ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಂದಿರ ಕನಸು ನನಸು ಮಾಡಿದ ಮಕ್ಕಳು

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬಳ್ಳಾರಿ: ‘ಮಗಳು ಸಣ್ಣವಳಿದ್ದಾಗಲೇ ಪತಿ ಕೈ ಬಿಟ್ಟರು. ಅವರು ಬಿಟ್ಟು ಹೋದ ಬಳಿಕ ಸಮಾಜದ ದೃಷ್ಟಿಕೋನವೇ ಬದಲಾಯಿತು. ಇದ್ಯಾವುದಕ್ಕೂ ಅಂಜದೆ ಬಟ್ಟೆ ಹೊಲಿದು ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದೆ. ಈಗ ಆಕೆಯ ಕೊರಳಲ್ಲಿರುವ ಚಿನ್ನದ ಪದಕಗಳು ನನ್ನಲ್ಲಿ ಸಾರ್ಥಕತೆಯ ಭಾವ ಮೂಡಿಸಿವೆ’

ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕ ಪಡೆದ ಎಂ.ಎಸ್ಸಿ ಗಣಿತ ವಿಭಾಗದ ಜೆ.ಪುಷ್ಪಾ ಅವರ ತಾಯಿ ಪದ್ಮಾ ಅವರ ಭಾವುಕ ನುಡಿಗಳಿವು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಜಂಗಮರ ಕಲ್ಗುಡಿಯವರಾದ ಪದ್ಮಾ, ‘ಇನ್ನೊಬ್ಬರ ಹಂಗಿಲ್ಲದೇ ಮಗಳನ್ನು ಬೆಳೆಸಬೇಕು ಎಂಬ ಛಲ ನನ್ನಲ್ಲಿತ್ತು. ಅದಕ್ಕಾಗಿ ಸಾಕಷ್ಟು ಶ್ರಮಿಸಿದೆ. ಪ್ರತಿ ಕ್ಷಣವೂ ನನ್ನ ಮಗಳ ಭವಿಷ್ಯವೇ ನನಗೆ ಕಾಣುತ್ತಿತ್ತು. ಈಗ ಅವಳ ಸಾಧನೆ ಇಡೀ ಊರಿಗೆ ಹೆಮ್ಮೆ ಎನಿಸಿದೆ’ ಎಂದು ಹೇಳುತ್ತಲೇ ಗದ್ಗರಿತರಾದರು.

ಚಿನ್ನದ ಹುಡುಗಿ ಪುಷ್ಪಾ ಪ್ರತಿಕ್ರಿಯಿಸಿ, ‘ನನ್ನ ಸಾಧನೆಗೆ ತಾಯಿಯೇ ಸ್ಫೂರ್ತಿ. ಅವರ ಬೆಂಬಲ ಇಲ್ಲದಿದ್ದರೆ ಈ ಸಾಧನೆ ಮಾಡಲು ಆಗುತ್ತಿರಲಿಲ್ಲ. ಸದ್ಯ ಗಂಗಾವತಿಯ ಪಿಯು ಚೈತನ್ಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದೆ ಬ್ಯಾಂಕ್‌ ವ್ಯವಸ್ಥಾಪಕಿ ಆಗಬೇಕೆಂಬ ಕನಸಿದೆ’ ಎಂದು ಸಂತಸ ಹಂಚಿಕೊಂಡರು.

(ಮಗ ನಿಂಗಪ್ಪನ ಸಾಧನೆಯನ್ನು ಸಂಭ್ರಮಿಸಿದ ಹುಲಿಗೆಮ್ಮ)

ಕಟ್ಟಡ ಕಾರ್ಮಿಕಳ ಮಗನಿಗೆ 2 ಚಿನ್ನದ ಪದಕ

ಹೊಸಪೇಟೆಯ ಕಾರಿಗನೂರಿನ ಹುಲಿಗೆಮ್ಮ ಅವರ ಪುತ್ರ ನಿಂಗಪ್ಪ, ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ. ಕೂಲಿ ಕಾರ್ಮಿಕಳಾದ ಹುಲಿಗೆಮ್ಮ ಕಟ್ಟಡ ಕೆಲಸ ಮಾಡಿಯೇ ಮಗನಿಗೆ ಉನ್ನತ ಶಿಕ್ಷಣ ಕೊಡಿಸಿದ್ದು, ಮಗನ ಸಾಧನೆ ಅವರ ಮುಖದಲ್ಲಿ ಸಂತಸವಾಗಿ ಹೊರಹೊಮ್ಮಿತ್ತು.

‘ನಾನು ಶಾಲೆ ಮೆಟ್ಟಿಲು ಹತ್ತಿಲ್ಲ. ಆದರೆ, ಮಗನಿಗೆ ಒಳ್ಳೆಯ ಭವಿಷ್ಯ ಕೊಡಬೇಕು ಎಂಬ ಮಹದಾಸೆ ಇತ್ತು. ಪತಿ ಎರಡನೇ ಮದುವೆ ಮಾಡಿಕೊಂಡು ನನ್ನನ್ನು ಬಿಟ್ಟು ಹೋದರು. ಆ ಎಲ್ಲ ನೋವನ್ನೂ ನುಂಗಿಕೊಂಡು ಮಗನನ್ನು ಚೆನ್ನಾಗಿ ಓದಿಸಿದೆ. ನನಗೆ ಒಪ್ಪತ್ತು ಊಟ ಇಲ್ಲದಿದ್ದರೂ ಮಗನನ್ನು ಹಸಿವಿನಿಂದ ಮಲಗಿಸಿಲ್ಲ’ ಎಂದು ಹುಲಿಗೆಮ್ಮ ಕಣ್ಣೀರು ಹಾಕಿದರು.

‘ನಾನು ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದೆ ಉನ್ನತ ಸ್ಥಾನ ಅಲಂಕರಿಸಬೇಕೆಂಬ ಆಸೆ ಇದೆ’ ಎಂದು ಚಿನ್ನದ ಹುಡುಗ ನಿಂಗಪ್ಪ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT