ಗುರುವಾರ , ಜೂನ್ 4, 2020
27 °C

ಸರ್ವ ಜನಾಂಗದ ಶಾಂತಿಯ ತೋಟ. . .

ವೈ.ಗ. ಜಗದೀಶ್ / ವಿ.ಎಸ್. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಸರ್ವ ಜನಾಂಗದ ಶಾಂತಿಯ ತೋಟ. . .

ಮಂಗಳೂರು: ಕರಾವಳಿಯ ನೆಲದಲ್ಲಿ ಮತೀಯ ದ್ವೇಷದ ಕಿಚ್ಚು ಹೊತ್ತಿಸಿ ಶಾಂತಿ ಕದಡಲು ವಿವಿಧ ಸಂಘಟನೆಗಳು ನಿತ್ಯ ಹವಣಿಸುತ್ತಿದ್ದರೂ ಸಮುದಾಯಗಳ ಜನರ ನಡುವಿನ ಸಾಮರಸ್ಯದ ಪಸೆ ಆರಿಲ್ಲ. ಮೇಲೆ ಭೋರ್ಗರೆದಂತೆ ಕಾಣುವ ಕಡಲಾಳದಲ್ಲಿ ಪ್ರಶಾಂತವಾಗಿ ಹರಿಯುವ ಜೀವಜಲದಂತೆ ಜನರ ಮಧ್ಯೆಯೂ ಬಾಂಧವ್ಯದ ಬೆಸುಗೆ ನಿಷ್ಕಲ್ಮಶವಾಗಿ ಪ್ರವಹಿಸುತ್ತಲೇ ಇದೆ.

ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಯತ್ನ ನಡೆಯಿತು. ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ  ಅವರನ್ನು ಆಸ್ಪತ್ರೆಗೆ ಸೇರಿಸಿದವರು ಮನುಷ್ಯರು. ಅವರ ಹೆಸರು ಮಾತ್ರ ಅಬ್ದುಲ್ ರವೂಫ್. ಬಶೀರ್ ಅವರ ಕೊಲೆ ಯತ್ನ ನಡೆದಾಗ, ರಕ್ತ ಸುರಿಸಿಕೊಂಡು ಬೀದಿಯಲ್ಲಿ ಅನಾಥವಾಗಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೂ ಮನುಷ್ಯರು. ಅವರ ಹೆಸರು ಮಾತ್ರ ಶೇಖರ್ ಮತ್ತು ರೋಹಿತ್. ಆದರೆ, ದುರಾದೃಷ್ಟ ಇಬ್ಬರೂ ಬದುಕುಳಿಯಲಿಲ್ಲ.

ಮತೀಯ ದ್ವೇಷದಿಂದ ಕರಾವಳಿ ಕೊತಕೊತ ಕುದಿಯುತ್ತಿದೆ ಎಂದು ಬಿಂಬಿಸಲು ಹೊರಟಿದ್ದವರಿಗೆ ಇದು ಬೇರೆಯೇ ಬಗೆಯ ಎಚ್ಚರಿಕೆಯನ್ನೂ ನೀಡಿತು. ಸಂಘಟನೆಗಳ ಕಾರ್ಯಕರ್ತರು ಎಷ್ಟೇ ರಕ್ತದಾಹಿಗಳಾಗಿದ್ದರೂ ಇಲ್ಲಿ ಇನ್ನೂ ಮಾನವೀಯತೆಯನ್ನೇ ಒಡಲೊಳಗೆ ತುಂಬಿಕೊಂಡವರು ಇದ್ದಾರೆ ಎಂಬುದನ್ನು ಇದು ಸಾಬೀತು ಪಡಿಸಿತು.

ಕೋಮು ಹಿಂಸೆ ಆಧಾರಿತ ರಾಜಕಾರಣಕ್ಕೆ ‘ಕರಾವಳಿಯನ್ನು ಪ್ರಯೋಗಶಾಲೆ’ ಯಾಗಿ ಮಾಡುವ ಯತ್ನಗಳು ನಡೆಯುತ್ತಲೇ ಇವೆ. ಆದರೆ, ಅದನ್ನು ಜನ ಸೋಲಿಸುತ್ತಲೇ ಇದ್ದಾರೆ. ಶಾಂತಿಯನ್ನೇ ಬಯಸುತ್ತಿರುವ ಇಲ್ಲಿನ ಜನ ಕಳೆದ ಐದಾರು ವರ್ಷಗಳ ಹಿಂದೆ ಬಂದ್, ಪ್ರತಿಭಟನೆ, ರ‍‍್ಯಾಲಿ ಕರೆಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಂತೆ ಈಗ ಸ್ಪಂದಿಸುತ್ತಿಲ್ಲ. ಪ್ರತಿಯೊಂದು ಘಟನೆಯನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಕೊಲೆಯೊಂದು ನಡೆದರೆ ಅದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಇರತೊಡಗಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಸಮಸ್ತ ‘ಹಿಂದೂ’ಗಳ ಬೆಂಬಲ ಇದೆ ಎಂಬುದು ನಿಜವೇ ಆಗಿದ್ದರೆ ಹಿಂದೂಗಳೇ ಬಹುಸಂಖ್ಯಾತರಾಗಿರುವ ಮಂಗಳೂರು ಉತ್ತರದ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎ. ಮೊಯಿದ್ದೀನ್ ಬಾವ, ದಕ್ಷಿಣ ಕ್ಷೇತ್ರದಲ್ಲಿ ಜೆ.ಆರ್. ಲೋಬೊ ಗೆಲ್ಲುತ್ತಲೇ ಇರಲಿಲ್ಲ. ‘ಹಿಂದೂ’ಗಳೇ ಗೆಲ್ಲುತ್ತಿದ್ದರು ಎಂದು ಟ್ಯಾಕ್ಸಿ ಓಡಿಸುವ ನವೀನ್ ಪ್ರತಿಪಾದಿಸಿದರು.

ಹಿಂದೂಗಳ ಪಾನಕಕ್ಕೆ ಮುಸ್ಲಿಮರ ಸಕ್ಕರೆ: ಕರಾವಳಿಯಲ್ಲಿ ಹಿಂದೂ ಸಮಾಜೋತ್ಸವ ನಡೆದರೆ ಕೋಮುಗಲಭೆ ಖಚಿತ ಎನ್ನುವ ದಿನಗಳು ಇದ್ದವು. 2008ರಿಂದ 2013ರ ಅವಧಿಯಲ್ಲಿ ವಿಧಾನಸಭಾ ಉಪಾಧ್ಯಕ್ಷರಾಗಿದ್ದ, ಮಂಗಳೂರು ದಕ್ಷಿಣ ಕ್ಷೇತ್ರದ  ಆಗಿನ ಬಿಜೆಪಿ ಶಾಸಕ ಎನ್‌.ಯೋಗೀಶ್ ಭಟ್, ಮುಸ್ಲಿಂ ಕೇಂದ್ರ ಸಮಿತಿಯ ಅಧ್ಯಕ್ಷ  ಕೆ.ಎಸ್.ಎಂ. ಮಸೂದ್ ಹಾಗೂ ಜಿಲ್ಲಾಡಳಿತದ ಒಗ್ಗಟ್ಟಿನ ಪ್ರಯತ್ನದ ಫಲವಾಗಿ ಸಾಮರಸ್ಯದ ಹಾದಿಯೊಂದು ತೆರೆದುಕೊಂಡಿತ್ತು.

‘ಹಿಂದೂ ಸಮಾಜೋತ್ಸವ ಹಮ್ಮಿಕೊಂಡಾಗ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿತ್ತು. ಕರ್ಫ್ಯೂ ಹೇರಬೇಕಾದ ಸ್ಥಿತಿ ಇತ್ತು. ಆಗ ಶಾಸಕನಾಗಿದ್ದ ನಾನು ಒಂದು ಪ್ರಯತ್ನ ಮಾಡಿದೆ. ಆದರೆ, ಸಂಘ ಪರಿವಾರದವರನ್ನು ಒಪ್ಪಿಸುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗೂ ಹೀಗೂ ಒಪ್ಪಿಸಿದೆ. ಮುಸ್ಲಿಂ ಸಮುದಾಯದ ಎಲ್ಲ ಮುಖಂಡರನ್ನು ನನ್ನ ಮನೆಗೆ ಊಟಕ್ಕೆ ಕರೆದೆ. ಅವರು ಬರುತ್ತಾರೋ ಇಲ್ಲವೋ ಎಂಬ ಅನುಮಾನವೂ ಇತ್ತು. ಅವರಲ್ಲಿಯೇ ವಾರಗಟ್ಟಲೇ ಆಂತರಿಕವಾಗಿ ಚರ್ಚೆ ನಡೆದು ಕೊನೆಗೆ ಊಟಕ್ಕೆ ಎಲ್ಲರೂ ಬಂದರು. ಊಟ ಮುಗಿದ ಮೇಲೆ ಮಸೂದ್ ಅವರು, ನೀವೆಲ್ಲ ನಮ್ಮ ಮನೆಗೆ ಬರಬೇಕು ಎಂದು ಕೋರಿದರು. ನಾವೆಲ್ಲ ಹೋದೆವು. ಎಲ್ಲವೂ ಅಚ್ಚು ಕಟ್ಟಾಗಿ ನಡೆಯಿತು. ಎರಡೂ ಕಡೆಯ ಭೋಜನಕ್ಕೆ ಒಂದೇ ತಂಡ ಅಡುಗೆ ಸಿದ್ಧಪಡಿಸಿತ್ತು. ಸಹಭೋಜನ, ಚರ್ಚೆಯ ಬಳಿಕ ಪರಿಸ್ಥಿತಿ ಒಂದು ಹಂತಕ್ಕೆ ತಿಳಿಯಾಯಿತು.

ಸಮಾಜೋತ್ಸವ, ಆರ್‌ಎಸ್‌ಎಸ್‌ ಪಥ ಸಂಚಲನ ಇದ್ದಾಗ ಕುದ್ರೋಳಿ, ಬರ್ಕೆಯ ಮಸೀದಿಗಳ ಎದುರು ಹೋಗುವಾಗ ನಮ್ಮವರು ಕಲ್ಲು ಎಸೆಯುವುದೋ ಅಥವಾ ಅವರ ಕಡೆಯಿಂದ ಕಲ್ಲು ತೂರಿ ಬರುವುದು ಮಾಮೂಲಿನ ಸಂಗತಿಯಾಗಿತ್ತು. ಆಗ ನಾನೊಂದು ಯತ್ನ ಮಾಡಿದ್ದೆ. ಮೆರವಣಿಗೆ ಮಸೀದಿ ಎದುರು ಬರುವ ಮುನ್ನ ನಾನೇ ನನ್ನ ಬೈಕ್ ನಲ್ಲಿ ನನ್ನ ಮಗುವನ್ನು ಮುಂದೆ ಕೂರಿಸಿಕೊಂಡು ಬಂದೆ. ಮಸೀದಿ ಎದುರು ನನ್ನ ಮಗುವನ್ನು ಎತ್ತಿಕೊಂಡು ನಿಂತೆ. ನಮ್ಮವರ ಕಡೆಯಿಂದ ಕಲ್ಲು ಬಿದ್ದರೆ ನಿಮ್ಮವರಿಗಿಂತ ಮೊದಲು ನನ್ನ ಮಗುವಿನ ಮೇಲೆ ಬೀಳಲಿ ಎಂದೆ. ನಿಮಗೆ ಸಾಧ್ಯವಾದರೆ ಹೊರಗೆ ಬಂದು ನಿಂತುಕೊಳ್ಳಿ. ಇಲ್ಲದಿದ್ದರೆ ಮಸೀದಿಯ ಒಳಗೆ ಇರಿ ಎಂದೂ ಹೇಳಿದೆ. ಮೆರವಣಿಗೆ ನಾಲ್ಕು ಮಸೀದಿಗಳ ಎದುರು ಹಾದು ಹೋಗುವ ಹೊತ್ತಿನಲ್ಲಿ ಹಾಗೆಯೇ ಮಾಡಿದೆ ಕೂಡ. ಏನೋ ಆಗಿಬಿಡುತ್ತದೆ ಎಂಬ ಆತಂಕ ಎರಡೂ ಕಡೆಯವರಲ್ಲಿ ಇತ್ತು. ಆದರೆ, ಸಣ್ಣ ಘಟನೆಯೂ ನಡೆಯಲಿಲ್ಲ.

ಇದೇ ಅನುಭವದ ಮೇಲೆ ಮತ್ತೊಂದು ಪ್ರಯೋಗ ಮಾಡಿದೆವು. ಸಮಾಜೋತ್ಸವದ ಮೆರವಣಿಗೆಯಲ್ಲಿ ಹೋಗುವಾಗ ಎಲ್ಲರಿಗೂ ಮಸೀದಿ ಎದುರು ಪಾನಕ ನೀಡುವುದು. ಅದಕ್ಕೆ ಬೇಕಾದ ಸಕ್ಕರೆಯನ್ನು ಮುಸ್ಲಿಂ ಮುಖಂಡರು ನೀಡುವುದು ಎಂಬುದಾಗಿತ್ತು. ಕಹಿಯನ್ನು ಮರೆತು ಸಿಹಿ ಹಂಚಬೇಕು ಎಂಬುದು ನಮ್ಮ ಆಲೋಚನೆ. ಅದೂ ಯಶಸ್ವಿಯಾಯಿತು’ ಎಂದು ಯೋಗೀಶ್ ಭಟ್ ನೆನಪಿಸಿಕೊಂಡರು.

ಇದಕ್ಕೆ ಧ್ವನಿ ಸೇರಿಸಿದ ಕೆ.ಎಸ್.ಎಂ ಮಸೂದ್,  ಸಮಾಜೋತ್ಸವದ ವೇಳೆ ಉದ್ವಿಗ್ನ ಪರಿಸ್ಥಿತಿ ಇತ್ತು. ಯೋಗೀಶ್ ಭಟ್ ಊಟಕ್ಕೆ ಕರೆದರು. ಆರು ಸುತ್ತಿನ ಸಭೆ ಬಳಿಕ ಹೋಗುವುದು ಎಂದಾಯಿತು. ನಮಾಜಿಗೆ ಹೋಗುವ ದಿರಿಸು ಧರಿಸಿಯೇ ಹೋದೆವು. ಎಲ್ಲವನ್ನೂ ದೇವರ ಮೇಲೆ ಬಿಡೋಣ. ನಿಮ್ಮ ಸಮಾಜೋತ್ಸವಕ್ಕೆ ನಮ್ಮ ಪೂರ್ಣ ಬೆಂಬಲ ನೀಡುತ್ತೇವೆ ಎಂದು ಊಟದ ಬಳಿಕ ವಾಗ್ದಾನ ಮಾಡಿದೆವು. ಅವರ ಪಾನಕಕ್ಕೆ ಸಕ್ಕರೆಯನ್ನೂ ಒದಗಿಸಿದೆವು. ದ್ವೇಷವೆಲ್ಲ ಮರೆಯಾಗಿ ಸಾಮರಸ್ಯದ ದಿನಗಳು ಆರಂಭವಾದವು. ಆಗ ಇದ್ದ ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಆಗಾಗ್ಗೆ ಶಾಂತಿ ಸಭೆ ನಡೆಸುತ್ತಿದ್ದರು. ಎಲ್ಲ ಸಮುದಾಯದವರನ್ನೂ ಕರೆದು ಚರ್ಚಿಸುತ್ತಿದ್ದರು. ಈಗ ಅಂತಹದೆಲ್ಲ ಕಡಿಮೆಯಾಗಿದೆ ಎಂದರು.

