ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಪದವಿ ಫಲಿತಾಂಶ- ಪರಿಶೀಲಿಸಿ ಕ್ರಮ

Last Updated 10 ಫೆಬ್ರುವರಿ 2018, 8:56 IST
ಅಕ್ಷರ ಗಾತ್ರ

ಬಳ್ಳಾರಿ: ‘ಪದವಿ ಪರೀಕ್ಷೆಗಳಲ್ಲಿ ಫಲಿತಾಂಶ ಕುಸಿದಿದ್ದು ಈ ಬಗ್ಗೆ ವಿದ್ಯಾವಿಷಯಕ ಪರಿಷತ್ತಿನಲ್ಲಿ ಚರ್ಚಿಸಿ ಪರಿಶೀಲಿಸಲಾಗುವುದು’ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ತಿಳಿಸಿದರು.

6ನೇ ಘಟಿಕೋತ್ಸವದ ಕುರಿತು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು‘ ಒಟ್ಟಾರೆ ಫಲಿತಾಂಶದ ಜೊತೆಗೆ, ಬಿ.ಎ ಮತ್ತು ಬಿ.ಎಸ್‌ಸಿ. ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ. ಸ್ನಾತಕೋತ್ತರ ವಿಭಾಗದ ಸಮಾಜಕಾರ್ಯ ವಿಭಾಗ ಮತ್ತು ಅರ್ಥ ಶಾಸ್ತ್ರ ವಿಭಾಗಗಳು ಹಿನ್ನಡೆ ಕಂಡಿವೆ’ ಎಂದು ತಿಳಿಸಿದರು.

ಮೂಲಸೌಕರ್ಯ ಅಭಿವೃದ್ಧಿ: ’ವಿಶ್ವವಿದ್ಯಾಲಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ವೇಗ ಪಡೆದಿದ್ದು, ಬಳ್ಳಾರಿ ಮತ್ತು ಕೊಪ್ಪಳ ಸ್ನಾತಕೋತ್ತರ ಕೇಂದ್ರಗಳಲ್ಲಿರುವ ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳಿಗೆ ಅತ್ಯಾಧುನಿಕ ಮಾದರಿಯ ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದೆ. ಸ್ನಾತಕೋತ್ತರ ವಿದ್ಯಾ ರ್ಥಿಗಳಿಗೆ ಕೇಂದ್ರೀಯ ಕಂಪ್ಯೂಟರ್‌ ಪ್ರಯೋಗಾಲಯ, ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಭಾಷಾ ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ’ ಎಂದರು.

‘ಮುಖ್ಯ ಕ್ಯಾಂಪಸಿನಲ್ಲಿ ಬೃಹತ್‌ ಕೇಂದ್ರ ಗ್ರಂಥಾಲಯ, ಅಲ್ಲಿಯೇ ಡಿಜಿಟಲ್‌ ಗ್ರಂಥಾಲಯ, ಮುಖ್ಯ ಆಡಳಿತ ಕಟ್ಟಡದ ಬಳಿ 2 ಸಾವಿರ ಮಂದಿ ಕುಳಿತುಕೊಳ್ಳಲು ಅವಕಾಶವುಳ್ಳ ಬಯಲು ರಂಗಮಂದಿರವನ್ನು ನಿರ್ಮಿಸಲಾಗುತ್ತಿದೆ. 95 ಎಕರೆ ವಿಸ್ತೀರ್ಣದಲ್ಲಿ ಸುತ್ತಲೂ ಶಾಶ್ವತ ಕಾಂಪೌಂಡ್‌ ನಿರ್ಮಿಸಲಾಗಿದೆ, ಒಳಾಂಗಣ ಕ್ರೀಡಾಂಗಣ ಮತ್ತು ಘಟಿಕೋತ್ಸವ ಭವನವನ್ನೂ ನಿರ್ಮಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ದಾಖಲಾತಿ ಪ್ರಮಾಣ ಹೆಚ್ಚಳ: ವಿಶ್ವವಿದ್ಯಾಲಯ ಆರಂಭವಾದ 2010ರಲ್ಲಿ  9,000 ಪದವಿ ವಿದ್ಯಾರ್ಥಿಗಳು ಹಾಗೂ 854 ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದರು. ಪ್ರಸಕ್ತ ಸಾಲಿನಲ್ಲಿ 12,400 ಪದವಿ ವಿದ್ಯಾರ್ಥಿಗಳು ಹಾಗೂ 2,100 ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ. ಆದರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಜನಸಂಖ್ಯೆಗೆ ಹೋಲಿಸಿದರೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ ’ ಎಂದರು.

