಸಲಾಗುತ್ತದೆ. ಕಾಳ್ಗಿಚ್ಚು ಸಂಭವಿಸಿದರೆ, ಬೆಂಕಿಯು ಇಡೀ ಕಾಡಿಗೆ ವ್ಯಾಪಿಸುವುದಿಲ್ಲ. ಕಳೆದ ವರ್ಷಕ್ಕ ಹೋಲಿಸಿದರೆ ಈ ಬಾರಿ ಹೆಚ್ಚು ಬೆಂಕಿರೇಖೆಗಳನ್ನು ನಿರ್ಮಾಣ ಮಾಡಲಾಗಿದೆ. ಗುಡ್ಡಕ್ಕೆ ಹೊಂದಿಕೊಂಡ ರಸ್ತೆಯ ಎರಡೂ ಬದಿಯಲ್ಲಿ ಬೆಂಕಿರೇಖೆ ನಿರ್ಮಿಸಲಾಗಿದೆ. ಜತೆಗೆ ಬೆಂಕಿ ನಿಯಂತ್ರಣ ಶಿಬಿರ ಕೂಡ ಇಲ್ಲಿ ಕಾರ್ಯನಿರತವಾಗಿದೆ. ಸದಾ ಗಸ್ತು ತಿರುಗುತ್ತಿದ್ದು, ಕಪ್ಪತಗುಡ್ಡವನ್ನು ಬೆಂಕಿಯಿಂದ ರಕ್ಷಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ’ ಎಂದು ಸಿಬ್ಬಂದಿ ಹೇಳಿದರು.

ಡೋಣಿ, ಅತ್ತಿಕಟ್ಟಿ, ದಿಂಡೋರ, ಡೋಣಿತಾಂಡ, ನಾರಾಯಣಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಖಾಯಂ ಹಾಗೂ ಗುತ್ತಿಗೆ ಸಿಬ್ಬಂದಿ ಸೇರಿ ಅರಣ್ಯ ಇಲಾಖೆಯ 30 ಸಿಬ್ಬಂದಿ ಅರಣ್ಯ ಸಂರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

‘ಕಾಳ್ಗಿಚ್ಚು ತಡೆ ಕುರಿತು ಗ್ರಾಮಗಳಲ್ಲಿ ಬೀದಿ ನಾಟಕದ ಮೂಲಕ ಜನ ಜಾಗೃತಿ ಮೂಡಿಸಲಾಗಿದೆ. ಬೆಂಕಿ ತಗುಲಿದ ಸಂದರ್ಭದಲ್ಲಿ ಡೋಣಿ ಗ್ರಾಮಸ್ಥರು ಬಂದು ಬೆಂಕಿ ನಂದಿಸಲು ಸಹಕಾರ ನೀಡಿದ್ದಾರೆ’ ಎಂದು ಅಧಿಕಾರಿಗಳು ಸ್ಮರಿಸಿಕೊಂಡರು.

* * 

ಬೆಂಕಿರೇಖೆ ನಿರ್ಮಿಸಲಾಗುತ್ತಿದ್ದು ಕಾಳ್ಗಿಚ್ಚು ತಡೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾನಿ ಪ್ರದೇಶವನ್ನು ಜಿಪಿಎಸ್‌ ಮೂಲಕ ಸಮೀಕ್ಷೆ ಮಾಡುತ್ತಿದ್ದೇವೆ

ಎಂ.ಜೆ ಬನ್ನಿಕೊಪ್ಪ

ಹೆಚ್ಚುವರಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.