ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ವೆಚ್ಚದ ರೇಷ್ಮೆ ಹುಳು ಮನೆ

ಹೆಂಚು, ಜೇಡಿ ಮಣ್ಣಿನ ವಾತಾನುಕೂಲಿ ಕಟ್ಟಡ
Last Updated 11 ಫೆಬ್ರುವರಿ 2018, 10:05 IST
ಅಕ್ಷರ ಗಾತ್ರ

ಶಿಡ್ಲಘಟ್ಟ : ತಾಲ್ಲೂಕಿನಲ್ಲಿ ರೇಷ್ಮೆ ಹುಳು ಸಾಕಾಣಿಕೆಯ ಮನೆಗಳು ಸಾಕಷ್ಟಿವೆ. ಈ ಮನೆಗಳಲ್ಲಿ ಸಮಶೀತೋಷ್ಣ ವಾತಾವರಣ ಕಾಯ್ದುಕೊಳ್ಳಬೇಕಾದುದು ಅತ್ಯಗತ್ಯ. ಹುಳು ಸಾಕಾಣಿಕೆಗೆ ಅನುಕೂಲವಾದ ಸನ್ನಿವೇಶಗಳ ನಡುವೆಯೇ ಕಡಿಮೆ ವೆಚ್ಚದಲ್ಲಿ ಭಿನ್ನವಾಗಿ ಮನೆ ನಿರ್ಮಿಸಿದ್ದಾರೆ ಮುತ್ತೂರಿನ ರೈತ ಪಿ.ಎಂ.ನಾಗರಾಜ್‌.

ಸಾಮಾನ್ಯವಾಗಿ ಹುಳು ಮನೆ ಕಟ್ಟಲು ಪ್ರತಿ ಚದರ ಅಡಿಗೆ ಕನಿಷ್ಠ ₹ 50 ಸಾವಿರ ಬೇಕಾಗುತ್ತದೆ. ಆದರೆ ನಾಗರಾಜ್‌ ₹ 5 ಸಾವಿರ ವೆಚ್ಚದಲ್ಲಿ ಮನೆ ನಿರ್ಮಿಸಿದ್ದಾರೆ. ವಿಶೇಷವೆಂದರೆ ಇಟ್ಟಿಗೆಯ ಬದಲು ಹೆಂಚನ್ನು, ಸಿಮೆಂಟ್‌ ಬದಲಾಗಿ ಜೇಡಿ ಮಣ್ಣು ಬಳಸಿದ್ದಾರೆ. ನೈಸರ್ಗಿಕವಾಗಿ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿ ನಿರ್ಮಿಸಿರುವ ಮನೆ ಆಕರ್ಷಕವಾಗಿ ಕಾಣುತ್ತದೆ.

ನಾಗರಾಜ್‌ 12 ವರ್ಷಗಳ ಹಿಂದೆ ತಮ್ಮ ವಾಸದ ಮನೆ ನಿರ್ಮಾಣಕ್ಕೆ ಹೆಂಚು ಬಳಸಿದ್ದರು. ಇದಕ್ಕೆ ಅವರ ತಂದೆ ಗಾರೆ ಕೆಲಸದ ಮುನಿಯಪ್ಪ ಪ್ರೇರಣೆಯಾಗಿದ್ದರು. ದೇವನಹಳ್ಳಿ ತಾಲ್ಲೂಕಿನ ಪಾಪನಹಳ್ಳಿಯಲ್ಲಿದ್ದ ಅವರು ಅಲ್ಲಿ ಪ್ರಾಯೋಗಿಕವಾಗಿ ಕೆಲವು ಮನೆಗಳನ್ನು ಹೆಂಚು ಬಳಸಿ ಕಟ್ಟಿದ್ದರಂತೆ. ಆ ಅನುಭವದಿಂದ ಮಗನೊಂದಿಗೆ ಸೇರಿ ಮುತ್ತೂರಿನಲ್ಲಿ ವಾಸಕ್ಕಾಗಿ ಹೆಂಚನ್ನು ಬಳಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಗೋಡೆಗೆ ಪ್ಲಾಸ್ಟರ್ ಹಾಕಿದ್ದರಿಂದ ಮನೆಯನ್ನು ಹೆಂಚಿನಿಂದ ನಿರ್ಮಿಸಿರುವುದು ಗೊತ್ತಾಗುವುದಿಲ್ಲ.

  ರೇಷ್ಮೆ ಹುಳು ಸಾಕಾಣಿಕೆಗಾಗಿ 14 ಚದರ ಅಡಿ ಮನೆಯನ್ನು ನಿರ್ಮಿಸಲು ಅವರು 7000 ಹೆಂಚು ಬಳಸಿದ್ದಾರೆ. 12 ಲೋಡು ಶೇರು (ಜೇಡಿ) ಮಣ್ಣು ಬಳಕೆಯಾಗಿದೆ. ಒಂದು ಹೊಸ ಹೆಂಚಿಗೆ ₹ 10 ಬೆಲೆ ಇದೆ. ಆದರೆ ಇವರು ಹಳೇ ಹೆಂಚುಗಳನ್ನು ₹ 2.5 ಯಂತೆ ಹೆಂಚು ಖರೀದಿಸಿದ್ದಾರೆ.

‘ಹೆಂಚು ಮತ್ತು ಜೇಡಿ ಮಣ್ಣು ಬಳಸಿ ನಿರ್ಮಿಸುವುದೂ ಒಂದು ಕೌಶಲ. ಆ ಕಸುಬು ತಿಳಿದಿರುವುದರಿಂದ ನಿರ್ಮಾಣ ಸುಲಭವಾಯಿತು. ಕಿಟಕಿ ಬಾಗಿಲು ಹೊಸದಾದರೆ ಬೆಲೆ ಜಾಸ್ತಿ. ನಂದಗುಡಿಯಲ್ಲಿ ಹಳೇ ಸಾಮಗ್ರಿ ಮಾರುವರು. ಅಲ್ಲಿಂದಲೇ ಖರೀದಿಸಿ, ನಾನು, ಅಪ್ಪ ತಂದೆವು. ಮನೆಯನ್ನು ನಾವಿಬ್ಬರೇ ಕಟ್ಟಿದೆವು. ಕೂಲಿ ಹಣ ಉಳಿಯಿತು’ ಎಂದು ಶ್ರಮವನ್ನು ನಾಗರಾಜ್‌ ವಿವರಿಸುವರು.

‘ಹುಳು ಸಾಕಾಣಿಕೆ ಮನೆಯ ಒಳಗೆ ಪ್ಲಾಸ್ಟರಿಂಗ್‌ ಮಾಡಲಾಗಿದೆ. ಹೊರಗೆ ಹಾಗೆಯೇ ಬಿಡಲಾಗಿದೆ. ಹೀಗೆ ಮಾಡಿದರೆ ಉಷ್ಣತೆ ಕಾಪಾಡಿಕೊಳ್ಳುವ ಜತೆಗೆ ಬೇಸಿಗೆಯಲ್ಲಿ ಬಿಸಿ ತಡೆಯಲು ಸಾಧ್ಯ. ಎರಡು ಹಸು, ಒಂದು ಎಮ್ಮೆ, ಐದು ಕುರಿ, 100 ಮೊಟ್ಟೆ ರೇಷ್ಮೆ ಮೇಯಿಸುತ್ತೇನೆ. ಎರಡು ಎಕರೆ ಜಮೀನಿದೆ. ಅದರಲ್ಲಿ ಹಿಪ್ಪುನೇರಳೆ ಬೆಳೆಯುತ್ತೇನೆ. ಈ ಹುಳುಮನೆಯಲ್ಲಿ 350 ಮೊಟ್ಟೆ ಮೇಯಿಸಲು ಸ್ಥಳಾವಕಾಶವಿದೆ. ಇದು ಹುಳುಗಳ ಪೋಷಣೆಗೆ ಅಷ್ಟೇ ಅಲ್ಲ, ವಾಸಕ್ಕೂ ಇಂತಹ ಮನೆ ನಿರ್ಮಿಸಿಕೊಳ್ಳಬಹುದು’ ಎಂದು ತಿಳಿಸುವರು.

‘ರೇಷ್ಮೆ ಕೃಷಿಯಲ್ಲಿ ಹಲವು ತಾಂತ್ರಿಕ ಬೆಳವಣಿಗೆಗಳಾಗಿವೆ. ಕಡಿಮೆ ಖರ್ಚಿನಿಂದ ಹೆಚ್ಚು ಆದಾಯ ಗಳಿಸುವ ನಿಟ್ಟಿನಲ್ಲಿ ರೇಷ್ಮೆ ಬೆಳೆಗಾರರೂ ಸಾಕಷ್ಟು ಹೊಸ ಅನ್ವೇಷಣೆ ಮಾಡಿದ್ದಾರೆ. ಅವರ ಪೈಕಿ ನಾಗರಾಜ್‌ ಒಬ್ಬರು. ವಿಶಿಷ್ಟವಾಗಿ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಿಸಿ ಮಾದರಿಯಾಗಿದ್ದಾರೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ. ತ್ಯಾಗರಾಜ್‌.
**
ರೇಷ್ಮೆ ಹುಳು ಪೋಷಣೆಗೆ ಪೂರಕವಾದ ಕಡಿಮೆ ವೆಚ್ಚದಲ್ಲಿ ನಿರ್ಮಿಸಿದ ವಾತಾನುಕೂಲಿ ಮನೆ ನಮ್ಮಲ್ಲಿ ಹೊಸ ವಿಶ್ವಾಸ ಮೂಡಿಸಿದೆ. ಈ ಪ್ರಯೋಗ ಇತರರಿಗೂ ಮಾದರಿಯಾಗಿದೆ. ಇದರಿಂದ ಖುಷಿಯೂ ಆಗಿದೆ.
- ಪಿ.ಎಂ. ನಾಗರಾಜ್, ಮನೆ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT