ಗುರುವಾರ , ಜೂನ್ 4, 2020
27 °C

ಕುಡಿಯುವ ನೀರಿಗೆ ತೀವ್ರ ಬರ; ಜಗತ್ತಿನ 11 ನಗರಗಳಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿಯುವ ನೀರಿಗೆ ತೀವ್ರ ಬರ; ಜಗತ್ತಿನ 11 ನಗರಗಳಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ

ಬೆಂಗಳೂರು: ದಕ್ಷಿಣ ಆಫ್ರಿಕಾದ ಬಂದರು ನಗರ ಕೇಪ್‌ಟೌನ್‌ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಕುಡಿಯಲು ನೀರೇ ಇರುವುದಿಲ್ಲ ಎಂಬ ವರದಿಗಳು ಇತ್ತೀಚೆಗೆ ಪ್ರಕಟವಾಗಿದ್ದವು. ಕೇಪ್‌ಟೌನ್‌ ಮಾತ್ರವಲ್ಲ, ಜಗತ್ತಿನ ಇತರ 11 ನಗರಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎಂದು ‘ಬಿಬಿಸಿ’ ವರದಿ ಮಾಡಿದೆ.

ಈ 11 ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

‘ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಮಾರ್ಪಾಡಾದ ಬೆಂಗಳೂರು ತೀವ್ರವಾಗಿ ಬೆಳೆದಿದೆ. ಈ ಬೆಳವಣಿಗೆಯಿಂದಾಗಿ ನಗರಕ್ಕೆ ಕುಡಿಯುವ ನೀರು ಪೂರೈಸುವುದು ದೊಡ್ಡ ಸವಾಲಾಗಿದೆ. ಒಳಚರಂಡಿ ಸೌಲಭ್ಯ ಕಲ್ಪಿಸುವುದೂ ಕಷ್ಟವಾಗಿದೆ’ ಎಂದು ವರದಿಯಲ್ಲಿ ಬೆಂಗಳೂರಿನ ಬಗ್ಗೆ ಹೇಳಲಾಗಿದೆ.

ಚೀನಾ ಮತ್ತು ಭಾರತದಲ್ಲಿ ಜಲ ಮಾಲಿನ್ಯ ತೀವ್ರವಾಗಿದೆ. ಬೆಂಗಳೂರು ನಗರದ ಶೇ 85ರಷ್ಟು ಕೆರೆಗಳ ನೀರನ್ನು ನೀರಾವರಿ ಮತ್ತು ಕೈಗಾರಿಕೆಯಲ್ಲಿ ಮಾತ್ರ ಬಳಸಲು ಸಾಧ್ಯವಿದೆ. ಈ ಕೆರೆಗಳ ನೀರು ಕುಡಿಯಲು ಅಥವಾ ಸ್ನಾನಕ್ಕೆ ಯೋಗ್ಯವಲ್ಲ ಎಂದು ವರದಿ ಹೇಳಿದೆ.

ನೀರಿನ ಕೊರತೆ ಎದುರಿಸುವ ನಗರಗಳಲ್ಲಿ ಕೇಪ್‌ಟೌನ್‌ ಮೊದಲಸ್ಥಾನದಲ್ಲಿದ್ದರೆ, ಬ್ರೆಜಿಲ್‌ನ ಪ್ರಮುಖ ನಗರ ಸಾವೊ ಪಾವ್ಲೊ ನಂತರದ ಸ್ಥಾನದಲ್ಲಿ ಇದೆ.

2 ಕೋಟಿಗೂ ಹೆಚ್ಚು ಜನರಿರುವ ಈ ನಗರದಲ್ಲಿ ಮುಂದಿನ 20 ದಿನಗಳಿಗೆ ಸಾಕಾಗುವಷ್ಟು ನೀರು ಮಾತ್ರ ಇದೆ. ಈಗ ನೀರಿನ ಟ್ಯಾಂಕರ್‌ಗಳನ್ನು ಜನರು ದೋಚದಂತೆ ಪೋಲಿಸ್‌ ಭದ್ರತೆ ಒದಗಿಸಲಾಗುತ್ತಿದೆ.

ಬೆಂಗಳೂರಿನ ನಂತರದ ಸ್ಥಾನದಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ ಇದೆ.

* ನೀರಿನ ಸಮಸ್ಯೆಗೆ ಸಮಗ್ರ ಯೋಜನೆ ರೂಪಿಸದಿದ್ದರೆ ಮುಂದಿನ 10 ವರ್ಷಗಳಲ್ಲಿ ಬೆಂಗಳೂರಿನ ಶೇ 50ರಷ್ಟು ನಿವಾಸಿಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ.

–ವಿ. ಬಾಲಸುಬ್ರಮಣಿಯನ್‌, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ಅಂಕಿ ಅಂಶ

* ಶೇ 42 ಕಾವೇರಿ ನೀರಿನ ಸೋರಿಕೆ ಪ್ರಮಾಣ

* 19 ಟಿಎಂಸಿ ನಗರಕ್ಕೆ ವಾರ್ಷಿಕ ಪೂರೈಕೆಯಾಗುವ ಕಾವೇರಿ ನೀರು

* 75 ಕೋಟಿ ಲೀಟರ್‌ ಕೊಳವೆಬಾವಿಗಳು ಪ್ರತಿನಿತ್ಯ ಪಂಪ್‌ ಮಾಡುವ ಅಂತರ್ಜಲ

* 20 ಲಕ್ಷ ನಗರದಲ್ಲಿರುವ ಮನೆಗಳು

* 7 ಲಕ್ಷ ಕಾವೇರಿ ಸಂಪರ್ಕ ಹೊಂದಿರುವ ಮನೆಗಳು

11 ನಗರಗಳು

1. ಸಾವೊ ಪಾವ್ಲೊ (ಬ್ರೆಜಿಲ್‌)

2. ಬೆಂಗಳೂರು

3. ಬೀಜಿಂಗ್‌ (ಚೀನಾ)

4. ಈಜಿಪ್ಟ್‌ (ಕೈರೊ)

5. ಜಕಾರ್ತ (ಇಂಡೋನೇಷ್ಯಾ)

6. ಮಾಸ್ಕೊ (ರಷ್ಯಾ)

7. ಇಸ್ತಾಂಬುಲ್‌ (ಟರ್ಕಿ)

8. ಮೆಕ್ಸಿಕೊ ಸಿಟಿ (ಮೆಕ್ಸಿಕೊ)

9. ಲಂಡನ್‌ (ಬ್ರಿಟನ್‌)

10. ಟೋಕಿಯೊ (ಜಪಾನ್‌)

11. ಮಿಯಾಮಿ (ಅಮೆರಿಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.