ಪೇಜಾವರರ ಇಫ್ತಾರ್: ವಿಶ್ವ ಹಿಂದೂ ಪರಿಷತ್ತಿನ ಮುಂಚೂಣಿಯಲ್ಲಿರುವ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥರು, ರಂಜಾನ್ ಸಂದರ್ಭದಲ್ಲಿ ಮುಸ್ಲಿಮರನ್ನು ಕೃಷ್ಣಮಠಕ್ಕೆ ಆಮಂತ್ರಿಸಿ ಭೋಜನ ಕೂಟ ಏರ್ಪಡಿಸಿದ್ದರು. ಅವರ ಬಗ್ಗೆ ಅಪಾರ ಗೌರವ ಇರುವವರು ಕೂಡ ಇದನ್ನು ಸಹಿಸದೇ ಉಗ್ರ ಧ್ವನಿಯಲ್ಲಿ ಖಂಡಿಸಿದರು. ಕೆಲವರು ಮೌನಕ್ಕೆ ಶರಣಾದರು. ಪರ-ವಿರೋಧದ ಚರ್ಚೆಗೆ ಇದು ಗ್ರಾಸ ಒದಗಿಸಿತ್ತು.

‘ಪೇಜಾವರ ಶ್ರೀಗಳು ಮುಸ್ಲಿಮರನ್ನು ಕರೆದು ಊಟ ಹಾಕಿದಾಗ ಕೆಲವರು ಟೀಕೆ ಮಾಡಿದರು. ಆದರೆ ಅವರು ವಿಚಲಿತರಾಗಲಿಲ್ಲ. ಅವರ ಸಣ್ಣ ಪ್ರಯತ್ನವೂ ನಾಳೆ ಒಳಿತನ್ನು ಮಾಡಲಿದೆ’ ಎಂದು ‘ಪ್ರಜಾವಾಣಿಗೆ’ ತಿಳಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ‘ಇಲ್ಲಿಯ ವಾತಾವರಣ ಸಹಜವಾದ ಜೀವನಕ್ಕೆ ಮರಳಬೇಕು ಎಂಬುದು ನಮ್ಮ ಆಸೆ’ ಎಂದರು.

**

ಸ್ವಾರಸ್ಯದ ತಾಣ ಬಪ್ಪನಾಡು

ಮಂಗಳೂರಿನಿಂದ ಅರ್ಧ ಗಂಟೆ ಕ್ರಮಿಸಿದರೆ ಸಿಗುವ ಮೂಲ್ಕಿಯಲ್ಲಿ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನವಿದೆ. ಬಪ್ಪ ಬ್ಯಾರಿ ಎಂಬ ವ್ಯಾಪಾರಿ ತನ್ನ ನೌಕೆಯಲ್ಲಿ ವ್ಯಾಪಾರಕ್ಕೆ ಹೋಗುತ್ತಿದ್ದಾಗ, ಸಮುದ್ರದಲ್ಲಿದ್ದ ಲಿಂಗರೂಪಕ್ಕೆ ನೌಕೆ ತಾಗುತ್ತದೆ. ಲಿಂಗರೂಪದಿಂದ ರಕ್ತ ಸುರಿಯಲು ಆರಂಭವಾಗುತ್ತದೆ. ಆಗ ಪ್ರತ್ಯಕ್ಷಳಾದ ದುರ್ಗಾ ಪರಮೇಶ್ವರಿ ಮುಂದೆ ಬಪ್ಪಬ್ಯಾರಿ ಶರಣಾಗುತ್ತಾರೆ. ತಪ್ಪಿಗೆ ಪರಿಹಾರ ಏನು ಎಂದು ಕೇಳಿದಾಗ, ಶಾಂಭವಿ ನದಿ ತೀರದಲ್ಲಿ ದೇವಸ್ಥಾನ ಕಟ್ಟಿಸಬೇಕು ಎಂದು ಆದೇಶ ಮಾಡುವುದಲ್ಲದೇ, ಇನ್ನು ಮುಂದೆ ಆ ಪ್ರದೇಶ ನಿನ್ನದೇ ಹೆಸರಿನ ಬಪ್ಪ ನಾಡು ಎಂದೇ ಕರೆಸಿಕೊಳ್ಳುತ್ತದೆ ಎಂದು ದೇವಿ ಹೇಳುತ್ತಾಳೆ. ಬಪ್ಪ ಬ್ಯಾರಿಗೆ ವೈದಿಕ ದೇವರು ಒಲಿದ ಹೀಗೊಂದು ಐತಿಹ್ಯ ಇದೆ.

ಪ್ರತಿ ವರ್ಷ ಮಾರ್ಚ್‌ನಲ್ಲಿ ನಡೆಯುವ ಬಪ್ಪನಾಡು ಜಾತ್ರೆಯಂದು ದೇವಿಯ ಮೆರವಣಿಗೆ ಹೊರಟಾಗ ಮೊದಲು ಹೋಗಿ ನಿಲ್ಲುವುದು ಬಪ್ಪಬ್ಯಾರಿಯ ಮನೆಗೆ. ಅಲ್ಲಿ ಮೊದಲ ಪೂಜೆ ಸಲ್ಲಿಕೆಯಾದ ಬಳಿಕ ಉಳಿದ ಕಡೆಗೆ ದೇವಿಯ ಮೆರವಣಿಗೆ ಹೋಗುವ ಪದ್ಧತಿ ಇದೆ. ಬ್ರಹ್ಮರಥದಲ್ಲಿ ಅಷ್ಟ ದಿಕ್ಪಾಲಕರ ಚಿತ್ರಗಳಿರುವಂತೆ ಬಪ್ಪಬ್ಯಾರಿಯ ಭಾವಚಿತ್ರವನ್ನು ಇರಿಸುವುದು ಇಲ್ಲಿನ ವೈಶಿಷ್ಟ್ಯ. ದೇವಸ್ಥಾನ ಕಟ್ಟಿದವರು ಮುಸ್ಲಿಮರಾದರೆ, ಆಡಳಿತ ಮೊಕ್ತೇಸರರು ಜೈನರು. ವೈದಿಕ ಪದ್ಧತಿ ಪ್ರಕಾರ ದೇವಿಗೆ ಪೂಜೆ ನಡೆಯುತ್ತದೆ. ಜಾತ್ರೆಯ ವೇಳೆ ನಡೆಯುವ ಶಯನೋತ್ಸವಕ್ಕೆ ನಿರ್ಮಿಸುವ ಮಲ್ಲಿಗೆ ಮಂಟಪಕ್ಕೆ ಕ್ರಿಶ್ಚಿಯನ್ನರೇ ಹೆಚ್ಚಾಗಿ ಬೆಳೆಯುವ ಶಂಕರಪುರ ಮಲ್ಲಿಗೆ ಬಳಸಲಾಗುತ್ತದೆ. ಇಂದಿಗೂ ಕ್ರಿಶ್ಚಿಯನ್ನರು ಬಂದು ಮಲ್ಲಿಗೆ ಅರ್ಪಿಸುವ ಪದ್ಧತಿ ಇದೆ.

**

ವಿಶ್ವ ಕೊಂಕಣಿ ಕೇಂದ್ರ

ಮಂಗಳೂರಿನ ಆಕಾಶಭವನದಲ್ಲಿರುವ ವಿಶ್ವ ಕೊಂಕಣಿ ಕೇಂದ್ರ ಸಾಮರಸ್ಯದ ಇನ್ನೊಂದು ಮಾದರಿಯಂತಿದೆ. ಕೊಂಕಣಿ ಭಾಷಿಕರಾಗಿರುವ ಗೌಡ ಸಾರಸ್ವತ ಬ್ರಾಹ್ಮಣರು, ಕ್ರೈಸ್ತ ಧರ್ಮೀಯರು, ನವಾಯತ ಮುಸ್ಲಿಮರು, ಸಿದ್ಧಿ ಸಮುದಾಯದವರು, ಖಾರ್ವಿ ಮತ್ತು ಕುಣಬಿ ಸಮುದಾಯದವರು ಇಲ್ಲಿ ಒಂದಾಗಿ ಸಾಗುತ್ತಿದ್ದಾರೆ.

ಬಸ್ತಿ ವಾಮನ ಶೆಣೈ ಎಂಬ ಹಿರೀಕರು ಅಧ್ಯಕ್ಷರಾಗಿರುವ ಕೇಂದ್ರದಲ್ಲಿ ಉದ್ಯಮಿಗಳು, ಐ.ಟಿ ಕ್ಷೇತ್ರದ ದಿಗ್ಗಜರೂ ಆದ ಟಿ.ವಿ. ಮೋಹನದಾಸ್ ಪೈ, ಯು. ರಾಮದಾಸ್ ಕಾಮತ್, ಸಚಿವ ಆರ್. ವಿ. ದೇಶಪಾಂಡೆ, ಉದ್ಯಮಿ ದಯಾನಂದ ಪೈ ಮೊದಲಾದವರಿದ್ದಾರೆ.

ಕೊಂಕಣಿ ಮಾತೃ ಭಾಷಿಕರು ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಕಾರಣಕ್ಕೆ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ವರ್ಷಕ್ಕೆ ₹30,000 ಮತ್ತು ₹ 40,000 ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಇದರ ಜತೆಗೆ, ಪ್ರತಿ ವರ್ಷ ಮೂರು ದಿನಗಳ ಕ್ಷಮತಾ ತರಬೇತಿ ಕೊಡಲಾಗುತ್ತಿದೆ. ಈ ತರಬೇತಿಯಲ್ಲಿ ಪಾಲ್ಗೊಂಡವರಿಗೆ ಮಾತ್ರ ವಿದ್ಯಾರ್ಥಿ ವೇತನ ಸಿಗಲಿದೆ.

**

<p>ಸಾಮರಸ್ಯ ಮೂಡಿಸುವ ಯತ್ನವಾಗಿ ಪರ್ಯಾಯದ ಅವಧಿಯಲ್ಲಿ ಮುಸ್ಲಿಮ<br/>ರನ್ನು ಕರೆಸಿ ಊಟ ಹಾಕಿಸಿ, ಭಾರೀ ವಿರೋಧ ಎದುರಿಸಿದೆವು. ಪರಮತ ದ್ವೇಷ ಶೌರ್ಯದ ಭಾವನೆಯಾಗಿದೆ. ಅದು ಬದಲಾಗಬೇಕು.

ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

*

ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ 3 ಲಕ್ಷ ಸದಸ್ಯರಿದ್ದಾರೆ. ಎಲ್ಲ ಧರ್ಮಗಳಿಗೆ ಸೇರಿದವರು ಇದ್ದಾರೆ. ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸಾಮರಸ್ಯದ ಸಂದೇಶ ನೀಡುತ್ತಿದ್ದೇವೆ.

–‌ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

*

ಶೇ 98ರಷ್ಟು ಜನ ಒಳ್ಳೆಯವರಿದ್ದಾರೆ. ಸಾಮರಸ್ಯದ ನಾಡು ಇದು. ಕೆಲವರು ಇದನ್ನು ಕೆಡಿಸುವ ಯತ್ನ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.

–ರೆವೆರೆಂಡ್ ಅಲೋಶಿಯಸ್ ಪಾಲ್ ಡಿಸೋಜ, ಧರ್ಮಾಧ್ಯಕ್ಷರು, ಮಂಗಳೂರು ಧರ್ಮ ಪ್ರಾಂತ್ಯ

*

ಈಗ ಇರುವ ಪರಿಸ್ಥಿತಿ ಮರೆಯಾಗಿ ಶಾಂತಿ- ಸಹಬಾಳ್ವೆ ಮರು ಸ್ಥಾಪನೆಯಾಗಬೇಕಾದರೆ ಮಸೀದಿ, ಚರ್ಚ್, ಮಠ, ದೇವಸ್ಥಾನಗಳ ಮುಖ್ಯಸ್ಥರು, ವಿವಿಧ ಸಮುದಾಯಗಳ ಪ್ರಮುಖರು ಜತೆಗೆ ಕುಳಿತು ಚರ್ಚಿಸಬೇಕು.

–ಕೆ.ಎಸ್.ಎಂ. ಮಸೂದ್, ಅಧ್ಯಕ್ಷರು, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಮುಸ್ಲಿಂ ಕೇಂದ್ರ ಸಮಿತಿ.

**

(ಮುಗಿಯಿತು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.