‘ಕೊಪ್ಪಳ ಜಿಲ್ಲೆಯಲ್ಲಿ 45 ಕಾಲೇಜುಗಳಿದ್ದು, ಅವುಗಳ ಸಂಖ್ಯೆ 2020ರ ವೇಳೆಗೆ 150ಕ್ಕೆ ಹೆಚ್ಚಾದರೆ ಅಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯವನ್ನೇ ಸ್ಥಾಪಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಉದ್ಯೋಗಾವಕಾಶ: ’2015–17ನೇ ಸಾಲಿನಲ್ಲಿ 137 ವಿದ್ಯಾರ್ಥಿಗಳಿಗೆ 8 ಕಂಪೆನಿಗಳಲ್ಲಿ

ಉದ್ಯೋಗಾವಕಾಶ ದೊರಕಿದೆ. ಉದ್ಯೋಗ ಘಟಕವನ್ನು ಇನ್ನಷ್ಟು ಸುಧಾರಿಸಲಾಗುವುದು’ ಎಂದರು. ಕುಲಸಚಿವರಾದ ಪ್ರೊ.ಎಸ್‌.ಎ.ಪಾಟೀಲ ಮತ್ತು ಪ್ರೊ.ಹೊನ್ನು ಸಿದ್ಧಾರ್ಥ ಉಪಸ್ಥಿತರಿದ್ದರು.

‘ಸಂಡೂರಿನ ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರಕ್ಕೆ ಸ್ಥಳ ನೀಡಿದ ಕಾರಣ ಎಂ.ವೈ.ಘೋರ್ಪಡೆ ಹೆಸರನ್ನಿಡಲು ನಿರ್ಧರಿಸಲಾಗಿದೆ’ ಎಂದು ಕುಲಪತಿ ಪ್ರೊ.ಸುಭಾಷ್‌ ತಿಳಿಸಿದರು. ‘246 ಎಕರೆ ಪ್ರದೇಶದಲ್ಲಿರುವ ಕೇಂದ್ರಕ್ಕೆ ಸೇರಿದ ಸುಮಾರು 13 ಎಕರೆಯನ್ನು ಸ್ಥಳೀಯರು ಒತ್ತುವರಿ ಮಾಡಿದ್ದಾರೆ. ಹೀಗಾಗಿ ತಂತಿಬೇಲಿ ಅಳವಡಿಸುವುದು ಕಷ್ಟಕರವಾಗಿದೆ. ಮುಖ್ಯ ಕ್ಯಾಂಪಸ್‌ಗೆ ಕಾಂಪೌಂಡ್‌ ಹಾಕುವುದಕ್ಕೂ ಸಮಸ್ಯೆಯಾಗಿತ್ತು’ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

‘ವಿಶ್ವವಿದ್ಯಾಲಯಕ್ಕೆ ನೀಡಲು ಸರ್ಕಾರ ನಿರ್ಧರಿಸಿರುವ ಸ್ಪಿನ್ನಿಂಗ್‌ ಮಿಲ್‌ನ 75 ಎಕರೆ ಪೈಕಿ 25 ಎಕರೆಯಷ್ಟು ಜಮೀನು ಕೂಡ ಒತ್ತುವರಿಯಾಗಿದೆ ಎಂದು ತಿಳಿದುಬಂದಿದೆ’ ಎಂದು ವಿಷಾದಿಸಿದರು.

’ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯಕ್ಕಾಗಿ ಸುಮಾರು ₹ 100 ಕೋಟಿ ಅನುದಾನ ಕೋರಿ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಮಂಡಳಿ ಕೇವಲ ₹ 4 ಕೋಟಿಯನ್ನಷ್ಟೇ ನೀಡಿದ್ದು, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಬಳಸುವಂತೆ ಸೂಚಿಸಿದೆ’ ಎಂದರು.

ಘಟಿಕೋತ್ಸವದಲ್ಲಿ

ವಿಶ್ವವಿದ್ಯಾಲಯದ ಆರನೇ ಘಟಿಕೋತ್ಸವ ಫೆ.10ರಂದು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿದೆ. ಕುಲಾಧಿಪತಿ ಹಾಗೂ ರಾಜ್ಯಪಾಲ ವಜುಭಾಯಿ ರುಢಾಬಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಪ್ರೊ.ಬಿ.ಬಲರಾಂ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉಪಸ್ಥಿತರಿರುತ್ತಾರೆ ಎಂದು ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ತಿಳಿಸಿದರು.

ಸ್ನಾತಕೋತ್ತರ ಪದವಿಗೆ ಈ ಬಾರಿಯಿಂದ 51 ಚಿನ್ನದ ಪದಕ ಹಾಗೂ ಪದವಿ ಕೋರ್ಸ್‌ಗಳಿಗೆ 16 ಚಿನ್ನದ ಪದಕವನ್ನು ವಿಶ್ವವಿದ್ಯಾಲಯ ನೀಡಲಿದೆ. ಪ್ರಸಕ್ತ ಸಾಲಿನಲ್ಲಿ 194 ರ್‌್ಯಾಂಕ್‌ ವಿತರಿಸಲಾಗುವುದು’ ಎಂದು ತಿಳಿಸಿದರು.

’ಸಂಜೆ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ನಡೆಯಲಿರುವ ರ್‌್ಯಾಂಕ್‌ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT