ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗೀರಥ ಗುರುಪೀಠದ ಆವರಣದಲ್ಲಿ ಸಮಾರಂಭ

Last Updated 10 ಫೆಬ್ರುವರಿ 2018, 9:17 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಬ್ರಹ್ಮ ವಿದ್ಯಾನಗರ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮಿಜಿ ಅವರ ಪಟ್ಟಾಭಿಷೇಕದ 19ನೇ ವಾರ್ಷಿಕೋತ್ಸವ ಸಮಾರಂಭ ಫೆ.10 ರಂದು ಮಠದ ಆವರಣದಲ್ಲಿ ನಡೆಯಲಿದೆ.

ಉಚಿತ ಸಾಮೂಹಿಕ ವಿವಾಹ, ಜಾನಪದ ಕಲಾಮೇಳ, ಧಾರ್ಮಿಕ ಸಭೆ ಸೇರಿದಂತೆ ಇನ್ನಿತರ ಆಚರಣೆಗಳು ನಡೆಯಲಿದ್ದು, ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ದೇಶದಲ್ಲೆಡೆ ನೆಲೆಸಿರುವ ಉಪ್ಪಾರ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.

ಪುರುಷೋತ್ತಮಾನಂದಪುರಿ ಶ್ರೀ ಧಾರ್ಮಿಕ ಕಾಯಕದ ಜತೆಗೆ ಕೃಷಿಯಲ್ಲಿ ತಮ್ಮನ್ನು ತೊಡಗಿದ್ದಾರೆ. ಲೇಪಾಕ್ಷಿ ಸ್ವಾಮೀಜಿ ಅವರು ಕೃಷಿ ಕಾಯಕದಿಂದ ಮಠದ ಅಭಿವೃದ್ಧಿ ಆಗಬೇಕೆಂದು ಕಂಡಿದ್ದ ಕನಸನ್ನು ಈಡೇರಿಸಲು ಶ್ರಮಿಸುತ್ತಿದ್ದಾರೆ. ಮಠದ ಅಭಿವೃದ್ಧಿಗೆ ನೂರಾರು ಎಕರೆ ಜಮೀನಿನಲ್ಲಿ ತೆಂಗು, ಅಡಿಕೆ, ತೋಟಗಾರಿಕಾ ಬೆಳೆ ಜತೆಗೆ,
ರಾಗಿ, ಸಾವೆ, ಹುರುಳಿ, ನವಣೆ ಸೇರಿದಂತೆ ಇನ್ನಿತರ ಆಹಾರ ಬೆಳೆ ಬೆಳೆಯುತ್ತಾ ವಾರ್ಷಿಕವಾಗಿ 15 ಲಕ್ಷಕ್ಕೂ ಅಧಿಕ ಆದಾಯ ಪಡೆಯುತ್ತಿದ್ದಾರೆ.

ಭಗೀರಥ ಗುರುಪೀಠವು 13 ಮಂದಿ ಮಠಾಧೀಶರನ್ನು ಹೊಂದಿದ್ದು 650 ವರ್ಷಗಳ ಇತಿಹಾಸವಿದೆ. ಚಿತ್ರದುರ್ಗದಲ್ಲಿ ಸ್ಥಾಪನೆಯಾಗಿದ್ದ ಮಠ ಕಾರಣಾಂತರಗಳಿಂದ ಚಳ್ಳಕೆರೆ ಉಪ್ಪಾರಹಟ್ಟಿಗೆ ಸ್ಥಳಾಂತರವಾಯಿತು. ನಂತರ 1960ರಲ್ಲಿ ಲೇಪಾಕ್ಷಿ ಸ್ವಾಮೀಜಿ ಬ್ರಹ್ಮವಿದ್ಯಾನಗರದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಮಠ ಸ್ಥಾಪನೆ ಮಾಡಿ ಬಡ ಕೃಷಿ ಕುಟುಂಬಗಳಿಗೆ ಅನ್ನದಾತರಾಗಿದ್ದರು. 1974ರಲ್ಲಿ ಉಪವೀರ ಜಗದ್ಗುರು ವಿದ್ಯಾಸಂಸ್ಥೆ ಸ್ಥಾಪಿಸಿ ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜು, ವಿದ್ಯಾರ್ಥಿ ನಿಲಯ ನಿರ್ಮಿಸಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಜ್ಞಾನ ಒದಗಿಸಿದ್ದರು.

ಶ್ರೀಗಳ ಸಂಚಾರ: ಭಗೀರಥ ಮಠಕ್ಕೆ 13ನೇ ಜಗದ್ಗುರುಗಳಾಗಿ 2000ನೇ ಫೆ. 10ರಂದು ಪಟ್ಟಾಭಿಷಿಕ್ತರಾದ ಪುರುಷೋತ್ತಮಾನಂದ ಪುರಿಶ್ರೀ ಉಪಪಂಗಡಗಳಾಗಿ ದೇಶದೆಲ್ಲೆಡೆ ಹರಿದು ಹಂಚಿಹೋಗಿರುವ 40 ಲಕ್ಷಕ್ಕೂ ಅಧಿಕ ಉಪ್ಪಾರರನ್ನು ಒಗ್ಗೂಡಿಸಲು ಸಂಚಾರ ಕೈಗೊಂಡು ಭಕ್ತರಲ್ಲಿ ಜನಜಾಗೃತಿ ಮೂಡಿಸಿದ್ದಾರೆ.

ಮಠದ ಆವರಣದಲ್ಲಿ ಲೇಪಾಕ್ಷಿ ಶ್ರೀಗಳ ಭವ್ಯವಾದ ಐಕ್ಯ ಮಂದಿರ, ಶಾಲಾ ಕಾಲೇಜು, ವಿದ್ಯಾರ್ಥಿ ಹಾಗೂ ಪ್ರಸಾದ ನಿಲಯ, ಸಮುದಾಯ ಭವನ, ಬಯಲು ರಂಗಮಂದಿರ ನಿರ್ಮಿಸಲಾಗಿದೆ. ₹ 5 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕಲ್ಲಿನಲ್ಲಿ ಭುವನೇಶ್ವರಿ ಪ್ರತಿಮೆ ಕೆತ್ತಿಸಲಾಗಿದೆ.

2010ರಲ್ಲಿ ಭಗೀರಥ ಜನಪದ ಸಾಂಸ್ಕೃತಿಕ ಟ್ರಸ್ಟ್‌ ಸ್ಥಾಪಿಸಿದ್ದು, ನಾಡಿನ ಕಲೆ, ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಉಳಿಸಿ, ಬೆಳೆಸುವಂತಹ ಪ್ರಯತ್ನವಾಗಿ ₹ 1 ಕೋಟಿ ವೆಚ್ಚದಲ್ಲಿ ಸಾಂಸ್ಕೃತಿ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.

ಮುಂದಿನ ಯೋಜನೆಗಳು

ಭಗೀರಥ ಮಹರ್ಷಿ ಅವರ ಬೃಹತ್‌ ಏಕಶಿಲಾ ಮೂರ್ತಿ ಸ್ಥಾಪನೆ, ಚನ್ನಕೇಶವ ಸ್ವಾಮಿ ದೇಗುಲ ನಿರ್ಮಾಣ, ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜು ಸ್ಥಾಪನೆ, ವಸ್ತು ಸಂಗ್ರಹಾಲಯ, ಸಾವಯವ ಕೃಷಿ ಪದ್ಧತಿ ಅನುಷ್ಠಾನ, ಯೋಗ ಹಾಗೂ ನಮ್ಮ ಸಂಸ್ಕೃತಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಸರ್ಕಾರ ಹಾಗೂ ಭಕ್ತರ ಸಹಕಾರದಿಂದ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT